

| ನವೀನ್ ಬಿಲ್ಗುಣಿ ಶಿವಮೊಗ್ಗ
ಕಳೆದ ಎಂಟು ಹತ್ತು ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದ ರಾಜ್ಯದ ವಸತಿ ಶಾಲೆಗಳ ಸಾವಿರಾರು ಅತಿಥಿ ಶಿಕ್ಷಕರ ಬದುಕು ಅತಂತ್ರವಾಗಿದೆ. ಸೇವೆ ಕಾಯಂಗೊಳಿಸುವ ಬದಲು ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿರುವುದರಿಂದ ಕರೊನಾ ಸಂಕಷ್ಟದ ನಡುವೆ ಶಿಕ್ಷಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಸಮಾಜಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ 832 ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 2,000ಕ್ಕೂ ಅಧಿಕ ಅತಿಥಿ ಶಿಕ್ಷಕರನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. 8-10 ವರ್ಷಗಳಿಂದ 10,000 ರೂ. ಮಾಸಿಕ ವೇತನಕ್ಕೆ ದುಡಿದ ಶಿಕ್ಷಕರನ್ನು ಕಾಯಂಗೊಳಿಸುವ ಬದಲು 500ಕ್ಕೂ ಅಧಿಕ ಶಿಕ್ಷಕರನ್ನು ಕೆಲಸದಿಂದಲೇ ತೆಗೆದುಹಾಕಿದ್ದರಿಂದ ಅತಿಥಿ ಶಿಕ್ಷಕರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.
ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ: ವೇತನ ಪರಿಷ್ಕರಣೆ, ನೇಮಕಾತಿ ಕಾಯಂ ಹಾಗೂ ಅದೇ ಶಾಲೆಗಳಲ್ಲಿ ಕೆಲಸ ಮುಂದುವರಿಸುವ ಕುರಿತಂತೆ 136 ಅತಿಥಿ ಶಿಕ್ಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಆರು ವಾರಗಳಲ್ಲೇ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಸೇವೆ ಕಾಯಂ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಹೈಕೋರ್ಟ್ 2019ರ ಜ.18ರಂದು ಮಧ್ಯಂತರ ಆದೇಶ ನೀಡಿತ್ತು. ಹೈಕೋರ್ಟ್ ಆದೇಶಕ್ಕೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಕಿಮ್ಮತ್ತು ನೀಡಿಲ್ಲ.
ಮುಂದಿನ ತಿಂಗಳು ಸಭೆ ಭರವಸೆ: ಚಳಿಗಾಲದ ಅಧಿವೇಶನದಲ್ಲಿ 3 ದಿನ ವಸತಿ ಶಾಲೆಗಳ ಸಾವಿರಾರು ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದು ಎಂಎಲ್ಸಿಗಳಾದ ಪುಟ್ಟಣ್ಣ, ಶ್ರೀಕಂಠೇಗೌಡ, ಬೋಜೇಗೌಡ, ಶಶಿಲ್ ನಮೋಶಿ ಮುಂದಿನ ತಿಂಗಳು ಸಚಿವರೊಂದಿಗೆ ರ್ಚಚಿಸಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅತಿಥಿ ಶಿಕ್ಷಕರು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನೂ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದು ಸಮಸ್ಯೆ ಆಲಿಸುವ ಭರವಸೆ ನೀಡಿದ್ದಾರೆ ಎಂದು ಕಡೂರಿನ ಅತಿಥಿ ಶಿಕ್ಷಕ ಹನುಮಂತೇಗೌಡ ತಿಳಿಸಿದರು.
ಶ್ರೀರಾಮುಲು ಭರವಸೆಯೂ ಹುಸಿ: 2011-12ರಲ್ಲೇ ಸರ್ಕಾರ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅಂದಿನ 3 ಸಾವಿರ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಿತ್ತು. ಹೈಕೋರ್ಟ್ ಆದೇಶದ ಬಗ್ಗೆ ಎಂಎಲ್ಸಿ ಅರುಣ್ ಶಹಾಪೂರ ಅವರು ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸೇವೆ ಕಾಯಂಗೊಳಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕಡೂರಿನ ಇಂದಿರಾಗಾಂಧಿ ವಸತಿ ಶಾಲೆ ಅತಿಥಿ ಶಿಕ್ಷಕ ಕೆ.ಹನುಮಂತೇಗೌಡ.
ಸ್ಪಂದಿಸದ ಡಿಸಿಒ, ಪ್ರಾಚಾರ್ಯರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ಕಾರ್ಯನಿರ್ವಾಹಕ ನಿರ್ದೇಶನಾಲಯಕ್ಕೆ ವಸತಿ ಶಾಲೆಗಳ ಶಿಕ್ಷಕರ ಮುಂದುವರಿಕೆ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು. ರಾಜ್ಯ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ, ಎಂಎಲ್ಸಿಯೂ ಆಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರು ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವುದು ಹಾಗೂ ಅದೇ ಶಾಲೆಗಳಲ್ಲಿ ಮುಂದುವರಿಸುವ ಬಗ್ಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘಕ್ಕೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಜಿಲ್ಲಾ ಅಧಿಕಾರಿಗಳು ಹಾಗೂ ವಸತಿ ಶಾಲೆಗಳ ಪ್ರಾಚಾರ್ಯರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಶಿಕ್ಷಕರ ಅಳಲು.
ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಕರ ಬದುಕು ಮೂರಾಬಟ್ಟೆಯಾಗಿದೆ. ಹೈಕೋರ್ಟ್ ಆದೇಶವಿದ್ದರೂ ಇಲಾಖೆ ಪಾಲನೆ ಮಾಡುತ್ತಿಲ್ಲ. ಮತ್ತೊಂದೆಡೆ ಶಿಕ್ಷಕರನ್ನು ಮುಂದುವರಿಸುವ ಬದಲು ಮನೆಗೆ ಕಳಿಸುತ್ತಿದೆ. ಇದರಿಂದ ಬದುಕು ನಡೆಸುವುದು ಕಷ್ಟಕರವಾಗಿದೆ. ಇದೇ ಪರಿಸ್ಥಿತಿ ಮುಂದುವರಿ ದರೆ ಕುಟುಂಬ ಬೀದಿಗೆ ಬೀಳುವುದು ನಿಶ್ಚಿತ.
| ವಿ.ಎಚ್.ಅಜಿತ್ಕುಮಾರ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ಖಜಾಂಚಿ
ವಸತಿ ಶಾಲೆಗಳ ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕುತ್ತಿಲ್ಲ. ಅವರ ಬೇಡಿಕೆಗಳ ಬಗ್ಗೆ ಹೈಕೋರ್ಟ್ ಕೆಲ ಸಲಹೆ-ಸೂಚನೆ ನೀಡಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆ ಈಡೇರಿಸಲಾಗುವುದು. ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಶಿಕ್ಷಕರನ್ನು ಪ್ರತಿನಿಧಿಸುವವರು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ಪದಾಧಿಕಾರಿಗಳ ಸಭೆ ಕರೆದು ರ್ಚಚಿಸಲಾಗá-ವುದು.
| ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ