ಹೊಂಬೆಳಕು ಅಂಕಣ: ವಿವೇಕಚಿಂತನ ಭಾರತೀಯತೆಯ ಅನಾವರಣ

vivekananda
Published on
ನರೇಂದ್ರನನ್ನು ರಾಮಕೃಷ್ಣರು ಪ್ರಥಮ ಬಾರಿಗೆ ನೋಡಿದಾಗ ಭೋಗ ಭೂಮಿಯಾದ ಕಲ್ಕತ್ತೆಯಲ್ಲಿ ಯಾರಪ್ಪಾ ಇಂಥವನೊಬ್ಬ ಎಂದು ಚಕಿತರಾಗಿದ್ದರು. ಅಂದೇ ಅವನನ್ನು ದಕ್ಷಿಣೇಶ್ವರಕ್ಕೆ ಆಹ್ವಾನಿಸಿದ್ದರು ಕೂಡ. ಉಪನಿಷತ್ತುಗಳಲ್ಲಿರುವ ಆತ್ಮನ ಲಕ್ಷಣಗಳೆಲ್ಲ ಮನುಷ್ಯರೂಪವನ್ನು ತಾಳಿದರೆ ಅದು ನರೇಂದ್ರನಂತೆ ಇರುತ್ತದೆ ಎಂದಿದ್ದರು ಶ್ರೀ ರಾಮಕೃಷ್ಣರು.

ಮನುಷ್ಯ ಜನ್ಮ ಮತ್ತು ಮನುಷ್ಯ ಜೀವನ, ಇದರಷ್ಟು ಕುತೂಹಲಕರ, ಸಂಕೀರ್ಣ ಮತ್ತು ಅತ್ಯಂತ ಪ್ರಸ್ತುತವಾದ ವಿಷಯಗಳು ಈ ಜಗತ್ತಿನಲ್ಲಿ ಮತ್ತಾವುದೂ ಇಲ್ಲ. ಎಷ್ಟೋ ಸಾಧನೆಗಳನ್ನು ಎಷ್ಟೆಷ್ಟೋ ಕ್ಷೇತ್ರಗಳಲ್ಲಿ ಮಾಡಿದವರೂ ಇದರ ಸೂಕ್ಷ್ಮಗಳನ್ನರಿಯದೆ ಇಲ್ಲಿ ಮುಗ್ಗರಿಸಿದ್ದಾರೆ; ಪ್ರಪಾತಕ್ಕೆ ಬಿದ್ದಿದ್ದಾರೆ. ಏನೂ ಗೊತ್ತಿಲ್ಲದವರಂತೆ ಅಸಹಾಯಕರಾಗಿದ್ದಾರೆ. ಮೌನವಾಗಿ ಸೋಲಿಗೆ ಶರಣಾಗಿ ಎಲ್ಲಾ ಆರ್ಭಟಗಳನ್ನು ಬಿಟ್ಟು ನಮ್ರರಾಗಿ ವಿಧಿಯ ಒಕ್ಕಣಿಕೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಇಲ್ಲವೇ ಜೀವನಕ್ಕೇ ಒಂದು ಅಂತ್ಯವನ್ನು ಹಾಡಿ ದುರಂತವಾಗಿಸಿಕೊಂಡಿದ್ದಾರೆ. ಕಾರಣ ಇಷ್ಟೇ! ಯಾವ ನಿಯಮಗಳು ಮನುಷ್ಯನನ್ನು ವೈಯಕ್ತಿಕ ಹಾಗೂ ಸಾರ್ವತ್ರಿಕ ನೆಲೆಯಲ್ಲಿ ನಿಯಂತ್ರಿಸುತ್ತೋ, ನಿರ್ದೇಶಿಸಿಕೊಂಡು ಬರುತ್ತೋ, ಕಟ್ಟುನಿಟ್ಟಾಗಿ ಕತ್ತು ಹಿಡಿದು ಸಾಗಿಸಿಕೊಂಡು ಬರುತ್ತೋ, ಅವುಗಳನ್ನು ತಿಳಿಯುವ ಗೋಜಿಗೇ ಅವರು ಹೋಗದಿದ್ದುದು. ಒಂದು ವೇಳೆ ತಿಳಿದಿದ್ದರೂ ಮಹಾಭಾರತದ ದುರ್ಯೋಧನನಂತೆ ಅವುಗಳಿಗೆ ಕವಡೆಯಷ್ಟೂ ಕಿಮ್ಮತ್ತನ್ನು ಕೊಡದಿದ್ದುದು. ಎಲ್ಲವೂ ತನ್ನ ಲೆಕ್ಕಾಚಾರದಂತೆಯೇ ನಡೆಯುತ್ತದೆ ಎಂದು ಯಾವುದೋ ವಿಸ್ಮೃಗೆ ಒಳಗಾದದ್ದು. ಇದನ್ನೆಲ್ಲಾ ಗ್ರಹಿಸಿದ ಸೂಕ್ಷ್ಮ ದೃಷ್ಟಿಯ ವ್ಯಕ್ತಿ ಉದ್ಗರಿಸಿದ್ದಾನೆ Success is a matter of loss not of chance. ಇದು ಭಾರತೀಯರಿಗೆ ಅನಾದಿಕಾಲದಿಂದಲೂ ಅತ್ಯಂತ ಪರಿಚಿತವಾದ ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಗಂಭೀರವಾಗಿ ಪರಿಗಣಿಸಲ್ಪಡದ ಧರ್ವೇ ರಕ್ಷತಿ ರಕ್ಷಿತಃ ಎನ್ನುವ ಆರ್ಯೋಕ್ತಿಯ ಆಂಗ್ಲ ಭಾಷಾ ರೂಪ.

ಇಂತಹ ಎಂದಿಗೂ ರಾಜಿಯಾಗದ ನಿಯಮಗಳ ಗುಚ್ಛವೊಂದು ಜಗತ್ತನ್ನು ಆಳುತ್ತಿದೆ, ಅದನ್ನು ತಿಳಿದು ಅನುಷ್ಠಾನಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಜೀವನವನ್ನು ಗಂಭೀರವಾಗಿ ತೆಗೆದುಕೊಂಡ ಪ್ರತಿಯೊಬ್ಬನ ಕರ್ತವ್ಯ ಎಂದು ಘೊಷಿಸಿದ್ದು, ಆ ನಿಯಮಗಳನ್ನೆಲ್ಲಾ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದೂ, ಅವುಗಳ ಮಹತ್ವವೇನು ಎಂಬುದನ್ನು ತನ್ನ ಭೌಗೋಳಿಕ ಮೇರೆಯೊಳಗೆ ನಡೆದ ಘಟನಾವಳಿಗಳನ್ನೇ ಉದಾಹರಣೆಯನ್ನಾಗಿಸಿಕೊಂಡು, ದಾಖಲಿಸಿ, ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಕ ಸೂತ್ರಗಳಾಗಿ ನಿರ್ವಿುಸಿ, ಸ್ಪಷ್ಟರೂಪದಲ್ಲಿ ಸಂಗ್ರಹಿಸಿ ಪ್ರೌಢಿಮೆ ಮತ್ತು ದೂರದರ್ಶಿತ್ವಗಳನ್ನು ಮೆರೆದಿದ್ದು ಇಡೀ ಜಾಗತಿಕ ಇತಿಹಾಸದಲ್ಲಿ ಆರ್ಯ ಜನಾಂಗ ಅಥವಾ ಭಾರತೀಯ ಜನಾಂಗವೇ ಮೊಟ್ಟಮೊದಲು. ಬೇರೆಲ್ಲೆಡೆಗೂ ಅದು ವ್ಯಾಪಿಸಿದ್ದು ಇಲ್ಲಿಂದಲೇ. ಇನ್ನು ಮುಂದೆ ವ್ಯಾಪಿಸಬೇಕಾದ್ದೂ ಇಲ್ಲಿಂದಲೇ. ಆದ್ದರಿಂದಲೇ ವಿಧಾತ, ಸೃಷ್ಟಿಕರ್ತ ಈ ಸೂತ್ರಗುಚ್ಛ ಅಥವಾ ಮೌಲ್ಯ ಸಂಗ್ರಹ ಎಂದಿಗೂ ಮಾಸದಂತೆ, ಕುಸಿಯದಂತೆ, ಹಳೆಯದಾಗದಂತೆ, ಅಪ್ರಸ್ತುತವಾಗದಂತೆ ಕಾಲಕಾಲಕ್ಕೆ ಅವುಗಳನ್ನು ಪರಿಷ್ಕರಿಸಲು, ನವೀಕರಿಸಲು, ಪರಿಪೂರ್ಣವಾಗಿಸಲು ಸ್ವಯಂ ತಾನೇ ಒಂದು ಸೂಕ್ಷ್ಮ ರೀತಿಯಲ್ಲಿ ಸಾಧಿಸುತ್ತಾ ಬರುತ್ತಾನೆ. ಅವನು ಹಾಗೆ ಬಂದು ಕಾರ್ಯಪ್ರವೃತ್ತನಾದಾಗ ಅದರ ಹಿಂದಿನ ಗಹನತೆ, ಮಹತ್ವಗಳ ಇಂಗಿತ ಎಳ್ಳಷ್ಟೂ ಸಿಗದಂತೆ ಅತ್ಯಂತ ಸಹಜ ರೀತಿಯಲ್ಲಿ ಇದನ್ನು ನಿರ್ವಹಿಸಿಬಿಡುತ್ತಾನೆ. ಅವನನ್ನೇ ಭಾರತೀಯ ಜೀವನಸಂಹಿತೆ ‘ಯುಗಪುರುಷ’ , ‘ಅವತಾರ’ ಇತ್ಯಾದಿಯಾಗಿ ಕರೆಯುತ್ತದೆ.

ಈ ಸಾಲಿಗೆ ಅತ್ಯಂತ ಇತ್ತೀಚಿನ ದಿನಗಳಲ್ಲಿ ಸೇರ್ಪಡೆಯಾದವರು ಶ್ರೀರಾಮಕೃಷ್ಣರು ಹಾಗೂ ಸ್ವಾಮಿ ವಿವೇಕಾನಂದರು. ಈ ಹಿಂದೆ ಬಂದಿದ್ದವರೇ ರಾಮ, ಕೃಷ್ಣ ಇತ್ಯಾದಿ. ಜನಸಾಮಾನ್ಯರಿಗೂ ತಾನಾರೆಂದು ಗೊತ್ತಾಗಲಿ ಎಂದೇ ಶ್ರೀರಾಮಕೃಷ್ಣರು ಯಾರು ರಾಮನಾಗಿ ಬಂದಿದ್ದನೋ ಯಾರು ಕೃಷ್ಣನಾಗಿ ಬಂದಿದ್ದನೋ ಅವನೇ ಇಂದು ರಾಮಕೃಷ್ಣನಾಗಿ ಬಂದಿದ್ದಾನೆ. ಆದರೆ ಈ ಸಲ ಅವನು ವೇಷ ಮರೆಸಿಕೊಂಡು ಬಂದಿದ್ದಾನೆ ಎಂದು ಹೇಳಿದ್ದರೆ, ಸ್ವಾಮಿ ವಿವೇಕಾನಂದರು ಬೇಲೂರು ಮಠದಲ್ಲಿ ಶ್ರೀರಾಮಕೃಷ್ಣರನ್ನು ಪ್ರತಿಷ್ಠಾಪಿಸಿದ ದಿನ ಇಲ್ಲಿಂದ ಹೊರಡುವ ಬೆಳಕು ಮುಂದೆ ಹಲವು ಶತಮಾನಗಳ ಕಾಲ ಈ ಜಗತ್ತನ್ನು ನಿರ್ದೇಶಿಸುತ್ತದೆ ಎಂದು ಸ್ಪಷ್ಟ ಭಾಷೆಯಲ್ಲಿ ಉಲ್ಲೇಖಿಸಿದ್ದಾರೆ. ಆ ಬೆಳಕನ್ನು ಭಾರತ ಗಂಭೀರವಾಗಿ ತೆಗೆದುಕೊಂಡದ್ದರ ತಕ್ಷಣದ ಪರಿಣಾಮವೇ ಸಾವಿರ ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆದದ್ದು ಮತ್ತು ಹಿಂದೂ ಧರ್ಮ ಒಂದು ಧರ್ಮವಾಗಿ ಉಳಿದಿದ್ದು; ಹಾಗೆಯೇ ಯುರೋಪ್ ಗಂಭೀರವಾಗಿ ತೆಗೆದುಕೊಳ್ಳದಿದ್ದುದರ ಪರಿಣಾಮ ಅಲ್ಲಿ ಎರಡು ಮಹಾಯುದ್ಧಗಳು ನಡೆದು ಎಲ್ಲವೂ ಭಸ್ಮೀಭೂತವಾಗಿ ಸಾರ್ವಭೌಮಿಕೆ ಅಳೆದು ಇಂದು ಸಾಮಾನ್ಯ ರಾಷ್ಟ್ರಗಳಂತೆ ಬದುಕುತ್ತಿರುವುದು! ಇಂಗ್ಲೀಷರಿಂದ ತಮ್ಮ ಮುತ್ಸದ್ದಿತನಕ್ಕೆ Fox that South India ಎಂದು ಕರೆಯಲ್ಪಡುತ್ತಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ವಿವೇಕಾನಂದರು ಭಾರತ ಮತ್ತು ಹಿಂದೂ ಧರ್ಮ ಉಳಿಯುವಂತೆ ಮಾಡಿದರು; ಅವರಿಲ್ಲದಿದ್ದಲ್ಲಿ ನಾವು ಸ್ವಾತಂತ್ರ್ಯವನ್ನೂ ಪಡೆಯುತ್ತಿರಲಿಲ್ಲ ಮತ್ತು ಧರ್ಮವನ್ನೂ ಕಳೆದುಕೊಳ್ಳುತ್ತಿದ್ದೆವು ಎಂದು ಘೊಷಿಸಿದ್ದು ಎಷ್ಟೋ ಜನರಿಗೆ ಇಂದು ತಿಳಿದಿಲ್ಲ. ಅದು ಸರಿಯೇ! ಏಕೆಂದರೆ ನಾನಾಗಲೇ ಹೇಳಿದಂತೆ ಆ ಯುಗಪುರುಷನ ಕಾರ್ಯತಂತ್ರ ಅಷ್ಟು ಸಹಜ ಮತ್ತು ಸರಳ! ಗಹನತೆಯನ್ನು ಗೌಪ್ಯವಾಗಿಡುವಂಥದ್ದು! ತನ್ನ ಗುರು ಶ್ರೀರಾಮಕೃಷ್ಣರಂತೆ ವಿವೇಕಾನಂದರೂ ತಾವಾರು, ತಮ್ಮ ಕರ್ತವ್ಯವೇನು ಎಂದು ತಿಳಿಸಿದ್ದಾರೆ. ಅದರ ಸಾರಾಂಶ I want to blow life into the dead bones of this country. ಸತ್ತಂತಿರುವ ಈ ದೇಶದ ನರನಾಡಿಗಳಲ್ಲಿ ಶಕ್ತಿ ಸಂಚಾರವಾಗಿಸುವುದೇ ನನ್ನ ಜೀವನದ ಗುರಿ ಎಂದಿದ್ದರೆ, ಮತ್ತೊಂದು ಕಡೆ ಪ್ರತಿಯೊಬ್ಬರಲ್ಲೂ ಅಡಕವಾಗಿರುವ ಅಸೀಮ ಶಕ್ತಿಯನ್ನು ಅವರಿಗೆ ತಿಳಿಸಿ ಅದು ಜೀವನದ ಪ್ರತಿ ಕ್ಷೇತ್ರದಲ್ಲೂ ಸ್ಪಷ್ಟವಾಗಿ ವ್ಯಕ್ತವಾಗುವಂತೆ ಮಾಡುವುದನ್ನೇ ಭಾರತದಲ್ಲಿ ಅನಾದಿಕಾಲದಿಂದಲೂ ‘ದಿವ್ಯತೆ’ಎಂಬುದಾಗಿ ಕರೆಯಲಾಗುತ್ತಿದೆ. ಈ ದಿವ್ಯತೆಯ ವ್ಯಕ್ತತೆ ಎಂದೂ ಆಗುವುದು ಎರಡು ಕ್ಷೇತ್ರಗಳಲ್ಲಿ. ಅದೇ ಮನುಷ್ಯನ ‘ಆಂತರಿಕ ಪ್ರಕೃತಿ’ ಮತ್ತು ‘ಬಾಹ್ಯ ಪ್ರಕೃತಿ’. ಆಂತರಿಕ ಪ್ರಕೃತಿಗಾಗಿ ಅವರು ಆರಿಸಿಕೊಂಡಿದ್ದು ಅಮೆರಿಕಾ ಮತ್ತು ಇಂಗ್ಲೆಂಡುಗಳನ್ನು ಮತ್ತು ಬಾಹ್ಯವ್ಯಕ್ತತೆಗಾಗಿ ಭಾರತವನ್ನು. ಕಾರಣವಿಷ್ಟೇ! ಭಾರತ ಈಗಾಗಲೇ ಆಂತರ್ಯದಲ್ಲಿ ಸಾಕಷ್ಟು ಕೃಷಿ ಮಾಡಿ ಪ್ರಭುತ್ವ ಪ್ರಬುದ್ಧತೆಗಳನ್ನು ಸಾಧಿಸಿದ್ದರೆ ಪಶ್ಚಿಮ ಬಾಹ್ಯದಲ್ಲಿ ಅದನ್ನು ಮಾಡಿದೆ. ಈ ಮಹಾನ್ ಕಾರ್ಯತಂತ್ರದಲ್ಲಿ ಶ್ರೀರಾಮಕೃಷ್ಣರು ಭಾರತದ ‘ಋಷಿ ಪರಂಪರೆ’ಯನ್ನು ಪ್ರತಿನಿಧಿಸಿದ್ದರೆ, ಪಶ್ಚಿಮದ ಕ್ಷಾತ್ರ ಪರಂಪರೆಯನ್ನು ವಿವೇಕಾನಂದರು ಪ್ರತಿನಿಧಿಸಿದ್ದಾರೆ. ಇದೊಂದು ಅತ್ಯಂತ ಸೂಕ್ಷ್ಮ; ಮನನ ಯೋಗ್ಯ ಹಾಗೂ ಅಧ್ಯಯನ ಯೋಗ್ಯ!

ಕೇವಲ 39 ವರ್ಷ 5 ತಿಂಗಳು 24 ದಿನ ಬದುಕಿದ ಆ ಮಹಾನುಭಾವ ಇದನ್ನು ಸಾಧಿಸಿದ್ದು ತಾನು ಹುಟ್ಟಾ ಬಳುವಳಿಯಾಗಿ ತಂದ ಶಕ್ತಿಯಿಂದಲೇ ಎಂದೇನೂ ಅಲ್ಲ. ಅಷ್ಟೇಕೆ! ಶ್ರೀರಾಮಕೃಷ್ಣರು ಕೂಡ ಯಾವುದೇ ಶಿಸ್ತು ತಪಸ್ಸುಗಳಿಲ್ಲದೆ ಅದನ್ನು ಸಾಧಿಸಲಿಲ್ಲ. ಇಬ್ಬರೂ ಕೂಡ ’ನ ಭೂತೋ’ ಎನ್ನುವ ರೀತಿಯಲ್ಲಿ ತಪಸ್ಸನ್ನಾಚರಿಸಿದರು. ಶ್ರೀರಾಮಕೃಷ್ಣರು ಸಂಪೂರ್ಣವಾಗಿ ಶಾಸ್ತ್ರ ವಾಕ್ಯ ಮತ್ತು ಗುರುವಾಕ್ಯಗಳಲ್ಲಿನ ಶ್ರದ್ಧೆಯನ್ನು ಅವಲಂಬಿಸಿದ್ದರೆ ನರೇಂದ್ರ ಪ್ರಶ್ನೆ ಮತ್ತು ಪರೀಕ್ಷೆಗಳ ಮಾರ್ಗವನ್ನವಲಂಬಿಸಿದ್ದ. ಒಬ್ಬರದ್ದು ಭಾರತದ ಋಷಿ ಪರಂಪರೆಯ ಮಾರ್ಗ ಮತ್ತೊಬ್ಬರದ್ದು ಪಾಶ್ಚಾತ್ಯ ರೀತಿಯ ಪ್ರಾಶ್ನಿಕ ಹಾಗೂ ಪರೀಕ್ಷಾ ಮಾರ್ಗ; ಆಧುನಿಕ ವೈಜ್ಞಾನಿಕ ಮಾರ್ಗ. ನರೇಂದ್ರ ಮೊಟ್ಟ ಮೊದಲಿಗೆ ರಾಮಕೃಷ್ಣರನ್ನು ಸಂಧಿಸಲು ಅವರ ಕೋಣೆಗೆ ಪ್ರವೇಶಿಸಿದ್ದೇ ಕೋಣೆಯ ಪಶ್ಚಿಮದ ಬಾಗಿಲ ಮೂಲಕ! ಇತಿಹಾಸ ಕಂಡು ಕೇಳರಿಯದ ಬೌದ್ಧಿಕ ಸಾಮರ್ಥ್ಯ ನರೇಂದ್ರನದ್ದು. ಅವನನ್ನು ಕಂಡ ದಿನದಿಂದಲೇ ಶ್ರೀರಾಮಕೃಷ್ಣರು ಅದೆಷ್ಟು ಸಲ ತನ್ನ ಬುದ್ಧಿ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳಿಂದ ನರೇಂದ್ರ ಜಗತ್ತನ್ನೇ ಅಲುಗಾಡಿಸಿ ಬಿಡುತ್ತಾನೆ; ಬುಡ ಸಹಿತ ಅಲುಗಾಡಿಸಿಬಿಡುತ್ತಾನೆ ಎಂದು ಎಲ್ಲರ ಮುಂದೆಯೂ ಉದ್ಘೋಷಿಸಿದ್ದರೋ. ದಿನಕ್ಕೊಂದರಂತೆ ಸುಮಾರು 12 ಎನ್​ಸೈಕ್ಲೋಪಿಡಿಯಾ (ಸರ್ ಜಾನ್ ಲುಬ್ಬಾಕ್ ರಚಿತ)ಗಳನ್ನು ಮುಗಿಸುತ್ತಿದ್ದ ವಿವೇಕಾನಂದರ ಬಗ್ಗೆ ಸ್ವಾಮಿ ಅಖಂಡಾನಂದರಿಗೆ ನಿಮ್ಮ ಸೋದರ ಪುಸ್ತಕಗಳನ್ನು ಓದುತ್ತಿದ್ದಾರೋ ಸುಮ್ಮನೆ ಪುಟ ತಿರುವಿ ವಾಪಸ್ ಕಳಿಸುತ್ತಿದ್ದಾರೋ ಎಂದು ಬ್ರಿಟಿಷ್ ಗ್ರಂಥ ಪಾಲಕ ಕೇಳಿದಾಗ ವಿವೇಕಾನಂದರು ಗ್ರಂಥಾಲಯಕ್ಕೇ ತೆರಳಿ ಅವನು ಪ್ರಶ್ನಿಸಿದ ವಿಷಯಗಳನ್ನು ತದ್ವತ್ (verbatum) ಉದ್ಧರಿಸಿ ಅವನು ಅವಾಕ್ಕಾಗುವಂತೆ ಮಾಡಿದ್ದರು.

ಅದೆಷ್ಟು ಸಲ ಅವರ ಜೀವನದಲ್ಲಿ ಇದು ಪುನರಾವರ್ತನೆಯಾಯಿತೋ ಆ ದೇವನೇ ಬಲ್ಲ! ವಿವೇಕಾನಂದರ ಜ್ಞಾನಸಾಗರ ಅಸೀಮ, ಅನಂತ. ಅದರ ಬಗ್ಗೆಯೇ ಒಂದು ಕಿರು ಹೊತ್ತಿಗೆಯನ್ನೇ ಬರೆಯಬಹುದು. ಬಾಲಕ ನರೇಂದ್ರನಾಗಿದ್ದಾಗಲೇ ಈ ಸಾಮರ್ಥ್ಯ ಸಾಕಷ್ಟು ಅರಳಿ ನಿಂತಿತ್ತು. ಯಾವ ಪರೀಕ್ಷೆಗೂ ಮೂರು ದಿನಕ್ಕಿಂತ ಹೆಚ್ಚಿಗೆ ತಯಾರಿ ಮಾಡಿಕೊಳ್ಳುತ್ತಿರಲಿಲ್ಲ. ಜರ್ಮನ್ ವಿಶ್ವವಿದ್ಯಾಲಯಗಳನ್ನೂ ಸೇರಿಸಿ ಪ್ರಪಂಚದ ಹಲವು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದೇನೆ ನಾನು. ನರೇಂದ್ರನಂತಹ ವಿದ್ಯಾರ್ಥಿಯನ್ನು ಎಲ್ಲೂ ಕಾಣಲಿಲ್ಲ. ಅವನು ಜೀವನದಲ್ಲಿ ಒಂದು ಸ್ಪಷ್ಟ ಗುರ್ತ ಬಿಟ್ಟುಹೋಗುವುದು ಖಂಡಿತ ಎಂದು ಸ್ಕಾಟಿಷ್ ಚರ್ಚ್ ಕಾಲೇಜಿನ ಆಂಗ್ಲ ಪ್ರಾಂಶುಪಾಲ ಉದ್ಗರಿಸಿದ್ದರು. ಇದೆಲ್ಲದರ ಜೊತೆಗೆ ಇಡೀ ರಾತ್ರಿ ಶಿಲಾ ಮೂರ್ತಿಯಂತೆ ಮೈಮರೆತು ಧ್ಯಾನ ಮಾಡುವ ಸಾಮರ್ಥ್ಯ ನರೇಂದ್ರನಿಗಿತ್ತು. ಧ್ಯಾನ ಅವನಿಗೊಂದು ಆಟವೇ ಆಗಿತ್ತು. ಸ್ವಯಂ ರಾಮಕೃಷ್ಣರೇ ಅವನನ್ನು ‘ಧ್ಯಾನಸಿದ್ದ’ ಎಂದು ಕರೆಯುತ್ತಿದ್ದುದಲ್ಲದೆ, ‘ಅಮ್ಮ , ನಿನ್ನ ಮಾಯೆಯನ್ನು ಅವನ ಮೇಲೆ ಸ್ವಲ್ಪ ಹಾಕು ಇಲ್ಲದಿದ್ದಲ್ಲಿ ಧ್ಯಾನಕಾಲದಲ್ಲಿ ಅವನು ಶರೀರವನ್ನು ಒಗೆದು ಆ ಕಡೆ ಹೋಗಿಬಿಡುತ್ತಾನೆ’ ಎಂದು ಜಗನ್ಮಾತೆಯನ್ನು ಪ್ರಾರ್ಥಿಸುತ್ತಿದ್ದುದುಂಟು. ಇನ್ನೂ ಹೇಳಬೇಕೆಂದರೆ ಅವನು ಸಪ್ತ ಋಷಿಗಳಲ್ಲಿ ಒಬ್ಬ ಜಗತ್ತಿನ ಉದ್ಧಾರಕ್ಕೆ ಬಂದಿದ್ದಾನೆ. ತಾನು ಯಾರೆಂದು ತಿಳಿದ ಮೇಲೆ ಬಹಳ ದಿನ ಅವನು ಇಲ್ಲಿ ಉಳಿಯುವುದಿಲ್ಲ ಎಂದೂ ಶ್ರೀರಾಮಕೃಷ್ಣರು ಹೇಳುತ್ತಿದ್ದುದುಂಟು. ಆ ಕಡೆ ಇಡೀ ಪಾಶ್ಚಾತ್ಯ ಚಿಂತಕರನ್ನು ಅರೆದು ಕುಡಿದು ಮನಸ್ಸು ನಾಸ್ತಿಕತೆ ಮತ್ತು ಆಜ್ಞೇಯತಾವಾದದ ಕಡೆ ತಿರುಗುತ್ತಿದ್ದರೆ ಈ ಕಡೆ ಪ್ರಬಲವಾದ ಪೂರ್ವ ಸಂಸ್ಕಾರಗಳು ಅವನಲ್ಲಿ ದೇವನಿರುವನೇ? ಇದ್ದರೆ ಅವನನ್ನು ಪಡೆಯುವುದು ಹೇಗೆ? ಎಂಬ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸಂಶಯಗಳ ಸುಳಿಯಲ್ಲಿ ಸಿಲುಕಿಸಿತ್ತು. ಇದೆಲ್ಲದರ ನಡುವೆ ಪಾವಿತ್ರ್ಯದ ಮೂರ್ತಿಯೇ ಆಗಿ ಕಂಗೊಳಿಸುತ್ತಿದ್ದ ನರೇಂದ್ರನನ್ನು ರಾಮಕೃಷ್ಣರು ಪ್ರಥಮ ಬಾರಿಗೆ ನೋಡಿದಾಗ ಭೋಗ ಭೂಮಿಯಾದ ಕಲ್ಕತ್ತೆಯಲ್ಲಿ ಯಾರಪ್ಪಾ ಇಂಥವನೊಬ್ಬ ಎಂದು ಚಕಿತರಾಗಿದ್ದರು. ಅಂದೇ ಅವನನ್ನು ದಕ್ಷಿಣೇಶ್ವರಕ್ಕೆ ಆಹ್ವಾನಿಸಿದ್ದರು ಕೂಡ. ಉಪನಿಷತ್ತುಗಳಲ್ಲಿರುವ ಆತ್ಮನ ಲಕ್ಷಣಗಳೆಲ್ಲ ಅವನಲ್ಲಿ ಮೂರ್ತರೂಪವನ್ನು ತಾಳಿದ್ದವು ಎಂದು ಹೇಳಿದರೆ ಅವನ ವ್ಯಕ್ತಿತ್ವದ ಸ್ಥೂಲ ಚಿತ್ರ ಸಿಕ್ಕೀತು. ಆತ್ಮ ಮನುಷ್ಯರೂಪವನ್ನು ತಾಳಿದರೆ ಅದು ನರೇಂದ್ರನಂತೆ ಇರುತ್ತದೆ ಎನ್ನುವ ಶ್ರೀ ರಾಮಕೃಷ್ಣರ ಮಾತಿನಲ್ಲಿ ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನರೇಂದ್ರನ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಬಹುದು. ಆತ್ಮನ ಲಕ್ಷಣಗಳನ್ನು ಸೂಕ್ಷ್ಮವಾಗಿ ಹೇಳುವಾಗಲೆಲ್ಲಾ ನಾವು ಬಳಸುವುದು ಅದು ಸರ್ವಜ್ಞ; ಸರ್ವಶಕ್ತಿಮಾನ್; ಚಿದಾನಂದ ಸ್ವರೂಪ ಎಂದು.

ಈ ನರೇಂದ್ರನೇ ಮುಂದೆ ವೀರ ಸಂನ್ಯಾಸಿ, ವಿಶ್ವವಿಜೇತ, ವಿಶ್ವಮಾನವ ವಿವೇಕಾನಂದರಾಗಿ ನಿರ್ವಣಗೊಂಡಿದ್ದು.

ಇಂದಿನ ಯುವಶಕ್ತಿ ನರೇಂದ್ರನನ್ನು ಆದರ್ಶವಾಗಿಟ್ಟುಕೊಂಡಾಗ ಅವರಿಗೆ ಸಾರ್ವಕಾಲಿಕ ಶ್ರೇಷ್ಠ Role Model ಸಿಗುತ್ತದೆ. ಇದೇ ಇಂದಿನ ಬೃಹತ್ ಸಮಸ್ಯೆ ಸರಿಯಾದ Role Model ಇಲ್ಲದಿರುವುದು. ವ್ಯಕ್ತಿ ಎಲ್ಲಿಯಾದರೂ ಹುಟ್ಟಿರಲಿ ತನ್ನನ್ನು ತಾನು ನಿರ್ವಿುಸಿಕೊಳ್ಳುವ ಪೂರ್ಣ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಅವಕಾಶವನ್ನು ಕೂಡ! ಆದರೆ ಇಲ್ಲಿ ಎಚ್ಚರ ವಹಿಸಬೇಕಾದ್ದು ಅವನ Role Model ಯಾರು, ಅವನು ತನ್ನ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಿದ್ದಾನೆ; ತನ್ನ ಬಗ್ಗೆ ತಾನು ಎಂತಹ ಚಿತ್ರವನ್ನಿರಿಸಿಕೊಂಡಿದ್ದಾನೆ; ಅವನ ಸ್ನೇಹಿತರೆಂಥವರು; ಗುರಿ ಮುಟ್ಟುವೆಡೆ ಅವನ ಬದ್ಧತೆ ಎಷ್ಟು ಇತ್ಯಾದಿಗಳು. ಅದೆಷ್ಟೋ ಸಲ ವಿವೇಕಾನಂದರು ಹೇಳಿದ್ದುಂಟು ‘ಭಾರತೀಯ ಯುವಕರೇ ನನ್ನ ಮತ್ತು ನಿಮ್ಮಲ್ಲಿ ಹರಿಯುತ್ತಿರುವ ರಕ್ತ ಒಂದೇ; ನಾವು ಪೂಜಿಸುವ ದೇವರೂ ಒಂದೇ; ನಡೆದಾಡುವ ನೆಲ, ಕುಡಿಯುವ ನೀರು ಎಲ್ಲವೂ ಒಂದೇ. ಕೈಯಲ್ಲಿ ಬಿಡಿಗಾಸಿಲ್ಲದೆ ಮೂರೂವರೆ ವರ್ಷದಲ್ಲಿ ಅರ್ಧ ಪ್ರಪಂಚವೇ ನಮ್ಮನ್ನು ಅರಿಯುವಂತೆ ಮಾಡಿದೆ. ಆದರೆ ಇಂಗ್ಲಿಷರ ಕಾಲೊದೆತಕ್ಕೆ ನೀವೇಕೆ ಸಿಕ್ಕಿಬಿದ್ದಿದ್ದೀರಿ? ಕಾರಣವೇನು ಗೊತ್ತೆ?! ನಾನು ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಆದರೆ ನೀವು?’

ವಿವೇಕಾನಂದರ ಮೇಲಿನ ಮಾತುಗಳೇ ಉಪನಿಷತ್ಸಾರ; ವೇದಾಂತ. ಪ್ರಪಂಚದ ಎಲ್ಲ ದೇವತೆಗಳಲ್ಲೂ ಶ್ರದ್ಧೆ ಇದ್ದು ಆತ್ಮ ಶ್ರದ್ಧೆ ಇಲ್ಲದಿದ್ದಲ್ಲಿ ಅದೊಂದು ಕೊರತೆಯೇ. ಏಕೆಂದರೆ ಆತ್ಮ ಶ್ರದ್ಧೆಯೇ ಎಲ್ಲಾ ಶಕ್ತಿಗಳ ಮೂಲ. ಮತ್ತು ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net