

ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ನೀವು , ನಿಮ್ಮ ಜಾತಿಯಲ್ಲಿಯೇ ಮದುವೆ ಆಗಿದ್ದರೂ ಸಹ, ನಿಮ್ಮ ತಂದೆ ಅವರು ಸಂಪಾದಿಸಿದ ಆಸ್ತಿಯನ್ನು ನಿಮ್ಮ ಅಕ್ಕನಿಗೆ ಮಾತ್ರ ಕೊಡಬಹುದಿತ್ತು. ನಿಮ್ಮ ತಂದೆ ಅವರ ಸ್ವ ಇಚ್ಛೆಯಿಂದ ನಿಮ್ಮ ಅಕ್ಕನಿಗೆ ಮಾಡಿಕೊಟ್ಟಿರುವ ದಾನಪತ್ರವನ್ನು ರದ್ದು ಮಾಡಲು ಕೇಳಿ ನೀವು ದಾವೆ ಹಾಕಿದರೆ ನಿಮ್ಮ ದಾವೆ ನಿಲ್ಲುವುದಿಲ್ಲ. ನಿಮ್ಮ ತಂದೆ ತೀರಿಕೊಂಡಿದ್ದರೆ, ಅವರು ಬಿಟ್ಟು ಹೋಗಿದ್ದ ಆಸ್ತಿಗಳಲ್ಲಿ, ನಿಮಗೆ , ನಿಮ್ಮ ಅಕ್ಕನಿಗೆ ಮತ್ತು ನಿಮ್ಮ ತಾಯಿಗೆ ಮೂರನೇ ಒಂದು ಭಾಗ ಆಸ್ತಿ ಸಿಗುತ್ತಿತ್ತು. ನೀವು ಬೇರೆಯ ಜಾತಿಯವರನ್ನು ಮದುವೆ ಆಗಿದ್ದರೂ ಆಗ ಮೃತ ಹಿಂದು ಪುರುಷನ ಆಸ್ತಿಯಲ್ಲಿ ನಿಮಗೆ ಸಮಭಾಗವೇ ಬರುತ್ತಿತ್ತು. ಈಗ ಏನೂ ಬರುವುದಿಲ್ಲ. ಕೇಸು ಹಾಕಿ ಪ್ರಯೋಜನವಿಲ್ಲ. ಅವರನ್ನು ಹೋಗಿ ಕೇಳಿಕೊಳ್ಳುವ ಪ್ರಯತ್ನ ಮಾಡಿ ನೋಡಿ.
ನಾನು ಮದುವೆಯಾಗಿ ಎರಡು ತಿಂಗಳಾಗಿದೆ. ನನಗೂ ನನ್ನ ಗಂಡನಿಗೂ ಸರಿಬರುತ್ತಿಲ್ಲ. ನಾನು ಡೈವೋರ್ಸಿಗೆ ಅರ್ಜಿ ಹಾಕಿದರೆ ಎಷ್ಟು ದಿನಗಳಲ್ಲಿ ನನಗೆ ವಿಚ್ಛೇದನ ಸಿಗುತ್ತದೆ. ನನ್ನ ಗಂಡ ಡೈವೋರ್ಸ್ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಾನು ಒಬ್ಬಳೆ ಕೇಳಬಹುದೇ?
ಹಿಂದು ವಿವಾಹ ಕಾಯ್ದೆಯ ಪ್ರಕಾರ ಮದುವೆ ಆದ ಒಂದು ವರ್ಷದ ಒಳಗೆ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಲು ಆಗುವುದಿಲ್ಲ. ನೀವು ಒಂದು ವರ್ಷ ಕಾಯಲೇಬೇಕು. ವಿಶೇಷವಾದ ಸಂದರ್ಭಗಳಲ್ಲಿ, ಅದೂ ನ್ಯಾಯಾಲಯ ಒಪ್ಪಿದಾಗ ಮಾತ್ರ ಒಂದು ವರ್ಷದ ಒಳಗೆ ಪ್ರಕರಣ ದಾಖಲಿಸಬಹುದು. ನಿಮ್ಮ ಪತಿ ವಿಚ್ಛೇದನಕ್ಕೆ ಒಪ್ಪದಿದ್ದರೆ ನೀವು ಒಬ್ಬರೇ ವಿಚ್ಛೇದನದ ಪ್ರಕರಣ ದಾಖಲಿಸಬಹುದು. ನಿಮ್ಮ ಪತಿಗೂ ನೋಟಿಸ್ ಹೋಗುತ್ತದೆ. ಆ ನಂತರ ಇಬ್ಬರ ಕಡೆಯವರ ವಿಚಾರಣೆಯೂ ಆದ ಮೇಲೆ, ನ್ಯಾಯಾಲಯಕ್ಕೆ ನಿಮ್ಮ ಪ್ರಕರಣದಲ್ಲಿ ವಿಚ್ಛೇದನ ಕೊಡಲು ಸೂಕ್ತ ಸನ್ನಿವೇಶಗಳು ಇವೆ ಎಂದು ಅನ್ನಿಸಿದರೆ ಆಗ ಮಾತ್ರ ನಿಮಗೆ ವಿಚ್ಛೇದನ ಸಿಗುತ್ತದೆ. ಇದು ಆಗಲು ಕೆಳಗಿನ ಕೋರ್ಟಿನಲ್ಲಿಯೇ ಒಂದೆರಡು ವರ್ಷ ಆಗಬಹುದು. ನೀವು ಮತ್ತು ನಿಮ್ಮ ಪತಿ ಇಬ್ಬರೂ ಒಪ್ಪಿ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕ್ಕೆ ಪ್ರಕರಣ ದಾಖಲಿಸಿದರೆ, ಆರು ತಿಂಗಳ ನಂತರ ಏಳನೇ ತಿಂಗಳಲ್ಲೇ ನಿಮಗೆ ವಿಚ್ಛೇದನ ಸಿಗಬಹುದು.