

ಕರ್ನಾಟಕ ರಾಜಕಾರಣದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಹೊಸ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಮುಂದೆ ಹಲವು ಸಮಸ್ಯೆಗಳಿವೆ. ಮುಖ್ಯವಾಗಿ, ರಾಜ್ಯದಲ್ಲಿ ಕೋವಿಡ್ ಸನ್ನಿವೇಶದ ಸಮಸ್ಯೆ ಜನರನ್ನು ಆತಂಕಕ್ಕೀಡು ಮಾಡಿದೆ. ಮೂರನೇ ಅಲೆಯ ಭಯ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಪೂರ್ಣಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಬೇಕಿದೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಆದರೆ, ಬಿಜೆಪಿಯ ಶಾಸಕರಲ್ಲಿ ಹೆಚ್ಚಿನವರು ಮಂತ್ರಿಯಾದರಷ್ಟೇ ಜೀವನ ಮುಕ್ತಿ ಎಂಬಂತೆ ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಿರುವುದು ಜನರಲ್ಲಿ ಬೇಸರ ತರಿಸಿದೆ. ಅನೇಕರು ಹಲವಾರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಚಿವರಾದವರಿಗೆ ಪೂರ್ಣ ಅವಧಿ ದೊರೆತಿಲ್ಲ. ಇಂತಹ ಅನೇಕ ಬೇಕುಗಳಿವೆ.
ಮುಖ್ಯ ಅಂಶವೆಂದರೆ, ಈಗಾಗಲೇ ಅನೇಕರು ಮಂತ್ರಿಸ್ಥಾನ ಅನುಭವಿಸಿದ್ದಾರೆ. ಅವರು ಬೇರೆಯವರಿಗೆ ಅವಕಾಶ ನೀಡುವುದು ದೊಡ್ಡತನವಾಗುತ್ತದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಾರೆ. ತಾವು ಸಚಿವರಾಗದೆಯೇ ಅಭಿವೃದ್ಧಿ ಮಾಡಿ ತೋರಿಸುವುದಾಗಿ ಹೇಳಿ ಇತರರಿಗೆ ಮಾದರಿಯಾಗಿದ್ದಾರೆ. ಇದೇ ಹಾದಿಯಲ್ಲಿ ಉಳಿದವರು ಯೋಚಿಸಬೇಕು. ದಕ್ಷ ಶಾಸಕರು ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟು ಉದಾತ್ತ ಸೇವಾ ಮನೋಭಾವ ಪ್ರದರ್ಶಿಸಬೇಕು. ರಾಜ್ಯದಲ್ಲಿ ನೈಜ ಜನಪರ ಸರ್ಕಾರ ಜಾರಿಗೆ ತಂದು, ಮೇಕೆದಾಟು ಮುಂತಾದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಿ. ಜನಸಾಮಾನ್ಯರ ಆಶೋತ್ತರಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲಿ.
| ನ.ರಾ.ವೆಂಕಟೇಶ್ ಶಿವಮೊಗ್ಗ