ವಾಜಗದ್ದೆ ಸರ್ಕಾರಿ ಕನ್ನಡ ಶಾಲೆಯಿಂದ ನಾಸಾದವರೆಗೆ; ಫ್ಯೂಚರ್ ಇನ್ವೆಸ್ಟಿಗೇಟರ್ ಸ್ಕಾಲರ್​ಶಿಪ್​ಗೆ ಆಯ್ಕೆಯಾದ ಹಳ್ಳಿ ಪ್ರತಿಭೆ ದಿನೇಶ ಹೆಗಡೆ

Masth Nasa
Published on

| ನಾಗರಾಜ ಮತ್ತಿಗಾರ

ಸರ್ಕಾರಿ ಪ್ರಾಥಮಿಕ ಶಾಲೆ ವಾಜಗದ್ದೆಯಲ್ಲಿ ಶಿಕ್ಷಣ ಕಲಿಕೆ ಆರಂಭಿಸಿದ ವಿದ್ಯಾರ್ಥಿಯೊಬ್ಬ ಇಂದು ಶೈಕ್ಷಣಿಕ ಲೋಕದ ಆಸಕ್ತರನ್ನು ತನ್ನೆಡೆಗೆ ನೋಡುವಂತೆ ಮಾಡಿದ್ದಾನೆ. ಹೌದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಶಿಗುಳಿ ಎಂಬ ಬೆರಳೆಣಿಕೆ ಮನೆಗಳಿರುವ ಪುಟ್ಟ ಊರಿನಲ್ಲಿ ಹುಟ್ಟಿದ ದಿನೇಶ ವಸಂತ ಹೆಗಡೆ ಅವರು ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಸ್ಕಾಲರ್​ಶಿಪ್​ಗೆ ಆಯ್ಕೆಯಾಗಿದ್ದಾರೆ. ಅಮೆರಿಕದ ಹಂಟ್ಸ್​ವಿಲ್​ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯ (ಯುಎಎಚ್)ದ ಎರಡನೇ ವರ್ಷದ ಪಿಎಚ್.ಡಿ ವಿದ್ಯಾರ್ಥಿ ದಿನೇಶ ಅವರು, ಸೌರಭೌತಶಾಸ್ತ್ರದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

ಈ ಸ್ಕಾಲರ್​ಶಿಪ್ ಏನು? ಇದನ್ನು ಪಡೆಯಲು ಇವರು ಅಧ್ಯಯನ ನಡೆಸಿದ ಕ್ರಮ? ವಿಶೇಷತೆ, ಸಂಶೋಧನಾ ವಿದ್ಯಾರ್ಥಿಯಾಗಿ ಇಂದಿನ ವಿದ್ಯಾರ್ಥಿಗಳಿಗೆ ಇವರು ನೀಡುವ ಸಂದೇಶ ಏನು? ಎಂಬುದರ ಕುರಿತು ಮಾತನಾಡಿದ್ದಾರೆ. ದಿನೇಶ ಅವರೊಂದಿಗೆ ವಿಜಯವಾಣಿ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಫ್ಯೂಚರ್ ಇನ್ವೆಸ್ಟಿಗೇಟರ್ ಆಫ್ ನಾಸಾ ಅರ್ಥ ಆಂಡ್ ಸ್ಪೇಸ್ ಸೈನ್ಸ್, ಟೆಕ್ನಾಲಜಿ ಪ್ರಶಸ್ತಿಯು ನಾಸಾದ ಸೈನ್ಸ್ ಮಿಷನ್ ಡೈರೆಕ್ಟರೇಟ್​ನ ನಾಲ್ಕು ಪ್ರಮುಖ ಆಶಯಗಳಂತೆ ಭೂ ವಿಜ್ಞಾನ, ಸೌರ ಭೌತವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ವಿಷಯಗಳಲ್ಲಿ ಸಂಶೋಧನೆ ಮಾಡುತ್ತಿರುವ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಕೊಡುವಂತಹದ್ದು. ಇದು ತುಂಬಾ ಸ್ಪರ್ಧಾತ್ಮಕವಾಗಿ ಇರುತ್ತದೆ. ವರ್ಷಕ್ಕೊಮ್ಮೆ ನಾಸಾವು ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತದೆ. ಅಮೆರಿಕದಲ್ಲಿರುವ ಬಹುತೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಹೀಗೆ ಭಾಗವಹಿಸಿದವರು ತಾವು ಮುಂದಿನ ಮೂರು ವರ್ಷ ಕಲಿಯುವ ವಿಷಯ, ಸಂಶೋಧನೆ, ಕ್ಷೇತ್ರ ಸಂಶೋಧನೆ ಬಗ್ಗೆ ಪ್ರಬಂಧವನ್ನು ರಚಿಸಿ ನಾಸಾಕ್ಕೆ ಸಲ್ಲಿಸಬೇಕಾಗುತ್ತದೆ. ಅಲ್ಲಿನ ಆಯ್ಕೆ ಸಮಿತಿಯಲ್ಲಿ ಇರುವವರಿಗೆ ನಾವು ನೀಡಿದ ಪ್ರಬಂಧ ಮನವರಿಕೆಯಾಗಿ, ನಮ್ಮ ಸಂಶೋಧನೆಯ ಮಹತ್ವದ ಆಧಾರದಲ್ಲಿ ಈ ಅನುದಾನಕ್ಕೆ ಆಯ್ಕೆ ಮಾಡುತ್ತಾರೆ. ಇದು ಮೂರು ವರ್ಷಕ್ಕೆ ನೀಡುವ ಅನುದಾನ. ಇದಕ್ಕೆ ನಾನೊಬ್ಬನೇ ಸ್ವತಂತ್ರವಾಗಿ ಪ್ರಬಂಧ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ನನಗೆ ಗೈಡ್ ಆಗಿರುವವರ ಸಹಕಾರ ಮುಖ್ಯವಾಗಿರುತ್ತದೆ. ಬಾಹ್ಯಾಕಾಶ ಹವಾಮಾನ ವಿಜ್ಞಾನಿ, ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕ ಡಾ. ನಿಕೋಲಾಯ್ ಪೊಗೊರೆಲೋವ್ ಅವರ ಸಲಹೆ, ಮಾರ್ಗದರ್ಶನದಲ್ಲಿ ನಾನು ಪ್ರಬಂಧವನ್ನು ಸಲ್ಲಿಸಿದ್ದೆ.

ನಾನು ಈಗ ಓದುತ್ತಿರುವ ವಿದ್ಯಾಲಯವು ಬಾಹ್ಯಾಕಾಶ ಸಂಶೋಧನೆಯಲ್ಲಿ ತುಂಬಾ ಪ್ರಖ್ಯಾತವಾದದ್ದು. ನನ್ನ ವಿಭಾಗದಲ್ಲಿ ಇರುವ ಹಿರಿಯರು ನನಗೆ ಸ್ಕಾಲರ್​ಶಿಪ್ ಕುರಿತು ಮಾಹಿತಿ ನೀಡಿದರು. ಮುಖ್ಯವಾದ ಪ್ರಸ್ತಾವನೆಯನ್ನು ನಾವೇ ಬರೆಯಬೇಕಾಗುತ್ತದೆ. ಕೇವಲ ಸಂಪಾದಕೀಯ ಸಲಹೆಯನ್ನು ನನ್ನ ರಿಸರ್ಚ್ ಗೈಡ್ ನೀಡುತ್ತಾರೆ. ಈ ಸ್ಕಾಲರ್​ಶಿಪ್​ಗೆ ಸಲ್ಲಿಸಿದ ಪ್ರಬಂಧ ರಚನೆ ಮಾಡಲು ತುಂಬಾ ಪ್ರಯತ್ನ ನಡೆಸಿದ್ದೇನೆ. ಹಗಲು ಪಾಠ, ಪ್ರವಚನ, ರಾತ್ರಿ ಸ್ಕಾಲರ್​ಶಿಪ್ ಪಡೆಯಲು ಅಧ್ಯಯನ ನಡೆಸಿದ್ದೇನೆ. ಎಸ್​ಡಿಎಂ ಉಜಿರೆಯಲ್ಲಿ ಪಿಯುಸಿ ಓದುತ್ತಿರುವಾಗ ಖಗೋಳಶಾಸ್ತ್ರ ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ದೂರದರ್ಶಕದ ಸಹಾಯದಿಂದ ರಾತ್ರಿ ಆಕಾಶ ಕಾಯಗಳನ್ನು ವೀಕ್ಷಣೆ ಮಾಡುತ್ತಿರುವಾಗ ನಾನು ಶನಿ ಗ್ರಹವನ್ನು ಮೊಟ್ಟ ಮೊದಲ ಬಾರಿಗೆ ನೋಡಿ, ನಾನು ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದಲ್ಲಿ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದೆ. ನಂತರ ಮೈಸೂರಿನ ಯುವರಾಜ ಕಾಲೇಜ್ ಮತ್ತು ಮಾನಸ ಗಂಗೋತ್ರಿಯಲ್ಲಿ ಎಂಎಸ್​ಸಿ ಮಾಡುವಾಗ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಇಸ್ರೋ, ಜವಾಹರಲಾಲ್ ಪ್ಲಾನಿಟೆರಿಯಂ ಸಂಸ್ಥೆಗಳಲ್ಲಿ ವಾಲಂಟರಿಯಾಗಿ ಪ್ರಾಜೆಕ್ಟ್ ಸಿದ್ಧಪಡಿಸುತ್ತಿದ್ದೆ. ಇವೆಲ್ಲ ನನಗೆ ಈಗ ಕೈಹಿಡಿದವು. ಪರಿಣಾಮಕಾರಿಯಾಗಿ ಪ್ರಬಂಧ ಮಂಡಿಸಲು ಸಹಕಾರಿಯಾಯಿತು. ಪ್ರಾಥಮಿಕ ಶಿಕ್ಷಣ ಪಡೆದ ಮಾಧ್ಯಮಕ್ಕೂ ಸಾಧನೆಗೂ ಸಂಬಂಧ ಇಲ್ಲ. ಕಲಿಕೆಯ ಸಾಮರ್ಥ್ಯ, ಬದಲಾವಣೆಯೊಂದಿಗೆ ಬೆಳೆಯುವ ರೀತಿ ಮಾತ್ರ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ನಾನು ಕನ್ನಡ ಮಾಧ್ಯಮದಲ್ಲಿ ಕಲಿತಿರುವುದು ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿದೆ. ಹೆದರಿಕೆ, ಹಿಂಜರಿಕೆ ಇರುವುದಿಲ್ಲ ಎನ್ನುವುದು ನನ್ನ ಭಾವನೆ. ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಬಾಹ್ಯಾಕಾಶ ವಿಜ್ಞಾನಿಯಾಗಿ ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎನ್ನುವ ಕನಸು ನನ್ನದು. ಇಂದಿನ ವಿದ್ಯಾರ್ಥಿಗಳಿಗೆ ನಾನು ಹೇಳುವ ಕಿವಿಮಾತೆಂದರೆ, ಕಠಿಣ ಪರಿಶ್ರಮಕ್ಕೆ ಪರ್ಯಾಯ ಇಲ್ಲ. ದೊಡ್ಡ ದೊಡ್ಡ ಕನಸನ್ನು ಕಾಣಿರಿ, ಅದಕ್ಕಾಗಿ ಹಗಲಿರುಳು ದುಡಿಯಿರಿ. ಮೆಡಿಕಲ್, ಇಂಜಿನಿಯರಿಂಗ್ ಮೇನಿಯಾದಿಂದ ಹೊರಬಂದು ಮೂಲ ವಿಜ್ಞಾನ ಸಂಶೋಧನೆ ಕ್ಷೇತ್ರದಲ್ಲಿ ಆಸಕ್ತಿಯನ್ನು ವಹಿಸಬೇಕು.

ಇವರನ್ನು ಮರೆಯಲಾಗದು...

ನಾನು ಹುಟ್ಟಿದ್ದು ಸಸಿಗುಳಿಯಲ್ಲಿಯಾದರೂ ನನ್ನ ಪೋಷಿಸಿದ್ದು ಅಜ್ಜನಮನೆಯ ಅಜ್ಜ ದಿ. ಕೃಷ್ಣ ಹೆಗಡೆ, ಅಜ್ಜಿ ದಿ. ಲಕ್ಷಿ್ಮ. ಇವರ ಆಶೀರ್ವಾದಪೂರ್ವಕ ಸಹಕಾರ. ಅಪ್ಪ ವಸಂತ, ಅಮ್ಮ ಗಂಗಾ, ಅಕ್ಕ ದಿವ್ಯಾ, ಮಾವಂದಿರು, ಅತ್ತೆಯರ ಪ್ರೋತ್ಸಾಹ ಸದಾ ಸ್ಮರಣೀಯ. ಅಷ್ಟೇ ಅಲ್ಲ, ವಾಜಗದ್ದೆಯ ಪರಿಸರ, ಲೈಬ್ರರಿ, ದೇವಸ್ಥಾನ, ಊರಿನ ಜನರು. ನಾಟಕ ಹೇಳಿ ಕೊಡುತ್ತಿದ್ದ ಯುವಕರು, ತಿಳಿಹೇಳುತ್ತಿದ್ದ ಹಿರಿಯರು, ಭಾಷಣ ಬರೆದುಕೊಡುತ್ತಿದ್ದ ಅಣ್ಣಂದಿರು ಇವರೆಲ್ಲರ ಸಹಕಾರ ಮರೆಯಲು ಅಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net