

ದೇಶದಲ್ಲಿ ಲೋಕಸಭೆ ಚುನಾವಣೆಗೆ ಕೆಲವು ತಿಂಗಳಿರುವಾಗಲೇ, ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಈ ಫಲಿತಾಂಶ ಹಲವು ಸಂದೇಶಗಳನ್ನು ರವಾನಿಸಿರುವುದಂತೂ ಹೌದು. ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದ್ದರೆ, ಒಂದರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ತೆಲಂಗಾಣದಲ್ಲಿ ಒಂದು ದಶಕದ ಕಾಲ ಆಡಳಿತ ನಡೆಸಿದ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತೀಯ ರಾಷ್ಟ್ರ ಸಮಿತಿ (ಬಿಆರ್ಎಸ್), ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಇದ್ದಿದ್ದನ್ನು ಗಮನಿಸಿಯೇ ಕಾಂಗ್ರೆಸ್ ರಾಜಕೀಯ ಸಮೀಕರಣವನ್ನು ಕೊಂಚ ಬದಲಿಸಿ, ಗೆಲುವು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಡಲಿದೆ ಎಂದೇ ಭಾವಿಸಲಾಗಿತ್ತು. ಮತದಾನೋತ್ತರ ಸಮೀಕ್ಷೆಗಳು ಕೂಡ ಇದೇ ಧಾಟಿಯಲ್ಲಿ ಭವಿಷ್ಯ ನುಡಿದಿದ್ದವು. ಆದರೆ, ಇಲ್ಲೂ ಮತದಾರ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದಾನೆ. ಕಳೆದ ಚುನಾವಣೆಗೆ ಹೋಲಿಸಿದರೆ ಮೂರೂ ರಾಜ್ಯಗಳಲ್ಲೂ ಬಿಜೆಪಿ ಗೆಲುವಿನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರಣಿ ರ್ಯಾಲಿಗಳನ್ನು ನಡೆಸಿದ್ದಲ್ಲದೆ, ಆಯಾ ರಾಜ್ಯಗಳಲ್ಲಿ ಆಡಳಿತ ಬದಲಾವಣೆ ಏಕಾಗಬೇಕು ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪರ ಅಲೆ ಕೆಲಸ ಮಾಡಿರುವುದಕ್ಕೆ ಮೂರೂ ರಾಜ್ಯಗಳ ಫಲಿತಾಂಶ ಸಾಕ್ಷಿ. ಹೀಗಾಗಿ, ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯನ್ನು ಮೋದಿ ಅಲೆಯನ್ನು ಅವಲಂಬಿಸಿಯೇ ಎದುರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಮುಖ್ಯವಾಗಿ, ಈ ಬಾರಿ ಎಲ್ಲ ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದವರಂತೆ ಉಚಿತ ಕೊಡುಗೆಗಳನ್ನು ಘೋಷಿಸಿದ್ದವು. ತೆಲಂಗಾಣದಲ್ಲಿ ಬಿಆರ್ಎಸ್ ಅಂತೂ ಸರಣಿ ಉಚಿತ ಕೊಡುಗೆಗಳನ್ನು ಘೋಷಿಸಿತ್ತು. ಆದರೆ, ಉಚಿತ ಕೊಡುಗೆಗಳ ಘೋಷಣೆಗೆ ಮತದಾರ ಮರುಳಾಗಿಲ್ಲ. ಉತ್ತಮ ಆಡಳಿತ, ಸ್ಪಂದನಶೀಲತೆ, ನಾಯಕತ್ವ ಗುಣ ಸೇರಿ ಹಲವು ಮೌಲ್ಯಗಳನ್ನು ಗಮನಿಸಿಯೇ ಮತಹಕ್ಕನ್ನು ಚಲಾಯಿಸಿದ್ದಾನೆ. ಮತದಾರರ ತೀರ್ಪನ್ನು ಎಲ್ಲ ರಾಜಕೀಯ ಪಕ್ಷಗಳು ಗೌರವಿಸಿ, ಸ್ವೀಕರಿಸಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ಅವರವರ ಕರ್ತವ್ಯವನ್ನು ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ನಿಭಾಯಿಸಬೇಕು.