ಫೋರ್ಬ್ಸ್ ಪಟ್ಟಿ ಸೇರಿದ ಹಾಫ್ ಗ್ಲಾಸ್ ಗರ್ವಿತಾ

Half Glass
Published on

ಒಮ್ಮೆ ಅತಿವೃಷ್ಟಿಯಾದರೆ ಇನ್ನೊಮ್ಮೆ ಅನಾವೃಷ್ಟಿ. ಈಗ ದೊಡ್ಡ ಸಮಸ್ಯೆಯಾಗಿರುವ ನೀರಿನ ನಿಜವಾದ ಬೆಲೆ ನಿಜಕ್ಕೂ ತಿಳಿಯುವುದು ನೀರಿಲ್ಲದೆ ಪರದಾಡುವ ಸಮಯದಲ್ಲೇ. ನೀರಿನ ಸಂರಕ್ಷಣೆ ಮಾಡಬೇಕೆಂದು ಅದೆಷ್ಟೇ ಜನರು ಹೇಳಿದರೂ ಅದನ್ನು ನಿಜರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅಂಥವರಲ್ಲಿ ಒಬ್ಬರು ಬೆಂಗಳೂರಿನ ಗರ್ವಿತಾ ಗುಲ್ಹಾಟಿ.

ನೀವು ಹೋಟೆಲ್​ಗೆ ಹೋದಾಗ ಮೊದಲು ನಿಮ್ಮ ಟೇಬಲ್​ಗೆ ಬರುವುದು ಗಾಜಿನ ಲೋಟ ಹಾಗೂ ಅದರ ತುಂಬ ನೀರು. ಊಟ ಮಾಡುತ್ತಾ ಕುಳಿತಾಗ ಲೋಟದ ನೀರು ಖಾಲಿಯಾಗದಂತೆ ನೋಡಿಕೊಳ್ಳುವುದಕ್ಕೂ ವೇಟರ್​ಗೆ ಟ್ರೖೆನಿಂಗ್ ನೀಡಲಾಗಿರುತ್ತದೆ. ಊಟ ಮುಗಿದ ಮೇಲೆ ಒಂದೆರಡು ಸಿಪ್ ನೀರು ಕುಡಿದು, ಆ ಲೋಟದ ಮುಕ್ಕಾಲು ಭಾಗ ನೀರನ್ನು ಹಾಗೇ ಬಿಟ್ಟು ಹೊರಟುಬಿಡುತ್ತೇವೆ. ಎಂಜಲಾದ ನೀರು ಕೊನೆಗೆ ಸೇರುವುದು ಚರಂಡಿಗೆ. ಆ ನೀರು ಆ ಕ್ಷಣಕ್ಕೆ ದೊಡ್ಡ ವಿಚಾರ ಎನಿಸುವುದೇ ಇಲ್ಲ. ಆದರೆ ಪೂರ್ತಿ ವರ್ಷದ ಲೆಕ್ಕ ಹಾಕಿದರೆ ಈ ರೀತಿ ಹೋಟೆಲ್​ಗಳಲ್ಲಿ ವೇಸ್ಟ್ ಆಗುತ್ತಿರುವ ನೀರಿನ ಪ್ರಮಾಣ ಕೋಟ್ಯಂತರ ಲೀಟರ್! ಈ ರೀತಿ ಕಣ್ಣಿಗೆ ಕಂಡರೂ ಕಾಣಿಸದಂತಹ ನೀರಿನ ಪೋಲಿನ ಬಗ್ಗೆ ಗಮನ ಹರಿಸಿದ ಬೆಂಗಳೂರಿನ ಏಕೈಕ ಯುವತಿ ಗರ್ವಿತಾ ಗುಲ್ಹಾಟಿ. ಮೂಲತಃ ಮಧ್ಯಪ್ರದೇಶದವಳಾಗಿರುವ ಗರ್ವಿತಾ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಪಿಇಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ತನ್ನ 15ನೇ ವಯಸ್ಸಿನಲ್ಲೇ ಆಕೆ ಹೋಟೆಲ್​ಗಳಲ್ಲಿ ನೀರು ಪೋಲಾಗುತ್ತಿರುವುದನ್ನು ಗಮನಿಸಿದಳು. ಅದನ್ನು ತಡೆಗಟ್ಟಲು ಏನು ಮಾಡಬಹುದೆಂದು ಯೋಚಿಸಿ, ಮೊದಲು ರೆಸ್ಟೋರೆಂಟ್​ಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಮತ್ತು ಸಿಬ್ಬಂದಿಯಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದಳು. ಆದರೆ ಜನ ಆಕೆಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲವಂತೆ. ಹೀಗೇ ಕುಳಿತರೆ ಏನೂ ಆಗದು ಎಂದು ಧೈರ್ಯ ತಂದುಕೊಂಡ ಆಕೆ ತನ್ನದೇ ಆದ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡಳು. ಅದಕ್ಕೆ ‘ವೈ ವೇಸ್ಟ್’ ಎನ್ನುವ ಹೆಸರು ಕೊಟ್ಟಳು. ರೆಸ್ಟೋರೆಂಟ್​ಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದಳು. ರೆಸ್ಟೋರೆಂಟ್, ಹೋಟೆಲ್​ಗಳಲ್ಲಿ ಗ್ಲಾಸ್ ಪೂರ್ತಿ ನೀರು ತುಂಬಿಸಿಡುವ ಬದಲು, ಅರ್ಧ ಗ್ಲಾಸ್ ತುಂಬಿಸಿಡಿ. ಗ್ರಾಹಕರು ಬಯಸಿದರೆ ಮಾತ್ರ ಮತ್ತೆ ನೀರು ತುಂಬಿಸಿ ಎಂದು ಮಾಲೀಕರಿಗೆ ಮನವರಿಕೆ ಮಾಡಿಕೊಡಲು ಆರಂಭಿಸಿದಳು. ಈ ಹಾಫ್ ಗ್ಲಾಸ್ ಅಭಿಯಾನ ಜನರಿಗೆ ಇಷ್ಟವಾಗತೊಡಗಿತು. ಕೆಲವೇ ತಿಂಗಳುಗಳಲ್ಲಿ ಆಕೆಯ ತಂಡಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿ, ಜನರು ಹೋಟೆಲ್ ಟೇಬಲ್ ಮೇಲಿನ ನೀರಿನ ಕಡೆಯೂ ಗಮನ ಕೊಡಲಾರಂಭಿಸಿ ದರು. 2015ರಲ್ಲಿ ಆರಂಭವಾದ ಗರ್ವಿತಾಳ ‘ವೈ ವೇಸ್ಟ್’ ಆಲೋಚನೆ ಇದೀಗ ದೇಶ ವಿದೇಶ ಗಳಲ್ಲೂ ಹರಡಲಾರಂಭಿಸಿದೆ.

8 ದೇಶಗಳಲ್ಲಿ ಜಾಗೃತಿ

ವೈ ವೇಸ್ಟ್ ಎನ್​ಜಿಒ ತನ್ನ ಕೆಲಸವನ್ನು ಬೆಂಗಳೂರಿಗೆ ಮಾತ್ರ ಸೀಮಿತವಾಗಿಸಿಕೊಂಡಿಲ್ಲ. ಭಾರತ ಸೇರಿ ಒಟ್ಟು 8 ದೇಶಗಳಲ್ಲಿ ಈ ಎನ್​ಜಿಒ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 1 ಕೋಟಿಗೂ ಅಧಿಕ ಯುವಕರಲ್ಲಿ ಅರಿವು ಮೂಡಿಸಲಾಗಿದೆ. ಸುಮಾರು 5 ಲಕ್ಷಕ್ಕೂ ಅಧಿಕ ರೆಸ್ಟೋರೆಂಟ್​ಗಳು ಗರ್ವಿತಾಳ ಹಾಫ್ ಗ್ಲಾಸ್ ನಿಯಮವನ್ನು ಪಾಲಿಸಲಾರಂಭಿಸಿವೆ. ಲಾಕ್​ಡೌನ್​ನಲ್ಲೂ ವೆಬಿನಾರ್, ಆನ್​ಲೈನ್ ರೈಟಿಂಗ್​ವುೂಲಕ ಜನರನ್ನು ತಲುಪಿದೆ. ಇದೇ ವೇಳೆ ಆನ್​ಲೈನ್ ಬುಕ್ ಒಂದನ್ನೂ ಪ್ರಕಟಿಸಲಾಗಿದೆ. ಹಾಗೆಯೇ ವೈ ವೇಸ್ಟ್ ಹೆಸರಿನಲ್ಲೊಂದು ಆಪ್ ಮಾಡಿಕೊಂಡು, ಜನರು ಬಳಸುತ್ತಿರುವ ಹಾಗೂ ಪೋಲು ಮಾಡುತ್ತಿರುವ ನೀರಿನ ಪ್ರಮಾಣವನ್ನು ಅವರಿಗೇ ಲೆಕ್ಕ ಹಾಕಿ ಕೊಡುವ ಕೆಲಸ ಮಾಡಲಾಗುತ್ತಿದೆ.

ಎನ್​ಆರ್​ಎಐ ಸಹಯೋಗ

ಗರ್ವಿತಾಳ ಜಾಗೃತಿ ಅಭಿಯಾನ ಹೆಚ್ಚು ಸುದ್ದಿಯಾಗುತ್ತಿದ್ದಂತೆಯೇ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್​ಆರ್​ಎಐ) ಕೂಡ ವೈ ವೇಸ್ಟ್​ಗೆ ಸಹಕಾರ ಘೋಷಿಸಿದೆ. ಯುವಕರ ಜತೆ ಮಕ್ಕಳಿಗೂ ನೀರಿನ ಬಗ್ಗೆ ಅರಿವು ಮೂಡಿಸುವ ಪ್ರಯುಕ್ತ ಈ ಎನ್​ಜಿಒ ಮತ್ತೊಂದು ಕಾರ್ಯಕ್ಕೆ ಕೈ ಹಾಕಲು ಸಿದ್ಧವಾಗಿದೆ. ಕಥೆಯ ರೂಪದಲ್ಲೇ ನೀರಿನ ಬಗ್ಗೆ ಜಾಗೃತಿ ಅಭಿಯಾನವನ್ನು ಆರಂಭಿಸಲು ಯುನಿಸೆಫ್​ಗೆ ಮನವಿ ಮಾಡಲಾಗಿದೆ. ಅದಕ್ಕೆಂದು ಕೆಲವು ಜಾಗೃತಿ ಕಥೆ ಹೇಳುವ ವಿಡಿಯೋ ತುಣುಕುಗಳನ್ನೂ ಕಳುಹಿಸಿ ಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net