

ನಮ್ಮದೇ ಒಂದು ಬಳಗ. ಅಲ್ಲಿ ನಾನು, ಗಣಪ, ರಂಗಾಯಣ ರಘು, ಪ್ರೀತಮ್ ಗುಬ್ಬಿ ಒಟ್ಟಿಗೆ ಸೇರುವುದೇ ಒಂದು ಹಬ್ಬ. ಯಾವ ಸೆಲೆಬ್ರೆಷನ್ ಗೂ ಈ ಬಳಗದಲ್ಲಿ ಕೊರತೆ ಇಲ್ಲ. ತಮಾಷೆ, ಒಬ್ಬರನ್ನೊಬ್ಬರು ಕಾಲೆಳೆಯುವುದು. ಒಟ್ಟಿನಲ್ಲಿ ನಗೋದಷ್ಟೇ ನಮ್ಮ ಕೆಲಸ. ಸಿನಿಮಾ ವಿಚಾರ ಮಾತನಾಡುವುದು ಅಷ್ಟಕಷ್ಟೇ. ನನ್ನ ಮತ್ತು ಗಣಪನ ಸ್ನೇಹ ಶುರುವಾಗಿ ಎರಡು ದಶಕದ ಮೇಲಾಯಿತು. ಆಗ ನಾವೆಲ್ಲ ಸೀರಿಯಲ್ ಮಾಡುತ್ತಿದ್ದೆವು. ಬಳಿಕ ಅದು ಸಿನಿಮಾ ನಂಟಾಗಿ ಬದಲಾಯಿತು. ಅಲ್ಲಿಂದ ಎಲ್ಲರದ್ದೂ ಮತ್ತೊಂದು ಜರ್ನಿ. ಅವರವರ ಪಯಣದಲ್ಲಿ ಎಲ್ಲರೂ ಮೈಲುಗೈ ಸಾಧಿಸಿದ್ದಾರೆ. ಒಳ್ಳೇ ಬೆಳವಣಿಗೆ ಕಂಡಿದ್ದೇವೆ. ಆದರೆ, ಆವತ್ತಿನ ನಮ್ಮ ಸ್ನೇಹ ಇಂದಿಗೂ ಹಾಗೇ ಇದೆ. ಆಗ ಹೇಗೆ ನಮ್ಮ ಮಾತಿನ ಧಾಟಿ ಇತ್ತೋ, ಈಗಲೂ ಹಾಗೇ ಇದೆ. ಹಬ್ಬ-ಹರಿದಿನಗಳಲ್ಲಿ ಗಣೇಶನ ಮನೆಯಲ್ಲಿಯೇ ನಮ್ಮ ಠಿಕಾಣಿ. ಹೊಸ ವರ್ಷದ ಪಾರ್ಟಿ ಅಲ್ಲಿಯೇ. ಆರಂಭದಲ್ಲಿ ಸೀರಿಯಲ್ನಲ್ಲಿ ಕಾಣಿಸಿಕೊಂಡ ನಾವಿಬ್ಬರು, ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಕೊಂಚ ತಡವಾಯಿತೆನೋ. ಇತ್ತೀಚಿನ ದಿನಗಳಲ್ಲಿ ‘ಜೂಮ್, ‘ಆರೆಂಜ್’, ‘ಗಿಮಿಕ್’, ‘ಸುಂದರಾಂಗ ಜಾಣ’, ‘99’ ಮುಂತಾದ ಚಿತ್ರಗಳಲ್ಲಿ ಅವನೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಗಣಪನಿಂದ ಏನಾದರೂ ಪಡೆಯಬೇಕೆಂದರೆ ನಾನು ಆತನಲ್ಲಿನ ಶಿಸ್ತನ್ನು ತುಂಬ ಇಷ್ಟ ಪಡುತ್ತೇನೆ. ಬಹಳ ವ್ಯವಸ್ಥಿತವಾಗಿ ಎಲ್ಲವನ್ನೂ ನಿಭಾಯಿಸುತ್ತಾನೆ. ಆತ ಕುಟುಂಬ ಪ್ರಿಯ. ಈ ನಮ್ಮ ಸ್ನೇಹ ಸದಾ ಹೀಗೆ ಇರುತ್ತೆ, ಇರಲಿದೆ ಗೆಳೆಯ.
| ರವಿಶಂಕರ್ ಗೌಡ ನಟ, ಗಾಯಕ