

| ಡಾ.ಪ್ರಕಾಶ್ ಕೆ. ನಾಡಿಗ್ ತುಮಕೂರು
ನವೆಂಬರ್ 21 ವಿಶ್ವ ಟೆಲಿವಿಷನ್ ದಿನ. ಮಾನವನ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಾಗೂ ಪ್ರಪಂಚದಲ್ಲಿ ಸಂವಹನ ಕ್ಷೇತ್ರದಲ್ಲಿ ಆದ ಕ್ರಾಂತಿಯನ್ನು ನೆನೆಯುವ ಸಲುವಾಗಿ ಡಿಸೆಂಬರ್ 17, 1996 ರಂದು ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಪ್ರತಿ ವರ್ಷ ನವೆಂಬರ್ 21ನ್ನು ‘ವಿಶ್ವ ಟೆಲಿವಿಷನ್’ ದಿನವೆಂದು ಘೊಷಿಸಿತು. ನೀವು ಇಪ್ಪತ್ತನೇ ಶತಮಾನದ ಅದ್ಭುತ ಸಂಶೋಧನೆ ಏನೆಂದು ಕೇಳಿದರೆ ಅದು ‘ಟಿವಿ’ ಎಂದು ಹೇಳಬಹುದು. ಹೌದು, ಈಗ ಟಿವಿ ಇಲ್ಲದ ಮನೆ ಇಲ್ಲವೆಂದೇ ಹೇಳಬೇಕು. ಹದಿನೆಂಟು ಸೆಂ.ಮೀ.ಪರದೆಯ ಟಿವಿಯಿಂದ ಹಿಡಿದು ಐದಾರು ಅಡಿ ತೆಳು ಪರದೆಯ ಟಿವಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಅದು ಸರಿ, ಈ ಟಿವಿಯನ್ನು ಕಂಡುಹಿಡಿದವರಾರು ಗೊತ್ತೇ?. ಬಲ್ಬ್, ರೇಡಿಯೋ ಮತ್ತು ದೂರವಾಣಿ ಕಂಡು ಹಿಡಿದಂತೆ ಟಿವಿಯನ್ನು ಕಂಡು ಹಿಡಿದ ಕೀರ್ತಿ ಕೇವಲ ಒಬ್ಬ ವಿಜ್ಞಾನಿಗೆ ಸಲ್ಲುವುದಿಲ್ಲ. ಟಿವಿಯನ್ನು ಕಂಡು ಹಿಡಿದ ಕೀರ್ತಿ ಹಲವಾರು ಸಂಶೋಧಕರಿಗೆ ಸಲ್ಲುತ್ತದೆ. ಹದಿನೆಂಟನೇ ಶತಮಾನದಿಂದಲೂ ಟಿವಿಯಂತಹ ವಸ್ತುವೊಂದನ್ನು ಕಂಡು ಹಿಡಿಯಬೇಕೆಂದು ಹಲವಾರು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದರು.
ಮೊದಮೊದಲು ವಿದ್ಯುನ್ಮಾನ, ದೃಷ್ಟಿಶಾಸ್ತ್ರ ಮತ್ತು ಯಾಂತ್ರಿಕ ವಿಜ್ಞಾನವನ್ನು ಉಪಯೋಗಿಸಿಕೊಂಡು ಪ್ರತಿಬಿಂಬವನ್ನು ಸೆರೆಹಿಡಿದು ಅದನ್ನು ಪರದೆಯಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿದ್ದವು. 1800ರ ಪ್ರಾರಂಭದಲ್ಲಿ ಸೆರೆಹಿಡಿದ ಪ್ರತಿಬಿಂಬವನ್ನು ಮೊದಲಿಗೆ ಫ್ಯಾಕ್ಸ್ ಯಂತ್ರದ ಮೂಲಕ ರವಾನಿಸಲಾಯಿತು. ದೂರವಾಣಿ ಯಂತ್ರದ ಅವಿಷ್ಕಾರವಾದ ಮೇಲೆ ವಿದ್ಯುನ್ಮಾನ ಯಂತ್ರದ ಮೂಲಕ ಸೆರೆ ಹಿಡಿದ ಬಿಂಬವನ್ನು ಟೆಲಿಫೊನೋಸ್ಕೊಪ್ ಎಂಬ ಯಂತ್ರದ ಮೂಲಕ ರವಾನಿಸುವಲ್ಲಿ ಯಶಸ್ವಿಯಾದರು. ವಿಜ್ಞಾನದ ಬಗ್ಗೆ ಕಾಲ್ಪನಿಕ ಕಥೆಗಳನ್ನು ಬರೆಯುತ್ತಿದ್ದ ಅಂದಿನ ಕಥೆಗಾರರು ಮುಂದೊಂದು ದಿನ ಬೆಳಕು ಶಬ್ದದ ಹಾಗೆ ತಂತಿಯ ಮೂಲಕ ಪ್ರಸಾರವಾಗುತ್ತದೆ ಎಂದಿದ್ದರು. ಈ ಕಲ್ಪನೆ ನಿಜವಾಗಲು ಹಲವಾರು ಸಂಶೋಧಕರು ಹಗಲಿರುಳು ಶ್ರಮಪಟ್ಟರು. ಜನರು ಏನನ್ನಾದರೂ ನೋಡುತ್ತಾರೆ ಪರಸ್ಪರ ಒಬ್ಬರನೊಬ್ಬರನ್ನು ನೋಡುವುದನ್ನು ಬಿಟ್ಟು ಎಂಬುದು ಇದೀಗ ಟಿವಿ ಬಂದ ಮೇಲೆ ನಿಜವಾಗಿದೆ. 1920 ರಲ್ಲಿ ಸ್ಕಾಟಿಶ್ ಸಂಶೋಧಕ ಜಾನ್ ಬೈರ್ಡ್ ಹಲವು ತೆಳುವಾದ ಪಾರದರ್ಶಕ ನಳಿಕೆಗಳನ್ನು ಉಪಯೋಗಿಸಿ ಅದರ ಮೂಲಕ ಬಿಂಬಗಳನ್ನು ಪರದೆಯ ಮೇಲೆ ಮೂಡಿಸುವಲ್ಲಿ ಯಶಸ್ವಿಯಾದನು. ಇದು ನಿಪ್ಕೊವ್ ಸಂಶೋಧನೆಯ ಪರಿವರ್ತಿತ ಅವೃತ್ತಿಯಾಗಿದೆ ಎಂದು ಇದನ್ನು ಪೆಟೆಂಟ್ ಮಾಡಿಸುವಾಗ ಬೈರ್ಡ್ ಹೇಳಿದ್ದನು. ಪ್ರತಿಫಲಿಸುವ ಬೆಳಕಿನ ಸಹಾಯದಿಂದ ಮೊದಲ ಟಿವಿ ತಯಾರಿಸುವುದರಲ್ಲಿ ಮೊದಲಿಗ ಎಂಬ ಹೆಗ್ಗಳಿಕೆಗೆ ಬ್ಯೆರ್ಡ್ ಪಾತ್ರನಾದನು.
1938 ರಲ್ಲಿ ವಾರ್ನರ್ ಎಂಬ ಜರ್ಮನ್ ಸಂಶೋಧಕ ಮೊದಲ ಬಾರಿಗೆ ಬಣ್ಣದ ಟಿವಿಯನ್ನು ಕಂಡು ಹಿಡಿದನು. ಡ್ಯುಮಾಂಟ್ ಎಂಬ ಕಂಪೆನಿ ಮೊದಲಿಗೆ ಟಿವಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪೀಟರ್ ಗೋಲ್ಡ್ ಮಾರ್ಕ್ ಮಾರ್ಗದರ್ಶನದಲ್ಲಿ ಬೈರ್ಡ್ ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ ಬಣ್ಣದ ಟಿವಿ 1940ರಲ್ಲಿ ತಯಾರಾಯಿತು. 1948ರ ಹೊತ್ತಿಗೆ ಅಮೇರಿಕಾದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಟಿವಿಗಳು ಮಾರಾಟವಾಗಿದ್ದವು. ಇಂದಿನ ಕೇಬಲ್ ಟಿವಿ ತಂತ್ರಜ್ಞಾನವನ್ನು ಕಂಡು ಹಿಡಿದ ಕೀರ್ತಿ ಪೆನ್ಸಲ್ವೇನಿಯಾದ ಮೌಂಟೆನ್ಸ್ ಕಂಪನಿಗೆ ಸೇರುತ್ತದೆ. ಪೆನ್ಸಲ್ವೆನೀಯಾದ ಸರ್ವಿಸ್ ಇಲೆಕ್ಟ್ರಿಕ್ ಕಂಪೆನಿಯ ವಾಲ್ಸನ್ ಹಾಗೂ ಆತನ ಹೆಂಡತಿ ಮಾರ್ಗರೇಟ್ ಮೊದಲ ಬಾರಿಗೆ ಕೇಬಲ್ ಟಿವಿಯನ್ನು ಕಂಡುಹಿಡಿದರು. ಜಿನೆತ್ ಕಾರ್ಪೇರೇಶನ್ 1950ರಲ್ಲಿ ರಿಮೋಟ್ ಕಂಟ್ರೋಲ್ ಟಿವಿಯನ್ನು ಕಂಡುಹಿಡಿದರು. ಈ ಕಂಪೆನಿಯ ಸಂಸ್ಥಾಪಕ ಎಫ್ ಮ್ಯಾಕ್ ಡೊನಾಲ್ಡ್ ಮುಂದೊಂದು ದಿನ ಜಾಹೀರಾತುಗಳು ಟಿವಿಯನ್ನು ಆಳಲಿದೆ, ಈ ಜಾಹೀರಾತುಗಳಿಂದ ತಪ್ಪಿಸಿಕೊಳ್ಳಲು ಏನಾದರೊಂದು ಸಾಧನವೊಂದನ್ನು ಕಂಡುಹಿಡಿಯಬೇಕೆಂದು ತನ್ನ ನೌಕರರಿಗೆ ಹೇಳುತ್ತಿದ್ದನು. ಇದರ ಫಲವಾಗೆ ರಿಮೋಟ್ ಕಂಟ್ರೋಲ್ ಹುಟ್ಟಿಕೊಂಡಿತು. ಪೂರ್ಣ ಪ್ರಮಾಣದ ರಿಮೋಟ್ ಕಂಟ್ರೋಲ್ ಅನ್ನು ಕಂಡುಹಿಡಿದ ಕೀರ್ತಿ ಜೆನೆತ್ ಕಂಪೆನಿಯ ಇಂಜಿನಿಯರ್ ಉಜಿನ್ ಪೊಲಿಗೆ ಸಲ್ಲುತ್ತದೆ.
ಪರದೆಯ ಮೇಲೆ ಮೊದಲು ಮೂಡಿದ ಚಿತ್ರ ಬೈರ್ಡ್ನ ಕಚೇರಿಯ ಹುಡುಗ ವಿಲಿಯಂ ಎಡ್ವರ್ಡ್. ಟಿವಿ ಪರದೆಯ ಮೇಲೆ ಮೊದಲು ಮೂಡಿದ ಮಾನವನ ಚಿತ್ರ ಎಂಬ ಹೆಗ್ಗಳಿಕೆಗೆ ವಿಲಿಯಂ ಪಾತ್ರನಾದನು. 1927ರಲ್ಲಿ ಬೈರ್ಡ್ 438 ಕೀ.ಮೀ. ದೂರವಾಣಿ ತಂತಿಯ ಮೂಲಕ ಲಂಡನ್ನಿಂದ ದೂರದ ಗ್ಲಾಸ್ಗೋವರೆಗೂ ಪ್ರಸಾರ ಮಾಡುವುದರಲ್ಲಿ ಯಶಸ್ವಿಯಾದನು. ಇಷ್ಟೆ ಅಲ್ಲದೆ ವಿಡಿಯೊ ರೆಕಾರ್ಡಿಂಗ್ ತಂತ್ರಜ್ಞಾನವನ್ನು ಕಂಡು ಹಿಡಿದ ಕೀರ್ತಿ ಬೈರ್ಡ್ಗೆ ಸೇರುತ್ತದೆ. ಬೈರ್ಡ್ ಕಂಡು ಹಿಡಿದ ಟಿವಿ ಕಪ್ಪು ಬಿಳುಪಿನ ಟಿವಿಯಾಗಿತ್ತು. ಪರದೆಯ ಮೇಲೆ ಕಪ್ಪು ಹಾಗೂ ಬಿಳುಪಿನಲ್ಲಿ ದೃಶ್ಯವನ್ನು ನೊಡಲು ಮಾತ್ರ ಸಾಧ್ಯವಾಗಿತ್ತು. ಧ್ವನಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ದೃಶ್ಯವನ್ನು ಸೆರೆಹಿಡಿಯುವಾಗ ಧ್ವನಿಯನ್ನು ಮುದ್ರಣ ಮಾಡುವ ತಂತ್ರಜ್ಞಾನವನ್ನು ಕಂಡು ಹಿಡಿದನು. ಬೈರ್ಡ್ ಅಲ್ಲದೇ ಇದೇ ಅವಧಿಯಲ್ಲಿ ಹಂಗೇರಿಯ ಕಲ್ಮಾನ್, ರಷ್ಯಾದ ಲಿಯೋನ್ ಥಮ್ರ್ ಫಿಲಿಯೋ ಟ್ರಾನ್ಸ್ವರ್ಥ್ ಅವರ ಕೊಡುಗೆಯೂ ಸಹ ಇಂದಿನ ಪೂರ್ಣ ಪ್ರಮಾಣದ ಟಿವಿ ಸಂಶೋಧನೆಯಲ್ಲಿ ಇದೆ ಎಂದರೆ ತಪ್ಪಾಗಲಾರದು.
ಜಾನ್ ಬೈರ್ಡ್ ಉತ್ತಮ ಛಾಯ ವಿದ್ಯುತ್ ವಾಹಕಗಳು ಹಾಗೂ ಸುಧಾರಿಸಿದ ಸಂಕೇತಗಳನ್ನು ಹೀರಿಕೊಳ್ಳುವ ವಿದ್ಯುತ್ ಕೋಶಗಳು ಹಾಗೂ ಧ್ವನಿವರ್ಧಕಗಳನ್ನು ಉಪಯೋಗಿಸುವ ಮೂಲಕ ಚಲಿಸುವ ತನ್ನ ಕೈ ಬೆರಳುಗಳ ಬಿಂಬಗಳನ್ನು ಪರದೆಯ ಮೇಲೆ ಮೂಡಿಸಲು ಯಶಸ್ವಿಯಾದನು.1924ರ ಫೆಬ್ರವರಿಯಲ್ಲಿ ಲಂಡನ್ನ ಸೆಲ್ಪಿ›ಡ್ಜ್ ಡಿಪಾರ್ಟ್ವೆುಂಟಲ್ ಅಂಗಳದಲ್ಲಿ ಮೂರು ವಾರಗಳ ಕಾಲ ಮೊದಲ ಬಾರಿಗೆ ಸಾರ್ವಜನಿಕರಿಗೆ ಈ ಟಿವಿಯ ಪರದೆಯ ಮೇಲೆ ಚಲಿಸುವ ಬಿಂಬಗಳ ಪ್ರದರ್ಶನ ಮಾಡಿಸಿದ್ದನು. ಅಕ್ಟೋಬರ್ 2, 1925 ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಅಂದು ಬೈರ್ಡ್ ಪೂರ್ಣ ಪ್ರಮಾಣದಲ್ಲಿ ದೃಶ್ಯ ಹಾಗೂ ಶ್ರವಣ ಮಾಧ್ಯಮವನ್ನು ಉಪಯೋಗಿಸಿಕೊಂಡು ಚಲಿಸುವ ಬಿಂಬಗಳನ್ನು ಪರದೆಯ ಮೇಲೆ ಮೂಡಿಸುವಲ್ಲಿ ಯಶಸ್ವಿಯಾದನು. ಸೆಕೆಂಡ್ಗೆ ಐದು ಚಿತ್ರಗಳಂತೆ ಮೂವತ್ತು ಸಾಲುಗಳು ಲಂಬವಾಗಿ ನಿಂತು ಚಲಿಸುವ ಚಿತ್ರಗಳನ್ನು ಮೂಡಿಸುವಲ್ಲಿ ಯಶಸ್ವಿಯಾದನು. ಮನುಷ್ಯನ ಮೆದುಳು ವಿವಿಧ ಭಂಗಿಯಲ್ಲಿರುವ ತಟಸ್ಥ ಬಿಂಬಗಳು ಪ್ರತಿ ಸೆಕೆಂಡ್ಗೆ ಹದಿನೈದಕ್ಕಿಂತ ಹೆಚ್ಚಾಗಿ ಬಂದಾಗ ಅದನ್ನು ಚಲಿಸುವ ಬಿಂಬಗಳಾಗಿ ಪರಿವರ್ತಿಸುತ್ತದೆ ಎಂಬ ನಿಯಮದ ಮೇಲೆ ಟಿವಿಯನ್ನು ತಯಾರಿಸಲಾಗಿದೆ.
ಮೊದಮೊದಲು ಬಂದ ಟಿವಿಗಳು ಇಡೀ ಟೇಬಲ್ ಅನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಚಿಕ್ಕ ಟಿವಿಗಳು, ಬಾಗಿಲು ಇರುವ ಟಿವಿಗಳು ನಂತರದ ದಿನಗಳಲ್ಲಿ ರೂಪಾಂತರಗೊಂಡು ಗೋಡೆಗೆ ತಗಲು ಹಾಕುವಂತಹ ಚಪ್ಪಟೆ ಎಲ್ಸಿಡಿ ಹಾಗೂ ಎಲ್ಇಡಿಯಂತಹ ಚಪ್ಪಟೆ ಟಿವಿಗಳವರೆಗೂ ಬಂದು ನಿಂತಿದೆ. ಟಿವಿಗಳಲ್ಲಿ 3-ಡಿ ಟಿವಿಗಳು ಇತ್ತೀಚಿನ ಅವಿಷ್ಕಾರವಾಗಿದ್ದು, ಇದು ನೋಡುಗರನ್ನು ನಿಜವಾಗಲೂ ತಮ್ಮ ಕಣ್ಣ ಮುಂದೆ ನಡೆಯುತ್ತಿದೆಯೆನೋ ಎಂಬಂತಹ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಯಾವ ಕೋನದಲ್ಲಿ ಕುಳಿತು ನೋಡಿದರೂ ಸಮಾನವಾಗಿ ಕಾಣುವಂತಹ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಉತ್ತಮವಾದ ದೃಶ್ಯಗಳು, ಅತ್ಯಂತ ಸ್ಪಷ್ಟವಾದ ಧ್ವನಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ಟಿವಿಗಳಲ್ಲದೆ ಯುಎಸ್ಬಿ ಪೊರ್ಟ್ಗಳಿರುವ ಟಿವಿಗಳು ಬಂದ್ದಿದ್ದು ಪೆನ್ ಡ್ರೖೆವ್ಗಳಲ್ಲಿ ಇರುವ ನಮಗಿಷ್ಟವಾದ ಸಿನಿಮಾಗಳನ್ನು ನೋಡಬಹುದಲ್ಲದೆ, ಮಕ್ಕಳಿಗೆ ವಿಡಿಯೋ ಗೇಮ್ಸ್ಗಳನ್ನು ಹಾಕಿ ನೋಡಬಹುದು. ಟಿವಿ ಎಂಬುದೊಂದು ಉತ್ತಮ ಮನರಂಜನೆಯ ಸಾಧನವಾಗಿದ್ದು, ಕೆಲವರಿಗೆ ಟಿವಿಯಿಲ್ಲದ ಜೀವನವನ್ನು ಉಹಿಸಿಕೊಳುವುದು ಕಷ್ಟ. ಈ ಟಿವಿ ಕೆಲವರಿಗೆ ಮನಸ್ಸನ್ನು ಉಲ್ಲಾಸ ಗೊಳಿಸಿದರೆ, ಕೆಲವರಿಗೆ ಮನರಂಜನೆಯ ಸಾಧನ, ಕೆಲವರಿಗೆ ಗೆಳೆಯ, ಇನ್ನು ಕೆಲವರಿಗೆ ಶ್ಯೆಕ್ಷಣಿಕ ಕಾರ್ಯಕ್ರಮಗಳನ್ನು ನೀಡುವ ಮಾರ್ಗದರ್ಶಕ. ಈ ಟಿವಿ ಮಾಧ್ಯಮದಿಂದ ಹೊರಬಂದ ಪ್ರತಿಭೆಗಳು ಅದೆಷ್ಟೊ? ಜನರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಟಿವಿ ಆವಿಷ್ಕಾರಗೊಂಡಾಗಿನಿಂದಲೂ ರೂಪಾಂತರವಾಗುತ್ತಲೆ ಇದ್ದು ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ತಂತ್ರಜ್ಞಾನದಿಂದ ಕೂಡಿದ ಟಿವಿಗಳು ಮನರಂಜನೆಯನ್ನು ನೀಡಲಿವೆ ಎಂದರೆ ತಪ್ಪಾಗಲಾರದು.