ಪ್ರಶ್ನೆ, ಜಿಜ್ಞಾಸೆಯಿಂದ ತೆರೆಯುವುದು ಜ್ಞಾನದ ಹಾದಿ

Column F
Published on
ಶ್ರೀ ರಾಮಕೃಷ್ಣರು ಜಗನ್ಮಾತೆ ಕಾಳಿಯ ಮುಂದೆ ಕೈ ಜೋಡಿಸಿಕೊಂಡು ಒಮ್ಮೆ ಹೀಗೆ ಹೇಳಿದ್ದುಂಟು- ‘ಅಮ್ಮ ನನ್ನ ಅನುಭವಗಳನ್ನೆಲ್ಲಾ, ಮಾತುಗಳನ್ನೆಲ್ಲಾ ಪರೀಕ್ಷಿಸುವ, ಪ್ರಶ್ನಿಸುವ ಶಿಷ್ಯನೊಬ್ಬನನ್ನು ಕಳಿಸಿಕೊಡು.’

ಇದನ್ನು ಕೇಳಿ ಬಹಳಷ್ಟು ಜನರಿಗೆ ವಿಚಿತ್ರವೆನ್ನಿಸಬಹುದು. ಗುರುಗಳು ಹೇಳಿದ್ದನ್ನು ಶಿರಸಾವಹಿಸಿ ಮರುಪ್ರಶ್ನೆ ಮಾಡದೆ ಒಪ್ಪಿಕೊಳ್ಳಬೇಕಾದ್ದೇ ಶಿಷ್ಯನ ಕರ್ತವ್ಯವಲ್ಲವೇ? ಗುರುಗಳನ್ನು, ನಾವು ನಂಬಿರುವ ಗ್ರಂಥವನ್ನು, ದೇವರನ್ನು, ನಮ್ಮ ಧರ್ಮಸ್ಥಾಪಕರನ್ನು ಪ್ರಶ್ನಿಸುವುದೇ? ಇದಕ್ಕಿಂತ ಉದ್ಧಟತನ, ಅಪರಾಧ ಬೇರೆ ಇದೆಯೇ? ಹೀಗೆ ಮಾಡಿದವರನ್ನು ಸಾರ್ವಜನಿಕವಾಗಿ ಶಿಕ್ಷಿಸಬೇಕು. ಅಷ್ಟೇ ಏಕೆ! ಮರಣದಂಡನೆಯನ್ನೇ ವಿಧಿಸಬೇಕು...

ಇವೆಲ್ಲಾ ಸಮಕಾಲೀನ ಪ್ರಪಂಚದ, ಅತ್ಯಂತ ಸಾಮಾನ್ಯವೆನಿಸುವ ವಿದ್ಯಮಾನಗಳು. ಕಾರಣವಿಷ್ಟೇ! ‘ಅದು ಧರ್ಮಕ್ಕೆ ಸಂಬಂಧಿಸಿದ ವಿಷಯ. ಅಲ್ಲಿ ಪ್ರಶ್ನೆ ಸಲ್ಲ, ಅದು ದೇವರ ನುಡಿ. ದೇವರ ನುಡಿಯನ್ನು ಪ್ರಶ್ನಿಸುವಂಥ ಸಾಮರ್ಥ್ಯ ಮನುಷ್ಯನಿಗೆ ಎಂದೂ ಬರಲಾರದು. ಅದನ್ನು ಸುಮ್ಮನೆ ಒಪ್ಪಿಕೊಳ್ಳಬೇಕು. ಇಲ್ಲವೇ ಸುಮ್ಮನೆ ಇದ್ದುಬಿಡಬೇಕು.’ ಹೀಗೆ ಸಾಗುತ್ತಿದೆ ಪ್ರಸ್ತುತ ಹಲವು ಧರ್ವನುಯಾಯಿಗಳ ತರ್ಕ. ಇದು ಸರಿಯೇ? ಇಂತಹ ವಿಷಯದಲ್ಲಿ ಸ್ವಾಮಿ ವಿವೇಕಾನಂದರು ಏನು ಹೇಳುತ್ತಾರೆ ನೋಡೋಣ.

‘ಭೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದ ಆಧುನಿಕ ವಿಜ್ಞಾನದ ಶಾಖೆಗಳಲ್ಲಿ ಇರುವ ಸತ್ಯಗಳನ್ನು ಹೇಗೆ ಪರೀಕ್ಷೆ, ವಿಚಾರಣೆ, ಪ್ರಶ್ನೆ, ಸಂದೇಹಗಳ ಮೂಲಕ ದೃಢಪಡಿಸಿಕೊಳ್ಳುತ್ತೇವೆಯೊ ಧಾರ್ವಿುಕ ಚಿಂತನೆಗಳನ್ನು ಒಪ್ಪಿಕೊಳ್ಳುವುದರಲ್ಲಿಯೂ ಇದೇ ವಿಧಾನ ಅನುಸರಿಸಬೇಕು. ಈ ರೀತಿಯ ಪ್ರಶ್ನೆ, ಪರೀಕ್ಷೆಗಳ ಕಾಲದಲ್ಲಿ ಧರ್ಮವೊಂದು ತಾನು ಪ್ರತಿಪಾದಿಸುವ ವಿಷಯಗಳು ಸತ್ಯವೆಂದು ಸಾಬೀತುಪಡಿಸಲು ಸೋತರೆ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಬೇಕು. ಅದೂ ಎಂದಿಗೂ ಧರ್ಮವಾಗದು ಮತ್ತು ಈ ಹಿಂದೆಯೂ ಎಂದೂ ಧರ್ಮವಾಗಿರಲಿಲ್ಲ. ಎಷ್ಟು ಬೇಗ ನಾವು ಇದನ್ನು ಮಾಡುತ್ತೇವೆಯೊ ಅಷ್ಟು ಒಳ್ಳೆಯದು.’ ಹೌದು! ಯಾರೊ ಹೇಳಿದ್ದಾರೆ ಎಂತಲೋ, ಅಥವಾ ಯಾವುದೋ ಪುಸ್ತಕದಲ್ಲಿ ಬರೆಯಲಾಗಿದೆ ಎಂದೋ, ಸ್ವಾಮಿ ವಿವೇಕಾನಂದರು ಎಂದಿಗೂ ತಮ್ಮ ಒಪ್ಪಿಗೆಯನ್ನು ಕೊಟ್ಟವರಲ್ಲ. ಗುರು ಸ್ವಯಂ ರಾಮಕೃಷ್ಣರೇ ಹೇಳಿದ ಯಾವ ಒಂದು ವಾಕ್ಯವನ್ನೂ ಕೂಡ ಹಲವು ಸಲ ಪರೀಕ್ಷಿಸದೆ ಒಪ್ಪಿಕೊಳ್ಳಲಿಲ್ಲ. ಶ್ರೀ ರಾಮಕೃಷ್ಣರು ಜಗನ್ಮಾತೆ ಕಾಳಿಗೆ ಸಲ್ಲಿಸಿದ ಪ್ರಾರ್ಥನೆಯ ಫಲವಾಗಿಯೇ ನರೇಂದ್ರ ಅವರಲ್ಲಿಗೆ ಬಂದಿದ್ದು. ಅವನು ಬಂದಿದ್ದೇ ಅವರ ಅನುಭವಗಳನ್ನು, ಉಪದೇಶಗಳನ್ನು ಒರೆಗೆ ಹಚ್ಚಲು. ಈ ಪ್ರಕ್ರಿಯೆ 5 ವರ್ಷಗಳಷ್ಟು ದೀರ್ಘಕಾಲ ನಡೆಯಿತು.

ಸೋದರಿ ನಿವೇದಿತೆ ಕೂಡ ತನ್ನ ಗುರುವಿನಂತೆಯೇ ವಿವೇಕಾನಂದರ ಒಂದು ವಾಕ್ಯವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರಲಿಲ್ಲ. ಯಾರೋ ಹೇಳಿಬಿಟ್ಟ ಮಾತ್ರಕ್ಕೆ, ಒಂದು ಪುಸ್ತಕದಲ್ಲಿ ಇದೆ ಎಂಬ ಮಾತ್ರಕ್ಕೆ ಒಪ್ಪಿಗೆ ಕೊಡುವುದನ್ನು ಭಾರತೀಯ ಪರಂಪರೆ ಸುತರಾಂ ಒಪ್ಪುವುದಿಲ್ಲ. ಕಾರಣವಿಷ್ಟೆ! ನಾವು ಓದಿದ, ಕೇಳಿದ ವಿಷಯ ಸಂಪೂರ್ಣವಾಗಿ ಮನವರಿಕೆ ಆಗಲಿಲ್ಲ ಎಂದರೆ ಶ್ರದ್ಧೆ ಮೂಡುವುದಿಲ್ಲ. ರ್ತಾಕ ಪರೀಕ್ಷೆಗೆ ಒಳಪಡಿಸಿ, ಸಾಬೀತಾಗಿ ತತ್ವವನ್ನು ಒಪ್ಪಿಕೊಂಡರೆ ಅದು ಶ್ರದ್ಧೆ. ಅದು ಏನೂ ಇಲ್ಲದೇ ಒಪ್ಪಿಗೆ ಕೊಟ್ಟರೆ ಅದು ಕೇವಲ ನಂಬಿಕೆ. ಶ್ರದ್ಧೆ ಇದ್ದರೆ ಮಾತ್ರ ಆಚರಣೆಯಲ್ಲಿ ಬರುವುದು. ಯಾವ ಯಾವ ಕಾಲದಲ್ಲಿ ಯಾರ ಯಾರು ಮತಾಂಧರಂತೆ ವರ್ತಿಸಿದ್ದಾರೋ ಅವರು ಕೇವಲ ನಂಬಿದವರು. ಪರೀಕ್ಷೆಗೊಳಪಡಿಸುವುದು ಅವರ ಸ್ವಭಾವದಲ್ಲೇ ಇಲ್ಲ. ತನ್ನ ಮತವನ್ನು ಪರೀಕ್ಷೆ ಮಾಡಿದವನು ಇತರರ ಮತವನ್ನು ಕೂಡ ಪರೀಕ್ಷೆ ಮಾಡಿಯೇ ಮಾಡುತ್ತಾನೆ. ಆಗ ಸ್ಪಷ್ಟವಾಗಿಯೇ ಅವನಿಗೆ ಗೋಚರಿಸುತ್ತದೆ ಪ್ರತಿಯೊಂದು ಮತವೂ ಒಂದು ಪಥವೇ, ಸರಿಯೆಂದು. ಶ್ರೀ ರಾಮಕೃಷ್ಣರು ತಾವು ಆರಾಧಿಸಿದ ಪ್ರತಿ ಮತವನ್ನೂ ಆಚರಣೆಗೆ ಒಳಪಡಿಸಿ ಉದ್ದೇಶಿತ ಅನುಭವವನ್ನು ಸ್ಪಷ್ಟವಾಗಿ ಅನುಭವಿಸಿಯೇ ‘ಧರ್ಮ ಸಮನ್ವಯ ಸಂದೇಶ’ ಸಾರಿದರು. ಬಹುಶಃ ಋಗ್ವೇದದ ಋಷಿಗಳು ಕೂಡ ಹೀಗೆ ಪರೀಕ್ಷೆ ಮಾಡಿಯೇ ‘ಸತ್ಯ ಒಂದು. ಜ್ಞಾನಿಗಳು ಅದನ್ನು ಬಹಳ ಹೆಸರುಗಳಿಂದ ಕರೆಯುತ್ತಾರೆ’ -‘ಏಕಂ ಸತ್ ವಿಪ್ರಾ ಬಹುದಾ ವದಂತಿ’ ಎಂದು ಸಾರಿರಬೇಕು.

ಇಂಥದ್ದೊಂದು ಪರಂಪರೆಯೇ ನಮ್ಮ ಮುಂದೆ ಇದೆ. ಮುಂಡಕೋಪನಿಷತ್ತಿನ ಋಷಿ ಸಂಶಯಕ್ಕೆಡೆಯಿಲ್ಲದಂತೆ ‘ಪರೀಕ್ಷ್ಯ ಲೋಕಾನ್ ಕರ್ಮ ಚಿತಾನ್ ಬ್ರಾಹ್ಮಣೋ ನಿರ್ವೆದಮಾಯಾನಾಸ್ತಯ ಕೃತ: ಕೃತೇನರ್ಯಾ’ ಅರ್ಥಾತ್ ‘ಬ್ರಹ್ಮನನ್ನು ತಿಳಿಯ ಹೊರಟ ಜಿಜ್ಞಾಸುವೆ, ಲೋಕಲೋಕಗಳನ್ನು ಪರೀಕ್ಷಿಸಿ ಸತ್ಯವನ್ನರಸುತ್ತಾ ಬಾ! ಕಾರಣಜನ್ಯ ಲೋಕಗಳ ಇತಿಮಿತಿಗಳನ್ನು ಅರಿ!’ಎನ್ನುತ್ತಾನೆ. ಶ್ರೀ ಕೃಷ್ಣ ಗೀತೋಪದೇಶದಲ್ಲಿ ‘ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ’ ಎಂದು ಉದ್ಘೋಷಿಸುತ್ತಾನೆ. (ಯಾವುದೇ ನಿಜಜ್ಞಾನವನ್ನು ಪ್ರಶ್ನಿಸಿ, ಮನನಿಸಿ, ಮಂಥನದ ಮೂಲಕ ತಿಳಿಯಬೇಕು) ಈ ಎಲ್ಲಾ ಪ್ರಶ್ನೆಗಳ ಹಿನ್ನೆಲೆಯಲ್ಲಿ ಇರಬೇಕಾದ್ದು,

1. ತಿಳಿಯಬೇಕು ಎಂಬ ಪ್ರಾಮಾಣಿಕ ಹಂಬಲ.

2. ನಮ್ರತೆ ಮತ್ತು ಪೂರ್ವಾಗ್ರಹ ರಾಹಿತ್ಯ.

ಉಪನಿಷತ್ತುಗಳ ತುಂಬಾ ಪ್ರಶ್ನೆಗಳನ್ನೇ ನೋಡುತ್ತೇವೆ. ಅಷ್ಟೇಕೆ? ‘ಪ್ರಶ್ನೋಪನಿಷತ್’ ಎಂಬ ಒಂದು ಉಪನಿಷತ್ತೇ ಇದೆ. ಸ್ವಯಂ ಗುರುಗಳೇ ತಪ್ಪು ಮಾಡುತ್ತಿದ್ದರೂ ಅವರನ್ನು ಪ್ರಶ್ನಿಸಬೇಕು ಎನ್ನುತ್ತದೆ ಮನುಸ್ಮೃ. ಇದು ಭಾರತೀಯ ಪರಂಪರೆ; ಸನಾತನ ಪರಂಪರೆ.

ದುರಂತವೆಂದರೆ ಭಾರತದ ಆಚೆಗೆ ಹುಟ್ಟಿದ ಧರ್ಮಗಳಲ್ಲಿ ತತ್ರಾಪಿ sematic ಧರ್ಮ ಅಥವಾ ಏಬ್ರಹಾಮಿಕ್ ಎಂಬ ಹೆಸರು ಹೊತ್ತ ಯಹೂದ್ಯ, ಕ್ರೖೆಸ್ತ ಮತ್ತು ಇಸ್ಲಾಂ ಧರ್ಮಗಳಲ್ಲಿ ಇದನ್ನು ಪೋ›ತ್ಸಾಹಿಸದಿರುವುದು ಇತಿಹಾಸದುದ್ದಕ್ಕೂ ಕಾಣುತ್ತದೆ. ತರ್ಕದಿಂದಲೇ ಎಲ್ಲವನ್ನೂ ತಿಳಿಯಬಹುದು ಎಂಬುದನ್ನು ನಿರಾಕರಿಸುವುದರಲ್ಲಿ ಹಿಂದೂ ಧರ್ಮವೇ ಮೊದಲನೆಯದ್ದು. ‘ತರ್ಕದಿಂದಲೋ, ಬುದ್ಧಿಯಿಂದಲೋ ಅದನ್ನು ತಿಳಿಯಲಾಗುವುದಿಲ್ಲ’- ಇದು ಕಠೋಪನಿಷತ್ತಿನ ಮಾತು. ಹೀಗಿದ್ದರೂ ಎಲ್ಲಿಯವರೆಗೆ ತರ್ಕ ನಮ್ಮನ್ನು ಒಯ್ಯಬಲ್ಲದೊ ಅಲ್ಲಿಯವರೆಗೂ ತರ್ಕವನ್ನು ಅವಲಂಬಿಸಬೇಕಾದ್ದು ಅನಿವಾರ್ಯ ಎಂದು ಹೇಳಿರುವುದೂ ಹಾಗೆಯೇ ಅನುಸರಿಸಿಕೊಂಡು ಬಂದಿರುವುದೂ ಸನಾತನ ಧರ್ಮವೇ. ಧರ್ಮಗ್ರಂಥದಲ್ಲಿದೆ ಎಂಬ ಮಾತ್ರಕ್ಕೆ, ಆಚಾರ್ಯರೋ, ಪ್ರವಾದಿಯೋ ಹೇಳಿದ್ದಾನೆ ಎಂಬುದಕ್ಕೆ ಖಾತ್ರಿ ಏನು? ಎಷ್ಟೋ ಪುಸ್ತಕಗಳಲ್ಲಿ ನಂತರದ ಸೇರ್ಪಡೆಗಳು ಅದೆಷ್ಟು ಆಗಿವೆಯೋ ಆ ದೇವರೇ ಬಲ್ಲ!. ನಮ್ಮ ಧರ್ಮವನ್ನು ಪ್ರಶ್ನಿಸಬೇಡಿ ಎನ್ನುವ ವರ್ಗವೇ ನಿಜಕ್ಕೂ ಆ ಧರ್ಮದ ಶತ್ರು. ಶ್ರೀ ರಾಮಕೃಷ್ಣರು ಶಿಷ್ಯರಿಗೆ ಹೇಳುತ್ತಿದ್ದರು, ‘ನಾನು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಬಿಡಬೇಡಿ.! ಪರೀಕ್ಷಿಸಿ! ನಾಣ್ಯವನ್ನು ನಾಣ್ಯ ಪರೀಕ್ಷಕ ಪರೀಕ್ಷಿಸಿದಂತೆ! ಸಾಧುವನ್ನು ಪರೀಕ್ಷಿಸಬೇಕು. ಹಗಲೂ ಪರೀಕ್ಷಿಸಬೇಕು ರಾತ್ರಿಯೂ ಪರೀಕ್ಷಿಸಬೇಕು’ ಎಂದು. ಸತ್ಯ ಬೆಂಕಿ ಇದ್ದಂತೆ; ಗೀಚಿದಷ್ಟೂ ಪ್ರಜ್ವಲಿಸುತ್ತದೆ.

ಧರ್ಮವೊಂದು ತನ್ನನ್ನು ಪರೀಕ್ಷೆಗೆ, ವಿಮರ್ಶೆಗೆ ಒಳಪಡಿಸಲು ನಿರಾಕರಿಸಿದಲ್ಲಿ ಅದರಲ್ಲಿ ಏನೋ ಕೊರತೆ ಇರಬೇಕು ಎಂತಲೇ ಅರ್ಥ. ಅದರ ಪೊಳ್ಳುತನ ಬಹಿರಂಗವಾಗಿ ಅನುಯಾಯಿಗಳು ತ್ಯಜಿಸಿ ಬಿಟ್ಟರೆ ಗತಿ ಏನು? ಎನ್ನುವ ಅಳುಕೇ ಇಲ್ಲಿಯ ಹಿನ್ನೆಲೆ. ಆದ್ದರಿಂದಲೇ ಆ ಧರ್ಮವನ್ನು ನಿರಂತರ ಹೊಗಳುವುದಕ್ಕೆ ಮತ್ತು ಅನ್ಯ ಧರ್ಮಗಳನ್ನು ನಿರಂತರ ದೂಷಣೆ, ನಿಂದನೆ, ಅವಮಾನಗಳಿಗೆ ಒಳಪಡಿಸುವುದಕ್ಕೆ ತರಬೇತುಗೊಂಡ ಒಂದು ಗುಂಪು ನಿರಂತರ ಕಾರ್ಯ ನಿರ್ವಹಿಸುತ್ತಿರಬೇಕು. ಈ ಕಾರ್ಯತಂತ್ರದಲ್ಲಿ ತೊಡಗಿರುವ ಯಾವ ಧರ್ಮವನ್ನೂ ಪ್ರಾಮಾಣಿಕ ಜಿಜ್ಞಾಸುಗಳು, ಸತ್ಯವನ್ನೇ ಅರಿಯಬೇಕು ಎಂಬುವ ಹಂಬಲವುಳ್ಳವರು ಎಂದಿಗೂ ಬೆಂಬಲಿಸುವುದಿಲ್ಲ.

'Advaita is the future religion of intellectuals' ಎಂಬ ಪಾಶ್ಚಾತ್ಯ ದಾರ್ಶನಿಕನೊಬ್ಬನ ಮಾತನ್ನು ಇಲ್ಲಿ ಉಲ್ಲೇಖಿಸಬಹುದು. ಕಾರಣ ಇಷ್ಟೇ- ಅದ್ವೈತ ನಿಂತಿರುವುದೇ ಪ್ರಶ್ನೆಗಳ ಮೇಲೆ, ನಂಬಿಕೆ ಮೇಲಲ್ಲ. ನಿಜಕ್ಕೂ ಅದೊಂದು ವಿಜ್ಞಾನವೇ ಸರಿ. 'Science of self' ನಾನು ಯಾರು ಎಂದು ತಿಳಿಸುವ ವಿಜ್ಞಾನ’. ಆದರೆ ಸೆಮೆಟಿಕ್ ಧರ್ಮಗಳು ಇತಿಹಾಸದುದ್ದಕ್ಕೂ ವಿಜ್ಞಾನವನ್ನು ದ್ವೇಷಿಸಿಕೊಂಡೇ ಬಂದವು. ಗೆಲಿಲಿಯೋ ಮುಂತಾದ ವಿಜ್ಞಾನಿಗಳನ್ನು ಇನ್ನಿಲ್ಲದಂತೆ ಪೀಡಿಸಿತು. ಎಷ್ಟೋ ವಿಜ್ಞಾನಿಗಳನ್ನು, ಚಿಂತಕರನ್ನು ಕೊಂದು ಹಾಕಿತು. ಧರ್ಮವನ್ನು, ಧಾರ್ವಿುಕ ಮುಂದಾಳುಗಳ ಅಧಾರ್ವಿುಕ ನಡತೆಗಳನ್ನು ಪ್ರಶ್ನಿಸಿದವರನ್ನು ಜೀವಂತವಾಗಿ ಸುಟ್ಟು ಹಾಕಿದ್ದಕ್ಕಂತೂ ಲೆಕ್ಕವೇಯಿಲ್ಲ. ಪಾಶ್ಚಾತ್ಯ ಜಗತ್ತಿನ ಇತಿಹಾಸದಲ್ಲಿ ಸ್ತ್ರೀಯರಿಗಾಗಿ ಮೊಟ್ಟಮೊದಲ ತರಬೇತಿ ಶಾಲೆಯನ್ನು ಪ್ರಾರಂಭಿಸಿದ ಗ್ರೀಕ್ ನಾರಿ ‘ಸ್ಯಾಫೋ’ಳ ಸಾವಿರಾರು ಸಾಲುಗಳ ಕೃತಿಗಳನ್ನು ಸುಟ್ಟು ಹಾಕಲಾಯಿತು. ಮಹಾನ್ ಚಿಂತಕ ವಾಲ್ಟೇರ್ ಸತ್ತಾಗ ಅವನ ಶವವನ್ನು ಹೂಳಲು ಸ್ಮಶಾನದಲ್ಲಿ ಜಾಗ ಕೊಡಲಿಲ್ಲ. ಇವೆಲ್ಲದರ ಪ್ರತಿಕ್ರಿಯೆಯಾಗಿಯೇ Communism, secularism (ಧರ್ಮ ನಿರಪೇಕ್ಷ) ಹುಟ್ಟಿಕೊಂಡಿದ್ದು. ಈ ಪಾಶ್ಚಾತ್ಯ ಮತಾಂಧತೆಯ ಇಣುಕು ನೋಟ ಸಿಗಬೇಕಾದರೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪಿಟ್ರಿಂ ಸೊರೋಕಿನ್ ಬರೆದ 'Reconstruction of Humanity' ಪುಸ್ತಕವನ್ನು ಓದಬೇಕು.

ಧರ್ಮ, ಧರ್ಮಗಳ ಬಗ್ಗೆ ಮನುಷ್ಯನಿಗೆ ಇರಬೇಕಾದ ಧೋರಣೆ ಹೇಗಿರಬೇಕು? ಧರ್ಮವೊಂದು ಮನುಕುಲಕ್ಕೆ ವರವೋ? ಮಾರಕವೋ? ಇತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟ, ಪರಿಪೂರ್ಣ ಚಿಂತನೆ ರೂಢಿಸಿಕೊಳ್ಳಬೇಕಾದಲ್ಲಿ ಸನಾತನ ಸಂಸ್ಕೃತಿಯನ್ನು ಮೊರೆ ಹೊಕ್ಕದೇ ಬೇರೆ ದಾರಿಯಿಲ್ಲ. ಮತಾಂಧತೆ ಇರುವುದೇ ‘ವ್ಯಕ್ತಿ ಪ್ರಧಾನ’ ಧರ್ಮಗಳಲ್ಲಿ. ಭಾರತೀಯ ಧರ್ಮ ಅಥವಾ ಸನಾತನ ಸಂಸ್ಕೃತಿ ‘ತತ್ವ ಪ್ರಧಾನ’. ವೇದಗಳೇ ಅದರ ಬುನಾದಿ. ಯಾವುದೇ ಅವತಾರ ಪುರುಷನು, ಪ್ರಖ್ಯಾತ ಆಚಾರ್ಯನೂ ವೇದಗಳಲ್ಲಿ ಇರುವುದನ್ನೇ ಹೇಳಬೇಕೆ ಹೊರತು ಅವನು ಹೇಳಿದ್ದೇ ವೇದವಲ್ಲ. ವೇದ ಎನ್ನುವುದು ಜ್ಞಾನ. ಆದಿ ಅಂತ್ಯಗಳಿಲ್ಲದ್ದು. ಆದ್ದರಿಂದಲೇ ಅದಕ್ಕೆ ಸನಾತನ ಎಂದು ಹೆಸರು. ವ್ಯಕ್ತಿಯನ್ನು ಅವಲಂಬಿಸಿಲ್ಲ. ಆದ್ದರಿಂದ ಅದು ಅಪೌರುಷೇಯ. ದೇವನಿಂದೆ (Blasphemy) ಎಂಬ ಪದವೇ ಸನಾತನ ಧರ್ಮಕ್ಕೆ ಗೊತ್ತಿಲ್ಲ. ನಾಸ್ತಿಕನಿಗೂ ತತ್ವಜ್ಞಾನಿಯ ಪಟ್ಟವನ್ನು ಕೊಟ್ಟವರು ನಾವು. ‘ನನ್ನನ್ನೂ ಮೀರಿ ಹೋಗಿ’ ಎಂದು ಹೇಳುವುದು ಇಡೀ ವಿಶ್ವದಲ್ಲಿ ವೇದ ಮಾತ್ರ. ಏಕೆಂದರೆ ಯಾವ ಉಕ್ತಿಯೂ ಒಂದು ವ್ಯಕ್ತತೆ ಮಾತ್ರ. ಯಾವ ವ್ಯಕ್ತತೆಯೂ ಕಾಲ, ದೇಶ ನಿಮಿತ್ತದ ಚೌಕಟ್ಟಿನೊಳಗಿದೆ. ಭಾರತೀಯನೊಬ್ಬ ಎಂದಾದರೂ ಮತಾಂಧತೆ ಎನ್ನಿಸಬಹುದಾದ ಭಾವನೆಗಳನ್ನು ವ್ಯಕ್ತಪಡಿಸಿದ್ದರೆ ಇಷ್ಟು ವಿಶಾಲವಾದ ಧರ್ಮವನ್ನು ಅಲ್ಪಜ್ಞರೂ, ಅಜ್ಞಾನಿಗಳೂ ನಿರಂತರ ನಿಂದನೆಗೊಳಪಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಮಾತ್ರ. ಬಾಹ್ಯ ಶಕ್ತಿಗಳು ಇಲ್ಲಿಯವರೆಗೆ ಮಾಡಿಕೊಂಡು ಬಂದದ್ದು ಇದನ್ನೇ. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ಮಹಿಳೆಯೊಬ್ಬಳಿಗೆ ಬರೆದ ಪತ್ರದಲ್ಲಿರುವ ಒಕ್ಕಣಿಕೆ ಗಮನಿಸಿ-ಇನ್ನು ಮುಂದೆ ತೆಗಳಿಕೆಯ ಒಂದು ಪದವನ್ನೂ ನಾವು ಸಹಿಸಲಾರೆವು.’ ‘ಮನುಕುಲ ಕ್ರಮಿಸಬೇಕಾದ್ದು ಎಲ್ಲಿ ವೇದ, ಕುರಾನ್, ಬೈಬಲ್​ಗಳು ಇಲ್ಲವೋ ಅಲ್ಲಿಗೆ. ಆದರೆ ಅದು ಸಾಧ್ಯವಿರುವುದು ವೇದ, ಬೈಬಲ್, ಕುರಾನ್​ಗಳ ಸಾರಸಮನ್ವಯದಲ್ಲೇ.’ ಹೀಗೆ ಹೇಳಿದವರೂ ವಿವೇಕಾನಂದರೇ.

ಆತ್ಮಗೌರವ, ವಿಶಾಲ ದೃಷ್ಟಿಗಳ ಸಮನ್ವಯವೇ ಸರಿಯಾದ ಆದರ್ಶ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net