ಸದಾಚಾರದ ಫಲ: ಮನೋಲ್ಲಾಸ

Manollasa
Published on
| ವೇದಾ ವಾತ್ಸಲ್ಯ, ಹುಬ್ಬಳ್ಳಿ 
ರಾಜನ ಆಸ್ಥಾನದಲ್ಲಿ ಸಾಧುವೊಬ್ಬ ಆಗಮಿಸಿ ‘ಮಹಾ ರಾಜಾ, ನಾಳೆ ನಿನ್ನ ರಾಜ್ಯದಲ್ಲಿರುವ ವಟವೃಕ್ಷದ ಕೆಳಗೆ ವಾಸಿಸುವ ಸರ್ಪದಿಂದ ನಿನ್ನ ಮೃತ್ಯು ಸಂಭವಿಸಲಿದೆ. ಹಿಂದಿನ ಜನ್ಮದ ದ್ವೇಷ ತೀರಿಸಿಕೊಳ್ಳಲು ಕಚ್ಚಲಿದೆೆ’ ಎಂದ. ರಾಜನು ಸಾಧುವಿನ ತಪಃಶಕ್ತಿ ತಿಳಿದ ಕಾರಣ, ಅವರ ಮಾತನ್ನು ಉದಾಸೀನ ಮಾಡದೇ ಚಿಂತ್ರಾಕಾಂತನಾದನು. ತಾನು ಆ ವಿಷಸರ್ಪದ ಮೃತ್ಯುವಿನಿಂದ ಹೇಗೆ ಪಾರಾಗಬೇಕು ಎಂದು ಆಲೋಚನಾ ಮಗ್ನನಾದ ರಾಜನಿಗೆ ಶತ್ರುವಿನ ಮನಸ್ಸನ್ನು ಗೆಲ್ಲಲು ಈ ಭೂಮಿಯಲ್ಲಿ ಪ್ರೇಮ ಹಾಗೂ ಸದ್ವರ್ತನೆಗಳಿಗಿಂತ ಪ್ರಬಲವಾದ ಅಸ್ತ್ರ ಮತ್ತೊಂದಿಲ್ಲ ಎಂಬ ವಿಚಾರ ಹೊಳೆಯಿತು.

ಹಾಗಾಗಿ ತನ್ನ ಒಳ್ಳೆಯ ನಡತೆಯ ಮೂಲಕವೇ ಶತ್ರುವಿನ ಮನಸನ್ನು ಗೆಲ್ಲಲ್ಲು ನಿರ್ಧರಿಸಿದ. ಹೀಗೆ ಯೋಚಿಸುತ್ತಲೇ ಅದನ್ನು ಕಾರ್ಯರೂಪಕ್ಕೆ ತರಲು, ಸರ್ಪದ ಬಿಲದಿಂದ ಹಿಡಿದು ತನ್ನ ಮಂಚದವರೆಗೂ ಹೂವಿನ ಹಾಸಿಗೆಯನ್ನು ಹಾಸಿ, ದಾರಿಯುದ್ದಕ್ಕೂ ಸುಗಂಧದ್ರವ್ಯಗಳನ್ನು ಚಿಮುಕಿಸಿದ. ಸರ್ಪಕ್ಕೆ ದಣಿವಾಗದಿರಲೆಂದು ದಾರಿಯ ಮಧ್ಯೆ ಅಲ್ಲಲ್ಲಿ ಬೆಳ್ಳಿಯ ಬಟ್ಟಲಲ್ಲಿ ಹಾಲನ್ನು ತುಂಬಿಸಿ ಇರಿಸಿದ. ರಾತ್ರಿ ಹಾವು ಬರುವಾಗ ಯಾರೂ ಕೂಡ ಅದಕ್ಕೆ ತೊಂದರೆ ಕೊಡಬಾರದು. ಅಲ್ಲದೆ, ಅರಮನೆಗೆ ಪ್ರವೇಶಿಸುವಾಗ ಅದಕ್ಕೆ ಪ್ರೇಮಪೂರ್ವಕವಾಗಿ ಸ್ವಾಗತಿಸಬೇಕು ಎಂದು ರಾಜ ಸೇವಕರಿಗೆ ಆದೇಶಿಸಿದ. ಮಧ್ಯರಾತ್ರಿ ತನ್ನ ಬಿಲದಿಂದ ಹೊರಬಂದ ಸರ್ಪ ರಾಜನ ಅರಮನೆಯತ್ತ ಬುಸುಗುಡುತ್ತ ಚಲಿಸತೊಡಗಿತು. ಆದರೆ, ದಾರಿಯ ಮಧ್ಯದಲ್ಲಿ ರಾಜ ತನಗೆಂದು ಮಾಡಿದಂತಹ ಸ್ವಾಗತವನ್ನು ನೋಡಿ ಅದಕ್ಕೆ ಆಶ್ಚರ್ಯವಾಯಿತು. ಹಾಲು ಕುಡಿಯುತ್ತ ಮೃದುವಾದ ಹೂವಿನ ಹಾಸಿಗೆಯ ಮೇಲೆ ಅಲ್ಲಲ್ಲಿ ವಿಶ್ರಾಂತಿಯನ್ನು ಪಡೆದು ಅದು ಮುಂದುವರಿಯಿತು. ಮುಂದೆ ಮುಂದೆ ಸಾಗುತ್ತಿದ್ದಂತೆ ಅದರ ಕ್ರೋಧ ಉಪಶಮನವಾಗುತ್ತ ಹೋಯಿತು. ಅರಮನೆಯನ್ನು ಪ್ರವೇಶಿಸುವಾಗ ದ್ವಾರಪಾಲಕರು ಅದಕ್ಕೆ ಯಾವುದೇ ಹಾನಿಯನ್ನೂ ಮಾಡದೇ ಸುಮ್ಮನೆ ನಿಂತಿದ್ದರು.

ಈ ರೀತಿಯ ವಿವೇಕ, ಸೌಜನ್ಯ ಹಾಗೂ ಗೌರವವನ್ನು ನೋಡಿದ ಸರ್ಪ ಮಂತ್ರಮುಗ್ಧವಾಯಿತು. ರಾಜ ತೋರಿದ ಪ್ರೇಮ ಹಾಗೂ ಸದಾಚಾರಕ್ಕೆ ಶರಣಾಗಿ ತನ್ನ ಮೂಲ ಉದ್ದೇಶವನ್ನೇ ಮರೆಯಿತು. ರಾಜನ ಹತ್ತಿರ ಬರುತ್ತಲೇ, ‘ರಾಜ! ನಿನ್ನನ್ನು ಕಚ್ಚಿ ಪೂರ್ವಜನ್ಮದ ದ್ವೇಷವನ್ನು ತೀರಿಸಿಕೊಳ್ಳಲು ಹೊರಟಿದ್ದೆ. ಆದರೆ, ನಾನು ನಿನ್ನ ಶತ್ರುವೆಂದು ತಿಳಿದರೂ ನೀನು ತೋರಿದ ಆದರ, ಪ್ರೀತಿಯ ಮುಂದೆ ಸೋತಿದ್ದೇನೆ. ವಿನಯಶಾಲಿಯೇ ವಿಜಯಶಾಲಿ ಎಂಬುದನ್ನು ನೀನು ನಿರೂಪಿಸಿರುವೆ’ ಎಂದು ಹೇಳಿ ತನ್ನಲ್ಲಿದ್ದ ಅಮೂಲ್ಯ ಮಣಿ ನೀಡಿ ವಾಪಸಾಯಿತು. ದುಷ್ಟರನ್ನು ಸೋಲಿಸುವ ಪ್ರಬಲ ಅಸ್ತ್ರ ಸದಾಚಾರ. ದ್ವೇಷವನ್ನು ಪ್ರೇಮದಿಂದ ಉಪಶಮನಗೊಳ್ಳಿಸಬೇಕೇ ಹೊರತು ಪುನಃ ದ್ವೇಷದಿಂದಲ್ಲ. ವಿವೇಕಯುತ ನಡೆ, ಸದ್ವಿಚಾರ ಎಂದಿಗೂ ಒಳ್ಳೆಯ ಫಲವನ್ನೇ ನೀಡುತ್ತವೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net