More

    ದೂರದಿಂದಲೇ ಮಕ್ಕಳತ್ತ ಕೈ ಬೀಸಿ ಕಣ್ಣೀರಾದ ಪಾಲಕರು…

    ಹುಬ್ಬಳ್ಳಿ: ತಿಂಗಳು, ವರ್ಷಗಟ್ಟಲೇ ದೂರದ ದೆಹಲಿಯಲ್ಲಿದ್ದ ಮಕ್ಕಳು ತವರೂರಿಗೆ ಬಂದರೂ ಅವರನ್ನು ಸಮೀಪದಿಂದ ಮಾತನಾಡಿಸದಂತಹ ಸ್ಥಿತಿ ಹೆತ್ತ ಕರುಳಿನದ್ದು. ಈ ಮೊದಲು ರಜೆಗೆ ಮನೆಗೆ ಬರುತ್ತಿದ್ದ ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ಹೋದವರು ಇಂದು ನೇರವಾಗಿ ತೆರಳಿದ್ದು 14 ದಿನಗಳ ಕ್ವಾರಂಟೈನ್‌ಗೆ.

    ಇದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಕಂಡ ದೃಶ್ಯ. ದೆಹಲಿಯಿಂದ ರೈಲಿನಲ್ಲಿ ಬಂದಿಳಿದ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರನ್ನು ಭೇಟಿಯಾಗಲು ಸಂಬಂಧಿಕರು ಬಂದರೂ ಭೇಟಿಯಾಗಲು ಆಗಲಿಲ್ಲ. ದೂರ ನಿಂತು ಕೈ ಬೀಸಿ ಕಣ್ಣೀರು ಸುರಿಸಿದ ದೃಶ್ಯಗಳು ಸಾಮಾನ್ಯವಾಗಿದ್ದವು. ಮಕ್ಕಳು ಹಾಗೂ ಪಾಲಕರು ಮುಖಾಮುಖಿಯಾದರೂ, ಅಪರಿಚಿತರಂತೆ ದೂರ ನಿಲ್ಲಬೇಕಾದ ಸ್ಥಿತಿ.

    ರೈಲ್ವೆ ಇಲಾಖೆಯ ನಿವೃತ್ತ ನೌಕರರಾದ ಹುಬ್ಬಳ್ಳಿ ಚೇತನಾ ಕಾಲನಿ ನಿವಾಸಿ ರಾಮಣ್ಣ ಹರ್ತನಳ್ಳಿ ದೆಹಲಿಯಿಂದ ಬರಲಿದ್ದ ತಮ್ಮ ಮಗಳ ಭೇಟಿಗೆ ಬೆಳಗ್ಗೆ 6.30ಕ್ಕೆ ಬಂದು ಕಾಯುತ್ತಿದ್ದರು. ಮಗಳು ರಂಜಿತಾ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ 10 ತಿಂಗಳ ಹಿಂದೆ ದೆಹಲಿಗೆ ತೆರಳಿದ್ದಳು.

    ‘‘ಮಗಳನ್ನು ಮನೆಗೆ ಕಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಕೈಮುಗಿದು ವಿನಂತಿಸಿಕೊಳ್ಳುತ್ತೇನೆ. ಕಳುಹಿಸಿದರೆ ಖುಷಿಯಿಂದ ಮನೆಗೆ ಕರೆದುಕೊಂಡು ಹೋಗುತ್ತೇನೆ’’ ಎಂದು ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು ವೃದ್ಧ ತಂದೆ ರಾಮಣ್ಣ.

    ಇದನ್ನೂ ಓದಿ: ಕೋವಿಡ್​ 19 ನಂತರದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಬಂದೊದಗಿದೆ ಹೊಸ ಆಪತ್ತು

    ಅವರ ಪ್ರಯತ್ನ ಕೈಗೂಡದೆ ಹೋದಾಗ ರೈಲ್ವೆ ನಿಲ್ದಾಣದಿಂದ ಹೊರ ಬಂದ ಮಗಳತ್ತ ದೂರದಿಂದಲೇ ಕೈಬೀಸಿದರು. ಕ್ವಾರಂಟೈನ್‌ಗಾಗಿ ಧಾರವಾಡಕ್ಕೆ ತೆರಳಲು ಮಗಳು ಬಸ್ ಏರುತ್ತಿದ್ದಂತೆಯೇ ರಾಮಣ್ಣ ಅವರ ಧ್ವನಿ ಕ್ಷೀಣಗೊಂಡಿತು.
    ‘‘ಇನ್ನೂ 14 ದಿನಗಳಷ್ಟೇ, ಆರಾಮವಾಗಿರು. ಆಮೇಲೆ ಮನೆಗೆ ಬರುವೆಯಂತೆ’’ ಎಂದು ರಾಮಣ್ಣ ಒಲ್ಲದ ಮನಸ್ಸಿನಿಂದಲೇ ಮಗಳನ್ನು ಬೀಳ್ಕೊಟ್ಟರು. ಮಗಳು ರಂಜಿತಾ ಸಹ ಕುಟುಂಬದವರ ಆರೋಗ್ಯ ವಿಚಾರಿಸುವಾಗ ಕಣ್ಣೀರಾದರು.

    ಊಟ ಕೊಡಲು ಬಂದಿದ್ದ ಪಾಲಕರು:  ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಮಗ ಸಾಗರ ಮನೆಯ ಊಟ ಮಾಡಿ ವರ್ಷವೇ ಕಳೆದು ಹೋಗಿದೆಯೆಂದು ಆತನಿಗೆ ಊಟ ಕೊಡಲು ರೈಲ್ವೆ ನಿಲ್ದಾಣದ ಎದುರು ಕಾಯುತ್ತಿದ್ದರು.

    ಕ್ವಾರಂಟೈನ್‌ಗೆ ತೆರಳುತ್ತಿರುವ ಮಗ ಇನ್ನೂ ಮನೆಗೆ ಬರುವುದು 14 ದಿನಗಳ ನಂತರ. ಅದುವರೆಗೆ ಒಂದು ಬಾರಿಯಾದರೂ ಮನೆಯ ಊಟ ಮಾಡಲಿ ಎಂದು ಬೆಳಗ್ಗೆಯಿಂದಲೇ ಸಾಗರನ ಪಾಲಕರು ರೈಲ್ವೆ ನಿಲ್ದಾಣದ ಎದುರು ಕಾಯುತ್ತಿದ್ದರು.

    ಇದನ್ನೂ ಓದಿ: ಹಂಪಿಯ ವಿಜಯವಿಠ್ಠಲ ದೇವಸ್ಥಾನದಲ್ಲಿ ಕಲ್ಲಿನ ಹಾಸುಗಳ ಜೋಡಿಸಲು ಟ್ರ್ಯಾಕ್ಟರ್ ಬಳಕೆ

    ಹೆತ್ತವರ ಕರುಳಿನ ಕೂಗಿನ ಬಗ್ಗೆ ಅರಿವಿರದ ಕೆಲ ಪೊಲೀಸರು ಅವರನ್ನು ಅಲ್ಲಿಂದ ಓಡಿಸುತ್ತಿದ್ದರೂ, ಮತ್ತೆ ಮತ್ತೆ ಊಟದ ಡಬ್ಬಿ ಇದ್ದ ಚೀಲ ಹಿಡಿದುಕೊಂಡು ನಿಲ್ದಾಣದ ಎದುರು ನಿಲ್ಲುತ್ತಿದ್ದರು. ಕೊನೆಗೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರನ್ನು ಭೇಟಿಯಾದ ಸಾಗರನ ಪಾಲಕರು, ದೂರದಲ್ಲಿಯೇ ಊಟದ ಡಬ್ಬಿ ಇರುವ ಚೀಲ ಇಡುವುದಾಗಿ ಮನವಿ ಮಾಡಿಕೊಂಡರು. ಆಯುಕ್ತ ಇಟ್ನಾಳ ಅವರು ಪಾಲಕರ ಮನವಿಗೆ ಸ್ಪಂದಿಸಿದರು.

    ಇದನ್ನೂ ಓದಿ: ಗಣದಿನ್ನಿಯಲ್ಲಿ ಟಾಟಾಏಸ್ ಪಲ್ಟಿಯಾಗಿ 30 ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts