ಹಣ ಮಾಡಲು ನೂರು ಉಪಾಯಗಳು!

MONEy
Published on
ಇದು ನನಗೆ ನ್ಯೂಯಾರ್ಕ್​ನಲ್ಲಾದ ಅನುಭವ. ಅಲ್ಲಿ ಪ್ರತಿದಿನ ರಸ್ತೆಯ ಬದಿಯಲ್ಲಿ ಮಾರ್ಡಿಗ್ರಾಸ್ ಎಂಬ ಸಂಸ್ಥೆಯವರು ‘ಸ್ಟ್ರೀಟ್ ಫೇರ್’ ಎಂಬ ಸಂತೆಯನ್ನು ನಡೆಸುತ್ತಾರೆ. ಅದರಲ್ಲಿ ಸೂಜಿಯಿಂದ ಹಿಡಿದು ಕಂಪ್ಯೂಟರ್​ವರೆಗೆ ಎಲ್ಲ ಸಾಮಾನುಗಳು ಲಭ್ಯ. ಇದರಲ್ಲಿ ನನ್ನ ಮ್ಯಾಜಿಕ್ ಕಿಟ್​ಗಳನ್ನು ಮಾರೋ ಯೋಚನೆ ಮಾಡಿದೆ. ಸ್ಥಳಬಾಡಿಗೆ ದಿನಕ್ಕೆ 100 ಡಾಲರ್. ಆದ್ದರಿಂದ ಒಂದು ವಾರ ಮಾಡಿ ನೋಡಿ ನಂತರ ಜಾಸ್ತಿ ದಿನ ಬುಕ್ ಮಾಡೋಣ ಅಂತ ಹೋದಾಗ ಸಂಘಟಕರು ಕಿಟ್ ಮಾರಲು ಅಗತ್ಯವಿದ್ದ ವೆಂಡರ್ ಲೈಸೆನ್ಸ್ ತಂದ್ರೆ ಸ್ಥಳ ಕೊಡುವುದಾಗಿ ಹೇಳಿದರು.

ಅಲ್ಲಿಯೇ ಪಕ್ಕದಲ್ಲಿದ್ದ ಆಫೀಸಿಗೆ ಹೋಗಿ ದಿನಕ್ಕೆ 10 ಡಾಲರ್​ನಂತೆ ಒಂದು ವಾರದ ಲೈಸೆನ್ಸ್ ಪಡೆದು ಒಬ್ಬನೇ ವ್ಯಾಪಾರ ಪ್ರಾರಂಭಿಸಿದೆ. ಎರಡೇ ದಿನದಲ್ಲಿ ನನ್ನಲ್ಲಿದ್ದ 1000 ಮ್ಯಾಜಿಕ್ ಕಿಟ್​ಗಳು ಖಾಲಿ. ಕೈತುಂಬ ಲಾಭ. ನನಗೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿ ಇತ್ತು. ಅದೃಷ್ಟ ಅಂದ್ರೆ ಇದೇನೇ ಅಂತ ಅಂದ್ಕೊಂಡೆ. ತಕ್ಷಣ ಒಂದು ಕಂಟೇನರ್ ಅಂದ್ರೆ ಸುಮಾರು 20 ಲಕ್ಷ ರೂಪಾಯಿಗಳ ಕಿಟ್​ಗಳನ್ನು ಕಳುಹಿಸುವಂತೆ ನನ್ನ ಮ್ಯಾನೇಜರ್​ಗೆ ಫೋನ್ ಮಾಡಿದೆ. ಸಹಾಯಕ ರಾಜ್​ನನ್ನು ಅಮೆರಿಕಕ್ಕೆ ಕಳುಹಿಸಲು ತಿಳಿಸಿದೆ. ಆತ -ಠಿ; 50 ಸಾವಿರ ಖರ್ಚು ಮಾಡಿ ಸ್ವಲ್ಪ ಮ್ಯಾಜಿಕ್ ಕಿಟ್​ಗಳೊಂದಿಗೆ ಬಂದು ಸೇರಿದ.

ಇಷ್ಟಾಗುವಾಗ ಐದು ದಿನಗಳು ಕಳೆದವು. ವ್ಯಾಪಾರವನ್ನು ಮುಂದುವರಿಸಲು ಲೈಸೆನ್ಸನ್ನು ನವೀಕರಿಸಬೇಕಾಗಿತ್ತು. ಈ ಸಲ ನನ್ನ ಪಾಸ್​ಪೋರ್ಟ್ ತಪಾಸಣೆ ಮಾಡಿದ ಅಧಿಕಾರಿ ಲೈಸೆನ್ಸ್ ಕೊಡಲು ಆಗೋದಿಲ್ಲ ಅಂದ. ‘ಒಂದು ವಾರದ ಲೈಸೆನ್ಸ್ ಕೊಟ್ಟಿದ್ದಾರಲ್ಲ’ ಎಂದಾಗ, ‘ಯಾವನೋ ಮೂರ್ಖ ಕೊಟ್ಟಿರಬಹುದು’ ಎಂದು ಲೈಸೆನ್ಸನ್ನೇ ಹರಿದು ಬುಟ್ಟಿಗೆ ಹಾಕಿದ. ನನ್ನ ಗೋಳಿಗೆ ಆತ ಕ್ಯಾರೇ ಅಂದಿಲ್ಲ. ನಿರಾಶನಾಗಿ ರೂಮಿಗೆ ವಾಪಸ್ ಬಂದೆ. ರಾತ್ರಿ ನಿದ್ರೆ ಬರ್ಲಿಲ್ಲ. ಬರೀ ಯೋಚ್ನೆ.

ಪ್ರಿಯ ಓದುಗರೆ, ಈ ಪರಿಸ್ಥಿತಿಯಲ್ಲಿ ನೀವಿದ್ದಿದ್ರೆ ಏನು ಮಾಡ್ತಿದ್ರಿ? ಲಕ್ಷಾಂತರ ರೂಪಾಯಿ ತೊಡಗಿಸಿ ಆಗಿದೆ, ಹಡಗಿನಲ್ಲಿ ಮಾಲು ಬರುತ್ತಾ ಇದೆ. ತೀರಾ ಸಂದಿಗ್ಧ ಸ್ಥಿತಿ. ಹಾಂ, ನಡುರಾತ್ರೀಲಿ ಒಂದು ಸೂಪರ್ ಐಡಿಯಾ ಬಂತು. ಒಂದು ವಾರದ ಲೈಸೆನ್ಸ್ ಸಿಕ್ಕಿದ್ದು ಒಬ್ಬನ ಮೂರ್ಖತನದಿಂದ ಎಂದಾದ್ರೆ ಇನ್ನೊಬ್ಬ ಮೂರ್ಖ ಅದನ್ನು ಯಾಕೆ ನವೀಕರಿಸ್ಬಾರ್ದು? ಎಂಬ ಪ್ರಶ್ನೆ ಎದ್ದಿತು. ಬೆಳಗ್ಗೆ ಪುನಃ ಅಪ್ಲಿಕೇಶನ್​ನೊಂದಿಗೆ ಹೋದೆ. ಒಟ್ಟು 6 ಕೌಂಟರ್​ಗಳಿದ್ವು. ಐದು ಕಡೆ ಅದು ತಿರಸ್ಕರಿಸಲ್ಪಟ್ಟಿತು. 6ನೇ ಕೌಂಟರ್​ನವನು ಮೇಲಧಿಕಾರಿಗಳಿಗೆ ಈ ವಿಷಯ ತಿಳಿಸಲು ಹೇಳಿದ. ಮೇಲಧಿಕಾರಿಯು ‘ಈ ವೀಸಾವನ್ನು ಇಂಡಿಯಾದಲ್ಲೇ ಬದಲಾಯಿಸ್ಬೇಕು’ ಅಂದ್ರು. ಅಂದೂ ವಾಪಸ್ಸಾದೆ. ಆದರೆ ಪ್ರಯತ್ನ ಮುಂದುವರಿಸಿದೆ. ಮರುದಿನ ಶಿಫ್ಟ್ ಬದಲಾಗೋದಿತ್ತು. ಮೊದಲ ದಿನದ ಆಫೀಸರ್​ಗಳಾರೂ ಇರ್ಲಿಲ್ಲ. ಮತ್ತೆ ಹೋದೆ. 3 ಕೌಂಟರ್​ಗಳಲ್ಲಿ ಸ್ವೀಕಾರ ಆಗದಿದ್ರೂ 4ನೇ ಕೌಂಟರ್​ನಲ್ಲಿದ್ದ ಒಬ್ಬ ಅಧಿಕಾರಿ ನನ್ನ ಅಪ್ಲಿಕೇಶನ್ ತಗೊಂಡ. ‘ಕಾನೂನು ರೀತ್ಯಾ ನಿಮಗೆ ಲೈಸೆನ್ಸ್ ನೀಡೋಕಾಗಲ್ಲ. ಆದರೆ ನಾನು ನಿಮ್ಮ ಕಿಟ್ ಖರೀದಿಸಿದ್ದೇನೆ. ತುಂಬ ಚೆನ್ನಾಗಿವೆ, ನನ್ನ ಮಗ ತುಂಬ ಇಷ್ಟ ಪಟ್ಟಿದ್ದಾನೆ. ನಿಮ್ಮ ಬೇರೆ ಕಿಟ್ಟುಗಳು ಬೇಕು. ಅಲ್ಲದೆ ನಿಮ್ಮ ವ್ಯಾಪಾರದಿಂದ ಅಮೆರಿಕನ್ನರಿಗೇನೂ ಬಾಧೆ ಇಲ್ಲ. ನೀವು ವ್ಯಾಪಾರ ಮುಂದುವರಿಸಿ’, ಎಂದು ಹೊಗಳಿ ಉತ್ತೇಜಿಸಿ, ಮೂರು ತಿಂಗಳಿಗೆ ಲೈಸೆನ್ಸನ್ನು ಕೊಟ್ಟ.

ಅಂದು ಆ ಪುಣ್ಯಾತ್ಮ ಮಾಡಿದ ದೊಡ್ಡ ಉಪಕಾರ ನನ್ನ ವ್ಯಾಪಾರದಲ್ಲೊಂದು ಬಹುದೊಡ್ಡ ‘ಟರ್ನಿಂಗ್ ಪಾಯಿಂಟ್’. ನಂತರ ನನ್ನ ವ್ಯಾಪಾರದ ಬಿರುಸನ್ನು ಕಂಡ ಅಲ್ಲಿಯ ವ್ಯಾಪಾರಿಯೊಬ್ಬ ಮಾರಾಟದ ಹಕ್ಕನ್ನು ನನ್ನಿಂದ ತಗೊಂಡು ಎರಡು ಕಂಟೇನರ್​ಗಳಷ್ಟು ಕಿಟ್​ಗಳಿಗೆ ಆರ್ಡರ್ ಮಾಡಿದ. ಆ ದಿನದಿಂದ ಆತನಿಗೆ ಕಿಟ್​ಗಳನ್ನು ಎಕ್ಸ್​ಪೋರ್ಟ್ ಮಾಡುತ್ತಿದ್ದೇನೆ. ಒಂದು ವೇಳೆ ನಾನು ಸೋತು ಬರುತ್ತಿದ್ದಲ್ಲಿ ವ್ಯಾಪಾರದಲ್ಲಿ ತಲೆ ಎತ್ತಲು ಆಗುತ್ತಿರಲಿಲ್ಲ. ಆದ್ದರಿಂದ ಎಷ್ಟೇ ಕಷ್ಟನಷ್ಟಗಳು ಬಂದರೂ ಎದೆಗುಂದದೆ ಜಾಣ್ಮೆಯಿಂದ ವರ್ತಿಸಿದಲ್ಲಿ ಗೆಲುವು ಅಂದರೆ ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ಅದೃಷ್ಟ ನಿಮ್ಮದಾಗುತ್ತದೆ.

ಜೀವನದಲ್ಲಿ ಎಲ್ಲ ಕಡೆ ಗೆಲ್ಲಲೇಬೇಕೆಂದಿಲ್ಲ. ಸೋಲು, ಗೆಲುವು ಇದ್ದದ್ದೇ. ಸೋಲೇ ಗೆಲುವಿನ ಮೂಲ ಎಂಬ ಮಾತಿದೆಯಲ್ಲ. ಸೋತಾಗ ನಿರಾಶರಾಗದೆ ಪ್ರಯತ್ನ ಮುಂದುವರಿಸಿ. ಸೋತು ಗೆದ್ದರೆ ನಮ್ಮ ಸ್ಥಾನ ಭದ್ರ, ಗೆದ್ದು ಸೋತರೆ ನಮ್ಮ ಜೀವನ ಛಿದ್ರ ಛಿದ್ರ. ನಮ್ಮ ಸೋಲಿಗೆ ನಾವೇ ಕಾರಣರಾಗಿರುತ್ತೇವೆ. ಹಾಗಾಗಿ ಬೇರೆಯವರ ಮೇಲೆ ತಪ್ಪನ್ನು ಹೊರಿಸಬೇಡಿ, ಕಾರಣ ಹುಡುಕಿ ಮರಳಿ, ಮರಳಿ ಪ್ರಯತ್ನಿಸಿ. ಗೆಲುವು ನಿಮ್ಮದಾಗುತ್ತದೆ.

ಮುಗಿದ ಮೇಲೆ ಮಾತಾಡಬಾರದು: ಒಂದು ಡೀಲ್ ಇರಬಹುದು, ಒಂದು ವಾದ ಇರಬಹುದು. ಎದುರುಗಡೆಯವರು ಒಪ್ಪಿಕೊಂಡ ಮೇಲೆ ಏನೂ ಹೇಳಲು ಹೋಗಬಾರದು. ಒಬ್ಬ ಬಟ್ಟೆ ಮಾರಾಟ ಮಾಡುತ್ತಿದ್ದ. ಅದರ ಎಲ್ಲ ಗುಣಗಾನ ಕೇಳಿದ ಗ್ರಾಹಕ, ‘ಪ್ರತಿ ವಾರ ಸಾವಿರ ಮೀಟರ್ ಬಟ್ಟೆ ಬೇಕು’ ಎಂದ. ವ್ಯಾಪಾರದ ಪ್ರಕ್ರಿಯೆ ಮುಕ್ತಾಯಕ್ಕೆ ಬಂದಾಗ ಆ ವ್ಯಾಪಾರಿ ಅತ್ಯುತ್ಸಾಹದಲ್ಲಿ, ‘ಈ ಬಟ್ಟೆ ಬೆಂಕಿಗೆ ಹಾಕಿದರೂ ಸುಡುವುದಿಲ್ಲ’ ಎಂದುಬಿಟ್ಟ. ಆಗ ಗಿರಾಕಿ, ‘ಅಯ್ಯಯ್ಯೋ, ಬೆಂಕಿಗೆ ಹಾಕಿದರೆ ಸುಡದೆ ಇರುವ ಬಟ್ಟೆ ನನ್ನ ಕೆಲಸಕ್ಕೆ ಬರುವುದಿಲ್ಲ’ ಎಂದು ಹೇಳಿ ಆರ್ಡರನ್ನು ರದ್ದುಗೊಳಿಸಿದ. ಗ್ರಾಹಕ ವ್ಯಾಪಾರ ಮುಗಿಸಿದ ನಂತರ ಅದರ ಬಗ್ಗೆ ಮತ್ತೆ ಹೊಗಳುವ ಅಗತ್ಯವೇ ಇರಲಿಲ್ಲ. ಹಾಗೆಯೇ ರಸ್ತೆಯಲ್ಲಿ ಆಗುವ ಬಹಳಷ್ಟು ಹೊಡೆದಾಟ, ಗಲಾಟೆಗಳಿಗೆ ಕಾರಣ ಮಾತು ಮುಗಿದ ಮೇಲೂ ಮಾತನಾಡೋದು. ‘ಹೋಗ್ರಪ್ಪಾ, ಮುಗಿದು ಹೋಯ್ತಲ್ಲಾ’ ಎಂದು ಇಬ್ಬರನ್ನೂ ದೂರ ಮಾಡಿದಾಗ, ಹೋಗುತ್ತಿದ್ದವನು ‘ಮಗನೇ ನನ್ ಕೈಗೆ ಸಿಗು, ನಿಂಗೇನು ಮಾಡ್ತೀನಿ ನೋಡು’ ಅಂದಾಗ ಮತ್ತೊಬ್ಬನಿಗೆ ಕೋಪ ಉಕ್ಕೇರಿ ಸಿಕ್ಕಿದ್ದರಲ್ಲಿ ಹೊಡೆದು ಸಾಯಿಸಿರೋದನ್ನು ನಾವು ನೋಡಿದ್ದೇವೆ. ‘ಹೋಗ್ಲಿ ಬಿಡು. ಅವನಿಗಾದ ನಷ್ಟಕ್ಕೆ ಒಂದಿನ್ನೂರು ರೂಪಾಯಿ ಕೊಟ್ಟು ಹೋಗು’ ಅಂದಾಗ ಕೊಟ್ಟು ಸುಮ್ಮನೆ ಹೋಗುವುದು ಬಿಟ್ಟು ಮತ್ತೂ ಏನೋ ಮಾತಾಡಲು ಹೋಗಿ ಅದು ಬಗೆಹರಿಸಲಾಗದಷ್ಟು ವಿಕೋಪಕ್ಕೆ ತಿರುಗುವುದೂ ಇದೆ.

ನಮ್ಮ ಅಜ್ಜ ಗೋಪಾಲ ರಾವ್. ಅವರ ತಮ್ಮ ಅಚ್ಚಿ ಅಂತ, ಕೋಟ್ಯಧೀಶ. ಆದರೆ ಮಕ್ಕಳಿಲ್ಲ. ನಮ್ಮ ಅಜ್ಜ ಬಡವರು. ಅವರಿಗೆ ನಾಲ್ಕು ಮಕ್ಕಳು. ಅವರಿಬ್ಬರೂ ಯಾವುದೋ ಕಾರಣಕ್ಕೆ ಮಾತು ಬಿಟ್ಟಿದ್ದರು. ಬಹಳ ವರ್ಷಗಳಾದ ನಂತರ ಯಾವುದೋ ಜಾತ್ರೆಯಲ್ಲಿ ಇಬ್ಬರೂ ಭೇಟಿಯಾದರು. ಬಿಯರ್ ಕುಡಿಯುತ್ತ, ಇಬ್ಬರೂ ಹಳೆಯದನ್ನೆಲ್ಲ ನೆನಪಿಸಿಕೊಂಡು ಇಷ್ಟು ವರ್ಷ ಮಾತನಾಡದೆ ಇರುವುದಕ್ಕಾಗಿ ಬೇಜಾರು ಪಟ್ಟುಕೊಂಡರು. ‘ನನ್ನ ಆಸ್ತಿಯನ್ನು ನಿನ್ನ ಮಕ್ಕಳಿಗೆ ಕೊಟ್ಟು ಬಿಡುತ್ತೇನೆ’ ಎಂದರು ಅಚ್ಚಿ. ಅನ್ಯೋನ್ಯ ಮಾತುಕತೆ ಮುಕ್ತಾಯದ ಹಂತಕ್ಕೆ ಬಂದಾಗ ನಮ್ಮಜ್ಜ, ‘ನಾವು ಇಷ್ಟು ವರ್ಷ ಮಾತನಾಡದೇ ಇರುವುದಕ್ಕೆ ಕಾರಣ ಏನು?’ ಅಂತ ಕೇಳಿದರು. ಅದಕ್ಕೆ ಅಚ್ಚಿ, ‘ನೀನವತ್ತು ಸತ್ತರೂ ನಾ ನಿನ್ನ ಮುಖ ನೋಡುವುದಿಲ್ಲ ಎಂದಿದ್ದೆ’ ಅಂದರು. ‘ಹಾಗೆ ನಾನು ಹೇಳಿರಲು ಸಾಧ್ಯವೇ ಇಲ್ಲ’ ಎಂದು ನನ್ನಜ್ಜ ಹೇಳಿದರು. ಆಗ ಅಚ್ಚಿ ‘ನನಗೆ ಸರಿಯಾಗಿ ನೆನಪಿದೆ. ನೀನು ಹಾಗೇ ಹೇಳಿದ್ದು’ ಎಂದೇ ಸಾಧಿಸಿದರು. ‘ಹೌದಾ, ಹಾಗೆ ಹೇಳಿದ್ದು ನಿಜವಾಗಿದ್ದರೆ ನಾನು ಇನ್ನು ಮುಂದೆ ನಿನ್ನ ಮುಖ ನೋಡುವುದಿಲ್ಲ’ ಎಂದು ಹೇಳಿ ನಮ್ಮಜ್ಜ ಬಂದರು. ಸಿಗುತ್ತಿದ್ದ ಆಸ್ತಿಯನ್ನೂ ಅನವಶ್ಯಕ ವಾಗ್ವಾದದಿಂದಾಗಿ ಕಳೆದುಕೊಂಡರು. ನಮ್ಮ ಅಪ್ಪ ಹಾಗೂ ಅವರ ಅಣ್ಣ-ತಮ್ಮಂದಿರು ಜೀವನದಲ್ಲಿ ಎಷ್ಟೆಷ್ಟೋ ಕಷ್ಟ ಅನುಭವಿಸಿದರು. ಇದನ್ನೆಲ್ಲ ಯಾಕೆ ಹೇಳಿದೇನೆಂದರೆ ಮುಗಿದ ಮೇಲೆ ಮಾತಾಡಿ ವ್ಯವಹಾರ ಕೆಡಿಸಿಕೊಳ್ಳಬಾರದು.

ಕೊನೆ ಹನಿ: ಒಬ್ಬಾತ-‘‘ಅಲ್ಲಯ್ಯಾ, ‘ಹಣ ಮಾಡಲು ನೂರು ಉಪಾಯಗಳು’ ಅಂತ ಪುಸ್ತಕ ಬರೆದಿದ್ದೀ, ನೋಡಿದ್ರೆ ಈಗ ಭಿಕ್ಷೆ ಬೇಡ್ತಿದ್ದಿ. ನಾಚಿಕೆ ಆಗೋಲ್ವಾ ನಿಂಗೆ?’

ಭಿಕ್ಷುಕ: ‘ಸ್ವಾಮಿ, ಇದು ಕೂಡ ಆ ನೂರು ಉಪಾಯಗಳಲ್ಲೊಂದು ಉಪಾಯ. ಬೇಕಾದ್ರೆ ಮಾಡಿ ನೋಡಿ’ ಎಂದ.

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net