

| ಡಿ. ಯಶೋದಾ
ಈಗಲೇ ಹೀಗಾಡುವ ಇವರು ಅದು ಹೇಗೆ ಸಂಸಾರ ನಡೆಸುವರೋ...ಎಂದು ಅವರನ್ನು ನೋಡಿದವರಿಗೆ ಅನಿಸುವುದು ಸ್ಪಷ್ಟ. ವಾರವಷ್ಟೇ ಕಳೆದಿದೆ ಮದುವೆಯಾಗಿ. ನೀನು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂಬುದು ಅವನ ತಾಕೀತು. ಆರಂಭದಲ್ಲೇ ಇಷ್ಟು ಜಬರ್ದಸ್ತು ಮಾಡುವವನಿಗೆ ಸೋತರೆ ಮುಂದೆ ಹೇಗೆ ಎಂಬುದು ಅವಳ ಆತಂಕ.. ಅದು ಶುರುವಾಗಿದ್ದು ಮದುವೆಯಾದ 5ನೇ ದಿನಕ್ಕೆ. ಅವಳ ಮನೆಯವರು ಅವಳ ಸಾಮಾನು, ಸರಂಜಾಮು ಸಮೇತ ಗಂಡನ ಮನೆಗೆ ಬಿಟ್ಟಾಗ. ಅವಳಿಗದು ಹೊಸ ಜಾಗ, ಹೊಸ ರೀತಿ- ನೀತಿ, ಎಲ್ಲವನ್ನು ಗಂಡ, ಅತ್ತೆಯಿಂದ ಕೇಳಿ ತಿಳಿದುಕೊಳ್ಳಬೇಕು. ಪ್ರತಿ ಬಾರಿ ಅತ್ತೆ, ಅತ್ತೆ ಎನ್ನುತ್ತಿದ್ದಾಗ ಅವನಿಗೆ ತನ್ನ ಅಮ್ಮನನ್ನು ಅವಳೂ ಅಮ್ಮನೆಂದು ಕರೆಯಲಿ ಎಂಬ ಆಸೆ. ಅವಳಿಗೆ ಗೊಂದಲ. ನಿಜಕ್ಕೂ ಅವಳಿಗೆ ಅತ್ತೆ ಬಗ್ಗೆ ಏನೂ ಗೊತ್ತಿಲ್ಲ. ಸುಮ್ಮನೆ ಹೇಗೆ ಅಮ್ಮ ಎನ್ನುವುದು ಎಂಬುದು ಅವಳ ತರ್ಕ. ತನ್ನ ಅಮ್ಮ ಅವಳಿಗೂ ಅಮ್ಮನಲ್ಲವೇ, ಅವರನ್ನು ಅಮ್ಮಾ ಎಂದು ಕರೆದರೆ ಇವಳನ್ನು ಮಗಳಂತೆ ನೋಡಿಕೊಳ್ಳುತ್ತಾರೆ ಎಂಬುದು ಅವನ ವಾದ. ಅವನ ಮಾತು ತಪ್ಪೆಂದು ಹೇಳಲಿಕ್ಕಾಗದಿದ್ದರೂ ತಕ್ಷಣಕ್ಕೆ ಒಪ್ಪಿಬಿಡುವಂತಹದ್ದಲ್ಲ.
ಆತ್ಮೀಯತೆಯ ಲೇಪವೇಕೆ?: ಕೆಲವರು ಅತ್ತೆಯಿಂದ ತನಗೆ ಏನೂ ತೊಂದರೆಯಾಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಅತ್ತೆಯನ್ನು ಅಮ್ಮ ಎಂದು ಸುಲಭವಾಗಿ ಕರೆದುಬಿಡುತ್ತಾರೆ. ಇಲ್ಲಿ ಅದರ ಆಳ-ಅಗಲ ಎಷ್ಟು ಎನ್ನುವುದು ಅವರಿಗೇ ಗೊತ್ತಿರುತ್ತದೆ. ಕೆಲವರು ನಿಜವಾದ ಭಾವನೆಯಿಂದಲೇ ಅತ್ತೆಯನ್ನು ಅಮ್ಮ ಎನ್ನಬಹುದು. ಮತ್ತೆ ಕೆಲವರು ಸಹಜವಾಗಿ ಅತ್ತೆ ಎಂದು ಕರೆಯುತ್ತಾರೆ. ಸೊಸೆಯಾದವಳು ತನ್ನನ್ನು ಅಮ್ಮ ಎಂದು ಕರೆಯುತ್ತಾಳೋ ಅಥವಾ ಅತ್ತೆ ಎಂದು ಕರೆಯುತ್ತಾಳೋ ಎಂಬ ಅಂಶದ ಮೇಲೆ ಅತ್ತೆಯ ಪ್ರೀತಿ- ವಾತ್ಸಲ್ಯ ನಿಂತಿರುವುದಿಲ್ಲ. ಅತ್ತೆ ಅಮ್ಮನಾಗುವುದು ಅಷ್ಟು ಸುಲಭವಲ್ಲ. ಬಾಯಿ ಮಾತಿನ ಗೌರವಕ್ಕೆ ಆತ್ಮೀಯತೆಯ ಲೇಪ ಹಚ್ಚಲು ಆಗುವುದಿಲ್ಲ. ಸೊಸೆ ತನಗೆ ಮಗಳಾಗುವುದಕ್ಕೆ ಮುಂಚೆಯೇ ಅತ್ತೆ ತನ್ನ ಸೊಸೆಗೆ ಅಮ್ಮನಾಗಲು ಸಿದ್ಧರಾಗಿರಬೇಕು. ಒತ್ತಾಯಪೂರ್ವಕವಾಗಿ ಹೀಗೇ ಕರೆಯಬೇಕು, ಹಾಗೇ ಮಾತಾಡಬೇಕು ಎಂಬ ಕಟ್ಟುಪಾಡು ಕಟ್ಟಾಗಿ ಬಿಗಿಯುತ್ತದಷ್ಟೆ, ಸಂಬಂಧ ಸುಧಾರಿಸುವುದಿಲ್ಲ, ಆತ್ಮೀಯತೆ ಬೆಳೆಯುವುದಿಲ್ಲ.
ಹೀಗೇ ಕರೆಯಬೇಕೆಂಬ ಒತ್ತಾಯ ಬೇಡ: ಇದು ಕೇವಲ ಅತ್ತೆ, ಮಾವ ಇವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇನ್ನೂ ಕೆಲವು ಸಂಬಂಧಗಳಲ್ಲಿ ಕೆಲವರಿಗೆ ಕೆಲವು ನಿರೀಕ್ಷೆಗಳು ಇರುತ್ತವೆೆ. ತಮ್ಮನ್ನು ಈ ರೀತಿಯಾಗೇ ಕರೆಯಬೇಕು ಎಂಬ ನಿರೀಕ್ಷೆ ಸರಿಯೇ. ಆದರೆ ಅದು ಕೈಗೂಡದಿದ್ದರೆ ಸುಮ್ಮನಾಗುವುದು ಲೇಸು ಅಥವಾ ಅದನ್ನು ನಿಜ ಮಾಡಿಕೊಳ್ಳುವ ಒಳ್ಳೆಯ ಪ್ರಯತ್ನದಲ್ಲಿ ತೊಡಗಬಹುದು. ಸಾಮಾನ್ಯವಾಗಿ ನಾವು ಹಿರಿಯ ಮಹಿಳೆಯರಿಗೆ ಸುಲಭವಾಗಿ ಅಮ್ಮ ಎಂದುಬಿಡುತ್ತೇವೆ. ಅವರು ಸಂಬಂಧಿಕರು, ಪರಿಚಯಸ್ಥರು, ನೆರೆಹೊರೆಯವರು, ಸ್ನೇಹಿತರ ಸಂಬಂಧಿಗಳು, ಹಿರಿಯ ಸಹೋದ್ಯೋಗಿಗಳು ಯಾರೇ ಆಗಿರಬಹುದು. ಆದರೆ ಇದೇ ಸಂಬಂಧದ ಹಿರಿಯ ಪುರುಷರಿಗೆ ಅಷ್ಟು ಸುಲಭವಾಗಿ ಅಪ್ಪ ಎಂದು ಹೇಳುವುದಿಲ್ಲ. ಕೆಲ ಸಂದರ್ಭಗಳಲ್ಲಿ, ಕೆಲವರ ಸಂಬಂಧಗಳಲ್ಲಿ, ಕೆಲ ಆಪ್ತರ ಬಗ್ಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ... ಎಂಬ ವಾತ್ಸಲ್ಯ ಮೂಡಿದ್ದರೂ ಆ ರೀತಿ ಸಲೀಸಾಗಿ ಕರೆಯಲು ಆಗದೆ ಹೋಗಬಹುದು. ಆಗ ಆ ರೀತಿ ಕರೆಸಿಕೊಳ್ಳಬಯಸುವವರು ಹೀಗೇ ಕರೆಯಬೇಕು ಎಂದು ಒತ್ತಾಯಿಸದೆ, ಆಪ್ತರ ಭಾವನೆಗಳಿಗೆ ಬೆಲೆಕೊಡುವುದೇ ಗೌರವ.