

ಪ್ರಾಚೀನ ಕಾಲದಿಂದಲೂ ಇದು ನಡೆದುಕೊಂಡೇ ಬರುತ್ತಿದೆ. ಇಂದು ವಿಜ್ಞಾನ, ಖಗೋಳಶಾಸ್ತ್ರ ಇತ್ಯಾದಿಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದರು ಎಂದು ಯಾವ ಜನಾಂಗವನ್ನು ಪಾಶ್ಚಾತ್ಯ ಜಗತ್ತು ಹಾಡಿ ಹೊಗಳುತ್ತಿದೆಯೋ ಆ ಬ್ಯಾಬಿಲೋನಿಯನ್ ಜನಾಂಗ ತನ್ನ ನಾಗರಿಕತೆ ಮತ್ತು ಜ್ಞಾನಗಳನ್ನು ಪಡೆದುಕೊಂಡಿದ್ದೇ ಸುಮೇರಿಯನ್ನರಿಂದ. ಈ ರೀತಿ ಉಪಕರಿಸಲ್ಪಟ್ಟ ಮತ್ತೊಂದು ಜನಾಂಗ ಅಸ್ಸೀರಿಯನ್ನರು. ಸುಮೇರಿಯನ್ನರಾದರೂ ಯಾರು? ದಕ್ಷಿಣ ಭಾರತೀಯರು; ತಮಿಳರು. ಅಷ್ಟೇ ಏಕೆ? ಇಡೀ ಪಾಶ್ಚಾತ್ಯ ಜಗತ್ತಿನ ಮೂಲ ವಂಶಜರು, ಗುರುಗಳು ಹೇಗಾದರೂ ಕರೆಯಿರಿ ಅದು ಗ್ರೀಕ್ ಜನಾಂಗ. ಗ್ರೀಕರನ್ನು ನಾಗರಿಕರನ್ನಾಗಿಸಿದ್ದು, ಮನುಷ್ಯರನ್ನಾಗಿಸಿದ್ದು ಈಜಿಪ್ಷಿಯನ್ನರು. ಈಜಿಪ್ಷಿಯನ್ನರಾದರೂ ಮೂಲತಃ ದಕ್ಷಿಣ ಭಾರತೀಯರೇ. ತಮಿಳು ಮತ್ತು ಮಲಿಯಾಳಿಗಳ ಮಿಶ್ರ ಜನಾಂಗ ಅದು. ಈಜಿಪ್ಷಿಯನ್ನರ ಧಾರ್ವಿುಕ ಭಾವನೆಗಳು ಸ್ಪಷ್ಟವಾಗಿ ಇದನ್ನು ತಿಳಿಸುತ್ತದೆ. ಅವರ ಧರ್ಮದ ಪ್ರಮುಖ ದೇವತೆಗಳಲ್ಲಿ ಸೂರ್ಯ ಒಬ್ಬನಾದರೆ ಮತ್ತೆ ಕೆಲವು ದೇವತೆಗಳಲ್ಲಿ ಮನುಷ್ಯ ಶರೀರ ಮತ್ತು ಮೃಗದ ಮುಖ. ಇದು ವಿಷ್ಣುವಿನ ನಾಲ್ಕನೆಯ ಅವತಾರವೆಂದು ಪೂಜಿಸಲ್ಪಡುವ, ಹಿಂದುಗಳ ನರಸಿಂಹನ ತದ್ವತ್ ಅನುಕರಣೆ (Imitation) ಮಾತ್ರ ಮತ್ತು ನರಸಿಂಹಾವತಾರ ಮೈದಳೆದಿದ್ದು ಕೂಡ ದಕ್ಷಿಣ ಭಾರತದಲ್ಲಿ; ಆಂಧ್ರಪ್ರದೇಶದ ಅಹೋಬಲಂನಲ್ಲಿ ಎಂದು ಪ್ರತೀತಿ. ಎಷ್ಟೋ ದಿನಗಳ ನಂತರ ಕಾಶ್ಮೀರದೊಡನೆ ಸಂಪರ್ಕ ದೃಢಗೊಂಡು ಈಜಿಪ್ಷಿಯನ್ನರು ಸೂರ್ಯನನ್ನು ಆರಾಧಿಸಲು ಪ್ರಾರಂಭಿಸಿದರು. ಇದೆಲ್ಲದರ ತಾತ್ಪರ್ಯ ಈಜಿಪ್ಟ್, ಸುಮೇರಿಯಾ, ಅಸ್ಸೀರಿಯಾ, ಬ್ಯಾಬಿಲೋನಿಯಾಗಳನ್ನು ಆಳಿದ್ದು ಭಾರತೀಯರೇ! ಇನ್ನು ದಕ್ಷಿಣ ಅಮೆರಿಕದ ಮಾಯಾ, ಇಂಕಾ ಇತ್ಯಾದಿ ನಾಗರಿಕತೆಗಳೂ ಭಾರತೀಯರ ಆಳ್ವಿಕೆಗೇ ಒಳಪಟ್ಟಿತ್ತು ಎನ್ನುವುದಂತೂ ಸರ್ವವಿಧಿತ. ಈ ಪಟ್ಟಿಗೇ ಸೇರ್ಪಡೆಯಾಗುತ್ತೆ ದೂರಪ್ರಾಚ್ಯ ರಾಷ್ಟ್ರಗಳಾದ ಇಂಡೋನೇಷ್ಯಾ, ಮಲಯಾ, ಕಾಂಬೊಡಿಯಾ, ವಿಯಟ್ನಾಮ್ ಮೊದಲಾದ ರಾಷ್ಟ್ರಗಳು. ಇವೆಲ್ಲಾ ವೇದಕಾಲದಿಂದ ಸಮುದ್ರಗುಪ್ತನವರೆಗೆ ಉಲ್ಲೇಖಿಸಬಹುದಾದ ವಿಚಾರಗಳು. ಗುಪ್ತರ ನಂತರದ ಕಾಲದಲ್ಲಿ ಈ ರಾಜಕೀಯ ಸಾಮರ್ಥ್ಯ ಕುಂಠಿತವಾದಂತೆ ಕಂಡುಬಂದದ್ದಂತೂ ನಿಜ. ಇದಕ್ಕೆ ರಾಜಕೀಯ ಕಾರಣಗಳಿಗಿಂತಲೂ ಧಾರ್ವಿುಕಸಾಂಸ್ಕೃತಿಕ ಕಾರಣಗಳೇ ಹೆಚ್ಚು ಪ್ರಮುಖವಾದವು. ಅನ್ಯ ಕ್ಷೇತ್ರಗಳನ್ನು ಬಲಪಡಿಸಬೇಕಾದರೆ ಮೊಟ್ಟಮೊದಲು ಧರ್ಮವನ್ನು ಬಲಪಡಿಸಬೇಕು. ಇದು ಭಾರತದ ಅತ್ಯಂತ ಸೂಕ್ಷ್ಮ ಹಾಗೂ ಪ್ರಧಾನ ಲಕ್ಷಣ. ತಮ್ಮ ಋಷಿಗಣ್ಣಿನಿಂದ ಕಂಡುಹಿಡಿದು ದೇಶಬಾಂಧವರ ಮುಂದೆ ಇದನ್ನು ಸ್ಪಷ್ಟಪಡಿಸಿದ ಮೊಟ್ಟ ಮೊದಲ ವ್ಯಕ್ತಿ ಇತ್ತೀಚಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದರೇ. ಭಾರತೀಯ ಧರ್ಮವನ್ನು ಅವರೇ ಯಾವಾಗ ವಿಶ್ವಧರ್ಮ, ವಿಶ್ವವಿಜೇತಧರ್ಮವಾಗಿಸಿದರೋ ಆಗ ಅನ್ಯ ಕ್ಷೇತ್ರಗಳಲ್ಲೂ ಭಾರತ ಇದೇ ಶ್ರೇಷ್ಠತೆಯನ್ನು ಮೆರೆಯುವುದು Question of time ಆಗಿ ಮಾತ್ರ ಉಳಿಯಿತು. ಇಂದು ವೇದಾಂತ ವಿಶ್ವಮಾನ್ಯ ಧರ್ಮವಾಗುತ್ತಿದೆ. ಒಂದೊಂದಾಗಿ ರಾಷ್ಟ್ರ, ರಾಷ್ಟ್ರಗಳು ಭಾರತದ ಕಡೆಗೆ ನೋಡುತ್ತಿವೆ, ವಾಲುತ್ತಿವೆ, ನಿಧಾನವಾಗಿ ತಮ್ಮನ್ನೇ ಸಮರ್ಪಿಸಿಕೊಳ್ಳುತ್ತಿವೆ ಕೂಡ. ಈ ಅತ್ಯಂತ ಸೂಕ್ಷ್ಮ (subtle) ಆದರೆ ನಿಸ್ಸಂದೇಹ (sure) ಪ್ರಕ್ರಿಯೆ ಜಗಜ್ಜಾಹೀರಾಗಿದ್ದು ಭಾರತೀಯ ಸಾಂಸ್ಕೃತಿಕ ಸೌರಭದ ಶ್ರೇಷ್ಠ ಪ್ರತಿನಿಧಿ ಪಂಜಾಬ್ ಮೂಲದ ರಿಷಿ ಸುನಕ್ ಮೊನ್ನೆ ಇಂಗ್ಲೆಂಡಿನ ಪ್ರಧಾನ ಮಂತ್ರಿಯಾದಾಗ. ಪಾಶ್ಚಾತ್ಯ ಸೂಕ್ಷ್ಮ ಬುದ್ಧಿಗಳು ಇದನ್ನು ಯಾವತ್ತೋ ಕಂಡುಕೊಂಡಿದ್ದವು. ಭಾರತೀಯರಿಗೆ ಗೊತ್ತಿರಲಿಕ್ಕಿಲ್ಲ ಅಷ್ಟೇ. ಏಕೆಂದರೆ, ಭಾರತ ಇನ್ನೂ ಅರ್ಥವಾಗದ ಒಂದು ಜನಾಂಗವಿದ್ದರೆ ಅದು ಭಾರತೀಯರು ಮಾತ್ರ.
2008ರಲ್ಲಿ ಅಮೆರಿಕದ ಫ್ಲೋರಿಡಾ ಪ್ರಾಂತ್ಯದ ಆರ್ಲ್ಯಾಂಡೋ ವಿಶ್ವವಿದ್ಯಾಲಯದಲ್ಲಿ ವೇದಗಳನ್ನು ಕುರಿತ ಸಮಾವೇಶದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಭಾಗವಹಿಸಿದ್ದವರಲ್ಲಿ ಹಲವು ಅಮೆರಿಕನ್ ವಿದ್ವಾಂಸರು, ಆಧ್ಯಾತ್ಮಿಕ ಪಿಪಾಸುಗಳು ಇದ್ದರು. ಧರ್ಮಪ್ರವರ್ತಕ ಆಚಾರ್ಯ ಎಂದು ನಾಮಾಂಕಿತರಾದ ಫ್ರಾಂಕ್ ಮೊರೇಲ್ಸ್ ಒಂದು ಸಂದರ್ಭದಲ್ಲಿ ಅಂದೇ ಘೊಷಿಸಿದ್ದರು-‘ಇನ್ನು ಐವತ್ತು ವರ್ಷದೊಳಗೆ ಒಬ್ಬ ಹಿಂದು ಇಂಗ್ಲೆಂಡಿನ ಪ್ರಧಾನಮಂತ್ರಿಯಾಗುತ್ತಾನೆ.’ ಅವರು ಹೇಳಿದ್ದು 50 ವರ್ಷಗಳಲ್ಲಿ ಎಂದು! ಘಟಿಸಿದ್ದು 15 ವರ್ಷಗಳ ಒಳಗೇ!! ಭಾರತೀಯರಿಗೆ ಇದು ನಂಬಲಸಾಧ್ಯವಾದ ಘಟನೆ. ಏಕೆಂದರೆ ನಮ್ಮ ಚರಿತ್ರಕಾರರು, ಚಿಂತಕರು, ವೈಜ್ಞಾನಿಕರು ಮೂಢನಂಬಿಕೆ ವಿರುದ್ಧ ಹೋರಾಟವನ್ನೇ ಜೀವನದ ಉದ್ದೇಶವಾಗಿ ಮಾಡಿಕೊಂಡವರು, ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳ ರೂಪಾಂತರ ಎಂದು ಕೂಗುತ್ತ, ಘಂಟಾನಾದವನ್ನು ಮಾಡುತ್ತಿರುವವರು. ಆರ್ಯ, ದ್ರಾವಿಡ ಬುಡಕಟ್ಟುಗಳು ಎಂದು ನಿರಂತರ ಬುಡುಬುಡಿಕೆ ಬಾರಿಸುವವರು. ಇವರೆಲ್ಲ ಭಾರತದ ಬಗ್ಗೆ ಸೃಷ್ಟಿಸಿರುವ ಚಿತ್ರವೇ ಬೇರೆ. ಆದರೆ, ಮೂಲ ಭಾರತೀಯನ ಸಾಮರ್ಥ್ಯ (original Indian ability) ಮಾತ್ರ ಮೌನವಾಗಿ ಜಗತ್ತನ್ನೇ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ.
ಆದರೆ, ಪರರ ದೃಷ್ಟಿಯಲ್ಲಿ ಜೀವಚ್ಛವದಂತಿದ್ದ ಭಾರತ ವಿವೇಕಾನಂದರಿಗೆ ಮಾತ್ರ ಬೇರೆಯೇ ಕಂಡಿತಲ್ಲ! ಏಕೆಂದರೆ ಅವರು ನಿಜಾರ್ಥದಲ್ಲಿ ಇತಿಹಾಸಕಾರರು. ಅವರು ಹೇಳಿದ್ದನ್ನಾದರೂ ಗಮನಿಸಿ. ‘ಸುದೀರ್ಘ ರಾತ್ರಿ ಕೊನೆಗೊಳ್ಳುತ್ತಿದೆ, ಅದೋನೋಡಿ ನಮ್ಮೀ ಮಾತೃಭೂಮಿಯು ತನ್ನ ದೀರ್ಘನಿದ್ದೆಯನ್ನು ತ್ಯಜಿಸಿ ಜಾಗೃತವಾಗುತ್ತಿರುವುದನ್ನು! ಕುರುಡರು ಮಾತ್ರ ಕಾಣಲಾರರು. ಮೂರ್ಖರು ಮಾತ್ರ ಕಾಣಲೊಲ್ಲರು. ಅವಳನ್ನು ಇನ್ನು ಯಾರೂ ತಡೆಯಲಾರರು. ಯಾವ ಬಾಹ್ಯ ಶಕ್ತಿಯೂ ಇನ್ನು ಅವಳನ್ನು ಹಿಮ್ಮೆಟ್ಟಿಸಲಾರದು.’ ಈ ಮಾತುಗಳ ತಾತ್ಪರ್ಯವೇನೆಂದರೆ ಭಾರತೀಯ ಧರ್ಮವನ್ನು ಒಪ್ಪಿಕೊಂಡವರು ಭಾರತವನ್ನು ಒಪ್ಪಿಕೊಂಡಂತೆಯೇ. ಆ ಧರ್ಮದ ಹೆಗ್ಗಳಿಕೆಯನ್ನು ಒಪ್ಪಿಕೊಂಡವರು ಆ ದೇಶದ ನಾಯಕತ್ವವನ್ನು ಒಪ್ಪಿಕೊಂಡಂತೆಯೇ ಎಂದು ಮತ್ತು ವಿವೇಕಾನಂದರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂದೇ ಘಂಟಾಘೊಷವಾಗಿ ಸಾರಿದ್ದರು. ‘ನನ್ನ ಭರವಸೆ ಹೆಚ್ಚು ಇರುವುದು ಅಮೆರಿಕಕ್ಕಿಂತ ಇಂಗ್ಲೆಂಡಿನ ಮೇಲೆ ’ಎಂದು. ಕಾರಣ ಇಷ್ಟೇ; ಸ್ವಾಮೀಜಿಯ ಚಿಂತನೆ, ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಸಕಲ ಆಸ್ತಿಯನ್ನೂ ಅವರಿಗೆ ಒಪ್ಪಿಸಿ, ಜೀವನಪೂರ್ತಿ ಅವರ ಸೇವೆಗೈಯಲು ಬಂದ ನಾಲ್ಕು ಜನ ಪಾಶ್ಚಾತ್ಯ ಶಿಷ್ಯರಲ್ಲಿ ನಾಲ್ಕೂ ಜನ ಇಂಗ್ಲೆಂಡಿನವರೇ! ‘ವ್ಯಕ್ತಿ ಮತ್ತು ಚಿಂತನೆಗಳು ಒಪ್ಪಿಗೆಯಾದರೆ ಇಂಗ್ಲಿಷರು ತಮ್ಮನ್ನೇ ಸಮರ್ಪಿಸಿಸಿಕೊಳ್ಳುವರು’ ಎಂದೂ ಅವರು ಹೇಳಿದ್ದರು. ಸರ್ ಎಂ ವಿಶ್ವೇಶ್ವರಯ್ಯ ಹಾಗೂ ರಿಷಿ ಸುನಕ್ ಇದನ್ನು ಸಮರ್ಥಿಸಿದ್ದಾರೆ.
ರಿಷಿ ಸುನಕ್ ವ್ಯಕ್ತಿತ್ವವೂ ವೇದಾಂತದ ಕುಲುಮೆಯಲ್ಲಿ ಬೆಂದಿದ್ದೇ ಆಗಿದೆ. ಅವರ ನಿಜವಾದ ಹೆಸರು ಬಹುಶಃ ಋಷಿ ಶೌನಕ್. ವಾಯವ್ಯ ಭಾರತದಲ್ಲಿ ವೇದಾಂತವೇ ಹೆಚ್ಚು ಜನಪ್ರಿಯ. ಅದರಲ್ಲೂ ಪಂಜಾಬ್ ಪ್ರಾಂತ್ಯ. ಆ ಭಾಗದ ಜನರು ತಮ್ಮ ಗಂಡು ಮಕ್ಕಳಿಗೆ ಹೆಸರಿಡುವುದೇ ಹೆಚ್ಚಾಗಿ ಋಷಿಗಳ ಹೆಸರುಗಳನ್ನು. ಕಪಿಲ್ ದೇವ್, ಶೌನಕ್, ಮೌದ್ಗಿಲ್ ಇತ್ಯಾದಿ. ಅವರ ಮನೆತನ ಭಾರತದ ಹೊರಗೆ ಬಹುಕಾಲ ಕಳೆದಿದ್ದರಿಂದ ಹೆಸರು ಸ್ವಲ್ಪ ಅಪಭ್ರಂಶವಾಗಿದೆಯಷ್ಟೇ ಎಂದೆನ್ನಬಹುದು. ಆದರೆ ಆ ವ್ಯಕ್ತಿಯಲ್ಲಿ ಗಳಿತ ಭಾರತೀಯ ಸಂಸ್ಕೃತಿ, ಋಷಿ ಸಂಸ್ಕೃತಿ ಎದ್ದು ಕಾಣುತ್ತದೆ. ಜನಾಂಗ, ಭಾಷೆ, ದೇಶ, ಧರ್ಮಗಳನ್ನೇ ಬುನಾದಿಯಾಗಿಟ್ಟುಕೊಂಡು ವ್ಯಕ್ತಿಗಳನ್ನು ಆರಿಸುವ ಕಾಲ ಹೋಗುತ್ತಿದೆ. ಮುಖ್ಯವಾಗಿ ಬೇಕಿರುವುದು ಶುದ್ಧ, ಪ್ರಾಮಾಣಿಕ ಋಜುತ್ವವುಳ್ಳ ವ್ಯಕ್ತಿತ್ವ ಮಾತ್ರ. ಅಂದೇ ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದರು Character can cleave through all adamantine ಎಂದು. ಋಷಿ ಶೌನಕರ ಸಾಧನೆ ಭಾರತೀಯ ಯುವಕ ಯುವತಿಯರಿಗೆ ಸ್ಪೂರ್ತಿಯಾಗಬೇಕು.
ಕಿರಿ ವಯಸ್ಸು ಎಂದರೆ ನನ್ನ ನೆನಪಿನಲ್ಲಿ ಹಾದು ಹೋಗುವ ಮತ್ತೊಂದು ಹೆಸರೇ Vice Admiral ಡಾ. ವಿವೇಕ್ವುೂರ್ತಿ ಅವರದ್ದು. ಕೇವಲ 37ನೇ ವಯಸ್ಸಿನಲ್ಲಿ ಅಮೆರಿಕದ ಸರ್ಜನ್ ಜನರಲ್ ಹುದ್ದೆಗೇರಿದವರು ಇವರು. ಮೂಲ ಕರ್ನಾಟಕದವರು. ವಿವೇಕ್ ಅವರಂತೆಯೇ ಇಂದು ಅಮೆರಿಕದ ಆಡಳಿತ ಕೇಂದ್ರ ಶ್ವೇತಭವನದಲ್ಲಿ 18 ಜನ ಭಾರತೀಯರು ಅತ್ಯಂತ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನೆನಪಿಡಬೇಕು! ಅಮೆರಿಕದ ಅಧಿಕಾರ ವ್ಯಾಪ್ತಿ ಇಡೀ ಭೂಮಂಡಲವನ್ನು ವ್ಯಾಪಿಸಿದೆ. ಯಾವ ಯುವಕನೂ ಯುವತಿಯೂ ಧಾವಿಸಲಿಚ್ಛಿಸುವುದು ಅಮೆರಿಕದ ಕಡೆಗೆ. ಅಮೆರಿಕನ್ citizenship ನೂರು ಸಮಸ್ಯೆಗಳಿಗೆ ಪರಿಹಾರ, ಅದೊಂದು ಸೌಭಾಗ್ಯ ಎಂತಲೇ ಜನ ಭಾವಿಸುತ್ತಾರೆ. ಇವೆಲ್ಲಾ ತರ್ಕಸಮ್ಮತವೇ? ಸಮರ್ಥನೀಯವೇ? ಅದು ಆಮೇಲಿನ ಮಾತು. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಅದರಲ್ಲೂ ಯೂರೋಪಿನ ಬಹಳಷ್ಟು ಜನರು ಅಲ್ಲಿದ್ದಾರೆ. ಯೂರೋಪಿನ ಹಲವಾರು ರಾಷ್ಟ್ರಗಳು ಬೇರೆ ರಾಷ್ಟ್ರಗಳನ್ನು ಶತಶತಮಾನಗಳ ಕಾಲ ಆಳಿದಂಥವು. ಆದರೆ, ಅಮೆರಿಕದ ಅಧಿಕಾರಶ್ರೇಣಿಯಲ್ಲಿ ಎರಡನೇ ಸ್ಥಾನವೇ ಕಮಲಾ ಹ್ಯಾರಿಸ್ ಅವರದ್ದು, ಭಾರತೀಯಳದ್ದು! ಹಾಗೆಯೇ ಕಣ್ಣು ಹಾಯಿಸಿದಾಗ ನಾವು ಕಾಣುವುದೇನು? ಮೀರಾ ಟಂಡನ್- ಶ್ವೇತಭವನದ ವ್ಯವಸ್ಥೆ ಮತ್ತು ಆಯವ್ಯಯಗಳ ನಿರ್ದೇಶಕಿ, ವನಿತಾ ಗುಪ್ತಾ- ಸಹಾಯಕ ಅಟಾರ್ನಿ ಜನರಲ್. ಉಜರಾಲ್ ಶ್ರೇಯಾ - ಮಾನವ ಹಕ್ಕುಗಳು,ನಾಗರಿಕ ಬದ್ಧತೆ, ಪ್ರಜಾಸತ್ತಾತ್ಮಕತೆಯ ನೀತಿ ನಿಯಮಾವಳಿಗಳ ಅಧೀನ ಕಾರ್ಯದರ್ಶಿ; ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಭಾಷಣಗಳನ್ನು ಬರೆದು ಕೊಡುವ ವ್ಯಕ್ತಿ ತೆಲಗು ಮೂಲದ ವಿನಯ್ ರೆಡ್ಡಿ. ರಾಷ್ಟ್ರೀಯ ಆರ್ಥಿಕ ಮತ್ತು ವಿತ್ತೀಯ ಸುಧಾರಣಾ ಸಮಿತಿ ಉಪನಿರ್ದೆಶಕ ಭರತ್ ರಾಮಮೂರ್ತಿ ದಕ್ಷಿಣ ಭಾರತೀಯ. ಅಧ್ಯಕ್ಷ ಬೈಡೆನ್ರ ಪರ್ಸನಲ್ ಸೆಕ್ರೆಟೆರಿಯಟ್ನ ಉಪನಿರ್ದೇಶಕ ತಮಿಳು ಮೂಲದ ಗೌತಮ್ ರಾಘವನ್. ಡಾ. ಜಿಲ್ ಬೈಡೆನ್ (ಅಧ್ಯಕ್ಷರ ಶ್ರೀಮತಿ) ಅವರ ನೀತಿ ನಿರ್ದೇಶಕಿ ಕರ್ನಾಟಕ ಮೂಲದ ಮಾಲಾ ಅಡಿಗ. ಅದೇ ರೀತಿ ಅವರ ಡಿಜಿಟಲ್ ಡೈರೆಕ್ಟರ್ ಗರಿಮಾ ವರ್ವ. ಹಾಗೆಯೇ ತರುಣ್ ಛಾಬ್ರಾ- ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿ ಹಿರಿಯ ನಿರ್ದೇಶಕರಾಗಿ, ಸುಮನಾ ಗುಹಾ - ಇಡೀ ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಭದ್ರತಾ ಸಮಿತಿಯ ಹಿರಿಯ ನಿರ್ದೇಶಕರಾಗಿರುವುದಲ್ಲದೆ, ಶಾಂತಿ ಕಲಾತಿಲ್, ಸೋನಿಯಾ ಅಗರವಾಲ್, ಸಬ್ರೀನಾ ಸಿಂಗ್, ಐಷಾ ಷಾ, ಸಮೀರಾ ಫಜಿಲ್, ವೇದಾಂತ್ ಪಟೇಲ್, ವಿದುರ್ ಶರ್ವ, ರೋಹಿತ್ ಚೋಪ್ರಾ ಇತ್ಯಾದಿ ಭಾರತೀಯರು ಶ್ವೇತಭವನದಲ್ಲಿ ಸ್ಥಾನ ಗಳಿಸಿದ್ದಾರೆ.
ಇತಿಹಾಸವನ್ನು ಸರಿಯಾಗಿ ಅರ್ಥೈಸಬಲ್ಲವನು ಭವಿಷ್ಯವನ್ನು ಕೂಡ ಕರಾರುವಾಕ್ಕಾಗಿಯೇ ಊಹಿಸಬಲ್ಲ ಎನ್ನುವುದಕ್ಕೆ ಆರ್ನಾಲ್ಡ್ ಟಾಯ್್ನ ಶ್ರೇಷ್ಠ ಉದಾಹರಣೆ. ಇವರು ಇಂಗ್ಲೆಂಡಿನವರೇ! ಸುಮಾರು 50 ವರ್ಷಗಳ ಹಿಂದೆಯೇ ಹೇಳಿದ್ದರವರು "India the conquered, will conquer her conquerers.' ಅರ್ಥಾತ್ ‘ಹಿಂದೆ ಜಯಿಸಲ್ಪಟ್ಟ ಭಾರತ ಮುಂದೆ ತನ್ನನ್ನು ಜಯಿಸಿದವರನ್ನೇ ಜಯಿಸುತ್ತದೆ.’ ಭಾರತೀಯ ಇತಿಹಾಸಕಾರರು ಇನ್ನಾದರೂ ಬುದ್ಧಿ ಕಲಿಯುವರೇ!? ಕಣ್ಣು ತೆರೆಯುವರೇ!?
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)