

ಏನಾದರೂ ಮಾಡಿ ಸಿನಿಮಾ ನಟಿಯಾಗಿ ಖ್ಯಾತಿ ಹೊಂದಬೇಕೆಂದು ಬಯಸಿದ ಸುರೇಖಾ ಒಂದು ದಿನ ಯಾರಿಗೂ ಹೇಳದೆ ಮನೆ ಬಿಟ್ಟು ಮುಂಬೈಗೆ ಹೋದಳು. ಅವಕಾಶಗಳನ್ನು ಹುಡುಕಿಕೊಂಡು ಮುಂಬೈನ ಸ್ಟುಡಿಯೋಗಳಿಗೆ, ನಿರ್ವಪಕರ ಕಚೇರಿಗಳಿಗೆ ಎಡತಾಕಿದಳು. ಪಾತ್ರಗಳನ್ನು ಕೊಡುವುದಾಗಿ, ಕೊಡಿಸುವುದಾಗಿ ಅವಳಿಗೆ ಹೇಳಿದ ಬಹುತೇಕ ಜನರು ಅವಳನ್ನು ದೈಹಿಕವಾಗಿ ಬಳಸಿಕೊಂಡು ಕೈಬಿಟ್ಟರು. ಆದರೆ ಅವಳ ಬಗ್ಗೆ ಮರುಕಗೊಂಡ ಒಬ್ಬ ನಿರ್ವಪಕ ಅವಳಿಗೆ ಸಮೂಹ ನೃತ್ಯವೊಂದರಲ್ಲಿ ಸಿನಿಮಾ ಹೀರೋಯಿನ್ ಜೊತೆಗಾರ್ತಿಯಾಗಿ ನಟಿಸುವ ಪಾತ್ರ ಕೊಟ್ಟ. ಮುಂದೆ ಅಂಥ ಪಾತ್ರಗಳೇ ಅವಳಿಗೆ ಯಥೇಚ್ಛವಾಗಿ ಲಭಿಸತೊಡಗಿದವು. ಸುರೇಖಾ ಇದೇ ತನ್ನ ಹಣೆಬರಹವೆಂದುಕೊಂಡು ನಾಯಕಿಯ ಪಾತ್ರಗಳನ್ನು ಅರಸುವುದನ್ನು ಬಿಟ್ಟಳು.
ಮುಂಬೈಗೆ ಬಂದಾಗಿನಿಂದ ಆಕೆ ಕುಟುಂಬದ ಸದಸ್ಯರೊಡನೆ ಸಂಪರ್ಕ ಕಡಿತಗೊಳಿಸಿದ್ದಳು. ಅವಳ ತಂದೆ-ತಾಯಿ ಕೆಲದಿನಗಳ ಕಾಲ ಅವಳಿಗಾಗಿ ಹುಡುಕಿ ಪೊಲೀಸರಿಗೆ ದೂರು ನೀಡಿದರು. ಅವಳು ಸಿಗದಿದ್ದಾಗ ಅವಳ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿದರು.
ಸಿಕ್ಕಸಿಕ್ಕವರೊಡನೆ ಹಾಸಿಗೆ ಹಂಚಿಕೊಂಡಿದ್ದ ಕಾರಣ ಮುಂಬೈಗೆ ಹೋದ ಒಂದು ವರ್ಷದಲ್ಲೇ ಸುರೇಖಾ ಗರ್ಭವತಿಯಾದಳು. ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋದಾಗ, ‘ಗರ್ಭ ಧರಿಸಿ 20 ವಾರಗಳು ಮುಗಿದಿರುವ ಕಾರಣ ಗರ್ಭಪಾತ ಮಾಡಲಾಗುವುದಿಲ್ಲ’ ಎಂದರು ವೈದ್ಯರು. ಅನಿವಾರ್ಯವಾಗಿ ಸುರೇಖಾ ಹೆಣ್ಣುಮಗುವನ್ನು ಹೆತ್ತಳು. ಆಗಲೂ ಆಕೆ ತನ್ನ ತಂದೆ-ತಾಯಿಗೆ ತಾನೆಲ್ಲಿದ್ದೇನೆ ಎಂದು ತಿಳಿಸಲಿಲ್ಲ. ಆಕೆಯ ಸಹ ನಟಿಯರು ಅವಳಿಗೆ ಬಾಣಂತನ ಮಾಡಿ ಮಗಳನ್ನು ಸಾಕಲು ಅವಳಿಗೆ ಸಹಾಯ ಮಾಡಿದರು.
ಮಗಳಿಗೆ ಆರು ತಿಂಗಳು ತುಂಬಿದ ನಂತರ, ತಂದೆಯಿಲ್ಲದ ಮಗಳನ್ನು ತಾನೊಬ್ಬಳೇ ಸಾಕುವುದು ಹೇಗೆ ಎಂದು ಯೋಚನೆ ಮಾಡಲಾರಂಭಿಸಿದಳು. ಮದುವೆ ಮಾಡಿಕೊಳ್ಳದಿರುವ ಬಗ್ಗೆ ಆಕೆಗೆ ಚಿಂತೆ ಮೂಡಿತು. ಅದೇ ಸಮಯದಲ್ಲಿ ಅವಳಿಗೆ ತನ್ನಂತೆಯೇ ಸಿನಿಮಾದಲ್ಲಿ ಪಾತ್ರಗಳನ್ನು ಹುಡುಕಿಕೊಂಡು ಬಂದಿದ್ದ ರಾಕೇಶ್ ಎನ್ನುವವನು ಪರಿಚಯವಾದ. ಕೆಲ ಸಮಯದ ನಂತರ ಅವರಿಬ್ಬರ ಮಧ್ಯೆ ದೈಹಿಕ ಸಂಬಂಧ ಬೆಳೆಯಿತು. ರಾಕೇಶ್ ತಾನು ಸುರೇಖಾಳನ್ನು ಮದುವೆಯಾಗಿ ಅವಳ ಮಗುವಿಗೆ ತಂದೆಸ್ಥಾನವನ್ನು ಕೊಡುವುದಾಗಿ ಹೇಳಿದಾಗ ಸುರೇಖಾ ಸಂತಸದ ತುದಿಗೇರಿದಳು. ‘ಮೊದಲಿಗೆ ನಾವಿಬ್ಬರೂ ಸಹಜೀವನ ಮಾಡೋಣ, ಒಂದು ವರ್ಷದ ನಂತರ ಲಗ್ನವಾಗೋಣ’ ಎಂದು ರಾಕೇಶ್ ಹೇಳಿದಾಗ ಒಪ್ಪಿದಳು.
ಇಬ್ಬರೂ ಒಂದು ರೂಮಿನ ಅಪಾರ್ಟ್ವೆುಂಟೊಂದನ್ನು ಬಾಡಿಗೆಗೆ ಹಿಡಿದು ಸಹಜೀವನ ನಡೆಸತೊಡಗಿದರು. ರಾಕೇಶ್ ವಿಚಿತ್ರ ವ್ಯಕ್ತಿ. ಯಾವುದೇ ಮನೆಯಲ್ಲಿಯೂ ಒಂದು ತಿಂಗಳಿಗಿಂತ ಹೆಚ್ಚಾಗಿ ವಾಸಿಸಲು ಬಯಸುತ್ತಿರಲಿಲ್ಲ. ಸರ್ವಿಸ್ ಅಪಾರ್ಟ್ವೆುಂಟ್ಗಳು ಅಥವಾ ಸುಸಜ್ಜಿತ ಮನೆಗಳನ್ನೇ ಒಂದು ವಾರದಿಂದ ಒಂದು ತಿಂಗಳ ಅವಧಿಯವರೆಗೆ ಬಾಡಿಗೆಗೆ ಹಿಡಿಯುತ್ತಿದ್ದ. ಕಾರಣವೇನೆಂದು ಕೇಳಿದರೆ, ‘ಯಾವುದಾದರೂ ಮನೆಯನ್ನು ದೀರ್ಘಕಾಲಕ್ಕೆ ಬಾಡಿಗೆ ಹಿಡಿದರೆ ಅದರ ಅಡ್ವಾನ್ಸ್, ಕರೆಂಟ್ ಮತ್ತು ನೀರಿನ ಬಿಲ್ಲು ಇತ್ಯಾದಿ ತೊಂದರೆಗಳು ಬರುತ್ತವೆ. ಬಾಡಿಗೆ ಹೆಚ್ಚಾದರೂ ಒಂದು ತಿಂಗಳ ಅವಧಿಗೆ ಸುಸಜ್ಜಿತ ಮನೆಯನ್ನು ಪಡೆಯುವುದೇ ಒಳ್ಳೆಯದು, ಏಕೆಂದರೆ ಪೀಠೋಪಕರಣಗಳನ್ನು ಕೊಳ್ಳುವ ತಂಟೆಯೇ ಬರುವುದಿಲ್ಲ’ ಎಂದ. ಸುರೇಖಾಗೆ ಈ ವ್ಯವಸ್ಥೆ ಇಷ್ಟವಾಗದಿದ್ದರೂ ಮದುವೆಯಾದ ನಂತರ ರಾಕೇಶ್ನನ್ನು ಸರಿಪಡಿಸುವೆ ಎಂದು ಸುಮ್ಮನಾಗಿದ್ದಳು.
ಹೀಗೆಯೇ ಒಂದು ವರ್ಷ ಕಳೆಯಿತು. ರಾಕೇಶ್ ಅವಳನ್ನು ಮದುವೆಯಾಗುವ ಪ್ರಸ್ತಾಪವನ್ನೇ ಮಾಡಲಿಲ್ಲ. ಸುರೇಖಾ ಮಗಳನ್ನು ಯುಕೆಜಿ ಶಾಲೆಗೆ ಸೇರಿಸುವ ಸಮಯ ಬಂದಾಗ, ‘ಒಂದು ಸರಿಯಾದ ಮನೆಯನ್ನು ಬಾಡಿಗೆಗೆ ಹಿಡಿದು ಇಬ್ಬರೂ ಲಗ್ನವಾಗೋಣ’ ಎಂದು ರಾಕೇಶ್ಗೆ ಹೇಳಿದಳು. ಆತ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಕಾರಣದಿಂದ ದಿನನಿತ್ಯ ಅವರ ಮಧ್ಯೆ ವಾದವಿವಾದಗಳಾಗತೊಡಗಿದವು. ಅದೇ ಸಮಯಕ್ಕೆ ಸುರೇಖಾಗೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅಲೋಕ್ ಎನ್ನುವವನು ಪರಿಚಿತನಾದ. ಕೆಲವೇ ದಿನಗಳ ಪರಿಚಯದ ನಂತರ ಅಲೋಕ್ ಸುರೇಖಾಳಿಗೆ ತಾನು ಅವಳತ್ತ ಅನುರಕ್ತನಾಗಿರುವುದಾಗಿ ತಿಳಿಸಿದ. ಆ ಸಮಯದಲ್ಲಿ ಸುರೇಖಾಗೂ ರಾಕೇಶ್ ಬೇಡವಾಗಿದ್ದ. ಹೀಗಾಗಿ ಅಲೋಕ್ನನ್ನು ಮುಕ್ತವಾಗಿಯೇ ಭೇಟಿಯಾಗತೊಡಗಿದಳು.
ರಾಕೇಶ್ಗೆ ಈ ವಿಷಯ ತಿಳಿದಾಗ ಸುರೇಖಾಳ ಜೊತೆ ಜಗಳವಾಡಿದ. ‘ನಾನು ಅಲೋಕ್ನನ್ನು ಮದುವೆಯಾಗುವ ತೀರ್ಮಾನ ಮಾಡಿರುವೆ, ನೀನು ನಿನ್ನ ದಾರಿ ನೋಡಿಕೋ’ ಎಂದಳು ಸುರೇಖಾ. ಎರಡು ವಾರಗಳ ನಂತರ ರಾಕೇಶ್ ಹೊಸದೊಂದು ಅಪಾರ್ಟ್ವೆುಂಟ್ ಅನ್ನು ಕೇವಲ ವಾರದ ಅವಧಿಗೆ ಬಾಡಿಗೆಗೆ ಪಡೆದ. ಅಲ್ಲಿಗೆ ಹೋದ ನಾಲ್ಕು ದಿನಗಳ ನಂತರ ಒಂದು ಮಧ್ಯಾಹ್ನ ರಾಕೇಶ್ ಮತ್ತು ಸುರೇಖಾ ನಡುವೆ ಜಗಳ ನಡೆಯಿತು. ಅವರಿಬ್ಬರ ನಡುವಿನ ಕೂಗಾಟ ಎಷ್ಟು ಜೋರಿತ್ತೆಂದರೆ ಅಕ್ಕಪಕ್ಕದ ಮನೆಯವರು ಬಿಲ್ಡಿಂಗ್ನ ಮ್ಯಾನೇಜರ್ಗೆ ಕರೆ ಮಾಡಿ ದೂರಿತ್ತರು. ಏನಾಗುತ್ತಿದೆ ಎಂದು ನೋಡಲು ಮ್ಯಾನೇಜರ್ ರಾಕೇಶ್ನ ಮನೆಗೆ ಹೋದಾಗ ಮುಂಬಾಗಿಲು ತೆರೆದಿತ್ತು. ಹಾಲ್ನಲ್ಲಿ್ಲ್ದ ಸೋಫಾದ ಮೇಲೆ ಸುರೇಖಾ ಕುಳಿತಿದ್ದಳು. ಅವಳ ತೊಡೆಯ ಮೇಲೆ ರಾಕೇಶ್ ಮಲಗಿದ್ದು ಅವನ ಕುತ್ತಿಗೆಯಿಂದ ರಕ್ತ ಸುರಿಯುತ್ತಿತ್ತು. ಗಾಬರಿಯಾದ ಮ್ಯಾನೇಜರ್ ಏನಾಯಿತೆಂದು ಕೇಳಿದಾಗ ಸುರೇಖಾ ಏನನ್ನೂ ಹೇಳಲಿಲ್ಲ.
ರಾಕೇಶ್ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾಗ, ಆತ ಸತ್ತು ಒಂದು ಗಂಟೆ ಮೀರಿದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿಯಿತ್ತರು. ಪೊಲೀಸರು ಸುರೇಖಾಳನ್ನು ವಿಚಾರಿಸಿದರು. ಅವಳು ಮೌನಕ್ಕೆ ಶರಣಾಗಿದ್ದಳು. ಕಡೆಗೆ ಅವಳ ಮಗಳನ್ನು ಕೇಳಿದಾಗ ಆ ಬಾಲಕಿ ತನ್ನ ತಾಯಿ ರಾಕೇಶ್ನಿಗೆ ಕತ್ತರಿಯಿಂದ ಇರಿದಿದ್ದಾಗಿ ತಿಳಿಸಿದಳು. ಪೊಲೀಸರು ಸ್ಥಳದ ಮಹಜರ್ ಮಾಡಿದಾಗ ರಕ್ತಸಿಕ್ತ ಕತ್ತರಿ ಸೋಫಾದ ಸಂದಿಯಲ್ಲಿ ಸಿಕ್ಕಿತು.
ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ರಾಕೇಶ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆತನ ಕೆರಾಟಿಡ್ ಆರ್ಟರಿ ರಕ್ತನಾಳಕ್ಕೆ ಇರಿತವಾದ ಕಾರಣ ಆತ ಸತ್ತಿದ್ದಾನೆ ಎಂದು ತಿಳಿಯಿತು. ಪೊಲೀಸರು ಕೊಲೆಯ ಪ್ರಕರಣ ದಾಖಲು ಮಾಡಿ ಸುರೇಖಾಳನ್ನು ಬಂಧಿಸಿದರು. ಅವಳ ಮೊಬೈಲ್ ಫೋನನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಅಲೋಕ್ನನ್ನು ಠಾಣೆಗೆ ಕರೆಸಿದರು. ಆತ ತಾವಿಬ್ಬರೂ ಮದುವೆಯಾಗಲು ತೀರ್ವನಿಸಿದ್ದೆವೆಂದು ತಿಳಿಸಿ ತಮ್ಮ ಸಂಬಂಧದ ವಿರುದ್ಧ ರಾಕೇಶ್ ಪ್ರತಿದಿನ ಸುರೇಖಾಳೊಡನೆ ಜಗಳ ಮಾಡುತ್ತಿದ್ದ ಕಾರಣದಿಂದ ಸುರೇಖಾ ಅವನ ಕೊಲೆ ಮಾಡಿರಬಹುದು ಎಂದ.
ಕಡೆಗೂ ಸುರೇಖಾ ಬಾಯಿ ಬಿಡಲಿಲ್ಲ. ಈ ಪ್ರಕರಣದಲ್ಲಿ ಅವಳ ಮೂರೂವರೆ ವರ್ಷದ ಮಗಳು ಪ್ರತ್ಯಕ್ಷದರ್ಶಿಯಾಗಿದ್ದಳು. ಅಕ್ಕಪಕ್ಕದ ಮನೆಯವರೂ ಕೊಲೆಯಾದ ದಿನ ನಡೆದ ಜಗಳದ ಬಗ್ಗೆ ಸಾಕ್ಷ್ಯ ನುಡಿದರು. ನ್ಯಾಯಾಲಯದಲ್ಲಿ ಸುರೇಖಾ ತಪ್ಪಿತಸ್ಥೆಯೆಂದು ತೀರ್ವನವಾಯಿತು. ಸುರೇಖಾ ಕೋಪದ ಭರದಲ್ಲಿ ರಾಕೇಶ್ನನ್ನು ಇರಿದಳೇ ಹೊರತು ಅವಳ ಕೃತ್ಯ ಪೂರ್ವನಿಯೋಜಿತವಾಗಿರಲಿಲ್ಲ ಎಂದು ತೀರ್ವನಿಸಿದ ನ್ಯಾಯಾಲಯ ಅವಳಿಗೆ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಸದ್ಯ ಆಕೆ ತನ್ನ ಮಗಳೊಂದಿಗೆ ಜೈಲಿನಲ್ಲಿದ್ದಾಳೆ.
ಚಿಕ್ಕಂದಿನಿಂದಲೂ ಖ್ಯಾತಿ ಮತ್ತು ಹಣದ ಹಿಂದೆ ಬಿದ್ದ ಸುರೇಖಾ ತನ್ನ ಕುಟುಂಬವನ್ನು ಬದಿಗಿರಿಸಿ, ಸ್ವೇಚ್ಛಾಜೀವನದಿಂದ ಬಾಳನ್ನೇ ಹಾಳುಮಾಡಿಕೊಂಡಳು. ಹೀಗಾಗಿಯೇ ಡಿ.ವಿ.ಜಿಯವರು ‘ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ, ನತ್ಯಾಶೆಯಿಂದರಸಿ ಮಿಕ್ಕಲ್ಲ ಜಗವ, ನೊತ್ತಟ್ಟಿಗಿಡುವೆವೆನಡ, ನಷ್ಟವಾರಿಗೋ ಮರುಳೆ? ಬತ್ತುವುದು ನಿನ್ನಾತ್ಮ’ ಮಂಕುತಿಮ್ಮ ಎಂದರು. ಅತಿಯಾದ ಆಸೆಯಿಂದ ಸಿರಿ, ಸಂಪತ್ತು ಮತ್ತು ಸುಖವನ್ನರಿಸಿ ಉಳಿದದ್ದನ್ನೆಲ್ಲ ಗೌಣ್ಯ ಮಾಡಿದರೆ ನಷ್ಟವಾಗುವುದು ನಮಗೇ ಎನ್ನುವ ಈ ಕಗ್ಗ ಸುರೇಖಾಳ ಬಾಳನ್ನೇ ಬಿಂಬಿಸುತ್ತದೆಯಲ್ಲವೇ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)