ಮೂಲವ್ಯಾಧಿ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಿ ಪರಿಹಾರ

Piles
Published on
ಇಡೀ ಜಗತ್ತಿನಲ್ಲಿ ನಾಲ್ವರಲ್ಲಿ ಮೂರು ಜನ ಒಂದಲ್ಲ ಒಂದು ಕಾಲದಲ್ಲಿ ಮೂಲವ್ಯಾಧಿಯನ್ನು ಅನುಭವಿಸಿರುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಮೂಲವ್ಯಾಧಿಯ ಬಗ್ಗೆ ಇಂದು ತಿಳಿದುಕೊಳ್ಳೋಣ. ಆಯುರ್ವೆದದಲ್ಲಿ ಇದಕ್ಕೆ ಅರ್ಶಸ್ ಎಂದು ಕರೆಯುತ್ತಾರೆ. ಅಂದರೆ ಅರಿಯಂತೆ (ವೈರಿಯಂತೆ) ಶೂಲವನ್ನು (ನೋವನ್ನು) ಕೊಡುವಂಥದ್ದು ಎಂದರ್ಥ. ಮೂಲವ್ಯಾಧಿ ಎಂದರೆ ಗುದನಾಳ ಅಥವಾ ಗುದದ್ವಾರದ ರಕ್ತನಾಳಗಳು ಊದಿಕೊಂಡು ಆಗುವಂಥದ್ದು. ಮೂಲವ್ಯಾಧಿಯಲ್ಲಿ ವಿಶೇಷವಾಗಿ ಎರಡು ರೀತಿ. ಮೊದಲನೆಯದು ಗುದದ್ವಾರದ ಚರ್ಮದ ಕೆಳಗೆ ಆಗುವಂಥದ್ದು. ಇದಕ್ಕೆ ಎಕ್ಸ್ಟರ್ನಲ್ ಹೆಮೊರಾಯಡ್ (external haemorrhoid) ಎಂದು ಹೇಳುತ್ತಾರೆ. ಈ ವಿಧದ ಮೂಲವ್ಯಾಧಿಯಲ್ಲಿ ನೋವು ಹೆಚ್ಚಿರುತ್ತದೆ. ಇನ್ನೊಂದು ವಿಧ, ಗುದದ್ವಾರದ ಮೇಲಿನ ಗುದನಾಳದಲ್ಲಿ (rectum) ಆಗುವ ಮೂಲವ್ಯಾಧಿ. ಈ ವಿಧದ ಮೂಲವ್ಯಾಧಿಯಲ್ಲಿ ನೋವು ಅಷ್ಟಾಗಿ ಇರುವುದಿಲ್ಲ ಆದರೆ ಇದು ಗುದದ್ವಾರದ ಮೂಲಕ ಹೊರಗೆ ಬರುವಷ್ಟು ದೊಡ್ಡದಾದಾಗ ರಕ್ತಸ್ರಾವ ಮತ್ತು ನೋವುಗಳ ಮೂಲಕ ತೊಂದರೆ ಕೊಡುತ್ತದೆ.

ಕಾರಣಗಳೇನು?: ಬಹುತೇಕ ಜನರಿಗೆ ಮೂಲವ್ಯಾಧಿ ಉಂಟಾಗಲು ಮುಖ್ಯ ಕಾರಣ ಮಲವನ್ನು ಹೊರಹಾಕಲು ತಿಣುಕುವುದು. ತಿಣುಕುವ ಕಾರಣದಿಂದಾಗಿ ರಕ್ತನಾಳಗಳು ಊದಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಹೆಚ್ಚು ಹೊತ್ತು ಟಾಯ್ಲೆಟ್ ಸೀಟಿನ ಮೇಲೆ ಮಲವಿಸರ್ಜನೆಗಾಗಿ ಕಾದು ಕುಳಿತುಕೊಳ್ಳುವುದರಿಂದಲೂ ರಕ್ತನಾಳಗಳ ಮೇಲೆ ಒತ್ತಡ ಬಿದ್ದು ಮೂಲವ್ಯಾಧಿ ಪ್ರಾರಂಭವಾಗುತ್ತದೆ. ದೀರ್ಘಕಾಲದವರೆಗೆ ಮಲಬದ್ಧತೆ ಅಥವಾ ಭೇದಿಯ ಸಮಸ್ಯೆ ಇದ್ದರೂ ಈ ತೊಂದರೆ ಶುರುವಾಗಬಹುದು. ಬೊಜ್ಜು ಇರುವವರಿಗೆ, ಗರ್ಭಿಣಿಯರಿಗೆ, ಆಹಾರದಲ್ಲಿ ನಾರಿನಂಶ ತೆಗೆದುಕೊಳ್ಳದೇ ಇರುವವರಿಗೆ ಮತ್ತು ನಿಯಮಿತವಾಗಿ ತೂಕವನ್ನು ಎತ್ತುವವರಿಗೆ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು. ಮೂಲವ್ಯಾಧಿಯ ಸಮಸ್ಯೆ ಇಲ್ಲದಿರುವವರು ಅದು ಬರದಂತೆ ಕಾಳಜಿ ವಹಿಸಿಕೊಳ್ಳಬೇಕು. ಅದಕ್ಕಾಗಿ ಹೆಚ್ಚು ನಾರಿನಂಶ ಇರುವ ಆಹಾರವನ್ನು ಸೇವಿಸುವುದು, ಚೆನ್ನಾಗಿ ನೀರನ್ನು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಮಲಬದ್ಧತೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುಣಪಡಿಸಿಕೊಳ್ಳಬೇಕು.

ಈಗ ಮೂಲವ್ಯಾಧಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಅರ್ಧ ಚಮಚ ಅಣಲೆಕಾಯಿಯ ಪುಡಿಯನ್ನು ಜೋನಿಬೆಲ್ಲದ ಜೊತೆ ಕಲಸಿ ರಾತ್ರಿ ಊಟದ ಮೊದಲು ಸೇವಿಸುವುದರಿಂದ ಮಲವಿಸರ್ಜನೆ ಸರಾಗವಾಗಿ ಆಗಿ ಮೂಲವ್ಯಾಧಿ ಕಡಿಮೆಯಾಗಲು ಸಹಾಯವಾಗುತ್ತದೆ. ಸುವರ್ಣಗಡ್ಡೆ ಮೂಲವ್ಯಾಧಿಯಲ್ಲಿ ಅದ್ಭುತ ಪರಿಣಾಮಕಾರಿಯಾದ ಆಹಾರ ಅಥವಾ ಔಷಧ. ಹಾಗಾಗಿ ಮೂಲವ್ಯಾಧಿಯ ಸಮಸ್ಯೆಯನ್ನು ಅನುಭವಿಸುತ್ತಿರುವವರು ನಿಯಮಿತವಾಗಿ ಸುವರ್ಣಗಡ್ಡೆಯನ್ನು ಬಳಸಬೇಕು ಅಥವಾ ಇದನ್ನು ಬೇಯಿಸಿ, ಜೋನಿಬೆಲ್ಲ ಬಳಸಿ ಹಲ್ವಾ ರೀತಿ ಮಾಡಿ ಇಟ್ಟುಕೊಂಡು ನಿತ್ಯವೂ ಸೇವಿಸಬಹುದು. ಬೆಣ್ಣೆ ತೆಗೆದ ಮಜ್ಜಿಗೆ ಮೂಲವ್ಯಾಧಿಯಲ್ಲಿ ಅದ್ಭುತವಾಗಿ ಕೆಲಸ ಮಾಡುವ ಆಹಾರ. ಹಾಗಾಗಿ ನಿತ್ಯವೂ ಊಟದ ನಂತರ ಒಂದು ಲೋಟ ಮಜ್ಜಿ್ಚೆಯನ್ನು ಸೇವಿಸುತ್ತಾ ಬಂದರೆ ಮೂಲವ್ಯಾಧಿಯ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. ಮೂಲವ್ಯಾಧಿಗೆ ಮಜ್ಜಿಗೆಗೆ ಸಮನಾದ ಔಷಧವಿಲ್ಲ ಎಂದು ಆಯುರ್ವೆದದಲ್ಲಿ ಹೇಳಿದ್ದಾರೆ. ಮೂಲಂಗಿಯ ರಸವನ್ನು ನಿತ್ಯವೂ ಕಾಲು ಲೋಟದಷ್ಟು ಸೇವಿಸುವುದರಿಂದ ಪ್ರಾರಂಭಿಕ ಹಂತದ ಮೂಲವ್ಯಾಧಿಯನ್ನು ಗುಣಪಡಿಸಿಕೊಳ್ಳ ಬಹುದು. ಇದನ್ನು ರಾತ್ರಿ ಊಟದ ಮೊದಲು ಸೇವಿಸಬೇಕು. ಜೊತೆಗೆ ನೆನೆಸಿದ ಒಣ ದ್ರಾಕ್ಷಿಯನ್ನು ಸೇವಿಸಿದರೆ ಒಳ್ಳೆಯದು. ಒಂದರಿಂದ ಎರಡು ಚಮಚದಷ್ಟು Inulin ಅನ್ನು ರಾತ್ರಿ ಮಲಗುವ ಮೊದಲು ಬೆಚ್ಚನೆಯ ನೀರಿಗೆ ಹಾಕಿ ಒಂದು ತಿಂಗಳ ಕಾಲ ಸೇವಿಸಿದರೆ ಬಹಳಷ್ಟು ಜನರಿಗೆ ಮೂಲವ್ಯಾಧಿ ಗುಣವಾಗುತ್ತದೆ. ಏಕೆಂದರೆ ಇದರಲ್ಲಿರುವ ನಾರಿನಂಶವನ್ನು ದೇಹ ಪೂರ್ತಿಯಾಗಿ ಹೀರಿಕೊಳ್ಳುತ್ತದೆ. ಗುದದ್ವಾರವನ್ನು ಒಳಕ್ಕೆ ಎಳೆದುಕೊಳ್ಳುವ ಅಶ್ವಿನಿ ಮುದ್ರೆಯನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ಅದ್ಭುತ ಪ್ರಯೋಜನ ಪಡೆಯಲು ಸಾಧ್ಯ.

ಮೂಲವ್ಯಾಧಿ ಸಮಸ್ಯೆ ಇರುವವರು ಅತಿಯಾಗಿ ಲೈಂಗಿಕ ಕ್ರಿಯೆಯನ್ನು ನಡೆಸುವುದು, ಅತಿಯಾಗಿ ಪ್ರಯಾಣ ಮಾಡುವುದು, ಕುಕ್ಕುರುಕಾಲಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಬೇಕರಿ ತಿನಿಸುಗಳನ್ನು ಅತಿಯಾಗಿ ಸೇವಿಸುವುದು, ಹೆಚ್ಚು ಖಾರ ಮತ್ತು ಕಹಿಯಾದ ಆಹಾರ ಪದಾರ್ಥಗಳನ್ನು ಸೇವಿಸುವುದು, ಹಸಿವು - ಬಾಯಾರಿಕೆ - ನಿದ್ದೆ - ಮಲಮೂತ್ರಗಳಂತಹ ನೈಸರ್ಗಿಕ ಕರೆಗಳನ್ನು ತಡೆಯುವುದು ಮುಂತಾದ ಕ್ರಿಯೆಗಳನ್ನು ಎಂದಿಗೂ ಮಾಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net