ಆಧುನಿಕ ಪ್ರಪಂಚದ ಅಂತರಾಳ: 'ಘಾಂದ್ರುಕ್' ಕಾದಂಬರಿ ಇಂದು ಬಿಡುಗಡೆ

Ghandruk
Published on

ಹಿರಿಯ ಪತ್ರಕರ್ತ- ಕಥೆಗಾರ ಸತೀಶ್ ಚಪ್ಪರಿಕೆ ಅವರ ಮಹತ್ವದ ಕಾದಂಬರಿ ಘಾಂದ್ರುಕ್ ಇಂದು (ಜೂ.25) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿ ಕನ್ನಡ ಕಾದಂಬರಿ ಪ್ರಕಾರದಲ್ಲಿ ಒಡಮೂಡಿದ ಒಂದು ಪರಿಪೂರ್ಣ ಜಾಗತಿಕ ಕಾದಂಬರಿ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಇದೊಂದು ಆಧುನಿಕ ಮಹಾ ಪ್ರಪಂಚದ ಅಂತರಾಳ. ಯಶಸ್ಸಿನ ಬೆನ್ನೇರಿ ಹೊರಟ ನಾಯಕ ‘ನನ್ನೊಳಗಿನ ನನ್ನನ್ನು’ ಹುಡುಕುತ್ತಾ ಸಾಗುವ ಚಿತ್ರಣ ಇದರಲ್ಲಿದ್ದು, ಈ ಕೃತಿಯ ಒಂದು ಅಧ್ಯಾಯವನ್ನು ಇಲ್ಲಿ ನೀಡಲಾಗಿದೆ.

ಆ ಹತ್ತು ಲಕ್ಷ ಮಂದಿಯ ಪೈಕಿ ಈ ಹದಿನಾರು ಮಕ್ಕಳ ಪೋಷಕರು ಪತ್ತೆಯಾಗಿದ್ದು!

ಈಟ್ ವಾಸ್ ಅ ಮಿರೆಕಲ್. ಮಾ ಗಿ ಚಾಂಗ್ ಶಿಬಿರಕ್ಕೆ ನಾನು ಯಾವಾಗ್ಲೂ ಹೋಗ್ತಾ ಇದ್ದೆ. ಅಲ್ಲಿ ಹೋದಾಗಲೆಲ್ಲಾ ಆ ಹದಿನಾರೂ ಮಕ್ಕಳ ಜೊತೆ ಎಷ್ಟೋ ಗಂಟೆಗಳ ಕಾಲ ಆಟವಾಡಿ ಕಾಲ ಕಳೆಯುತ್ತಿದ್ದೆ. ಆ ಹದಿನಾರು ಮಕ್ಕಳ ಪೈಕಿ ಮೂವರು ನನಗೆ ಬಹಳ ಅಂಟಿಕೊಂಡು ಬಿಟ್ಟಿದ್ದರು. ಆ ಪೈಕಿ ಎಂಟು ವರ್ಷದ ಹಾಜಿ ಬಿಲ್​ಗೆ ಫುಟ್​ಬಾಲ್ ಅಂದ್ರೆ ಪಂಚಪ್ರಾಣ. ಯಾಂಗೊನ್​ನಿಂದ ಅವನಿಗಾಗಿಯೇ ಒಂದು ಫುಟ್​ಬಾಲ್ ನಾನೇ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ. ಹನ್ನೆರಡು ವರ್ಷದ ಮೊನಿರ್ ಅಹಮದ್ ಸದಾ ಕೈಯಲ್ಲಿ ಕೊಳಲಿನಂತಹ ವಾದ್ಯವೊಂದನ್ನು ಇಟ್ಟುಕೊಂಡು ಅದನ್ನು ನುಡಿಸುತ್ತಿದ್ದ. ಇನ್ನು ಆರು ವರ್ಷದ ಫಾತಿಮಾ ಮೆನರಾ ನಾನೇ ತೆಗೆದುಕೊಂಡು ಹೋಗಿ ಕೊಟ್ಟಿದ್ದ ಬಾರ್ಬಿ ಡಾಲ್​ನೊಂದಿಗೆ ಸದಾ ಆಟವಾಡುತ್ತಾ ಕೂತಿರುತ್ತಿತ್ತು. ಉಳಿದ ಹದಿಮೂರು ಮಕ್ಕಳು ಕೂಡ ಸಾಕಷ್ಟು ಗೊತ್ತಿದ್ದವರೇ. ಅವರೆಲ್ಲರಿಗೂ ಪೋಷಕರ ಮಡಿಲು ಸೇರುವ ಅವಕಾಶ ಸಿಕ್ಕಿದ್ದಕ್ಕೆ ನಮ್ಮ ಇಡೀ ತಂಡವೇ ಸಂತಸದಿಂದ ಕುಣಿದು ಕುಪ್ಪಳಿಸಿತ್ತು.

ಸ್ಟೇಷನ್ ಚೀಫ್ ನೊರಿಕೊ ತಕಾಗಿ ಆ ಮಕ್ಕಳನ್ನು ಪೋಷಕರ ಮಡಿಲು ಸೇರಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದರು. ಮ್ಯಾನ್ಮಾರ್ ಮಿಲಿಟರಿ ಚಲನವಲನ ಗಮನದಲ್ಲಿಟ್ಟುಕೊಂಡು ಆ ಮಕ್ಕಳನ್ನು ರಸ್ತೆ ಮಾರ್ಗದಲ್ಲಿ ಮಾ ಗಿ ಚಾಂಗ್​ನಿಂದ ಮೌಂಗ್​ಡಾವ್ ತಲುಪಿಸುವುದು. ಅಲ್ಲಿಂದ ದೋಣಿಗಳಲ್ಲಿ ಅವರನ್ನು ಮ್ಯಾನ್ಮಾರ್- ಬಾಂಗ್ಲಾ ಗಡಿ ದಾಟಿಸಿ ತೆಂಕಾಫ್​ನಿಂದ ಮತ್ತೆ ರಸ್ತೆ ಮಾರ್ಗವಾಗಿ ಕುಟುಪಲಾಂಗ್ ನಿರಾಶ್ರಿತರ ಶಿಬಿರಕ್ಕೆ ಸಾಗಿಸುವುದು. ಈ ನಿಟ್ಟಿನಲ್ಲಿ ನನ್ನ ಸೆಕ್ಯುರಿಟಿ ಆಫೀಸರ್ ಥಾನ್ ಲುಯಿನ್ ವ್ಯವಸ್ಥಿತ ಯೋಜನೆ ಹಾಕಿಕೊಂಡಿದ್ದ. ನಾವು ಯುಎನ್ ಫೋರ್ಸ್​ನ ನೆರವು ಕೂಡ ಕೇಳಿದ್ದೆವು. ಸೆಕ್ಯುರಿಟಿ ಥ್ರೆಟ್ ಅಸೆಸ್ ಮಾಡಿದ ಅವರು, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಆರಾಮವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಪೋಷಕರ ಮಡಿಲು ಸೇರಿಸಬಹುದು ಎಂಬ ಸಂದೇಶ ನೀಡಿದರು.

ಬುಧವಾರ ಬೆಳಿಗ್ಗೆ ನಿಗದಿಯಾದಂತೆ ಎಂಟು ಗಂಟೆಗೆ ಮಕ್ಕಳು, ಇಬ್ಬರು ಸೆಕ್ಯುರಿಟಿ ಆಫೀಸರ್​ಗಳಿದ್ದ ವ್ಯಾನ್ ಮೌಂಗ್​ಡಾವ್ ನಿರಾಶ್ರಿತರ ಶಿಬಿರದಿಂದ ಹೊರಟಿತು. ಕೊನೆಯ ಕ್ಷಣದಲ್ಲಿ ಯಾವುದೋ ಕೆಲಸ ಬಂದಿದ್ದರಿಂದ ನನ್ನ ಸೆಕ್ಯುರಿಟಿ ಆಫೀಸರ್ ಥಾನ್ ಲುಯಿನ್ ಹೊರಡುವುದು ಹತ್ತು-ಹದಿನೈದು ನಿಮಿಷಗಳಷ್ಟು ತಡವಾಯಿತು. ಎದುರಿದ್ದ ವ್ಯಾನ್​ನ ಸೆಕ್ಯುರಿಟಿ ಆಫೀಸರ್ ಜೊತೆ ವಾಕಿಟಾಕಿಯಲ್ಲಿ ಸಂಪರ್ಕದಲ್ಲಿದ್ದ ಥಾನ್ ಲುಯಿನ್ ನಾವುಗಳು ಬಂದು ಜೊತೆ ಸೇರುವುದಾಗಿ ಹೇಳಿದ್ದ.

ಮಕ್ಕಳನ್ನು ಪೋಷಕರ ಮಡಿಲಿಗೆ ಸೇರಿಸುತ್ತೇವೆ ಎಂಬ ಕಾರಣದಿಂದ ಎಲ್ಲರಲ್ಲೂ ಹೆಮ್ಮೆ- ಲವಲವಿಕೆ ನೆಲಸಿತ್ತು. ಮಕ್ಕಳು ಕೂಡ ತಂದೆ-ತಾಯಿಯ ಜೊತೆಯಾಗುತ್ತೇವೆ ಎಂಬ ಕಾರಣದಿಂದ ಸಂತಸದಿಂದ ಹೊರಟಿದ್ದರು. ಅದು ಐವತ್ತು ಮೈಲಿಯ ಹಾದಿ. ಸುಮಾರು ಎರಡು ಗಂಟೆಯ ಪಯಣ.

ಎದುರಿದ್ದ ಡ್ರೖೆವರ್ ನಿರೀಕ್ಷೆಗಿಂತ ವೇಗವಾಗಿ ಮಕ್ಕಳಿದ್ದ ವ್ಯಾನ್ ಚಲಾಯಿಸುತ್ತಿದ್ದ. ಥಾನ್ ಲುಯಿನ್ ವ್ಯಾನ್​ನಲ್ಲಿದ್ದ ಸೆಕ್ಯುರಿಟಿ ಆಫೀಸರ್​ಗೆ ಸ್ವಲ್ಪ ನಿಧಾನ ಮಾಡಿ ಎಂದು ಎಷ್ಟು ಹೇಳಿದರೂ ಪ್ರಯೋಜನವಾಗಲಿಲ್ಲ. ವಾತಾವರಣದಲ್ಲಿ ಅಂತಹ ಬಿಗು ಇಲ್ಲದೇ ಇದ್ದರಿಂದ ಒಂದು ಗಂಟೆಯ ನಂತರ ಥಾನ್ ಲುಯಿನ್ ಕೂಡ ಸ್ವಲ್ಪ ರಿಲಾಕ್ಸ್ ಆಗಿ ನನ್ನೊಂದಿಗೆ ಹರಟೆ ಹೊಡೆಯುತ್ತ ಕೂತ.

ನಾವೆಲ್ಲರೂ ಕುಟುಪಲಾಂಗ್ ನಿರಾಶ್ರಿತರ ಶಿಬಿರದಲ್ಲಿ ಈ ಮಕ್ಕಳ ಆಗಮನಕ್ಕಾಗಿ ಕಾದು ಕೂತಿರುವ ತಂದೆ-ತಾಯಿಯ ಈಗಿನ ಮನಸ್ಥಿತಿ ಹೇಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದೆವು. ಮ್ಯಾನ್ಮಾರ್ ಯುಎನ್​ಎಚ್​ಆರ್​ಸಿ ಇತಿಹಾಸದಲ್ಲಿ ಇಷ್ಟು ಸಂಖ್ಯೆಯ ಮಕ್ಕಳ ಪೋಷಕರನ್ನು ಹುಡುಕಿ, ಅವರನ್ನು ತಂದೆ-ತಾಯಿಯ ಮಡಿಲು ಸೇರಿಸುತ್ತಿದ್ದದ್ದು ಇದೇ ಮೊದಲಾಗಿತ್ತು.

ಆ ಹಿನ್ನೆಲೆಯಲ್ಲಿ ನಾವು ಎಷ್ಟು ಉತ್ಸುಕರಾಗಿದ್ದೆವೆಂದರೆ ಸ್ವತಃ ಆ ಮಕ್ಕಳ ತಂದೆ-ತಾಯಿಗಳಷ್ಟೇ ಸಂತೋಷದಿಂದ ಹೊರಟಿದ್ದೆವು. ನಾವು ಕೂತಿದ್ದ ಬುಲೆಟ್ ಪೂ›ಫ್ ಎಸ್​ಯುುವಿ ಜಾವ್​ವುದಾತ್ ದಾಟಿತ್ತು.

ಇದ್ದಕ್ಕಿದ್ದಂತೆ ಎದುರಿನ ಹಾದಿಯಲ್ಲಿ ಗುಂಡಿನ ಸುರಿಮಳೆಯ ಸದ್ದು.

ನಮ್ಮ ಡ್ರೖೆವರ್ ಮಿಂಟ್ ಸ್ವೇ ವೇಗ ಹೆಚ್ಚಿಸಿದ. ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಿಂತದ್ದು ಕಾಣಿಸಿತು. ಇನ್ನೇನು ಮಿಂಟ್ ಸ್ವೇ ನಮ್ಮ ಎಸ್​ಯುುವಿಯನ್ನು ವ್ಯಾನ್ ಹತ್ತಿರ ತೆಗೆದುಕೊಂಡು ಹೋದ, ಅಷ್ಟರಲ್ಲಿ ಅದರಾಚೆ ನಿಂತಿದ್ದ ನಾಲ್ಕು ಮಿಲಿಟರಿ ವಾಹನಗಳು ಎದುರು ದಿಕ್ಕಿನಲ್ಲಿ ವೇಗವಾಗಿ ಹೋಗಿ ಮಾಯವಾದವು. ಎಲ್ಲರಿಗಿಂತ ಮೊದಲು ತನ್ನ ಎಕೆ-47 ಕೈಗೆತ್ತಿಕೊಂಡು ಕೆಳಗಿಳಿದ ಥಾನ್ ಲುಯಿನ್ ವ್ಯಾನ್ ಕಡೆಗೆ ಓಡಿದ. ಅವನ ಹಿಂದೆ ನಾನು. ನನ್ನ ಹಿಂದೆ ಉಳಿದವರು.

ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದ ವ್ಯಾನ್​ನ ಡ್ರೖೆವರ್ ಮತ್ತು ಸೆಕ್ಯುರಿಟಿ ಆಫೀಸರ್ ಇಬ್ಬರ ತಲೆಗೆ ಗುಂಡು ಹೊಕ್ಕಿತ್ತು. ಅವರಿಬ್ಬರ ತಲೆಯಿಂದ ಇನ್ನೂ ರಕ್ತ ಚಿಲ್ಲೆಂದು ಹರಿಯುತ್ತಲೇ ಇತ್ತು. ವ್ಯಾನ್​ನ ತೆರೆದ ಬಾಗಿಲಿನಲ್ಲಿ ಮೊನಿರ್ ಅಹಮದ್ ದೇಹ ನೇತಾಡುತ್ತಾ ಬಿದ್ದಿತ್ತು. ಅವನ ಕೊಳಲು ಕೆಳಗೆ ರಸ್ತೆಯ ಮೇಲೆ ಬಿದ್ದು, ಅವನ ದೇಹದಿಂದ ಹರಿಯುತ್ತಿದ್ದ ರಕ್ತ ಅದನ್ನು ಆವರಿಸಿಕೊಂಡಾಗಿತ್ತು. ಅವನ ದೇಹ ದಾಟಿ ವ್ಯಾನ್ ಒಳ ಹೊಕ್ಕ ನನಗೆ ಎಲ್ಲೋ ರಕ್ತದ ಮಡುವಲ್ಲಿ ನಿಂತಂತಹ ಅನುಭವ. ಉಳಿದ ಹದಿನೈದು ಮಕ್ಕಳ ದೇಹ ಗುಂಡಿನ ಮಳೆಗೆ ಛಿದ್ರ ಛಿದ್ರವಾಗಿದ್ದವು. ಅವರ ಜೊತೆಗಿದ್ದ ಇಬ್ಬರು ನ್ಯಾನಿಗಳು ಕೂಡ ವ್ಯಾನ್​ನ ಕೊನೆಯ ಸೀಟ್​ನಲ್ಲಿ ಹೆಣವಾಗಿ ಬಿದ್ದಿದ್ದರು. ನಡುವಿನ ಸೀಟ್​ನಲ್ಲಿ ಬಿದ್ದಿದ್ದ ಹಾಜಿ ಬಿಲ್ ಪಕ್ಕದಲ್ಲಿನ ಫುಟ್​ಬಾಲ್ ರಕ್ತದೋಕುಳಿಯಲ್ಲಿ ಮಿಂದಿತ್ತು. ನಾನು ಬಹಳ ಹಚ್ಚಿಕೊಂಡಿದ್ದ ಫಾತಿಮಾ ವ್ಯಾನ್​ನ ಹಿಂಭಾಗದಲ್ಲಿ ಕಾಣಲಿಲ್ಲ. ತಿರುಗಿ ನೋಡಿದರೆ... ಬಾಗಿಲ ಮುಂದಿದ್ದ ಸೀಟಲ್ಲಿ ಕೂತಿದ್ದ ಆ ಮಗುವಿನ ಕತ್ತನ್ನು ಸೀಳಲಾಗಿತ್ತು. ಆರು ವರ್ಷದ ಮಗು! ಅದರ ಕೊರಳಿಂದ ಇನ್ನೂ ರಕ್ತ ಚಿಮ್ಮುತ್ತಲೇ ಇತ್ತು. ಹತ್ತಿರ ಹೋಗಿ ಕೂತು ತೊಡೆಯ ಮೇಲೆ ಹಾಕಿಕೊಂಡೆ. ಎಡಗೈಯಲ್ಲಿ ಬಾರ್ಬಿ ಡಾಲ್ ಹಿಡಿದ ಆಕೆ ಜೀವಂತವಾಗಿದ್ದಳು. ಅದು ಕುಟುಕು ಜೀವ ಹಿಡಿದು. ಕಣ್ಣು ಬಿಟ್ಟು ನನ್ನನ್ನೊಮ್ಮೆ ನೋಡಿದ ಆ ಮಗು ನಸುನಕ್ಕು ಕಣ್ಣು ಮುಚ್ಚಿತು.

(ಪೂರ್ಣ ಪಾಠಕ್ಕಾಗಿ ಘಾಂದ್ರುಕ್ ಕಾದಂಬರಿ ಓದಿ)

ನಿಜಪ್ರಸಾದಿಯ ಆತ್ಮಕಥನ

ಕಲ್ಯಾಣದ ಶರಣರಲ್ಲಿಯೇ ಅಪರೂಪದವರಾದ, ಶರಣರು ಉಂಡ ತಟ್ಟೆಗಳನ್ನು ಶುಚಿ ಮಾಡುತ್ತಿದ್ದ ಹಾಗೂ ಒಂದಗುಳ ಅನ್ನವೂ ಕೆಡಬಾರದೆನ್ನುವ ಕಾಯಕಪ್ರಜ್ಞೆಯುಳ್ಳ ನಿಜಪ್ರಸಾದಿ ಮರುಳಶಂಕರ ದೇವರನ್ನು ಕಥಾನಾಯಕನಾಗಿಸಿಕೊಂಡು ಆತ್ಮಕಥನ ಶೈಲಿಯಲ್ಲಿ ರಚಿಸಿದ ಕೃತಿ ಇದು. ಬಸವಾದಿ ಶರಣರ ಸಮಕಾಲೀನರಾದ ಮರುಳಶಂಕರದೇವರ ದೇಶ ಕಾಲದ ಚಿತ್ರಣ, ಆಫ್ಘಾನಿಸ್ತಾನದಿಂದ ಕಲ್ಯಾಣವರೆಗಿನ ಪ್ರವಾಸ, ಭಕ್ತಿ ಪಂಥದ ವಿವರಗಳು, ಕಲ್ಯಾಣದ ದಿನಚರಿ, ಅನುಭವ ಮಂಟಪ, ಮಹಾಮನೆಯ ಪರಿಸರ, ಲಿಂಗಾಯತ ಧರ್ಮದ ಸಾಹಿತ್ಯ-ಸಂಸ್ಕೃತಿಯ ವಿವರಗಳು, ಚರ್ಚೆಗಳನ್ನು ಕೃತಿ ಒಳಗೊಂಡಿದೆ. ‘ನನ್ನ ದೇಶ ಅಫಘಾನಿಸ್ತಾನ’ ಎಂಬ ಆತ್ಮಕಥನ ಶೈಲಿಯ ಕುತೂಹಲಕಾರಿ ನಿರೂಪಣೆಯೊಂದಿಗೆ ಆರಂಭಗೊಳ್ಳುವ ಕೃತಿಯಲ್ಲಿ ಅಫಘಾನಿಸ್ತಾನವು ಈ ಹಿಂದೆ ಅಪ್ಪಟ ಶಿವಭಕ್ತರ ದೇಶವಾಗಿರುವುದು, ಬುಡಕಟ್ಟು ಜನರ ನಾಡಾಗಿರುವುದು, ವಿಶ್ವಕ್ಕೆ ಅತ್ಯುತ್ತಮ ಕುದುರೆಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿರುವ ವಿವರಗಳನ್ನು ತಿಳಿಸುತ್ತ ಇತಿಹಾಸದ ಮೇಲೆಯೂ ಕೃತಿ ಬೆಳಕು ಚೆಲ್ಲುತ್ತದೆ.
  • ಮರುಳಶಂಕರದೇವರು: ಲೇಖಕರು-ಡಾ. ದಯಾನಂದ ಈರಪ್ಪ ನೂಲಿ
  • ಪ್ರಕಾಶಕರು: ಸಿರಿಗನ್ನಡ ಬಳಗ, ಚಿಕ್ಕೋಡಿ
  • ಬೆಲೆ: 1000 ರೂ.
  • ಪುಟಗಳು: 758

ಗ್ರಾಹಕಸ್ನೇಹಿ ಕೈಪಿಡಿ

ಕೇಂದ್ರ ಸರ್ಕಾರವು 1986ರಲ್ಲಿ ಮೊದಲ ಬಾರಿಗೆ ಗ್ರಾಹಕ ಸಂರಕ್ಷಣಾ ಅಧಿನಿಯಮ ಜಾರಿಗೊಳಿಸಿತು. ತದನಂತರ ಅಗತ್ಯಕ್ಕನುಗುಣವಾಗಿ ಈ ಅಧಿನಿಯಮವನ್ನು ಪರಿಷ್ಕರಿಸಿ, ಗ್ರಾಹಕ ಸಂರಕ್ಷಣಾ ಅಧಿನಿಯಮ 2019 ಜಾರಿಗೊಳಿಸಿತು. ಗ್ರಾಹಕರನ್ನು ಸಶಕ್ತಗೊಳಿಸುವ ಉದ್ದೇಶದಿಂದ ವ್ಯಾಪಕ ಬದಲಾವಣೆಗಳೊಂದಿಗೆ ಜಾರಿಗೊಳಿಸಿರುವ ಈ ನಿಯಮಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ವೇದಿಕೆ ವತಿಯಿಂದ ಈ ಕೈಪಿಡಿಯನ್ನು ಪ್ರಕಟಿಸಲಾಗಿದೆ. ಗ್ರಾಹಕರಿಗೆ ಉಪಯುಕ್ತವಾದ ಪದಗಳ ವಿವರಣೆ, ದೂರು ಸಲ್ಲಿಸುವ ವಿಧಾನ, ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಪರಿಹಾರ, ಮೇಲ್ಮನವಿ ಸಲ್ಲಿಕೆ, ಅಪರಾಧ ಮತ್ತು ದಂಡ ಮುಂತಾದ ವಿಷಯಗಳನ್ನು ಒಳಗೊಂಡಿದೆ.
  • ಗ್ರಾಹಕ ಸಂರಕ್ಷಣಾ ಅಧಿನಿಯಮ, 2019: ಲೇಖಕರು-ವೈ.ಜಿ. ಮುರಳೀಧರನ್
  • ಪ್ರಕಾಶಕರು: ಅಮೂಲ್ಯ ಪುಸ್ತಕ, ಬೆಂಗಳೂರು
  • ಬೆಲೆ: 60 ರೂ.
  • ಪುಟಗಳು: 64

ಯುವ ಮಾರ್ಗದರ್ಶಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಡಾ. ಕೆ.ಮುರಳಿಧರ ಅವರು ರಾಷ್ಟ್ರಮಟ್ಟದಲ್ಲಿ ಉದ್ಯೋಗ, ಉನ್ನತ ಮತ್ತು ವೃತ್ತಿಪರ ಶಿಕ್ಷಣಗಳಿಗೆ ನಡೆಯುವ ಪರೀಕ್ಷೆಗಳು ಹಾಗೂ ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಕುರಿತಂತೆ ಕನ್ನಡಿಗರಿಗೆ ಮಾಹಿತಿ ಕೊರತೆ ಇರುವುದನ್ನು ಗಮನಿಸಿದ್ದು, ಈ ಅಭಾವ ನೀಗಿಸುವ ಪ್ರಯತ್ನವಾಗಿ ಈ ಸಂಕಲನವನ್ನು ರೂಪಿಸಿದ್ದಾರೆ. ಕರ್ನಾಟಕದಲ್ಲಿರುವ ಉದ್ಯೋಗಾವಕಾಶಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳು, ಸ್ವಂತ ಉದ್ಯೋಗ ಮಾಡುವವರಿಗೆ ಸಿಗುವ ಸಕಾರಿ ಸವಲತ್ತುಗಳು, ಶಿಕ್ಷಣ ಸಂಬಂಧಿ ಪ್ರವೇಶ ಪರೀಕ್ಷೆಗಳು, ವಿದ್ಯಾರ್ಥಿ ವೇತನಪಟ್ಟಿ ಮುಂತಾದ ಉಪಯುಕ್ತ ಮಾಹಿತಿಗಳುಳ್ಳ ಲೇಖನಗಳಿರುವ ಪುಸ್ತಕ ಇದಾಗಿದ್ದು, ಯುವಜನತೆಗೆ ಮಾರ್ಗದರ್ಶಿಯಾಗಿದೆ. ್ಞ
  • ಕನ್ನಡ ಯುವಜನತೆಗೆ ಕೈ ದೀವಿಗೆ: ಸಂಪಾದಕರು- ಡಾ. ಕೆ. ಮುರಳಿಧರ, ರಾ.ನಂ.ಚಂದ್ರಶೇಖರ
  • ಪ್ರಕಾಶಕರು: ಕನ್ನಡ ಗೆಳೆಯರ ಬಳಗ, ಬೆಂಗಳೂರು
  • ಬೆಲೆ: 100 ರೂ.
  • ಪುಟಗಳು: 128
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net