

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ವಿಭಿನ್ನ ಗುಂಪುಗಳು ಸೈದ್ಧಾಂತಿಕವಾಗಿ ಭಿನ್ನತೆ ಹೊಂದಿದ್ದರೂ ಅವರೆಲ್ಲರಲ್ಲೂ ಏಕಸೂತ್ರತೆಯೊಂದಿತ್ತು. ಅದೇ ರಾಷ್ಟ್ರಪ್ರೇಮ. ವಿವೇಕಾನಂದರ ವಿಶ್ವವೇದಿಕೆಯ ಮೇಲಿನ ಐತಿಹಾಸಿಕ ದಿಗ್ವಿಜಯ ಮತ್ತು ಅದನ್ನು ಅನುಸರಿಸಿಕೊಂಡೇ ಬಂದ ಪಾಂಚಜನ್ಯದ ಮೊಳಗು ಭಾರತ, ಭಾರತೀಯ ಚಿಂತನೆ, ಸಂಸ್ಕೃತಿಗಳ ಶ್ರೇಷ್ಠತೆ ಹೆಗ್ಗಳಿಕೆಗಳನ್ನು ಜಾಗತಿಕ ಮನಸ್ಸುಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು ಪ್ರಚಂಡ ರಾಷ್ಟ್ರೀಯ ಪ್ರಜ್ಞೆ (National Consciousness)ಯಾಗಿ ಪರಿವರ್ತನೆಗೊಂಡಿದ್ದು ಇತಿಹಾಸದ ಚಮತ್ಕಾರ. ಇದರ ಫಲವಾಗಿ ಭುಗಿಲೆದ್ದ ರಾಷ್ಟ್ರಾಭಿಮಾನ, ಧಾರ್ವಿುಕ ಜಾಗೃತಿ, ಆತ್ಮವಿಶ್ವಾಸಗಳು ರಾಷ್ಟ್ರವಾಹಿನಿಯಲ್ಲಿ ತ್ಯಾಗ ಹೋರಾಟಗಳ ಹುಚ್ಚನ್ನೇ ಎಬ್ಬಿಸಿದವು. ದೇಶ ಇಂದು ಬೇರೆಯೇ ಸಂಕೋಲೆಗಳಿಂದ ಬಳಲಲು ಕಾರಣ ಸ್ವಾತಂತ್ರ್ಯಪೂರ್ವದಲ್ಲಿದ್ದ ರಾಷ್ಟ್ರಪ್ರೇಮದ ಕಿಚ್ಚಿನ ಕೊರತೆ. ನಲವತ್ತೇಳರ ನಂತರದ ತಲೆಮಾರುಗಳು ಈ ಪ್ರೇರಣೆ, ಪ್ರಚೋದನೆಗಳಿಂದ ವಂಚಿತರಾಗಿದ್ದುದರ ದುಷ್ಪರಿಣಾಮ ‘ಖಲಿಸ್ತಾನ’ ಹೋರಾಟ ಉಲ್ಬಣಿಸುವವರೆಗೂ ನಮ್ಮ ರಾಷ್ಟ್ರ ನಾಯಕರ ಬುದ್ಧಿಗೇ ಹೊಳೆಯದಿದ್ದುದು ದುರಂತ. ಈಗ ಎಚ್ಚೆತ್ತುಕೊಂಡ ರಾಷ್ಟ್ರನಾಯಕರು ಮತ್ತೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದು ವಿವೇಕಾನಂದರು ಯುವ ಮನಸ್ಸುಗಳನ್ನು ಮರುಪ್ರವೇಶಿಸಲು ಅನುವು ಮಾಡಿಕೊಡುವುದರ ಮೂಲಕ. ಅದರ ಫಲವೇ 1984ರಲ್ಲಿ ಜನವರಿ 12 ಅನ್ನು ರಾಷ್ಟ್ರೀಯ ಯುವದಿನ ಮತ್ತು ಮುಂದಿನ ಏಳು ದಿನ ಯುವ ಸಪ್ತಾಹವೆಂದು ಘೊಷಣೆ. ಆದರೆ, ಆಚರಣೆಯ ಮಟ್ಟದಲ್ಲಾಗಲಿ ಪರಿಣಾಮದ ಮಟ್ಟದಲ್ಲಾಗಲಿ ನಿರೀಕ್ಷಿತ ಪ್ರಯೋಜನ ಕಾಣದಿದ್ದಲ್ಲಿ ಸಂಬಂಧಿಸಿದವರ ಅಪ್ರಾಮಾಣಿಕತೆ ಮತ್ತು ನಾಟಕೀಯತೆ ಎಂದು ಪ್ರತ್ಯೇಕವಾಗೇನೂ ಹೇಳಬೇಕಾಗಿಲ್ಲ.
ರಾಷ್ಟ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಶಿಕ್ಷಣ, ಸಂಸ್ಕೃತಿ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ನೀತಿಗಳನ್ನು ರಚಿಸುವ ಆಯಕಟ್ಟಾದ ಜಾಗಗಳು ‘ವಿಕೃತಮನಸ್ಸು’ಗಳಿಂದ ಕಲುಷಿತಗೊಂಡಿರುವುದೇ ಇಂದಿನ ಎಲ್ಲಾ ಸಮಸ್ಯೆಗಳ ಮೂಲ. ಶಾಶ್ವತ (Eternal) ಸಾರ್ವತ್ರಿಕ (Universal) ಹಾಗೂ ಅತ್ಯಂತ ವೈಜ್ಞಾನಿಕ (scientific)ಮೌಲ್ಯಗಳನ್ನು ಕೂಡ ಹಗುರಗೊಳಿಸುತ್ತಿವೆ ಇಲ್ಲವೇ ಅಮಾನ್ಯೀಕರಣಗೊಳಿಸುತ್ತಿವೆ ಈ ವಿಕೃತ ಮನಸ್ಸುಗಳು. ಒಬ್ಬ ಜಿಲ್ಲಾಧಿಕಾರಿ ನನಗೆ ಹೇಳಿದ್ದುಂಟು, ‘ಸ್ವಾಮೀಜಿ, ಕಾಲಕಾಲಕ್ಕೆ ಎಲ್ಲ ಮೌಲ್ಯಗಳೂ ಬದಲಾಗಬೇಕು’. ಇನ್ನೊಬ್ಬ ಜಿಲ್ಲಾಧಿಕಾರಿ Nationalism is more dangerous than casteism ಎಂದಿದ್ದರು. ಜಿಲ್ಲಾಧಿಕಾರಿಗಳ ಸ್ತರದಲ್ಲಿಯೇ ಈ ಮಟ್ಟದ ವೈಚಾರಿಕತೆಯ ವಿಹೀನತೆ. ಮಾಧ್ಯಮಗಳು, ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ ಇಲಾಖೆ, ಯುವಜನ ಇಲಾಖೆ ಮುಂತಾದವುಗಳ ಜವಾಬ್ದಾರಿ ಇರುವುದೇ ಇಲ್ಲಿ. ನೀತಿವಂತರ ಮೌಲ್ಯಯುತ ಜೀವನಗಳನ್ನು ಮಾತ್ರ ತಾರಾಮಟ್ಟಕ್ಕೆ ಏರಿಸಬೇಕೇ ಹೊರತು ಶತ್ರುರಾಷ್ಟ್ರದ ಆರಾಧಕರಾದ ಬಣ್ಣದ ಲೋಕದದವರನ್ನೋ, ಇಲ್ಲವೇ ಯಾವ ರೀತಿಯಲ್ಲಾದರೂ ಅಧಿಕಾರ ಹಿಡಿಯಬೇಕೆನ್ನುವ ರಾಜಕಾರಣಿ ಅಥವಾ ಮತ್ತಾರನ್ನೋ ಅಲ್ಲ.
ಈ ದೇಶದಲ್ಲಿ ನಾವು ಅನುಸರಿಸುತ್ತಿರುವ ಧರ್ಮ ಮತ್ತು ರಾಷ್ಟ್ರೀಯತೆ ಬೇರೆಯೇ ರೀತಿಯದ್ದು. ಇಲ್ಲಿಯ ಧರ್ಮ ಎಂದಿಗೂ ವಿಜ್ಞಾನಕ್ಕೆ ವಿರೋಧಿಯಾಗಿಲ್ಲ. ಭಾರತೀಯ ಪ್ರಸ್ತುತತೆಯಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದ ನಮ್ಮ ರಾಷ್ಟ್ರೀಯತೆ ನಮ್ಮ ಧರ್ಮದಂತೆಯೇ ಎಂದಿಗೂ ಸಂಕುಚಿತತೆಗೆ ಬಲಿಯಾಗಲಿಲ್ಲ. ನಮ್ಮ ರಾಷ್ಟ್ರೀಯತೆ ಯುರೋಪಿನ Facism ಅಲ್ಲ. ಆದರೆ, ಐರೋಪ್ಯ ಚಿಂತನೆಗಳಿಗೆ ಮೆದುಳನ್ನು ಅಡವಿಟ್ಟುಕೊಂಡ ವ್ಯಕ್ತಿಗಳೇ ಸ್ವತಂತ್ರ ಭಾರತದಲ್ಲಿ ಆಯಕಟ್ಟಾದ ಸ್ಥಳಗಳಲ್ಲಿ ತುಂಬಿಕೊಂಡಿದ್ದು ದುರಂತ. ಮಾಧ್ಯಮಗಳು, ವಿಶ್ವವಿದ್ಯಾಲಯಗಳು, ಅಧಿಕಾರ ವರ್ಗ, ಅವರ ತರಬೇತುಗಳು ಇವೆಲ್ಲಾ ಈ ಪ್ರಭೃತಿಗಳಿಂದ ತುಂಬಿದ್ದೇ ದೇಶದ ಮುಕ್ಕಾಲು ಅವಘಡಗಳಿಗೆ ಕಾರಣ. ಇವರ ಅಪ್ರಬುದ್ಧತೆ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದ್ದೇ ಇವರು ‘ಸೆಕ್ಯುಲರ್’ ಎಂಬ ಪದವನ್ನು ಧರ್ಮ ನಿರಪೇಕ್ಷತೆ ಎಂದು ವ್ಯಾಖ್ಯಾನಿಸಿದಾಗ. ಭಾರತೀಯ ಉಸಿರೇ ಧರ್ಮ. ಈ ರಾಷ್ಟ್ರಕ್ಕೆ ಕುತ್ತು ಬಂದಾಗಲೆಲ್ಲ ಧಾರ್ವಿುಕ ನಾಯಕ ಇಲ್ಲವೇ ತಪಸ್ವಿಯೊಬ್ಬ ಏಕಾಂಗಿಯಾಗಿ ಅದನ್ನು ಅಪಾಯದಿಂದ ಪಾರು ಮಾಡಿದ ಉದಾಹರಣೆಗಳು ಸಾಕಷ್ಟು ಇವೆ. ಇದನ್ನರಿಯದೆ ಧರ್ಮದೆಡೆಗೆ ನಿರಪೇಕ್ಷತೆಯನ್ನು ತೋರಿಸಿ ಅದನ್ನು ಕಡೆಗಣಿಸಿದಾಗ ಅದರ ನೇರ ಪರಿಣಾಮ ಉಂಟಾದದ್ದು ಶಾಲಾ ಮಟ್ಟದಲ್ಲಿ. ಪಾರಂಪರಿಕ ಮೌಲ್ಯಗಳು, ರಾಮಾಯಣ, ಮಹಾಭಾರತ, ಗೀತೆ, ವಿವೇಕಾನಂದರ ಚಿಂತನೆಗಳು ಈ ಮೊದಲಾದ ಭೂಮಿಕೆಗಳಿಗೆ ಸ್ಥಾನವೇ ಇಲ್ಲದೆ, ಅವರ ಜಾಗದಲ್ಲಿ ಈ ದೇಶದ ಕಾರಣವಾದ ಎಲ್ಲವನ್ನೂ ಧ್ವಂಸಗೊಳಿಸಿದ ವ್ಯಕ್ತಿಗಳು ರಾರಾಜಿಸುತ್ತಿರುವುದು ದುರಂತ. ವಿಶ್ವವಿದ್ಯಾಲಯಗಳಲ್ಲಿನ ಅನೇಕರಲ್ಲಿ ರಾಷ್ಟ್ರೀಯ ಮೌಲ್ಯಗಳನ್ನು ವಿಕೃತಗೊಳಿಸುವುದೇ ಪ್ರಬುದ್ಧತೆಯ ಲಕ್ಷಣ ಎಂಬ ಭಾವವೂ, ಮತಾಂತರವನ್ನು ವಿರೋಧಿಸಲೇಬಾರದು ಅದು ಧರ್ಮ ನಿರಪೇಕ್ಷತೆಯ, ಧಾರ್ವಿುಕ ಸ್ವಾತಂತ್ರ್ಯದ ನೈಜಲಕ್ಷಣ ಎಂಬ ಇವರ ಮಾತುಗಳು ಸ್ವಾಮಿ ವಿವೇಕಾನಂದರ ‘ಹಿಂದುವೊಬ್ಬ ಮತಾಂತರಗೊಂಡರೆ ಅದರ ಮತಾನುಯಾಯಿಗಳಲ್ಲಿ ಒಬ್ಬ ಕಡಿಮೆಯಾದ ಅಷ್ಟೇ ಅಲ್ಲ ಶತ್ರುವೊಬ್ಬ ಜಾಸ್ತಿಯಾದ ಎಂದು ಅರ್ಥ’ ಎಂಬ ಮಾತಿನೊಂದಿಗೆ ಹೋಲಿಸಿದಾಗ ಇವರ ಅರ್ಥಹೀನ ಮಾತುಗಳ ಮನವರಿಕೆಯಾದೀತು. ಸಿನಿಮಾ ಮುಂತಾದ ಮಾಧ್ಯಮಗಳಲ್ಲಿನ ಹಿಂದೂ ಧರ್ಮದ ಅವಹೇಳನ ಕೂಡ ಇದರ ಇನ್ನೊಂದು ಸದ್ದಿಲ್ಲದ ಪರಿಣಾಮ. ಈ ಎಲ್ಲಾ ಸಮಸ್ಯೆಗಳ ಮೂಲ ಇರುವುದು ಅಧಿಕಾರ ಅನುಭವಿಸುವ ಕಾತರತೆಯಲ್ಲಿ, ಮುಂದೆ ಉದ್ಭವಿಸುವ ದುಷ್ಪರಿಣಾಮಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ತಾತ್ಕಾಲಿಕ ಪರಿಹಾರಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ನಿಭಾಯಿಸುವ ಪ್ರವೃತ್ತಿ ಬೆಳೆಸಿಕೊಂಡು ಬರುತ್ತಿರುವುದರಲ್ಲಿ.
ಕೇವಲ ಕೆಲವು ರೂಪಾಯಿಗಳಿಗೋ, ಒಂದೆರಡು ಅಗ್ಗದ ವಸ್ತುಗಳಿಗೋ ತನ್ನ ಓಟನ್ನು ಮಾರಿಕೊಂಡವನು ನಿಜಕ್ಕೂ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹನೇ? 18 ವರ್ಷ ವಯಸ್ಸಾದ ಮಾತ್ರಕ್ಕೆ ಅವನನ್ನು ‘ಪ್ರಜೆ’ ಎಂದು ಕರೆಯಲಾದೀತೆ? ‘ಪ್ರ’ ‘ಜ’ ಎನ್ನುವ ಪದವೇ ಅದರ ನಿಜವಾದ ಅರ್ಥವನ್ನು ತಿಳಿಸುತ್ತದೆ. ಯಾರು ತಮ್ಮ ಜನ್ಮ, ಜೀವನಗಳನ್ನು ಸಾರ್ಥಕಪಡಿಸಿಕೊಳ್ಳಲು ಬದ್ಧರೋ, ಸನ್ಮಾರ್ಗದಲ್ಲೇ ನಡೆಯಲು ಬದ್ಧರೋ ಅವರು ‘ಪ್ರಜೆ’. ಮತದಾರನಾಗುವುದು ಒಂದು ಅರ್ಹತೆ! ಕೇವಲ ವಯಸ್ಸಿನಿಂದ ವ್ಯಕ್ತಿಗೆ ಸಿಗುವುದು ಶಾರೀರಿಕ ಬೆಳವಣಿಗೆ ಮಾತ್ರ. ಈ ರೀತಿಯಲ್ಲಿ ಶರೀರದ ಬೆಳವಣಿಗೆ ಇದ್ದು ಪ್ರಜ್ಞಾವಂತಿಕೆ ಬುದ್ಧಿಗಳ ಕೊರತೆ ಇರುವ ಮನುಷ್ಯನನ್ನು ಸ್ವಾಮಿ ವಿವೇಕಾನಂದರು Mustached babies ‘ಮೀಸೆ ಹೊತ್ತ ಮಕ್ಕಳು’ ಎಂದು ಕರೆಯುತ್ತಿದ್ದರು. ಇಂದು ಬಹಳಷ್ಟು ಮತದಾರರು ‘ಮೀಸೆಹೊತ್ತ ಮಕ್ಕಳು’ ಮಾತ್ರ. ಸಾವಿರಾರು ವರ್ಷಗಳ ಪ್ರಜಾಸತ್ತೆಯಲ್ಲಿ ಮಿಂದು ಬೆಂದು ಪ್ರಬುದ್ಧಗೊಂಡ ಪಾಶ್ಚ್ಚಾತ್ಯ ಜಗತ್ತು 18 ವರ್ಷ ಎಂಬ ಅಳತೆಗೋಲನ್ನಿಟ್ಟುಕೊಂಡರೆ ನಾವೂ ಅದನ್ನು ಕುರುಡರಂತೆ ಅನುಕರಿಸಬೇಕೆ? ಸಮಾನತೆ ಎಂದರೆ ಸಮಾನ ಸ್ಥಾನಮಾನಗಳಲ್ಲ ಸಮಾನ ಅವಕಾಶಗಳು ಮಾತ್ರ. ಸಾಮರ್ಥ್ಯವಂತನಾಗುವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು. ದೇಶ ಇಂದು ಸಮಸ್ಯೆಗಳಿಂದ ಬಳಲುತ್ತಿರುವುದೇ Right man in the wrong place wrong man in the right place ಕಾರಣಕ್ಕೆ.
ಇದೇ ಪಟ್ಟಿಗೆ ಸೇರುತ್ತೆ ಅಸಂಬದ್ಧ ಶಿಕ್ಷಣ ವ್ಯವಸ್ಥೆ. ಯಾವ ಮೌಲ್ಯಪದ್ಧತಿ ಸಹಸ್ರಾರು ವರ್ಷಗಳ ಕಾಲ ಈ ದೇಶಕ್ಕೆ ಸದೃಢತೆ, ಸಾಮರ್ಥ್ಯ, ಸಂಪತ್ತು ನೀಡಿತ್ತೋ ಅದನ್ನು ಕಡೆಗಣಿಸಿ ಬೆಳೆಯುವುದು ಸಾಧ್ಯವಿಲ್ಲದ ಮಾತು. ಪಾಶ್ಚಾತ್ಯ ಇತಿಹಾಸಜ್ಞರು, ವಿಜ್ಞಾನಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ಧುರೀಣರು ನಿದ್ದೆಯಿಂದ ಏಳಬೇಕಾಗಿದೆ. ವಿಸ್ಮೃ ವಿನಾಶದ ಮೊದಲ ಹೆಜ್ಜೆ. ದೂರದರ್ಶಿತ್ವ ಧುರೀಣರಲ್ಲಿರಬೇಕಾದ ಪ್ರಮುಖ ಲಕ್ಷಣ. ಅಪ್ರಬುದ್ಧ ನೀತಿಗಳು ಎಷ್ಟು ಮಾರಕ ಎಂಬುದನ್ನು ನೆರೆರಾಷ್ಟ್ರಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಭಾರತ ಹೀಗಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)