ಭಗವತ್ಕೃಪೆ, ಭಗವದನುಗ್ರಹ ಇವೆಲ್ಲ ನಿಜವೇ?

Ramakrishna Paramahamsa
Published on

ಶ್ರೀರಾಮಕೃಷ್ಣರು ಹೇಳಿದಂತೆ ವ್ಯಕ್ತಿ ದುರ್ಬಲನಾದರೂ ಅವನು ಜೀವನದಲ್ಲಿ ಧರ್ಮಬಾಹಿರನಾಗಬಾರದು. ಧರ್ಮಕ್ಕೆ ಬದ್ಧನಾಗಿರಬೇಕು. ಅವನ ಅಸಹಾಯಕತೆಯನ್ನು ಕಂಡ ಜಗನ್ಮಾತೆ ಒಂದು ದಿನ ತಾನೇ ಅವನ ಸಹಾಯಕ್ಕೆ ಧಾವಿಸುವಳು. ಕುಚೇಲ ಕೃಷ್ಣನನ್ನು ತಾನೇ ಏನೂ ಕೇಳದಿದ್ದರೂ ಕೃಷ್ಣ ಅವನ ಕಷ್ಟವನ್ನು ಅರಿಯಲಾರದೇ ಹೋದನೇ? ಅದೇ ಭಗವಂತನ ಮಹತ್ವ.

Hombelaku
ಶ್ರೀರಾಮಕೃಷ್ಣರ ಹತ್ತಿರ ಬರುತ್ತಿದ್ದ ಭಕ್ತರು ಹಲವು ರೀತಿಯ ಸ್ವಭಾವದವರು. ಪ್ರಪಂಚವೇ ಹಾಗೆ! ಭಕ್ತರೇ ಇರಲಿ ಮತ್ತೊಬ್ಬರೇ ಇರಲಿ! ಅವರಲ್ಲೊಬ್ಬ ಅಧರಸೇನ. ಈತ ವೃತ್ತಿಯಿಂದ ಡೆಪ್ಯೂಟಿ ಮ್ಯಾಜಿಸ್ಟ್ರೇಟ್ ಈಗಿನ ಕಾಲದ ಡೆಪ್ಯೂಟಿ ಕಮಿಷನರ್​ನಂತೆ. ಈತ ದಕ್ಷಿಣೇಶ್ವರಕ್ಕೆ ಬರುತ್ತಿದ್ದುದೇನೋ ಹೌದು. ಆದರೆ ಬೇರೆಲ್ಲ ಭಕ್ತರ ಹಾಗೆ ಅಲ್ಲ. ಬಂದು ಶ್ರೀರಾಮಕೃಷ್ಣರ ಶ್ರೀಮುಖದಿಂದ ಬರುವ ನುಡಿಮುತ್ತುಗಳನ್ನು ಮೈಯೆಲ್ಲ ಕಿವಿಯಾಗಿಸಿಕೊಂಡು ಕೇಳಿ ಆನಂದಿಸಿ ಧನ್ಯತಾಭಾವವನ್ನು ಹೊಂದುತ್ತಿದ್ದುದು ಸ್ವಲ್ಪ ಅಪರೂಪವೇ ಎನ್ನಬಹುದು. ಹಾಗಾದರೆ ಬರುತ್ತಿದ್ದುದಾದರೂ ಏತಕ್ಕೆ ಎಂದರೆ ಸ್ವಲ್ಪ ಹೊತ್ತು ಕೇಳಿ ನಂತರ ಅಲ್ಲೇ ಸ್ವಲ್ಪ ದೂರದಲ್ಲಿ ಪವಡಿಸಿ ನಿದ್ರಿಸಿಬಿಡುತ್ತಿದ್ದ. ಅದಕ್ಕೇನಂತೆ? ನಮ್ಮಲ್ಲೂ ಬಹಳ ಜನ ಪ್ರವಚನಕ್ಕೆ ಹೋದವರು ಅದರಲ್ಲೂ ವಯಸ್ಸಾದವರು ಮಾಡುವುದಿಲ್ಲವೇ ಎಂದು ಯಾರಾದರೂ ಭಾವಿಸಿದರೆ ಅಧರಸೇನನ ವೈಶಿಷ್ಟ್ಯವೇ ಬೇರೆ. ಅವನು ಅಲ್ಲಿ ನಿದ್ದೆ ಮಾಡುವುದಕ್ಕಾಗಿ ಒಂದು ಹಾಸಿಗೆಯನ್ನೇ ತಂದು ಇಟ್ಟುಬಿಟ್ಟಿದ್ದ. ಅವನ ಈ ಚಹರೆಯನ್ನು ಕಂಡು ನರೇಂದ್ರಾದಿಗಳು ಕೆಲವೊಮ್ಮೆ ತಮಾಷೆ ಮಾಡಿ ನಗುತ್ತಿದ್ದುದೂ ಉಂಟು. ಆಗೆಲ್ಲ ಶ್ರೀರಾಮಕೃಷ್ಣರು ನಗಬೇಡಿ ; ‘ಅವನಿಗೆ ಕಚೇರಿಯಲ್ಲಿ ತಲೆ ಸಿಡಿಯುವಷ್ಟು ಕೆಲಸ, ಹಲವು ಸಮಸ್ಯೆಗಳು. ಇಲ್ಲಿಯಾದರೂ ಸ್ವಲ್ಪ ಶಾಂತಿ ಪಡೆಯುತ್ತಾನಲ್ಲ ಪಾಪ!’ ಎಂದು ಪ್ರತಿಕ್ರಿಯಿಸುತ್ತಿದ್ದರು. ಶ್ರೀರಾಮಕೃಷ್ಣರಿಗೆ ಪ್ರತಿಯೊಬ್ಬನನ್ನೂ ಅವನವನ ಸ್ಥಾನದಲ್ಲೇ ಕಾಣುವುದು ಸ್ವಭಾವವೇ ಆಗಿಬಿಟ್ಟಿತ್ತು.

ಈ ಅಧರಸೇನ ಒಮ್ಮೆ ಶ್ರೀರಾಮಕೃಷ್ಣರನ್ನು ಕೇಳಿದ, ‘ನೀವು ಇಷ್ಟೆಲ್ಲ ತಪಸ್ಸು ಮಾಡಿ ಏನೇನು ಶಕ್ತಿ ಪಡೆದುಕೊಂಡಿದ್ದೀರಿ?’ ಎಂದು. ರಾಮಕೃಷ್ಣರ ಉತ್ತರವೋ ಬಹು ರೋಚಕ. ‘ನೋಡು! ಬೇರೇನು ಶಕ್ತಿ ಪಡೆದುಕೊಂಡಿದ್ದೇನೋ ಬಿಟ್ಟಿದ್ದೇನೋ ಗೊತ್ತಿಲ್ಲ. ಆದರೆ ಆಫೀಸಿನಲ್ಲಿ ಎಲ್ಲರನ್ನೂ ಕಣ್ಸನ್ನೆಯಲ್ಲೇ ಹೆದರಿಸುವ ಡೆಪ್ಯೂಟಿ ಮ್ಯಾಜಿಸ್ಟ್ರೇಟ್ ನನ್ನ ಹತ್ತಿರ ಬಂದಾಗ ಅವನು ಸುಮ್ಮನೆ ನಿದ್ದೆ ಮಾಡಿಬಿಡುವಂತೆ ಮಾಡಬಲ್ಲೆ ನಾನು’ ಎಂದು.

ಮತ್ತೊಮ್ಮೆ ಅವನು ಕೇಳಿದ ಪ್ರಶ್ನೆ, ‘ಈ ಭಗವತ್ಕೃಪೆ, ಭಗವದನುಗ್ರಹ ಇವೆಲ್ಲ ನಿಜವೇ?’ ಎಂದು. ಈಗಿನ ಕಾಲದ ಬಹಳಷ್ಟು ಜನರಲ್ಲಿ, ನಾಸ್ತಿಕರಿರಲಿ, ಆಸ್ತಿಕರಲ್ಲೂ ಭಗವದ್ಭಕ್ತರಲ್ಲೂ ಆಗಾಗ್ಗೆ ಏಳುವ ಪ್ರಶ್ನೆ ಇದು. ಇದಕ್ಕೆ ಕಾರಣ ಶ್ರದ್ಧೆಯ ಕೊರತೆ. ಶಾಸ್ತ್ರವಾಕ್ಯ ಮತ್ತು ಗುರುವಾಕ್ಯಗಳಲ್ಲಿ ಶ್ರದ್ಧೆ ಇಲ್ಲವಾದರೆ ಈ ರೀತಿಯ ಪ್ರಶ್ನೆಗಳು ಏಳುತ್ತವೆ. ಶ್ರದ್ಧೆ ಬಹಳ ಮುಖ್ಯ. ಶ್ರದ್ಧೆ ಬೇರೆ, ನಂಬಿಕೆ ಬೇರೆ. ಯಾವುದನ್ನು ಈಗಾಗಲೇ ಪ್ರಮಾಣಿಸಿ ನೋಡಿ ಅದರ ಸತ್ಯತೆಯನ್ನು ದೃಢೀಕರಿಸಿದ್ದೇವೆಯೋ ಅದನ್ನು ಇನ್ನು ಮುಂದೆ ಸಂಶಯಿಸದಿರುವುದು ಶ್ರದ್ಧೆ. ಪರೀಕ್ಷೆಯನ್ನೂ ಮಾಡಿಲ್ಲ, ದೃಢೀಕರಣವೂ ಇಲ್ಲ ಆದರೂ ಅದನ್ನು ಸಂಶಯಿಸುವುದಿಲ್ಲ ಎಂದರೆ ಅದು ನಂಬಿಕೆ. ನಂಬಿಕೆಯನ್ನು ಅನುಸರಿಸಿದರೆ ಮೋಸ ಹೋಗುವುದೇ ಜಾಸ್ತಿ. ಪರಮ ಸತ್ಯವಂತರನ್ನು ನಂಬಿದರೆ ಮಾತ್ರ ಅಪಾಯವಿಲ್ಲ.

ಇಂದು ಎಷ್ಟೋ ಧರ್ಮಗ್ರಂಥಗಳಲ್ಲಿ ಹೇಳಿರುವ ವಿಷಯಗಳು ಬಾಲಿಶವಾಗಿವೆ. ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿದರೆ ನುಚ್ಚುನೂರಾಗುತ್ತವೆ. ಅವುಗಳನ್ನೆಲ್ಲ ಆ ಮೂಲ ಬೋಧಕರೇ ಹೇಳಿದ್ದರೆ ಅವರ ಋಜುತ್ವವನ್ನೇ ಶಂಕಿಸಬೇಕಾಗುತ್ತದೆ. ಅವರು ಹೇಳಿಲ್ಲ ಅನ್ನುವುದಾದರೆ ಮೌಲ್ಯಹೀನರಾದ ಅವನ ಅನುಯಾಯಿಗಳು ತಮ್ಮ ಪಟ್ಟಭದ್ರಹಿತಾಸಕ್ತಿಗಳಿಗಾಗಿ ಅವನ ಹೆಸರಲ್ಲಿ ತಾವೇ ಯಾವುದೋ ಕಾಲದಲ್ಲಿ ಸೇರಿಸಿದ್ದಾರೆ ಎಂತಲೇ ಅರ್ಥ. ಭಕ್ತಿಯೋಗ ಮತಾಂಧತೆಯಾಗಿ ಪರಿವರ್ತಿತವಾಗುವುದು ಹೀಗೆಯೇ! ಸನಾತನ ಧರ್ಮವನ್ನು ಸುಮ್ಮ ಸುಮ್ಮನೇ ನಾವೆಲ್ಲ ಹಾಡಿ ಹೊಗಳುವುದಿಲ್ಲ. ಅದು ಭಕ್ತಿಯೋಗದೊಂದಿಗೆ ಜ್ಞಾನಯೋಗವನ್ನೂ, (ಇಲ್ಲಿ ಪ್ರಶ್ನೆಗಳೇ ಮುಖ್ಯ) ಅದರ ಅನುಭವಗಳನ್ನು ದೃಢೀಕರಿಸಲು ರಾಜಯೋಗವನ್ನೂ, ಅದರಿಂದ ಉಂಟಾಗುವ ಶಕ್ತಿಗಳ ಸದ್ಬಳಕೆಗೆ ಕರ್ಮಯೋಗವನ್ನೂ ಜೊತೆಯಾಗಿಯೇ ಸೇರಿಸಿಕೊಂಡು ಸಮಗ್ರ ಆಧ್ಯಾತ್ಮಿಕ ಶಿಸ್ತನ್ನು ನಿರ್ವಿುಸಿರುವುದರಿಂದ ಆಧುನಿಕ ವೈಜ್ಞಾನಿಕ ಲೋಕ ಬೆರಗಾಗುವಷ್ಟರ ಮಟ್ಟಿಗೆ ಸನಾತನ ಧರ್ಮ ಉದ್ಧಾರದ ರಾಜಮಾರ್ಗವಾಗಿ ಬೆಳೆದಿದೆ ; ಬೆಳೆಯುತ್ತಿದೆ. ರಾಷ್ಟ್ರ ರಾಷ್ಟ್ರಗಳಲ್ಲೆಲ್ಲ ಯಾರ ಪ್ರಚಾರವಿಲ್ಲದೆಯೂ ಹರಡುತ್ತಿದೆ. ಅಧರಸೇನನ ಈ ಪ್ರಶ್ನೆಗೆ ಶ್ರೀರಾಮಕೃಷ್ಣರ ಉತ್ತರ ಅದ್ಭುತವಾಗಿತ್ತು.

‘ನೋಡು ಮಗು! ಈ ಪ್ರಪಂಚ ಒಂದು ಕಣ್ಣುಮುಚ್ಚಾಲೆ ಆಟದಂತೆ. ಇಲ್ಲಿ ಆ ಜಗನ್ಮಾತೆಯೇ ಅಜ್ಜಿ. ಈ ಆಟವಾಡುವವರಲ್ಲಿ ಒಬ್ಬ ದುರ್ಬಲ ಹುಡುಗ ಇದ್ದಾನೆ ಅಂತಿಟ್ಟುಕೋ. ಅವನು ವೇಗವಾಗಿ ಓಡಲಾರ. ಆದ್ದರಿಂದ ಮತ್ತೆ ಮತ್ತೆ ಅವನೇ ಸಿಕ್ಕಿಕೊಳ್ಳುತ್ತಾನೆ. ಆದರೆ ಅವನು ಆಟದ ನಿಯಮಗಳನ್ನು ಮುರಿಯುತ್ತಿಲ್ಲ. ನಿಯಮಗಳನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾನೆ. ಇದನ್ನು ಅಜ್ಜಿ ಗಮನಿಸಿದಳು. ಪಾಪ! ಈ ಮಗು ದುರ್ಬಲ! ಎಲ್ಲರೂ ಹೋಗಿ ಅವನನ್ನೇ ಮುಟ್ಟಿಬಿಡುತ್ತಾರೆ. ಯಾವಾಗಲೂ ಅವನೇ ಸಿಕ್ಕಿಕೊಳ್ಳುತ್ತಾನೆ. ಆದರೂ ಅವನು ಮೋಸದಾಟಕ್ಕೇನೂ ಇಳಿದಿಲ್ಲ. ಇವನಿಗೆ ನಾನು ಸಹಾಯ ಮಾಡಬೇಕು ಎಂದು ಭಾವಿಸಿ ಹುಡುಗನೊಬ್ಬನ ಕಣ್ಣು ಮುಚ್ಚಿ, ಎಣಿಸಿ ಅವನನ್ನು ಬಿಟ್ಟ ತಕ್ಷಣ ತಾನೇ ಓಡಿ ಹೋಗಿ ಆ ದುರ್ಬಲ ಹುಡುಗನ ಹತ್ತಿರ ನಿಂತುಬಿಡುತ್ತಾಳೆ. ಅವಳೇ ಹತ್ತಿರ ಬಂದು ನಿಂತಾಗ ಅವಳನ್ನು ಮುಟ್ಟುವುದು ಅವನಿಗೇನು ಕಷ್ಟ?’ ಭಗವತ್ಕೃಪೆ ಎಂದರೆ ಇಷ್ಟೇ ನೋಡು’. ಎಷ್ಟು ಮಾರ್ವಿುಕವಾಗಿದೆ ಶ್ರೀರಾಮಕೃಷ್ಣರ ಉತ್ತರ, ಎಷ್ಟು ಮನವೊಪ್ಪುವಂತೆ ಸರಳವಾಗಿದೆ. ಅವರ ಎಲ್ಲ ಮಾತುಗಳೇ ಹಾಗೆ!

ಸೃಷ್ಟಿ ಒಂದು ಅಸಮಾನತೆಯ ತಾಣ. ಮಾನವ ಸಮಾಜವೂ ಇದಕ್ಕೆ ಹೊರತಲ್ಲ. ಅದು ಪಕ್ಷಿಲೋಕವಿರಲಿ, ಕಾಲುಗಳೇ ಇಲ್ಲದ ನೆಲದ ಮೇಲೆ ಹೊರಳುವ ಹುಳಗಳಿರಲಿ, ಚತುಷ್ಪಾದಿಗಳಿರಲಿ ಯಾವುದೇ ಒಂದೇ ಜಾತಿಯಲ್ಲೂ ನೂರು ಭಿನ್ನ ರೀತಿಯ ಪ್ರಭೇದಗಳು! ನೂರು ಬೇರೆ ಬೇರೆ ಶಕ್ತಿಸ್ತರಗಳು, ಸೃಷ್ಟಿಯ ನಿಯಮವೇ ಇದು. ಪ್ರಬಲ ಸಂತತಿ, ದುರ್ಬಲ ಸಂತತಿಯನ್ನು ಕಷ್ಟಕ್ಕೀಡುಮಾಡದಿರುವಂತೆ, ತೊಂದರೆಗೊಳಪಡಿಸದಂತೆ ನೋಡಿಕೊಳ್ಳುವುದೇ ನಾಗರಿಕತೆಗಳ ಉಗಮದ ಕಾಲದಿಂದಲೂ ಮನುಷ್ಯನ ಮುಂದಿರುವ ಸವಾಲು. ಇದಕ್ಕಾಗಿ ಒಂದು ಬೃಹತ್ ವ್ಯವಸ್ಥೆಯನ್ನೇ ನಿರ್ಮಾಣ ಮಾಡಬೇಕಾಯಿತು ಇದೇ ರಾಜತ್ವ, ಆಡಳಿತಯಂತ್ರ; ಅದರ ಸಹಾಯಕ ಅಂಗವೇ ರಾಜಧರ್ಮ ಇಲ್ಲವೇ ಸಂವಿಧಾನ. ಇವೆಲ್ಲ ಮಾನವ ನಿರ್ವಿುತಕಣ್ಣಿಗೆ ಕಾಣುವಂಥದ್ದು. ಆದರೆ ಮಾನವ ಸಮಾಜದ ವ್ಯಾಪ್ತಿಯನ್ನೂ ಮೀರಿ ಸಕಲ ಜೀವರಾಶಿಗಳಿಗೂ ಅನ್ವಯಿಸುವಂತೆ ಅದ್ಭುತವಾದ, ಸೂಕ್ಷ ್ಮುದ್ಧಿಗಳಿಗೆ ಮಾತ್ರ ಗೋಚರಿಸುವ ಇನ್ನೊಂದು ವ್ಯವಸ್ಥೆಯೂ ಇದೆ. ಇದನ್ನು ಸನಾತನಧರ್ಮ ‘ಋತಂ’ ಎಂದು ಕರೆಯುತ್ತದೆ. ಇದನ್ನು ಧರ್ಮ ಎಂತಲೂ ಕರೆಯುವುದುಂಟು. ಈ ಋತಂ ಶಬ್ದವೇ ಅದು ಹೇಗೋ ಇನ್ನೂ ಹಲವು ಸಂಸ್ಕೃತಶಬ್ದಗಳಂತೆ ಇಂಗ್ಲಿಷ್ ಭಾಷೆಯನ್ನು ಪ್ರವೇಶಿಸಿ Rhythm ಆಗಿದೆ. Rhythm ಎಂದರೂ ಅದೇ ಅರ್ಥ. ಸಮನ್ವಯ, ಸಹಯೋಗ ಇತ್ಯಾದಿ! ದುರ್ಬಲ ಪ್ರಾಣಿವರ್ಗ ಪ್ರಬಲ ವರ್ಗಗಳಿಂದ ನಿರಂತರ ಧಕ್ಕೆಗೊಳಗಾಗುತ್ತಿದ್ದರೂ ಅವುಗಳ ಸಂತತಿ ನಿರ್ನಾಮವಾಗದಿರಲು ಪ್ರಕೃತಿ ಅವುಗಳ ಸಂತಾನಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದೇ ಕಾರಣ. ಅಷ್ಟೇ ಅಲ್ಲ ಅವು ಭೂಗೋಳದ ಯಾವ ಪ್ರದೇಶದಲ್ಲೂ ಪ್ರಧಾನವಾಗಿ ಕಾಡು, ನಾಡು ಎಂಬ ಎರಡು ಸನ್ನಿವೇಶಗಳಲ್ಲೂ ಬದುಕಿ ಉಳಿಯುವಂತೆ ಅವುಗಳಿಗೆ Adoptabilityಯನ್ನು ಕೊಟ್ಟಿದೆ. ಆದರೆ ಬಲಿಷ್ಠ ಪ್ರಾಣಿಗಳು ಎನ್ನಿಸಿಕೊಂಡಿರುವವೇ ಎಲ್ಲೆಂದರಲ್ಲಿ ಬದುಕಲಾರವು! ಅವುಗಳಿಗೆ ಅವುಗಳದ್ದೇ ಆದ ವಾತಾವರಣವಿರಬೇಕು. ಅವು ಎಷ್ಟೇ ಪ್ರಬಲವಾಗಿದ್ದರೂ ಅವುಗಳನ್ನು ಮನುಷ್ಯ ಸಂರಕ್ಷಿಸಬೇಕು. ಇವತ್ತು ವನ್ಯಮೃಗ ಸಂರಕ್ಷಣಾ ಕೇಂದ್ರಗಳಲ್ಲಿ ಹುಲಿ, ಸಿಂಹಗಳಿವೆಯೇ ಹೊರತು ನಾಯಿ, ಬೆಕ್ಕು, ಇರುವೆ, ಇಲಿಗಳಿಲ್ಲ. ಇದೇ ಪ್ರಕೃತಿಯೆಂಬ ಆಡಳಿತಯಂತ್ರದ ಅವ್ಯಕ್ತ ಶಕ್ತಿ.

ಇಲ್ಲಿ ನಾವು ಕಲಿಯಬೇಕಾದ ಇನ್ನೊಂದು ಪಾಠ, ‘ಶಕ್ತಿ ಎಂದರೆ ಮತ್ತೊಂದನ್ನು ಸಾಯಿಸುವ, ತಿನ್ನುವ ಸಾಮರ್ಥ್ಯವಲ್ಲ. ಪ್ರಾಣಿ ಪ್ರಪಂಚಕ್ಕೆ ಇದು ಅನಿವಾರ್ಯವೇನೋ. ಆದರೆ ಮನುಷ್ಯನಿಗಲ್ಲ. ಸಹಬಾಳ್ವೆ, ಸಹಾನುಭೂತಿ, ಸಹಾಯಹಸ್ತವನ್ನು ಚಾಚಿ ದುರ್ಬಲನನ್ನು ಅವನಿರುವ ಜಾಗದಿಂದಲೇ ಕ್ರಮೇಣ ಮೇಲಕ್ಕೆತ್ತುವ ಅವನನ್ನೂ ತಮ್ಮಲ್ಲೊಬ್ಬನನ್ನಾಗಿಸಿಕೊಳ್ಳ ಬೇಕೆಂಬ ತುಡಿತ, ಮಾನವೀಯತೆ ಇವುಗಳನ್ನು ಮೀರಿದ ಶಕ್ತಿ ಬೇರಾವುದೂ ಇಲ್ಲ. ವೇದಕಾಲದಿಂದಲೂ ಭಾರತ ಅನುಸರಿಸಿಕೊಂಡು ಬರುತ್ತಿರುವುದು ಇದನ್ನೇ. ಎಲ್ಲರಿಗೂ ಒಂದೇ ನಿಯಮ, ಎಲ್ಲರಿಗೂ ಒಂದೇ ಆಹಾರ, ಎಲ್ಲರಿಗೂ ಒಂದೇ ಪೂಜಾವಿಧಾನ, ಅರ್ಥವಿಲ್ಲದ್ದು. ಎಲ್ಲರಿಗೂ ಒಂದೇ ಸಂಪಾದನೆ ಇರಲಾರದು ; ಹಾಗೆಯೇ ತೆರಿಗೆ. ಎಲ್ಲರಿಗೂ ಒಂದೇ ಬುದ್ಧಿಶಕ್ತಿ ಇರಲಾರದು ; ಹಾಗೆಯೇ ಪಠ್ಯವೂ ಇರಬೇಕು. ಎಲ್ಲರಿಗೂ ಒಂದೇ ಪಠ್ಯ ಆ ಪಠ್ಯದ ಪಾಠಗಳೋ ಜೀವನದಲ್ಲಿ ಎಂದಿಗೂ ಪ್ರಯೋಜನಕ್ಕೆ ಬಾರದ್ದವು. ಇಂಥ ಮೂರ್ಖತನವನ್ನು ಪ್ರದರ್ಶಿಸಿ ಸ್ವಾತಂತ್ರೊ್ಯೕತ್ತರ ಸರ್ಕಾರಗಳು ಈ ದೇಶದ ಬಾಲಕ, ಬಾಲಕಿಯರನ್ನು ಕೀಳರಿಮೆಯ ಗಣಿಗಳನ್ನಾಗಿಸುತ್ತಿವೆ.

ಇದು ಒತ್ತಟ್ಟಿಗಿರಲಿ! ಅಧರಸೇನನ ಪ್ರಶ್ನೆಯಾದ ‘ಭಗವತ್ಕೃಪೆ ಎನ್ನುವುದು ಹೇಗೆ ಕೆಲಸ ಮಾಡುತ್ತದೆ?’ ಶ್ರೀರಾಮಕೃಷ್ಣರು ಹೇಳಿದಂತೆ ವ್ಯಕ್ತಿ ದುರ್ಬಲನಾದರೂ ಅವನು ಜೀವನದಲ್ಲಿ ಧರ್ಮಬಾಹಿರನಾಗಬಾರದು. ಧರ್ಮಕ್ಕೆ ಬದ್ಧನಾಗಿರಬೇಕು. ಅವನ ಅಸಹಾಯಕತೆಯನ್ನು ಕಂಡ ಜಗನ್ಮಾತೆ ಒಂದು ದಿನ ತಾನೇ ಅವನ ಸಹಾಯಕ್ಕೆ ಧಾವಿಸುವಳು. ಕುಚೇಲ ಕೃಷ್ಣನನ್ನು ತಾನೇ ಏನೂ ಕೇಳದಿದ್ದರೂ ಕೃಷ್ಣ ಅವನ ಕಷ್ಟವನ್ನು ಅರಿಯಲಾರದೇ ಹೋದನೇ? ಸ್ಪಂದಿಸದೇ ಹೋದನೇ? ಅದೇ ಭಗವಂತನ, ಭಗವತಿಯ ಮಹತ್ವ ಋತಂ ಎಂದು. ಈ ಅದ್ಭುತ ವ್ಯವಸ್ಥೆ ಮಾಡಿದವಳು ಅವಳೇ. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶ ದುರ್ಬಲನಾದ ಮಾತ್ರಕ್ಕೇ ಭಗವತ್ಕೃಪೆ ಸಿಗಬೇಕೆಂದೇನೂ ಇಲ್ಲ. ದುರ್ಬಲತೆ ನೆಪದಲ್ಲಿ ಅನ್ಯಾಯದ ಮಾರ್ಗಕ್ಕೆ ಎಳಸುವಂತಿಲ್ಲ. ಜೀವನ ಎಂಬ ಆಟದ ನಿಯಮಗಳನ್ನು ಮುರಿಯುವಂತಿಲ್ಲ. ಹಾಗೆ ಹೇಳಬೇಕೆಂದರೆ ಭಗವತ್ಕೃಪೆ ಎಂಬ ಗಾಳಿ ನಿರಂತರ ಬೀಸುತ್ತಲೇ ಇದೆ. ಅದು ಎಲ್ಲ ಕಡೆಗೂ ಬೀಸುತ್ತಿದೆ. ಆದರೆ ಯಾವ ಅಂಬಿಗ ತನ್ನ ದೋಣಿಯ ಹಾಯಿಯನ್ನು ಹಾರಿಸಿದ್ದಾನೋ ಅವನ ದೋಣಿ ಮಾತ್ರ ಮುಂದಕ್ಕೆ ಹೋಗುತ್ತದೆ. ಇದು ಶ್ರೀರಾಮಕೃಷ್ಣರೇ ಕೊಡುತ್ತಿದ್ದ ನಿದರ್ಶನ. ಕೆಲವರಿಗೆ ಮಾತ್ರ ತನ್ನ ಕೃಪೆಯನ್ನು ಕೊಟ್ಟು ಮಿಕ್ಕಿದವರ ಕಡೆಗೆ ತನ್ನ ಗಮನವನ್ನೇ ಹರಿಸದ ಆಧುನಿಕ ರಾಜಕಾರಣಿಗಳಂತಲ್ಲ ಭಗವಂತ. ಕೆಲವು ಮತಾಂಧ ಪಂಡಿತರು ರಚಿಸಿರುವ ಅರ್ತಾಕ ಗ್ರಂಥಗಳು ಹಾಗೆ ಹೇಳಬಹುದು. ಅದು ಕೇವಲ ಒಣಜಂಬ ಅರ್ಥಹೀನ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ, ‘ನಾನು ಎಲ್ಲರಿಗೂ ಸಮನಾಗಿದ್ದೇನೆ. ಕೆಲವರು ನನಗೆ ಪ್ರಿಯರು, ಮಿಕ್ಕಿದವರನ್ನು ನಾನು ಗಮನಿಸುವುದಿಲ್ಲ ಎಂದೇನೂ ಇಲ್ಲ’ ಎಂದು.

‘ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿ ನ ಪ್ರಿಯಃ’ ಎನ್ನುವುದೇ ಆ ಮಾತು.

ಆಗರ್ಭ ಶ್ರೀಮಂತರಾಗಿದ್ದ ನರೇಂದ್ರನ ತಾಯಿ, ತಮ್ಮಂದಿರ ಎರಡು ಹೊತ್ತು ಊಟಕ್ಕಾಗಿ ಆ ಬವಣೆಯಿಂದ ಪಾರಾಗುವುದಕ್ಕಾಗಿ ನರೇಂದ್ರ ಹೆಣಗುತ್ತಿದ್ದ ಕಾಲದಲ್ಲಿ ಅವನ ಸೌಂದರ್ಯ, ಸಾಮರ್ಥ್ಯಗಳಿಗೆ ಮಾರುಹೋಗಿದ್ದ ಕೆಲವು ಶ್ರೀಮಂತ ಮಹಿಳೆಯರು ತಾವು ಸಹಾಯಮಾಡಲು ಸಿದ್ಧ ಆದರೆ ಎಂದು ಕೆಲವು ಅಶ್ಲೀಲ ಸೂಚನೆಗಳನ್ನು ಕಳಿಸಿದಾಗ ನರೇಂದ್ರ ಕಡ್ಡಿ ಮುರಿದಂತೆ ನಿರಾಕರಿಸಿದ್ದಲ್ಲದೆ ಅವರ ಈ ಅಸಭ್ಯ ನಡುವಳಿಕೆಗೆ ಛೀಮಾರಿ ಹಾಕಿದ್ದ. ತಮ್ಮನ್ನು ಮದುವೆಯಾಗಿ ಎಂದು ಶ್ರೀವಿವೇಕಾನಂದರಿಗೆ ಅಮೆರಿಕ ಮತ್ತು ಇಂಗ್ಲೆಂಡಿನ ಯುವತಿಯರು ದುಂಬಾಲು ಬಿದ್ದುದು ಅದೆಷ್ಟು ಸಲವೋ!

ಭಾರತೀಯ ಸಂನ್ಯಾಸದ ನಿಯಮಗಳನ್ನು ತಿಳಿಯದ ಅವರನ್ನು ವಿವೇಕಾನಂದರು ಸಹಾನುಭೂತಿಯಿಂದ ತಿದ್ದುತ್ತಿದ್ದರು. ಮನುಷ್ಯನೊಬ್ಬನ ನಿಜವಾದ ಅಂತಃಸತ್ವ ಪರೀಕ್ಷೆಗೆ ಒಳಗಾಗುವುದೇ ಪ್ರಲೋಭನೆಗಳ ನಡುವೆಯೂ, ವಿಷಮ ಸನ್ನಿವೇಶದಲ್ಲೂ ಅವನೆಷ್ಟು ಪರಿಶುದ್ಧನಾಗಿ ಉಳಿಯಬಲ್ಲ ಎಂಬುದನ್ನು ಆಧರಿಸಿ. ವ್ಯಕ್ತಿ ಜೀವನದ ಯಾವುದೇ ಹಂತದಲ್ಲಿ ತನ್ನನ್ನು ತರಬೇತಿಗೊಳಿಸಿಕೊಳ್ಳಬೇಕಾದ ಮೊದಲ ಹಂತವೇ ತತ್ವಬದ್ಧತೆ. ರಾಮಾಯಣ ಮತ್ತು ಮಹಾತ್ಮರ ಜೀವನಗಳು ಇದನ್ನು ಸಂಶಯಕ್ಕೆಡೆಯಿಲ್ಲದಂತೆ ಬೋಧಿಸುತ್ತವೆ. ಅಂತಹ ವ್ಯಕ್ತಿಯನ್ನು ಜಗನ್ಮಾತೆ ಎಂದಿಗೂ ಕೈ ಬಿಡುವುದಿಲ್ಲ. ಧರ್ವೇ ರಕ್ಷತಿ ರಕ್ಷಿತಃ ಎಂಬ ಸಂದೇಶವನ್ನು ಜಗತ್ತಿಗೆ ಎಂದೋ ಕೊಟ್ಟಿದೆ ಸನಾತನ ಭಾರತ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net