ಆ ಕ್ಷಣ: ಅನುಕರಣೆಯಿಂದ ಆಪತ್ತು

edit 3
Published on

ನಲ್ವತ್ತು ವರ್ಷ ವಯಸ್ಸಿನ ಸಂಧ್ಯಾ ಮಹಾನಗರವೊಂದರ ಖಾಸಗಿ ಸಂಸ್ಥೆಯಲ್ಲಿ ಸ್ವಾಗತಕಾರಿಣಿ. ಆಕೆಯ ಪತಿ ಮನೋಹರ್ ದುಬೈನ ಕಂಪನಿಯೊಂದರಲ್ಲಿ ಇಂಜಿನಿಯರ್. ಅವರ ಏಕೈಕ ಪುತ್ರಿ 16 ವರ್ಷದ ಸುಧಾ ಸ್ಥಳೀಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿ. ಮನೋಹರ್ ಆರು ತಿಂಗಳಿಗೊಮ್ಮೆರಜೆಮೇಲೆ ಊರಿಗೆ ಬರುತ್ತಿದ್ದು, ಪ್ರತಿ ತಿಂಗಳೂ ಮನೆಗೆ ಹಣವನ್ನು ರವಾನಿಸಿ ಹೆಂಡತಿ-ಮಗಳು ಸುಖದಿಂದಿರುವಂತೆ ನೋಡಿಕೊಳ್ಳುತ್ತಿದ್ದ. ಇವರದ್ದು ಶ್ರೀಮಂತ ಅಲ್ಲದಿದ್ದರೂ ಮಧ್ಯಮವರ್ಗದ ಕುಟುಂಬವಾಗಿದ್ದು ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಸಂಧ್ಯಾಗೆ ಬಾಲ್ಯಸ್ನೇಹಿತೆ ಕವಿತಾಳಂತೆ ತಾನೂ ಶ್ರೀಮಂತಳಾಗಬೇಕು, ಐಷಾರಾಮಿ ಕಾರ್​ಗಳಲ್ಲಿ ಓಡಾಡಬೇಕು, ದೊಡ್ಡ ಬಂಗಲೆಯಲ್ಲಿ ವಾಸಿಸಬೇಕು, ವಿದೇಶಗಳಲ್ಲಿ ಸುತ್ತಬೇಕು ಎನ್ನುವ ಬಯಕೆ ಅತಿಯಾಗಿತ್ತು. ತನ್ನ ಸಂಬಳವನ್ನೆಲ್ಲ ಆಕೆ ಮೋಜಿಗಾಗಿಯೇ ಖರ್ಚು ಮಾಡಿ ಗಂಡ ಕಳುಹಿಸುವ ಹಣದಲ್ಲಿ ಮನೆಯ ಖರ್ಚುಗಳನ್ನು ನಿಭಾಯಿಸುತ್ತಿದ್ದಳು. ತಾನು ಗಳಿಸುತ್ತಿರುವ ಹಣ ಸಾಲದೆಂದು ಆಕೆಗೆ ಅನಿಸಿದಾಗ ಚೀಟಿ ವ್ಯವಹಾರ ಪ್ರಾರಂಭಿಸಿದಳು. ಆಕೆಯ ಕೈಯಲ್ಲಿಯೂ ಸಾಕಷ್ಟು ಹಣ ಓಡಾಡತೊಡಗಿತು.

ಸುಧಾಳಿಗೂ ತಾಯಿಯಂತೆಯೇ ಫ್ಯಾಷನ್ ಉಡುಗೆ-ತೊಡುಗೆಗಳ ಮತ್ತು ಪ್ರವಾಸದ ಹುಚ್ಚು. ಒಂದು ದಿನ ಮಾಲ್​ವೊಂದರಲ್ಲಿ ಗೆಳತಿಯರೊಡನೆ ಸುಧಾ ಸಿನಿಮಾ ನೋಡಲು ಹೋದಾಗ, ಆಕೆಯ ಗೆಳತಿ ಮೋಹನ್ ಎನ್ನುವವನನ್ನು ಆಕೆಗೆ ಪರಿಚಯಿಸಿದಳು. 30-32 ವರ್ಷದ ಮೋಹನ್ ಸ್ಪುರದ್ರೂಪಿಯಾಗಿದ್ದು, ಅದೇ ನಗರದಲ್ಲಿ ಪೆಟ್ರೋಲ್ ಬಂಕ್​ನ ಮಾಲೀಕನಾಗಿದ್ದು ಹಲವಾರು ಇತರ ಬಿಜಿನೆಸ್​ಗಳನ್ನು ನಡೆಸುತಿದ್ದ. ಆತನನ್ನು ನೋಡಿದಕೂಡಲೇ ಸುಧಾ ಅವನತ್ತ ಅನುರಕ್ತಳಾದಳು. ಮೋಹನ್ ತಾನು ಸಿನಿಮಾ ತೆಗೆಯುವೆ ಎಂದು ಹೇಳಿದ ನಂತರವಂತೂ ಸುಧಾ ತಾನೇತಾನಾಗಿ ಪ್ರತಿದಿನವೂ ಅವನನ್ನು ಸಂರ್ಪಸತೊಡಗಿದಳು. ಕಾಲೇಜಿಗೆ ಹೋಗುವುದನ್ನು ತಪ್ಪಿಸಿ ಅವನ ಜತೆಯೇ ಕಾಲಕಳೆಯತೊಡಗಿದಳು. ತನ್ನನ್ನು ಚಿತ್ರನಟಿಯನ್ನಾಗಿ ಮಾಡುವುದಾಗಿ ಮೋಹನ್ ಹೇಳಿದಾಗಲಂತೂ ಸುಧಾಗೆ ಸ್ವರ್ಗವೇ ಕೈಗೆಟಕಿದಂತಾಗಿತ್ತು.

ಮೋಹನ್ ದೈಹಿಕ ಸಂಪರ್ಕ ಅಪೇಕ್ಷಿಸಿದಾಗ ಆಕೆ ಸಂತಸದಿಂದಲೇ ಒಪ್ಪಿದಳು. ಹೋಟೆಲಿನ ಕೋಣೆಯಲ್ಲಿ ತಾವಿಬ್ಬರೂ ಕಳೆದ ಖಾಸಗಿ ಕ್ಷಣಗಳ ವಿಡಿಯೋವನ್ನೂ ಅವರು ಮಾಡಿಕೊಂಡರು. ಅವರಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಇದನ್ನು ತಾಯಿಯಿಂದ ಸುಧಾ ಗುಟ್ಟಾಗಿಯೇ ಇಟ್ಟಿದ್ದಳು. ಏತನ್ಮಧ್ಯೆ, ಹಲವಾರು ಕಾರಣಗಳಿಂದ ಸಂಧ್ಯಾಳ ಚೀಟಿ ವ್ಯವಹಾರ ಕುಸಿದುಹೋಯಿತು. ಚೀಟಿ ಹಾಕಿದವರೆಲ್ಲರೂ ಹಣ ವಾಪಸ್ ಮಾಡುವಂತೆ ಪೀಡಿಸತೊಡಗಿದರು. ಸುಧಾ ಮನೆಯಲ್ಲಿದ್ದ ಆಭರಣಗಳನ್ನು ಅಡವಿಟ್ಟು ಕೆಲವರ ಹಣ ವಾಪಸ್ ಮಾಡಿದಳಾದರೂ ಇನ್ನೂ ಹತ್ತು ಲಕ್ಷ ರೂ.ಗಳನ್ನು ವಾಪಸ್ ಮಾಡಬೇಕಿತ್ತು. ಚೀಟಿ ಹಾಕಿದವರು ಆಕೆಯ ಮನೆಯಲ್ಲದೆ ಕಚೇರಿಗೂ ಬರುವುದಕ್ಕೆ ಪ್ರಾರಂಭಿಸಿ ರೌಡಿಗಳನ್ನೇ ಕರೆತಂದಾಗ ಆಕೆಗೆ ದಿಕ್ಕೇ ತೋಚದಂತಾಯಿತು. ಗಂಡನಿಗೆ ವಿಷಯ ತಿಳಿಸಿ ಅವನ ಸಹಾಯ ಪಡೆಯಬೇಕೆಂಬ ಯೋಚನೆ ಅವಳ ಮನದಲ್ಲಿ ಬಂದಿತಾದರೂ ಆತ ಕೋಪಗೊಂಡು ತನ್ನಿಂದ ದೂರವಾಗಬಹುದೆಂದು ಹೆದರಿ ತಿಳಿಸಲಿಲ್ಲ.

ಒಂದು ದಿನ ಸುಧಾ ಸ್ನಾನಕ್ಕೆ ಹೋದ ಸಮಯದಲ್ಲಿ ಅವಳ ಮೊಬೈಲ್​ಗೆ ಬಂದ ಕರೆಗೆ ಉತ್ತ್ತಸಲು ಸಂಧ್ಯಾ ಫೋನನ್ನು ತೆಗೆದುಕೊಂಡಳು. ಕರೆ ಇದ್ದಕ್ಕಿದ್ದಂತೆ ನಿಂತಾಗ ಕುತೂಹಲಕ್ಕಾಗಿ ಆಕೆ ಮಗಳ ಫೋನಿನಲ್ಲಿದ್ದ ಫೋಟೋಗಳು ಹಾಗೂ ವೀಡಿಯೊಗಳನ್ನು ನೋಡಲಾರಂಭಿಸಿದಳು. ಮಗಳ ನಗ್ನಚಿತ್ರಗಳು ಹಾಗೂ ಆಕೆ ಅಪರಿಚಿತ ಯುವಕನೊಬ್ಬನ ಜತೆಗೆ ನಡೆಸಿದ್ದ ಸೆಕ್ಸ್ ವೀಡಿಯೊ ನೋಡಿ ಹೌಹಾರಿದಳು. ಬಾತ್​ರೂಂನಿಂದ ಬಂದ ಸುಧಾಳನ್ನು ‘ನಮ್ಮ ಕುಟುಂಬದ ಮಾನವನ್ನು ಹರಾಜಿಗೆ ಹಾಕಿದೆ’ ಎಂದು ತರಾಟೆಗೆ ತೆಗೆದುಕೊಂಡಳು. ಸುಧಾ ತಾನು ಮೋಹನ್​ನನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಆತ ಶ್ರೀಮಂತರ ಒಬ್ಬನೇ ಮಗ ಎಂದಳು. ಅವನ ಬಳಿ ಐಷಾರಾಮಿ ಕಾರು, ಬಂಗಲೆಗಳಿವೆ, ಅವನು ತೆಗೆಯುವ ಚಲನಚಿತ್ರದಲ್ಲಿ ತಾನೇ ಹೀರೋಯಿನ್ ಪಾತ್ರ ಮಾಡುವೆ ಎಂದು ಹೇಳಿ ತಾವಿಬ್ಬರೂ ಮದುವೆ ಆಗುವುದಾಗಿಯೂ ಹೇಳಿದಳು. ಈ ಮಾಹಿತಿ ಪಡೆದ ಸಂಧ್ಯಾಳ ಮನದಲ್ಲಿ ಪ್ಲಾನ್ ಒಂದು ರೂಪುಗೊಂಡಿತು.

‘ಇನ್ಮುಂದೆ ಅವನನ್ನೇನಾದರೂ ಸಂರ್ಪಸಿದರೆ ನಿನ್ನನ್ನು ಕಾಲೇಜಿನಿಂದಲೇ ಬಿಡಿಸುತ್ತೇನೆ’ ಎಂದು ಬೆದರಿಸಿದಳು. ಮಗಳ ಮೊಬೈಲ್​ನಲ್ಲಿದ್ದ ವೀಡಿಯೊ ಮತ್ತು ಚಿತ್ರಗಳನ್ನು ತನ್ನ ಮೊಬೈಲ್​ಗೆ ವರ್ಗಾಯಿಸಿಕೊಂಡು ಆ ಫೋನನ್ನು ತನ್ನ ಬಳಿಯೇ ಜೋಪಾನ ಮಾಡಿಕೊಂಡಳು.

ಮಾರನೆಯ ದಿನವೇ ಸಂಧ್ಯಾ ಮೋಹನ್​ಗೆ ಕರೆ ಮಾಡಿ ತಾನು ಸುಧಾಳ ತಾಯಿಯೆಂದು ಪರಿಚಯಿಸಿಕೊಂಡು ಅವನನ್ನು ಭೇಟಿಮಾಡಲು ಕೋರಿದಳು. ಇದ್ದಕ್ಕಿದ್ದಂತೆ ಬಂದ ಈ ಕರೆಯಿಂದ ವಿಚಲಿತಗೊಂಡ ಮೋಹನ್ ಪಂಚತಾರಾ ಹೋಟೆಲ್ ಒಂದರ ಕಾಫಿಶಾಪ್​ಗೆ ಬರಲು ಸಂಧ್ಯಾಳನ್ನು ಆಹ್ವಾನಿಸಿದ. ಆ ಭೇಟಿಯ ಕೆಲವು ನಿಮಿಷಗಳ ಸಂಭಾಷಣೆಯ ನಂತರ ಸಂಧ್ಯಾ, ‘ಅಪ್ರಾಪ್ತ ವಯಸ್ಕಳಾದ ನನ್ನ ಮಗಳನ್ನು ನಿನ್ನ ಬಲೆಯಲ್ಲಿ ಕೆಡವಿ ಆಕೆಯ ಜತೆಗೆ ಲೈಂಗಿಕ ಕ್ರಿಯೆ ನಡೆಸಿರುವುದು ನನಗೆ ಗೊತ್ತಾಗಿದೆ’ ಎಂದಾಗ ಮೋಹನ್ ಅವಾಕ್ಕಾದ, ಆದರೂ ಸಾವರಿಸಿಕೊಂಡು, ‘ಆಂಟಿ, ನಾನೊಬ್ಬ ಮರ್ಯಾದಸ್ತ ಯುವಕ, ಸುಳ್ಳು ಆಪಾದನೆ ಮಾಡಬೇಡಿ’ ಎಂದ. ಸಂಧ್ಯಾ ತನ್ನ ಮೊಬೈಲಿನಲ್ಲಿದ್ದ ವಿಡಿಯೋವನ್ನು ತೋರಿಸಿದಾಗ ಅವನಿಗೆ ಮಾತೇ ಹೊರಡದಾಗಿ ‘ಯಾರದೋ ದೇಹಗಳಿಗೆ ನಮ್ಮ ಮುಖಗಳನ್ನು ಅಂಟಿಸಿರಬಹುದು, ಈ ವಿಡಿಯೋದಲ್ಲಿ ಇರುವುದು ನಾನಲ್ಲವೇ ಅಲ್ಲ’ ಎಂದು ವಾದಿಸಿದ. ‘ಈ ವಿಡಿಯೋ ಅಸಲಿಯೋ ಇಲ್ಲವೇ ಮಾರ್ಫ್ ಆದದ್ದೋ ಎಂದು ಪೊಲೀಸರೇ ನಿರ್ಧರಿಸಲಿ, ಈಗಲೇ ಪೊಲೀಸ್ ಠಾಣೆಗೆ ಹೋಗಿ ನಿನ್ನ ಬಗ್ಗೆ ದೂರನ್ನು ಕೊಡುವೆ’ ಎಂದಳು ಸಂಧ್ಯಾ. ಆಗ ಹೆದರಿದ ಮೋಹನ್, ‘ನನ್ನಿಂದ ಅಚಾತುರ್ಯವಾಗಿದೆ, ಕ್ಷಮಿಸಿಬಿಡಿ’ ಎಂದು ಕೈಜೋಡಿಸಿ ಕೇಳಿಕೊಂಡ. ‘ಹಾಗೆಲ್ಲ ಸುಮ್ಮನಿರಲು ಹೇಗೆ ಸಾಧ್ಯ? ನನ್ನ ಮಗಳಿಗೆ 16 ವರ್ಷ ಮಾತ್ರ ತುಂಬಿದೆ, ನಿನ್ನ ಮೇಲೆ ಪೋಕ್ಸೋ ಕಾನೂನಿನ ಮೇರೆಗೆ ದೂರು ನೀಡುವೆ, ಇದು ರೇಪ್​ಕೇಸ್ ಆಗುವುದರಿಂದ ನಿನಗೆ ಕನಿಷ್ಠ ಏಳು ವರ್ಷ ಜೈಲುವಾಸವಾಗುತ್ತದೆ’ ಎಂದಳು.

ಗಾಬರಿಯಾದ ಮೋಹನ್, ‘ಹೀಗೆ ಮಾಡಬೇಡಿ, ಬೇಕಾದರೆ ನಾನು ಸುಧಾಳನ್ನೇ ಮದುವೆಯಾಗುವೆ’ ಎಂದ. ‘ಅಪ್ರಾಪ್ತ ಯುವತಿಯನ್ನು ಮದುವೆಯಾದರೆ ಆ ಕಾರಣಕ್ಕೂ ನೀನು ಜೈಲಿಗೆ ಹೋಗಬಹುದು’ ಎಂದಾಗ, ‘ಹಾಗಾದರೆ ನಾನೇನು ಮಾಡಲಿ, ನೀವೇ ಹೇಳಿ’ ಎಂದ.

‘ನೀನು ಎರಡೇ ದಿನಗಳಲ್ಲಿ ಹದಿನೈದು ಲಕ್ಷ ನಗದು ಹಣವನ್ನು ತಂದು ಕೊಡಬೇಕು, ಇನ್ನು ಮುಂದೆ ಸುಧಾಳ ಸಹವಾಸವನ್ನು ಬಿಡಬೇಕು, ಆಗ ನಾನು ಸುಮ್ಮನಾಗುತ್ತೇನೆ’ ಎಂದಳು. ‘ಅಷ್ಟು ಹಣ ನನ್ನಲ್ಲಿಲ್ಲ’ ಎಂದಾತ ತಿಳಿಸಿದಾಗ ಮೊದಲ ಕಂತಾಗಿ ಹತ್ತು ಲಕ್ಷ ರೂ. ಪಡೆಯಲು ಒಪ್ಪಿದಳು. ಮಾರನೆಯ ದಿನವೇ ಆತ ಹಣ ತಂದುಕೊಟ್ಟಾಗ ಸಂತಸದ ನಗೆ ನಕ್ಕಳು. ಮೋಹನ್​ನಿಂದ ಪಡೆದ ಹಣದಿಂದ ಸಂಧ್ಯಾ ಚೀಟಿ ಹಾಕಿದ್ದವರ ಬಾಕಿ ಹಣವನ್ನು ಮರಳಿಸಿದಳು. ಮಗಳನ್ನು ಬೇರೆ ಕಾಲೇಜಿಗೆ ದಾಖಲು ಮಾಡಿದಳು. ಕೆಲ ತಿಂಗಳ ನಂತರ ಆಕೆಗೆ ಮತ್ತೆ ಹಣದ ಅವಶ್ಯಕತೆ ತೀವ್ರವಾಯಿತು. ಮೋಹನ್​ಗೆ ಕರೆ ಮಾಡಿ ಬಾಕಿ ಉಳಿದಿದ್ದ ಐದು ಲಕ್ಷ ರೂ.ಗಳನ್ನು ತಂದು ಕೊಡಲು ಹೇಳಿದಳು. ಈ ಪ್ರಕರಣವೇ ಮುಗಿದು ಹೋಗಿತ್ತೆಂದು ಭಾವಿಸಿದ್ದ ಮೋಹನ್​ಗೆ ಶಾಕ್ ಆಯಿತು. ಅವನ ಬಳಿ ಆ ಸಮಯದಲ್ಲಿ ಹಣವೂ ಇರಲಿಲ್ಲ. ಮುಂದೇನು ಮಾಡಬೇಕು ಎಂದು ಗೊತ್ತಾಗದೆ ಮೋಹನ್ ವಕೀಲನಾಗಿದ್ದ ತನ್ನ ಸ್ನೇಹಿತನ ಸಲಹೆಯನ್ನು ಕೇಳಿದ. ಅದರಂತೆ ತಾನೇ ಪೊಲೀಸ್ ಠಾಣೆಗೆ ಹೋಗಿ ಸಂಧ್ಯಾ ಬ್ಲಾಕ್​ವೆುೕಲ್ ಮಾಡುತ್ತಿರುವ ಬಗ್ಗೆ ದೂರನ್ನು ನೀಡಿದ. ಸಂಧ್ಯಾಳ ಮೇಲೆ ವಂಚನೆ ಮತ್ತು ಸುಲಿಗೆಯ ದೂರನ್ನು ದಾಖಲಿಸಿದ ಪೊಲೀಸರು ಅವಳ ಮನೆಗೆ ತನಿಖೆಗೆ ಹೋದಾಗ ಆಕೆ ಮೋಹನ್ ತನ್ನ ಮಗಳನ್ನು ರೇಪ್ ಮಾಡಿರುವ ಪ್ರತಿದೂರನ್ನು ನೀಡಿದಳು. ಇದನ್ನೂ ದಾಖಲಿಸಿದ ಪೊಲೀಸರು ಎರಡೂ ಪ್ರಕರಣಗಳನ್ನು ಬೇರೆ ಬೇರೆಯಾಗಿ ತನಿಖೆ ಮಾಡಿ ಎರಡೂ ದೂರುಗಳಲ್ಲಿ ಸತ್ಯಾಂಶ ಇರುವುದನ್ನು ಮನಗಂಡು ಮೋಹನ್ ಹಾಗೂ ಸಂಧ್ಯಾ ಇಬ್ಬರ ವಿರುದ್ಧವೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಪೋಕ್ಸೋ ಕಾಯ್ದೆ ಅನ್ವಯ ಮೋಹನ್​ಗೆ ಏಳು ವರ್ಷ ಕಾರಾಗೃಹವಾಸವಾದರೆ, ಸಂಧ್ಯಾಳಿಗೆ ಎರಡು ವರ್ಷಗಳ ಜೈಲಾಯಿತು. ಶ್ರೀಮಂತರನ್ನು ಅನುಕರಿಸಹೊರಟ ಸಂಧ್ಯಾ ತನ್ನದು ಮಾತ್ರವಲ್ಲ ಮಗಳ ಜೀವನವನ್ನೂ ಹಾಳುಮಾಡಿದ್ದು ದುರಾದೃಷ್ಟವೇ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net