

ಹಿರಿಯ ಲೇಖಕ ಟಿ.ಎಸ್.ಗೋಪಾಲ್ ಬರೆದ ‘ಕಾಡು ಕಲಿಸಿದ ಪಾಠ’ (2013) ಪುಸ್ತಕ ಓದುತ್ತಿದ್ದಾಗ ನನ್ನ ನೆನಪಿನ ಯಾತ್ರೆ ಕಾಡುಗಳ ಜತೆ ಸಾಗಿತು. ಅದು 2008ನೇ ವರ್ಷ. ನಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಹೀಗೆ 20-25 ಜನರ ತಂಡ ಎಚ್.ಎನ್.ಎ.ಪ್ರಸಾದ್ ನೇತೃತ್ವದಲ್ಲಿ ನಾಗರಹೊಳೆ ಪ್ರದೇಶಕ್ಕೆ ಭೇಟಿ ನೀಡಿದೆವು. ಅನಂತಕುಮಾರ್ ಜತೆಯಲ್ಲಿದ್ದರು. ಕಾಡುಪ್ರದೇಶವನ್ನು ಆ ಹಿಂದೆ ನೋಡಿರಲಿಲ್ಲ ಎಂದೇನಲ್ಲ. ಆ ಭೇಟಿಯ ಕೆಲ ವರ್ಷಗಳ ಮುನ್ನ ಕೂಡ ನಾಗರಹೊಳೆಗೆ ಹೋಗಿದ್ದೆವು. ಆದರೆ, ಆಗ ಮೇಲ್ನೋಟಕ್ಕೆ ಮಾತ್ರ ಆ ಪರಿಸರವನ್ನು ಗ್ರಹಿಸಲು ಸಾಧ್ಯವಾಗಿತ್ತು. 2008ರಲ್ಲಿ ಕೈಗೊಂಡ ಎರಡು ದಿನಗಳ ಭೇಟಿ ಮಾತ್ರ ನಮಗೆ ಕಾಡುಗಳ ಬೆರಗುಗಳನ್ನು ಸಮರ್ಥವಾಗಿ ಪರಿಚಯಿಸಿ ಕೊಟ್ಟಿತು. ಫಾರೆಸ್ಟ್ ರೇಂಜರ್ ಚಿನ್ನಪ್ಪ ಕಾಡಿನ ಬಗ್ಗೆ ತುಂಬ ತಿಳಿದುಕೊಂಡಿರುವವರು. ಅವರೇ ನಮಗೆ ಕಾಡೆಲ್ಲ ಸುತ್ತಾಡಿಸುತ್ತ, ಅಪರೂಪದ ಮಾಹಿತಿಗಳನ್ನು, ಅಲ್ಲಿನ ಭೌಗೋಳಿಕ ವೈಶಿಷ್ಟ್ಯವನ್ನು ಮನದಟ್ಟು ಮಾಡಿಕೊಟ್ಟರು. ಆ ಭೇಟಿಯ ಬಳಿಕ ನಮಗೆಲ್ಲ ಕಾಡಿನ ಬಗೆಗಿನ ಗ್ರಹಿಕೆಯೇ ಬದಲಾಗಿ, ವಾಸ್ತವದ ದರ್ಶನವಾಯಿತು ಎನ್ನಬಹುದು.
ಇರುವೆಗಳು ಭಾರಿ ಶಿಸ್ತು ಎಂದೇನೋ ಕೇಳಿದ್ದೇವೆ. ಅದರಲ್ಲೂ, ಕಾಡಿನ ಇರುವೆಗಳು ಕಾಂಡಕೊರಕ ಕೀಟಗಳನ್ನು ಹಿಡಿದು, ಗೂಡಿಗೆ ಕೊಂಡೊಯ್ದು ಆಹಾರವಾಗಿಸಿಕೊಳ್ಳುತ್ತವೆ. ವಿಶೇಷವೆಂದರೆ, ಅವು ಕೀಟಗಳನ್ನು ಕೊಂದು ಕೊಂಡೊಯ್ಯುವುದಿಲ್ಲ. ಅಛಿಠಠಿಜಛಿಠಜಿಚದಂತೆ ಚುಚ್ಚಿ, ಕೀಟಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಅಗತ್ಯ ಬಿದ್ದಾಗ ಕೊಂದು ಆಹಾರವಾಗಿಸಿಕೊಳ್ಳುತ್ತವೆ. ಇದರಿಂದ ಮರಗಳ ರಕ್ಷಣೆಯೂ ಆಯ್ತು, ಇರುವೆಗಳಿಗೆ ಆಹಾರವೂ ಆಯ್ತು. ಮಾನವನ ಹಸ್ತಕ್ಷೇಪದಿಂದಾಗಿ ಕಾಡ್ಗಿಚ್ಚು ಹರಡುವುದನ್ನು ನೋಡುತ್ತಿದ್ದೇವೆ. ಆದರೆ, ಅಂಥ ಕಾಡ್ಗಿಚ್ಚಿನ ಸಮಯದಲ್ಲೂ ಗೂಡಿಗೆ, ಆಹಾರಕ್ಕೆ ಹಾನಿಯಾಗದಂತೆ ಫೈರ್ಪ್ರೂಫ್ ವ್ಯವಸ್ಥೆಯನ್ನು ಇರುವೆಗಳು ಮಾಡಿಕೊಂಡಿರುತ್ತವೆ ಎಂಬುದು ಅಚ್ಚರಿಯಾದರೂ ಸತ್ಯ. ಹಾಗೆಯೇ, ಅವು ಹುಲ್ಲನ್ನು ಕಚ್ಚಿಕೊಂಡು ಗೂಡಿಗೆ ತೆಗೆದುಕೊಂಡು ಹೋಗುತ್ತವೆ. ಕಾಡ್ಗಿಚ್ಚಿನ ಹೊತ್ತಲ್ಲಿ ಹುಲ್ಲಿಗೆ ಬೆಂಕಿ ಬಿದ್ದರೂ, ಮತ್ತೆ ಹುಲ್ಲು ಚಿಗುರಲು ಇಂಥ ಚಟುವಟಿಕೆಗಳು ಕಾರಣವಾಗುತ್ತವೆ ಎಂದು ಚಿನ್ನಪ್ಪ ವಿವರಿಸಿದಾಗ ಅಚ್ಚರಿಪಟ್ಟೆವು.
ಕಾಡಿನ ಬೆರಗುಗಳು ಇಷ್ಟಕ್ಕೆ ಸೀಮಿತವಲ್ಲ. ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆಗಾಗಿ ಪಟ್ಟಣ, ನಗರಗಳು ಖರ್ಚು ಮಾಡುತ್ತಿರುವ ದುಡ್ಡಿಗೆ ಲೆಕ್ಕವೇ ಇಲ್ಲ. ಜನರು ಹೆಚ್ಚಿದಷ್ಟು ಕಸವೂ ಹೆಚ್ಚಿ, ಸಮಸ್ಯೆಗಳು ಅಧಿಕಗೊಳ್ಳುತ್ತವೆ. ಆದರೆ, ಕಾಡಿನಲ್ಲಿ ಸ್ವಚ್ಛತೆಯ ಹೊಣೆಯನ್ನೂ ಅಲ್ಲಿನ ಪ್ರಾಣಿ, ಪಕ್ಷಿ, ಕೀಟಗಳು ನಿರ್ವಹಿಸುತ್ತಿವೆ. ಕೆಲ ಪಕ್ಷಿಗಳು ಬೀಜ, ಎಲೆಗಳನ್ನು ತಿನ್ನುತ್ತವೆ. ಅಜೀರ್ಣದಿಂದ ಬೀಜ ವಿಸರ್ಜಿಸಿದರೂ ಅದರಿಂದ ಮತ್ತೆ ಹೊಸ ಗಿಡ ಚಿಗುರುತ್ತದೆ. ಎಲೆ, ರೆಂಬೆಗಳು ಬಿದ್ದಾಗ ಅವು ಕೊಳೆತು, ಗೊಬ್ಬರವಾಗುತ್ತವೆ. ಯಾವುದಾದರೂ ಪ್ರಾಣಿ ಸತ್ತಾಗ ರಣಹದ್ದಿಗೆ ಆಹಾರವಾಗಿ, ಅಲ್ಲಿ ಶವಸಂಸ್ಕಾರವೂ ನೆರವೇರಿದಂತಾಗುತ್ತದೆ. ಅಲ್ಲಿ ಎಲ್ಲ ಬಗೆಯ ಪ್ರಾಣಿ, ಪಕ್ಷಿ, ಕೀಟಗಳು ನೆಲೆಸಿದ್ದರೂ ಅವುಗಳ ನಡುವೆ ಘರ್ಷಣೆ ತೀರಾ ಅಪರೂಪ ಎನ್ನಬಹುದು. ಶುದ್ಧ ಸಸ್ಯಾಹಾರಿಯಾಗಿರುವ ದೊಡ್ಡಪ್ರಾಣಿ ಆನೆಯೂ ಹುಲ್ಲಿನಿಂದ ಹೊಟ್ಟೆ ತುಂಬಿಸಿಕೊಳ್ಳುತ್ತದೆ ಹೊರತು ಬೇರೆ ಪ್ರಾಣಿಗಳಿಗೆ ಉಪಟಳ ಕೊಡುವುದಿಲ್ಲ. ಈ ಪ್ರಾಕೃತಿಕ ಸಮತೋಲನವೇ ಕಾಡುಗಳ ಸಮೃದ್ಧತೆಯ ರಹಸ್ಯ.
ಕಾಡು ಎಂದರೆ ಬರೀ ಹಸಿರು ಹೊದಿಕೆಯಲ್ಲ. ಮರಗಿಡಗಳ ಜತೆಗೆ ಅಲ್ಲಿ ಎಲ್ಲ ಬಗೆಯ ವನ್ಯಜೀವಿಗಳು ಆಸರೆ ಪಡೆದುಕೊಂಡಿರುತ್ತವೆ. ಆದಿವಾಸಿಗಳು ಪ್ರಕೃತಿಗೆ ಪೂರಕವಾಗಿಯೇ ಜೀವನಶೈಲಿ ಕಟ್ಟಿಕೊಂಡಿರುತ್ತಾರೆ. ಅದೊಂದು ಅದ್ಭುತವಾದ, ನಿಸರ್ಗ ಸೊಬಗಿನ ಪ್ರದೇಶ. ಕೆಲವೊಮ್ಮೆ ಕೋಪದಲ್ಲಿ ಜನರು ಬೇರೆಯವರನ್ನು ಟೀಕಿಸುವಾಗ ಕಾಡುಪ್ರಾಣಿ, ಕಾಡುಮನುಷ್ಯ ಎಂಬ ಪದ ಬಳಸುತ್ತಾರೆ. ಆದರೆ, ಕಾಡುಪ್ರಾಣಿಗಳು ಎಷ್ಟು ಪ್ರಯೋಜನಕಾರಿ, ಕಾಡುಮನುಷ್ಯರು ಎಷ್ಟು ಜಾಣರು ಎಂಬುದು ಅರಿವಿಗೆ ಬಂದರೆ ಬಹುಶಃ ಯಾರೂ ಅಂಥ ಪದಪ್ರಯೋಗ ಮಾಡುವುದಿಲ್ಲ. ಚಿಕ್ಕ ಇರುವೆಯಿಂದ ಹಿಡಿದು ಹುಲಿಯವರೆಗೆ, ಅಷ್ಟೇ ಅಲ್ಲ ಗೂಬೆ, ಕತ್ತೆ, ಹಂದಿಯಂಥವುಗಳ ಕೊಡುಗೆ, ಮಹತ್ವವೂ ಕಡಿಮೆಯೇನಲ್ಲ. ಅವೆಲ್ಲ ಕಾಡಿನ ಸಮತೋಲನ ರಕ್ಷಣೆಗೆ, ಅಲ್ಲಿನ ಶಿಸ್ತಿಗೆ ಮಹತ್ವದ ಕೊಡುಗೆ ನೀಡುತ್ತವೆ. ಆದರೆ, ನಾವು ಕಾಡುಗಳೆಂದರೆ ಬರೀ ಮಳೆ ಬರಿಸುವ ಪ್ರದೇಶಗಳು, ಒಂದಿಷ್ಟು ಹಸಿರನ್ನು ಹೊಂದಿರುವ ಜಾಗ ಎಂದು ಭಾವಿಸಿ ಬಿಡುತ್ತೇವೆ. ಕಾಡುಗಳಿಂದಲೇ ಮಳೆ ಚೆನ್ನಾಗಿ ಬರಲು ಸಾಧ್ಯ. ಆ ಮಳೆನೀರೇ ನಮಗೆ ಜೀವನಾಧಾರ.
ನಿಸರ್ಗಕ್ಕೆ ದೂರವಾಗಿ, ಪ್ರಕೃತಿಯನ್ನು ಶೋಷಿಸುತ್ತಲೇ ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳುತ್ತಿರುವುದರಿಂದ ಕಾಡು, ಅಲ್ಲಿನ ಜೀವವೈವಿಧ್ಯ, ಪ್ರಾಕೃತಿಕ ಸಿರಿ ಯಾವುದೂ ಬಹುತೇಕರ ಅರಿವಿಗೆ ಎಟಕುತ್ತಿಲ್ಲ. ನಿಸರ್ಗಸ್ನೇಹಿ ಕ್ರಮಗಳನ್ನೇ ದೂರ ಇಟ್ಟಿರುವುದರಿಂದ ಕಾಡೂ ದೂರವಾಗುತ್ತಿದೆ. ಅಷ್ಟಕ್ಕೆ ಮಾನವ ಸುಮ್ಮನಾಗಿಲ್ಲ. ಕಾಡಿನ ಮೇಲೆ ಪ್ರಹಾರ ನಡೆಸುತ್ತಲೇ ಇದ್ದಾನೆ. ಹೆದ್ದಾರಿ ಯೋಜನೆಗಳಲ್ಲಿ ನಾಶವಾಗುತ್ತಿರುವ ಕಾಡಿನ ಪ್ರಮಾಣ ಚಿಂತೆ ಮೂಡಿಸುವಷ್ಟು ಹೇರಳ.
ಭಾರತದಲ್ಲಿನ ಕಾಡುಗಳ ವಿಶೇಷ ನೋಡಿ. ಅವು ಬೇರೆ-ಬೇರೆ ಪ್ರದೇಶಗಳಲ್ಲಿ ಇರುವಂತೆ ಮೇಲ್ನೋಟಕ್ಕೆ ತೋರಿದರೂ, ದೇಶದಲ್ಲಿನ ಎಲ್ಲ ಕಾಡುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಭೂವಿಜ್ಞಾನಿಗಳ ಅಧ್ಯಯನವರದಿಗಳಲ್ಲೂ ಇದನ್ನು ಕಾಣಬಹುದು. ಆದರೆ, ನಮಗೆ ಗೊತ್ತಿಲ್ಲದೆಯೇ ಕಾಡುಗಳು ತುಂಡಾಗುತ್ತಿರುವುದು ಗಂಭೀರ ಸ್ವರೂಪದ ಸಮಸ್ಯೆ. ಒಂದು ನದಿ ತುಂಡಾದರೆ ಹೇಗೆ, ಆ ನದಿಯ ಸ್ವರೂಪವೇ ಬದಲಾಗುತ್ತದೆಯೋ ಕಾಡುಗಳು ತುಂಡಾದರೂ ಅದೇ ಸ್ಥಿತಿ ಸೃಷ್ಟಿಯಾಗುತ್ತದೆ. ಕಾಡು ನಾಶವಾಗುತ್ತಿರುವುದರಿಂದ ವನ್ಯಜೀವಿಗಳ ಸಂಚಾರಕ್ಕೆ ತೊಡಕುಂಡಾಗಿದೆ. ಹೆದ್ದಾರಿಗಳ ಅಡಿಯಲ್ಲೇ ಕಾಡುಪ್ರಾಣಿಗಳ ಓಡಾಟಕ್ಕೆ ರಸ್ತೆ ನಿರ್ವಿುಸುವ ಚರ್ಚೆಗಳು ನಡೆಯುತ್ತಿದ್ದು, ಅವು ಅಷ್ಟು ಪ್ರಯೋಜನಕಾರಿ ಆಗಬಲ್ಲವೇ ಎಂಬುದು ಪ್ರಶ್ನಾರ್ಹ.
ಕೆಲವರು ನಾಡಿನಲ್ಲೇ ಎಲ್ಲ ಬಗೆಯ ಗಿಡ ನೆಟ್ಟು ಅದನ್ನು ‘ಮಿನಿ ಫಾರೆಸ್ಟ್’ ಎಂದು ಕರೆಯಬಹುದು. ಆದರೆ, ಅದು ನಿಜಾರ್ಥದಲ್ಲಿ ಕಾಡಾಗಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ನೈಸರ್ಗಿಕ ಸಂರಚನೆಯೇ ವಿಭಿನ್ನ, ವಿಶಿಷ್ಟ. ಅದು ಕೃತಕವಾದದ್ದಲ್ಲ. ಅದರ ಆಂತರಿಕ ವ್ಯವಸ್ಥೆ ಬಹಳ ಸದೃಢ ಮತ್ತು ಶಕ್ತಿಶಾಲಿ. ಅಂಥ ವ್ಯವಸ್ಥೆಗೆ ಧಕ್ಕೆ ತರುವಂಥ ಕೆಲಸ ಆಗಬಾರದು. ಅನಂತಕುಮಾರ್ ಪ್ರತಿಷ್ಠಾನದಿಂದ ಇತ್ತೀಚೆಗೆ ‘ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ’ ವಿಷಯದ ಬಗ್ಗೆ ವೆಬಿನಾರ್ ಆಯೋಜಿಸಲಾಗಿತ್ತು. ಪರಿಸರ ತಜ್ಞ ಉಲ್ಲಾಸ್ ಕಾರಂತ್ ಈ ಸಂದರ್ಭದಲ್ಲಿ ಮಹತ್ವದ ಮಾತೊಂದನ್ನು ಹೇಳಿದರು-‘ಅಧುನಿಕತೆಯಾಗಲಿ, ಅಭಿವೃದ್ಧಿಯಾಗಲಿ ಅದು ಪರಿಸರ ಸಂರಕ್ಷಣೆಗೆ ಉಪಕರಣವಾಗಬೇಕೆ ಹೊರತು ಸಂಘರ್ಷ ಸೃಷ್ಟಿಸುವಂತಿರಬಾರದು’. ನಮ್ಮ ಜೀವನಪದ್ಧತಿಯಲ್ಲಿ ಮಾಡಿಕೊಂಡಿರುವ ಅಗಾಧ ಬದಲಾವಣೆಗಳು ಮತ್ತು ಆ ಮೂಲಕ ನಿಸರ್ಗದ ಮೇಲೆ ಎಸಗುತ್ತಿರುವ ಅಪಚಾರಗಳನ್ನು ಅವಲೋಕಿಸಿದರೆ ಈ ಮಾತಿನ ಗಂಭೀರತೆ ಅರ್ಥವಾಗಬಲ್ಲದು.
ಸಹಬಾಳ್ವೆಯಿಂದ ಬಾಳಬೇಕು ಎಂಬ ಆದರ್ಶವನ್ನೇನೋ ಪಠಿಸುತ್ತೇವೆ. ಆದರೆ ಅದರಂತೆ ಬದುಕುತ್ತೇವಾ ಎಂದು ಪ್ರಶ್ನಿಸಿಕೊಂಡರೆ ಉತ್ತರ ನಿರಾಶಾದಾಯಕವೇ. ತೋರಿಕೆಗೆ ಮಾತ್ರ ಶಿಸ್ತು, ಸಹಬಾಳ್ವೆ ಎಂಬಂತಾಗಿದೆ. ಶುಭ್ರ ವಸ್ತ್ರಗಳನ್ನು ಧರಿಸುವುದು, ಸಮಯಪಾಲನೆ ಮಾಡುವುದು, ಸರದಿಯಲ್ಲಿ ತಾಳ್ಮೆಯಿಂದ ನಿಲ್ಲುವುದು-ಇದಷ್ಟೇ ಶಿಸ್ತಲ್ಲ. ಇದು ಬರೀ ಭೌತಿಕ ಜೀವನಕ್ಕೆ ಸೀಮಿತ. ನಿಜವಾದ ಶಿಸ್ತು ಎಂದರೆ ಸಹಬಾಳ್ವೆಯನ್ನು ಅಳವಡಿಸಿಕೊಳ್ಳುವುದು. ನಮ್ಮ ಸ್ವಾರ್ಥಕ್ಕಾಗಿ, ಪ್ರಯೋಜನಗಳಿಗಾಗಿ ಕಾಡನ್ನಾಗಲಿ, ಅಲ್ಲಿರುವ ವನ್ಯಜೀವಿ, ನೀರನ್ನಾಗಲಿ ಶೋಷಿಸದೆ, ಅಲ್ಲಿನ ಸಂರಚನೆಯನ್ನು ಯಥಾಸ್ವರೂಪ ಕಾಪಾಡುವುದು. ಏಕೆಂದರೆ, ನಿಸರ್ಗ ಅದ್ಭುತವಾದ ವಿನ್ಯಾಸ ಹೊಂದಿದ್ದು, ಅದರಲ್ಲಿ ಮಾನವ ಮಧ್ಯಪ್ರವೇಶ ಮಾಡದಿದ್ದರೆ ಸಾಕು!
ಸೋಲಿಗ ಜನಾಂಗದವರದ್ದೊಂದು ವೈಶಿಷ್ಟ್ಯವಿದೆ. ಅವರು ಒಂದೇ ಕಡೆ ಐದು ವರ್ಷಗಳ ಕಾಲ ನೆಲೆಸುವುದಿಲ್ಲ. ಮತ್ತೊಂದು ಸ್ಥಳವನ್ನು ಅರಸಿ ವಲಸೆ ಹೋಗುತ್ತಾರೆ. ಹೀಗೆ ಹೋದಲ್ಲೆಲ್ಲ ನಿಸರ್ಗಸ್ನೇಹಿ ಮನೆಗಳನ್ನು ನಿರ್ವಿುಸಿಕೊಳ್ಳುತ್ತಾರೆ, ಗಿಡಮರಗಳನ್ನು ನೆಟ್ಟು, ಪೋಷಿಸುತ್ತಾರೆ. ಒಟ್ಟಾರೆ ಅವರ ಜೀವನಪದ್ಧತಿಯೇ ಪ್ರಕೃತಿಗೆ ಪೂರಕ. ಈ ವ್ಯವಸ್ಥೆ ಅವರಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಅವರ ಬದುಕನ್ನೂ ‘ಆಧುನಿಕ’ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಾಡಿನಲ್ಲಿದ್ದರೂ ನಗರದವರಂತೆ ಬದುಕಬೇಕೆಂಬ ಒತ್ತಡ ಸೃಷ್ಟಿಯಾಗುತ್ತಿದೆ. ಒಂದೆಡೆ, ಇಂಥವರನ್ನು ನಗರಕ್ಕೆ ತಂದು ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂಬ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಅವರು ಇದ್ದಲ್ಲಿಯೇ ಸಮರ್ಪಕ ಸೌಲಭ್ಯ ಕಲ್ಪಿಸಿ ಅವರ ಸಂಪ್ರದಾಯ, ವ್ಯವಸ್ಥೆಯನ್ನು ಗೌರವಿಸಬೇಕು ಎಂಬ ಚಿಂತನೆಯೂ ಇದೆ. ಎರಡೂ ಆಯಾಮಗಳ ಬಗ್ಗೆ ಹೆಚ್ಚು ಚಿಂತನೆ ನಡೆಯಬೇಕು.
ಅದೇನೇ ಇರಲಿ, ಕಾಡಿನ ಒಡಲನ್ನು ಅರ್ಥಮಾಡಿಕೊಳ್ಳುವ, ಆ ನೈಸರ್ಗಿಕ ಸಂಪತ್ತನ್ನು ಹಾಳುಮಾಡದೆ ಹಾಗೇ ರಕ್ಷಿಸುವ ಮತ್ತು ನಮ್ಮ ಬದುಕನ್ನು ನಿಸರ್ಗಸ್ನೇಹಿಯಾಗಿ ರೂಪಿಸಿಕೊಳ್ಳುವ ಅವಶ್ಯಕತೆ ಇದೆ. ಪ್ರಕೃತಿಗೆ ಹತ್ತಿರವಾದಷ್ಟು ಅಲ್ಲಿನ ಜ್ಞಾನಭಂಡಾರ, ವೈಶಿಷ್ಟ್ಯಗಳು ನಮಗೆ ಅರ್ಥವಾಗುತ್ತ ಹೋಗುತ್ತವೆ. ಕಾಡುಗಳ ರಕ್ಷಣೆಯ ಅಗತ್ಯವೂ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ‘ನಾಗರಿಕ’ರಾದ ನಾವು ‘ಕಾಡುಮನುಷ್ಯರಿಂದ’ ಕಲಿಯುವುದು ಸಾಕಷ್ಟಿದೆ. ಅಂಥ ಅರಿವಿಗೆ ತೆರೆದುಕೊಳ್ಳುತ್ತ ಜೀವನಪದ್ಧತಿಯನ್ನು ಬದಲಿಸಲು ಸಂಕಲ್ಪಿಸೋಣ. ಈ ಬಗ್ಗೆ ನಮ್ಮ ಒಂದು ನಿಮಿಷದ ಯೋಚನೆ, ನಿರ್ಧಾರ ಭವಿಷ್ಯದ ದಿಕ್ಕನ್ನೇ ಬದಲಿಸಬಲ್ಲದು ಎಂಬುದನ್ನು ಮರೆಯದಿರೋಣ.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)