ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ, ಒಂದು ಪರಾಮರ್ಶೆ..

Column F
Published on
ಮಾತೃಭಾಷೆಯಲ್ಲಿ ಕುತೂಹಲಕಾರಿ ವಿಷಯಗಳನ್ನು ಕೇಳಿ ಕಲಕಲ್ಪಟ್ಟ ಮನಸ್ಸಿನ ಮಗು ಪ್ರಕೃತಿಯಲ್ಲಿ ಸಂಭವಿಸುವ ಪ್ರತಿಯೊಂದರ ಬಗ್ಗೆಯೂ ಯೋಚಿಸಲಾರಂಭಿಸುತ್ತದೆ. ಪ್ರತಿಯೊಂದನ್ನೂ ಪ್ರಶ್ನಿಸಲು, ವಿಮಶಿಸಲು ಆರಂಭಿಸುತ್ತದೆ. ಶಿಕ್ಷಕನ ಬೋಧನೆ ಇಷ್ಟೆಲ್ಲಾ ಪರಿಣಾಮ ಉಂಟು ಮಾಡಬೇಕು ಎಂದರೆ ಅದು ಮಾತೃಭಾಷೆಯಲ್ಲಿಯೇ ಇರಬೇಕು.

ಮೂರು ವರ್ಷ ಮುಗಿದ ತಕ್ಷಣ ಮಗು ಶಾಲೆಯನ್ನು ಪ್ರವೇಶಿಸಬೇಕು ಎನ್ನುತ್ತದೆ ನೂತನ ಶಿಕ್ಷಣ ನೀತಿ. ಮುಂದೆ 15 ವರ್ಷಗಳ ಕಾಲ ಬೇರೆ ಬೇರೆ ಹಂತಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಅದಕ್ಕೆ ತರಬೇತಿ ಕೊಟ್ಟು 18 ಹರೆಯ ಮುಗಿಯುವ ಹೊತ್ತಿಗೆ ಅದು ತನ್ನ ಸ್ವಕ್ಷೇತ್ರವನ್ನು ಆರಿಸಿಕೊಂಡು ಪ್ರತಿಭೆಯನ್ನು ಮೆರೆದು ನಾಡಿನ ಅಭಿವೃದ್ಧಿಗಾಗಿ ಅಮೂಲ್ಯಕೊಡುಗೆ ನೀಡಲಿ ಎನ್ನುವುದು ಉದ್ದೇಶ. ಕಳೆದ 42 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಶಕ್ತಿಯನ್ನು ವ್ಯಯಿಸಿ, ವಿಭಿನ್ನ ಸವಾಲುಗಳಿಗೆ ಉತ್ತರವೀಯಬಲ್ಲ ಎರಡು ಶಾಲೆಗಳ ಸ್ಥಾಪಕನಾಗಿ, ಹಲವು ವಿದ್ಯಾರ್ಥಿಗಳ ಮಾರ್ಗದರ್ಶಿಯಾಗಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತುತಪಡಿಸಲಿಚ್ಛಿಸುತ್ತೇನೆ.

ಯಾವುದೇ ಶೈಕ್ಷಣಿಕ ನೀತಿಯಾಗಲಿ, ಶಿಕ್ಷಣ ತಜ್ಞರಾಗಲಿ ಮನಸ್ಸಿನಲ್ಲಿಟ್ಟು ಕೊಳ್ಳಬೇಕಾದ್ದು ಪ್ರತಿ ಮಗು ಕೂಡ ಒಂದು ಸುಪ್ತಶಕ್ತಿ; ಬೂದಿ ಮುಚ್ಚಿದ ಬೃಹತ್ ಕೆಂಡ; ಅಪಾರ, ಅದ್ಭುತ ಶಕ್ತಿಯೊಂದು ಅವನಲ್ಲಿ ಮಲಗಿಕೊಂಡಿದೆ. ಅರ್ಥಾತ್ ಆ ಶಕ್ತಿ ಈಗಾಗಲೇ ಅಲ್ಲಿ ಇದೆ. ಅದನ್ನು ಯಾರೂ ಹೊಸದಾಗಿ ಸೃಷ್ಟಿಸಬೇಕಿಲ್ಲ. ಇಲ್ಲಿ ಜಾತಿ, ಮತ, ಪಂಥ, ವರ್ಣ, ವರ್ಗ, ದೇಶ, ಭಾಷೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ‘ಮಾನವ ಶರೀರ’ ಒಂದು ಇದ್ದುಬಿಟ್ಟರೆ ಸಾಕು. ಇಡೀ ಶೈಕ್ಷಣಿಕ ವ್ಯವಸ್ಥೆಯ ಅರ್ಥಾತ್ ಶಿಕ್ಷಕ, ಪಠ್ಯ, ಪುಸ್ತಕ, ತರಬೇತು, ಪರೀಕ್ಷೆ ಇವೆಲ್ಲದರ ಏಕಮೇವ ಗುರಿ ಮಗುವಿನೊಳಗೆ ಮಲಗಿರುವ ಸರ್ವಜ್ಞನನ್ನು ಸರ್ವಶಕ್ತನನ್ನು ಎಬ್ಬಿಸುವುದು ಮಾತ್ರ. ಸಾಸಿವೆ ಕಾಳಿನಷ್ಟು ಇರುವ ಆಲದ ಬೀಜದಲ್ಲಿ ಬೆಟ್ಟದಂಥ ಆಲದಮರ ಈಗಾಗಲೇ ಮಲಗಿದೆ; ಪ್ರತಿ ಬೀಜದಲ್ಲೂ ಇದೆ. ಆದರೆ ನೀರು, ಗೊಬ್ಬರ, ಮಣ್ಣು, ಬೇಲಿ ಸೇರಿ ಅದನ್ನು ಹೊರಕ್ಕೆ ತೆಗೆಯುತ್ತದೆ. ಹೊಸದಾಗಿ ಏನನ್ನೂ ಸೃಷ್ಟಿಸುವುದಿಲ್ಲ.

Educo ಎನ್ನುವ ಲ್ಯಾಟಿನ್ ಶಬ್ದದಿಂದ ಬಂದದ್ದು ಇಂಗ್ಲಿಷಿನ Education. ಲ್ಯಾಟಿನ್​ನಲ್ಲಿ Educo ಎಂದರೇನೇ ಹೊರಕ್ಕೆ ತೆಗೆಯುವುದು ಎಂದು ಅರ್ಥ. ವಿದ್ಯಾರ್ಥಿಯ ಮನಸ್ಸು-ಬುದ್ಧಿ ಎಂಬ ಸಂಕೀರ್ಣ (Mind & Intellect Complex)ದಿಂದ ಜ್ಞಾನ ಅಥವಾ ಪ್ರಜ್ಞಾವಂತಿಕೆಯನ್ನು ಹೊರಕ್ಕೆ ತೆಗೆಯುವುದಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದದ್ದೇ ಅವನ ಮನಸ್ಸನ್ನು ಕಲಕುವುದು. ಇದೇ ಶಿಕ್ಷಣದ ಪ್ರಧಾನ ಅಂಶ. ತರಗತಿಯಲ್ಲಿ ಹೇಳಿದ ವಿಷಯವೊಂದನ್ನು ದಿನಗಟ್ಟಲೇ ಕುರಿತು ಚಿಂತಿಸುತ್ತಾ, ತನ್ಮಯನಾಗಿ, ಇಡೀ ಮನಸ್ಸನ್ನು ಅದು ಆಕ್ರಮಿಸಿಕೊಳ್ಳುವಂತೆ ಮಾಡುವ ಸಂದರ್ಭ ಅದು. ಹೇಳಬೇಕಾದ ವಿಷಯ (ಪಠ್ಯ) ಹೇಳಬೇಕಾದ ವ್ಯಕ್ತಿ (ಶಿಕ್ಷಕ)ಗಳನ್ನು ಆರಿಸಿಕೊಳ್ಳುವಾಗ ಇದನ್ನು ನೂರು ಸಲ ಗಮನಿಸಬೇಕು. ಮನಸ್ಸನ್ನು ಕಲಕುವ, ಕುತೂಹಲದಿಂದ ಕದಡುವ ನಾಲ್ಕಾರು ಪಾಠಗಳೇ ಸಾಕು ಪ್ರಾಥಮಿಕ ಹಂತದ ಪಠ್ಯದಲ್ಲಿ. ರಾಶಿರಾಶಿ ಪುಸ್ತಕಗಳಲ್ಲ. ಕುತೂಹಲ ನಿರ್ವಣವಾದರೆ, ಶಿಕ್ಷಕ ಕೂಡ ಅಷ್ಟು ಪರಿಣಾಮಕಾರಿಯಾಗಿ ವಿಷಯವನ್ನು ಮಂಡಿಸಿದ್ದೇ ಆದರೆ ಮಗು ತಾನೇ ಮತ್ತೆ ಮತ್ತೆ ಕೇಳಿ ವಿಷಯಗಳನ್ನು ಸಂಗ್ರಹಿಸುತ್ತಾನೆ, ಹೊಸಹೊಸ ಪುಸ್ತಕಗಳನ್ನು ಹುಡುಕಿಕೊಳ್ಳುತ್ತಾನೆ. ಇಲ್ಲಿ ಬರುವ ಮೂರು ಪ್ರಮುಖ ವಿಷಯಗಳನ್ನು ಗಮನಿಸಿ. ಅದೇ 1. ವಿಷಯ ಅಥವಾ ಪಾಠ 2. ಶಿಕ್ಷಕನ ಬೋಧನೆಯ ವೈಖರಿ 3. ವಿದ್ಯಾರ್ಥಿಯಲ್ಲಿ ಮೂಡಬೇಕಾದ ಕುತೂಹಲ (ಅದರ ಫಲವಾಗಿ ಅವನಲ್ಲಿ ಉದ್ಭವಿಸುವ ಪ್ರಶ್ನೆಗಳು ಮತ್ತದರ ಫಲವಾಗಿ ಹೆಚ್ಚಿನ ವಿಷಯಗಳ ಬಗ್ಗೆ ಹುಡುಕಾಟ ಅಥವಾ ಜ್ಞಾನ ಪಿಪಾಸುತನ); ಇವೇ ಇಡೀ ಶಿಕ್ಷಣದ ಏಕಮೇವ ಗುರಿ. ಇದನ್ನು ಸಾಧಿಸದಿದ್ದಲ್ಲಿ Educo ಅಥವಾ Education ಎಂದೂ ಆಗುವುದಿಲ್ಲ. ಏಕೆಂದರೆ ಈ ಜ್ಞಾನದ ಹಸಿವು ಹಲವು ರೂಪಗಳನ್ನು ತಾಳುತ್ತದೆ. ಅದೇ ಶಾಲಾ ತರಗತಿಯಲ್ಲಿ ಪಾಠ ಪ್ರಕ್ರಿಯೆಯಲ್ಲಿ ತನ್ಮಯತೆ, ಸ್ನೇಹಿತರೊಂದಿಗೆ ಚರ್ಚೆ, ತಿಳಿಯಬೇಕೆಂಬ ಹಂಬಲದಲ್ಲಿ ಸಂಬಂಧಿಸಿದ ಪುಸ್ತಕಗಳ ಹುಡುಕಾಟ.

ಈ ಅಂಶಗಳನ್ನೆಲ್ಲಾ ಆಮೂಲಾಗ್ರವಾಗಿ ಮತ್ತು ವ್ಯವಸ್ಥಿತವಾಗಿ ಅಧ್ಯಯನ ಮಾಡಿ ಜ್ಞಾನಸಾಗರವನ್ನೇ ನಿರ್ಮಾಣ ಮಾಡಿದ ಪ್ರಾಚೀನ ಭಾರತ ತನ್ನ ಶೈಕ್ಷಣಿಕ ತತ್ವವನ್ನು ಈ ರೀತಿಯಲ್ಲಿ ನಿರೂಪಿಸುತ್ತದೆ.

ಆಚಾರ್ಯಾತ್ ಪಾದಂ ಆದತ್ತೇ | ಪಾದಂ ಶಿಷ್ಯ ಸ್ವಮೇದಯಾ|

ಪಾದಂ ಸ ಬ್ರಹ್ಮಚಾರಿಭ್ಯಃ | ಪಾದಂ ಕಾಲಕ್ರಮೇಣ ಚ ||

ಅರ್ಥಾತ್ ಶಿಕ್ಷಕನಿಂದ ಬರುವುದು ಕಾಲುಭಾಗದ ವಿದ್ಯೆ, ಕಾಲುಭಾಗ ವಿದ್ಯಾರ್ಥಿ ತಾನೇ ಹುಡುಕಿಕೊಳ್ಳಬೇಕು, ಇನ್ನು ಕಾಲುಭಾಗ ಸ್ನೇಹಿತ, ಸಹಪಾಠಿಗಳಿಂದ ಮತ್ತು ಉಳಿದ ಕಾಲುಭಾಗ ದಿನಗಳೆದಂತೆ - ಈ ಮೇಲಿನ ಪ್ರಕ್ರಿಯೆಗಳ ಹಾಗೂ ವಿದ್ಯಾರ್ಥಿಯ ಅನುಭವದ ಫಲವಾಗಿ ಬರುತ್ತದೆ. ಇದನ್ನು ಗಮನಿಸಿದಾಗ ನಮಗೆ ಎದ್ದು ಕಾಣುವ ಅಂಶವೇನೆಂದರೆ- ಪರಿಣಾಮಕಾರಿ ವಿಷಯ ಬೋಧನೆ ಮತ್ತು ಕುತೂಹಲ ಆಶ್ಚರ್ಯಗಳನ್ನು ಸೃಷ್ಟಿಸುವ ವಿಷಯಗಳೇ ಪಠ್ಯಗಳಲ್ಲಿರಬೇಕು ಎಂಬುದು. ಪ್ರಾರಂಭಿಕ ಹಂತದಲ್ಲಿ ಅಥವಾ 5+3+3 ವರಗೆ (9ನೇ ತರಗತಿಯವರೆಗೆ) ಇದು ಅನಿವಾರ್ಯವೆಂದೇ ಹೇಳಬೇಕು.

ಇಷ್ಟೆಲ್ಲಾ ಪರಿಣಾಮ ಭಾರತೀಯ ವಿದ್ಯಾರ್ಥಿಯ ಮನಸ್ಸಿನಲ್ಲಿ ಆಗಬೇಕು ಎಂದರೆ ತನಗೆ ಪರಿಚಯವೇ ಇಲ್ಲದ ಇಂಗ್ಲಿಷ್ ಭಾಷೆಯಲ್ಲಿ ಪಾಠ-ಪ್ರವಚನ ಅಥವಾ ಸಂವಹನ ನಡೆದರೆ ಸಾಧ್ಯವಾದೀತೇ? ಶಿಕ್ಷಕ ಹೇಳುತ್ತಿರುವ ವಿಷಯವನ್ನು ಕೇಳಿ ವಿದ್ಯಾರ್ಥಿ ರೋಮಾಂಚನ ಗೊಳ್ಳಬಲ್ಲನೇ? ಮನಸ್ಸಿನಲ್ಲಿ ನೂರಾರು ಭಾವನೆಗಳನ್ನು ಎಬ್ಬಿಸಿಕೊಳ್ಳಬಲ್ಲನೇ? ಕಣ್ಣರಳಿಸಿ, ಕಿವಿಯಗಲಿಸಿ, ಹಗಲು ಗನಸಿಗೆ ಜಾರಬಲ್ಲನೇ? ಶಾಲೆಯಿಂದ ಮನೆಗೆ ಹಿಂದಿರುಗಿದ ತಕ್ಷಣ ತಂದೆ,ತಾಯಿ, ಅಕ್ಕ,ಅಣ್ಣಂದಿರ ಮುಂದೆ ಹತ್ತಾರು ಪ್ರಶ್ನೆಗಳನ್ನು ಸುರಿಯಬಲ್ಲನೇ?! ‘ಎಷ್ಟೊಂದು ಅದ್ಭುತವಾಗಿದೆ ಈ ಪ್ರಪಂಚ’, ‘ಈ ಮನುಷ್ಯ ಶರೀರ’, ‘ಈ ಗಿಡದ ಒಳರಚನೆ’ ಎಂದು ಆಶ್ಚರ್ಯಗೊಳ್ಳಬಲ್ಲನೇ?

ಮಾತೃಭಾಷೆಯಲ್ಲಿ ಕುತೂಹಲಕಾರಿ ವಿಷಯಗಳನ್ನು ಕೇಳಿ ಕಲಕಲ್ಪಟ್ಟ ಮನಸ್ಸಿನ ಮಗು ಪ್ರಕೃತಿಯಲ್ಲಿ ಸಂಭವಿಸುವ ಪ್ರತಿಯೊಂದರ ಬಗ್ಗೆಯೂ ಯೋಚಿಸಲಾರಂಭಿ ಸುತ್ತದೆ. ಪ್ರತಿಯೊಂದನ್ನೂ ಪ್ರಶ್ನಿಸಲು, ವಿಶ್ಲೇಷಿಸಲು, ವಿಮಶಿಸಲು ಆರಂಭಿಸುತ್ತದೆ. ತರಗತಿಯಲ್ಲಿ ಶಿಕ್ಷಕನ ಬೋಧನೆ ಇಷ್ಟೆಲ್ಲಾ ಪರಿಣಾಮವನ್ನು ಉಂಟು ಮಾಡಬೇಕು ಎಂದರೆ ಅದು ಮಾತೃಭಾಷೆಯಲ್ಲಿಯೇ, ಆಡುಭಾಷೆಯಲ್ಲೇ ಇರಬೇಕು. ಪರಭಾಷೆಯಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ ಆ ಮಟ್ಟದ ಪರಿಣಾಮ ಆಗಲಾರದು ಎನ್ನುವುದೇ ತಜ್ಞರ ಮತ. ಕೆಲವು ವಿನಾಯಿತಿಗಳಿರಬಹುದೇನೋ ಅಷ್ಟೇ. ರಾಷ್ಟ್ರಕವಿ ಕುವೆಂಪು ಮೊದಲು ಬರೆಯುತ್ತಿದ್ದುದು ಇಂಗ್ಲೀಷಿನಲ್ಲಿ. ಅವರ ಪ್ರಾಧ್ಯಾಪಕರು (ಅವರು ಬ್ರಿಟಿಷ್) ಅವರಿಗೆ ಹೇಳಿದ್ದೇ ಮಾತೃಭಾಷೆಯಲ್ಲೇ ಬರೆಯಲು. ಅವರು ಕೊಟ್ಟ ಕಾರಣವನ್ನೇ ನಾನು ಮೇಲೆ ಕೊಟ್ಟಿರುವುದು.

ಆಂಗ್ಲಮಾಧ್ಯಮದ ತಡೆಯಿಲ್ಲದ ಪ್ರಸರಣಕ್ಕೆ ಕಾರಣವಾಗಿರುವುದು ಪಟ್ಟಭದ್ರ ಹಿತಾಸಕ್ತಿಗಳ ಸಂಚಿಗೆ ಪಾಲಕವರ್ಗ, ಪೋಷಕವರ್ಗ, ಸುಲಭವಾಗಿ ಬಲಿಪಶುವಾಗಿರುವುದು. ಬೆಂಗಳೂರಿನಲ್ಲೋ, ಅಮೆರಿಕದಲ್ಲೋ ಇರುವ ತನ್ನ ಅಕ್ಕ, ಅಣ್ಣ,ತಮ್ಮನ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುತ್ತಿರುವಾಗ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಸೇರಿಸಲುಂಟೇ? ನಮ್ಮ ಮಕ್ಕಳು ಯಾರಿಗಿಂತ ಕಡಿಮೆ? ಹೀಗೆ ಅವರಿಗೆ ಅನಿಸದಿರದೇ?! ತಮ್ಮೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅದ್ಭುತವಾಗಿ ಜೀವನದಲ್ಲಿ ಮೇಲೆ ಬಂದಿರುವ ವಿದ್ಯಾರ್ಥಿಗಳ ಉದಾಹರಣೆ ಬೇಕಾದಷ್ಟು ಇದ್ದರೂ, ಶಿಕ್ಷಕರು ಪ್ರತಿಭೆ ಮತ್ತು ಬೋಧನಾ ಸಾಮರ್ಥ್ಯಕ್ಕೆ ಆ ಭಾಗದಲ್ಲೇ ಪ್ರಸಿದ್ಧರಿದ್ದರೂ, ಆಂಗ್ಲಮಾಧ್ಯಮ ಶಾಲೆಯಲ್ಲಿ ಕೇವಲ ಕೊರತೆಗಳೇ ತುಂಬಿದ್ದರೂ ಚಿಂತೆಯಿಲ್ಲ ತಮ್ಮ ಮಕ್ಕಳು ಮಾತ್ರ ಅಲ್ಲೇ ಕಲಿಯಬೇಕು. ಏಕೆಂದರೆ ಅದು ಮಾನ ಮರ್ಯಾದೆಯ ಪ್ರಶ್ನೆ. ತಮ್ಮ ಮಾನ-ಮರ್ಯಾದೆಯನ್ನು (?) ಉಳಿಸಿಕೊಳ್ಳಲೋಸುಗ ಮಕ್ಕಳ ಭವಿಷ್ಯವನ್ನೇ ಬಲಿಗೊಡುವುದೇ? ಪಾಲಕರ ಉದ್ದೇಶ ಹಾಗಿಲ್ಲದಿರಬಹುದು. ಆದರೆ, ಆತುರದ ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಎಷ್ಟು ಮಾರಕ ಎಂಬುದರ ಕಲ್ಪನೆಯಂತೂ ಅವರಿಗಿಲ್ಲ.

ಇಷ್ಟೆಲ್ಲಾ ಹೇಳುವಾಗ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥೈಸಬೇಕು. ಯೋಗ್ಯ ಶಿಕ್ಷಕರು, ಯೋಗ್ಯ ವಾತಾವರಣ, ಯೋಗ್ಯ ವ್ಯವಸ್ಥೆ ಮತ್ತು ತಜ್ಞರ ಮಾರ್ಗದರ್ಶನ ಇರುವೆಡೆ ಆಂಗ್ಲ ಮಾಧ್ಯಮ ಪ್ರಯೋಜನಕಾರಿಯೇ.

ಇನ್ನೊಂದು ಮುಖ್ಯ ವಿಷಯ ಇಂಗ್ಲಿಷ್ ಭಾಷೆಯಲ್ಲಿ ಪರಿಣತರಾಗುವುದಕ್ಕೂ ಆಂಗ್ಲಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ. ಕನ್ನಡ ಮಾಧ್ಯಮದಲ್ಲೇ ಅಭ್ಯಸಿಸಿದ ಹತ್ತಾರು ಜನ ಇಂಗ್ಲೀಷ್ ಭಾಷೆಯಲ್ಲಿ ಅದ್ಭುತ ವಾಗ್ಮಿಗಳಾಗಿ ಹೊರಹೊಮ್ಮಿದ್ದಾರೆ.

ಅಸಮರ್ಥ ಶಿಕ್ಷಕ, ಅಪ್ರಸ್ತುತ ಪಠ್ಯ, ಅವೈಜ್ಞಾನಿಕ ಬೋಧನಾ ವೈಖರಿ ಮತ್ತು ಪರೀಕ್ಷಾ ಪದ್ಧತಿ ಇವುಗಳ ಬಲಿಪಶು ನಮ್ಮ ಮಕ್ಕಳು. ನಲವತ್ತೆರಡು ವರ್ಷಗಳ ನನ್ನ ಅನುಭವದಲ್ಲಿ ಒಬ್ಬನೇ ಒಬ್ಬ ದಡ್ಡ ವಿದ್ಯಾರ್ಥಿಯನ್ನೋ, ಕೆಟ್ಟ ವಿದ್ಯಾರ್ಥಿಯನ್ನೋ ಇಲ್ಲಿಯವರೆಗೆ ಕಂಡಿಲ್ಲ. ನನ್ನ ಖಿ-ಖ್ಠಚಿಛಿ ಉಪನ್ಯಾಸಗಳಲ್ಲಿ ಇವನ್ನೆಲ್ಲಾ ಸಾಕಷ್ಟು ಹೇಳಿದ್ದೇನೆ. ಆದರೆ, ಶೈಕ್ಷಣಿಕ ಪದ್ಧತಿ ಮತ್ತು ಪಾಲಕರ ಅಜ್ಞಾನ ( ಇದೇ ಇಲ್ಲಿ ಹೆಚ್ಚು ಕಂಟಕಕಾರಿ) ಮಕ್ಕಳನ್ನು ತಿನ್ನುತ್ತಿದೆ. ಎರಡು ವರ್ಷ ಅಂಕಗಳು ಸರಿಯಾಗಿ ಬರಲಿಲ್ಲವೆಂದರೆ ‘ದಡ್ಡ’ ಎನ್ನುವ ಹಣೆಪಟ್ಟಿ! ಈ ಬಿರುದನ್ನು ಹತ್ತಿಪ್ಪತ್ತು ಸಲ ಮಕ್ಕಳು ಕೇಳಿಸಿಕೊಂಡು ಬಿಟ್ಟರೆ ಅವರ ಸುಪ್ತ, ಮುಗ್ಧ ಮನಸ್ಸು ಒಪ್ಪಿಕೊಂಡು ಬಿಡುತ್ತದೆ. ಹತ್ತಾರು ಮಕ್ಕಳು ಈ ರೀತಿ ಒದ್ದಾಡಿರುವುದನ್ನು ನೋಡಿದ್ದೇನೆ. ಅವರನ್ನು ಈ ಕೀಳರಿಮೆಯಿಂದ ಪಾರು ಮಾಡಬೇಕಾದರೆ ನಾನು ಒದ್ದಾಡಿದ್ದು ಅಷ್ಟಿಷ್ಟಲ್ಲ. ಹೀಗೆಯೇ ದಡ್ಡನಾಗಿದ್ದ ಹುಡುಗ ನನ್ನ ಸಲಹೆಯ ಮೇರೆಗೆ ಕನ್ನಡ ಮಾಧ್ಯಮಕ್ಕೆ ಬಂದು ತರಗತಿಯಲ್ಲಿ Topper ಆದ. CBSE, ICSE, Public school, international public schoolಗಳಲ್ಲಿ ಓದಬೇಕಾದ ವಿದ್ಯಾರ್ಥಿಗಳು ಬೆಳೆಯಬೇಕಾದ ವಾತಾವರಣವೇ ಬೇರೆ. ಮನೆಯಲ್ಲಿ, ಮನೆಯಸುತ್ತ, ಸಹಪಾಠಿಗಳು, ಸ್ನೇಹಿತರು ಯಾವ ಭಾಷೆಯಲ್ಲಿ ಸಂವಹಿಸುವರೋ ಅದೇ ಎಂದಿಗೂ ಶೈಕ್ಷಣಿಕ ಮಾಧ್ಯಮ ಆಗಬೇಕಾದದ್ದು ಕೂಡ. ಸ್ವತಂತ್ರ ಚಿಂತನೆ ವಿದ್ಯಾರ್ಥಿಯನ್ನು ವಿದ್ಯಾವಂತ, ಬುದ್ಧಿವಂತನನ್ನಾಗಿ ಮಾಡುತ್ತದೆಯೇ ಹೊರತು ಇಂಗ್ಲೀಷ್ ಮಾಧ್ಯಮ ಅಲ್ಲ, ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವವೂ ಅಲ್ಲ.

ಇಂಗ್ಲೆಂಡನ್ನು ಹೊರತುಪಡಿಸಿ ಯಾವುದೇ ಯುರೋಪಿಯನ್ ರಾಷ್ಟ್ರ ಇಂಗ್ಲಿಷ್ ಮಾಧ್ಯಮವನ್ನು ಹೊಂದಿಲ್ಲ. ತಮಗೆ ನೊಬೆಲ್ ಪ್ರಶಸ್ತಿ ಬಂದಾಗ ಆಹ್ವಾನಿಸಲ್ಪಟ್ಟಿದ್ದ ವಿಶ್ವವಿದ್ಯಾಲಯಗಳಲ್ಲಿ ಆಲ್ಬರ್ಟ್ ಐನ್​ಸ್ಟೀನ್ ಸಾಪೇಕ್ಷ ಸಿದ್ಧಾಂತವನ್ನು ಜರ್ಮನ್ ಭಾಷೆಯಲ್ಲೇ ವಿವರಿಸಿದ್ದರು. ನರಕವಾಗಿದ್ದ ದೇಶವನ್ನು ಸ್ವರ್ಗವಾಗಿಸಿದ ಜಪಾನೀಯರು ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರ ಕಲಿಯುತ್ತಾರೆ.

ಅಷ್ಟೇ ಏಕೆ ಉತ್ತರ ಭಾರತದಿಂದ ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ಆಯ್ಕೆಯಾದವರಲ್ಲಿ ಬಹಳಷ್ಟು ಜನ ಹಿಂದಿ ಮಾಧ್ಯಮದಲ್ಲೇ ಪರೀಕ್ಷೆ ತೆಗೆದುಕೊಂಡವರು. ವಿಪರ್ಯಾಸವೇನೆಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಇಂಗ್ಲೀಷಿನಲ್ಲಿ ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net