

ಯಾವುದೇ ಹೆಜ್ಜೆಯನ್ನಿಟ್ಟರೆ ಹಿಂದೆ ತೆಗೆಯುವ ಮಾತೇ ಇಲ್ಲ, ಅಷ್ಟು ಖಡಕ್ಕಾಗಿ ಯೋಚಿಸಿ ಮುಂದಿಡುತ್ತಾರೆ. ಅವರ ನಿರ್ಧಾರಗಳು ಅಷ್ಟು ಚೆನ್ನಾಗಿರುತ್ತವೆ. ಗೆದ್ದಾಗ ಹಿಗ್ಗದ, ಸೋತಾಗ ಕುಗ್ಗದ ಸ್ಥಿತಪ್ರಜ್ಞೆ ಅವರಲ್ಲಿದೆ. ಅದು ನನಗೆ ಅಚ್ಚರಿಯಾಗಿದೆ. ಅವರಿಗೆ ಸ್ನೇಹಿತರ ಬಳಗ ದೊಡ್ಡದು. ಅನೇಕ ಕುಟುಂಬದ ವ್ಯಾಜ್ಯಗಳನ್ನು ಕ್ಷಣ ಮಾತ್ರದಲ್ಲಿ ಪರಿಹಾರ ಮಾಡಿದ್ದಾರೆ. ನನಗೆ ತಾಯಿಯ ಮಮತೆ, ತಂದೆಯ ಭದ್ರತೆಯನ್ನು ಕೊಟ್ಟಿದ್ದಾರೆ. ಕುಟುಂಬ ಎಂದರೆ ಹೇಗಿರಬೇಕು ಎಂಬುದನ್ನು ನನ್ನ ತಂದೆ ಮತ್ತು ತಾಯಿಯ ನಡುವಿನ ಪ್ರೀತಿ ನೋಡಿ ಕಲಿತಿದ್ದೇನೆ. ನನ್ನ ತಾಯಿಯನ್ನು ಅಷ್ಟು ಪ್ರೀತಿಸುತ್ತಿದ್ದರು.
ನಾವು ಸಣ್ಣವರಿದ್ದಾಗ ಬೇರೆ ದೇಶ ಅಥವಾ ನಗರಗಳಿಗೆ ಪ್ರವಾಸ ಹೋದರೆ ನಮಗಾಗಿ ಪ್ರೀತಿಯಿಂದ ಅವರು ತರುತ್ತಿದ್ದ ವಸ್ತುಗಳ ಬಗ್ಗೆ ನನಗೆ ಇವತ್ತಿಗೂ ಸಂತಸ ಇದೆ. ಅವರ ಆಯ್ಕೆ ಅಷ್ಟು ಅದ್ಭುತವಾಗಿರುತ್ತಿತ್ತು. ನನ್ನನ್ನು ಪದವಿ ಓದಲು ಬೆಂಗಳೂರಿನ ಹಾಸ್ಟೆಲ್ಗೆ ಸೇರಿಸಿದರು. ಅವರು ಶಾಸಕರಾಗಿದ್ದರು. ಹಾಸ್ಟೆಲ್ನಲ್ಲಿ ಕೇವಲ ಶಿವಮೊಗ್ಗದ ಗೆಳತಿಯರ ಜತೆ ಇರಬೇಡ, ಬೇರೆ ಬೇರೆ ರಾಜ್ಯಗಳಿಂದ ಬಂದವರ ಜತೆ ಬೆರೆಯುವುದನ್ನು ಕಲಿ, ಅದರಿಂದ ಅವರ ಸಂಸ್ಕೃತಿ ಸೇರಿದಂತೆ ಬದುಕನ್ನು ನಾನಾ ಆಯಾಮಗಳಿಂದ ನೋಡಲು ಸಾಧ್ಯವಾಗುತ್ತದೆ ಎಂದು ತಿಳಿ ಹೇಳುತ್ತಿದ್ದರು. ಹಾಸ್ಟೆಲ್ಗೆ ನನ್ನ ನೋಡಲು ಬರುವಾಗ ತಿಂಡಿಯನ್ನು ಕೇವಲ ನನಗೊಬ್ಬಳಿಗೆ ತರುತ್ತಿರಲಿಲ್ಲ. ನನ್ನ ಸ್ನೇಹಿತೆಯರಿಗೂ ತರುತ್ತಿದ್ದರು.
ಒಂದು ದಿನ ಸಂಜೆ ವಿಧಾನಸೌಧದ ದೀಪಾಲಂಕಾರ ನೋಡಲು ನಮ್ಮನ್ನು ಕರೆದುಕೊಂಡು ಹೋಗಿದ್ದರು. ಹುಲ್ಲು ಹಾಸಿನ ಮೇಲೆ ಕೂತಿದ್ದಾಗ ಅವರು ಹೇಳಿದ ಮಾತು ‘ತುತ್ತ ತುದಿಯಲ್ಲಿ ಕೂತು ನನ್ನ ಜನರಿಗೆ ನ್ಯಾಯ ಕೊಡಬೇಕು’ ಎಂದು. ಈ ಮಾತು ಕೇಳಿ ನನಗೆ ಅಚ್ಚರಿ. ಆದರೆ ಆ ಮಾತು ಸಾಕಾರವಾಯಿತು. ಅವರನ್ನು ನಂಬಿದ ಜನರಿಗೆ ನ್ಯಾಯ ಕೊಟ್ಟರು. ನಾನು ವೀರಶೈವ ಮಹಾಸಭಾ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾದಾಗ ಅವರ ಮಾರ್ಗದರ್ಶನ ಕೋರಿದಾಗ, ‘ರಾಜ್ಯಾದ್ಯಂತ ಪ್ರವಾಸ ಮಾಡು, ಹಳ್ಳಿ ಹಳ್ಳಿಗೆ ಹೋಗು, ಜನರ ಸಮಸ್ಯೆಯ ಅರಿವಾಗುತ್ತದೆ, ಅದಕ್ಕೆ ಪರಿಹಾರ ಕಂಡುಕೋ’ ಎಂದು ಹೇಳಿದರು. ಅವರು ಇಟ್ಟ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ನಾನು ನಡೆಯುತ್ತಿದ್ದೇನೆ.
| ಎಸ್. ವೈ.ಅರುಣಾದೇವಿ ಯಡಿಯೂರಪ್ಪ
ಅಧ್ಯಕ್ಷೆ, ವೀರಶೈವ ಮಹಾಸಭಾ ಮಹಿಳಾ ಘಟಕ
ಆ ನಂತರ ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರ ಜತೆಗೆ ನಟಿಸಿದೆ. ಬರೀ ಶೂಟಿಂಗ್ ಅಂತಲ್ಲ. ಚಿತ್ರೀಕರಣ ಇಲ್ಲದಿದ್ದರೂ ಡಬ್ಬಿಂಗ್, ರೆಕಾರ್ಡಿಂಗ್ ಅಂತೆಲ್ಲ ಅಪ್ಪ ನನ್ನನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ನಿಜ ಹೇಳಬೇಕೆಂದರೆ, ಅವರೇನು? ಅವರೆಷ್ಟು ದೊಡ್ಡ ಸ್ಟಾರ್ ಆಗಿದ್ದರು? ಇದ್ಯಾವುದೂ ನಮಗೆ ಗೊತ್ತಿರಲಿಲ್ಲ. ಏಕೆಂದರೆ, ನಾವು ಚೆನ್ನೈನಲ್ಲಿದ್ದೆವು. ಅಪ್ಪ ಶೂಟಿಂಗ್ ಅಂತ ಬೇರೆ ಊರುಗಳಿಗೆ ಓಡಾಡಿಕೊಂಡಿದ್ದರು. ನಮ್ಮ ಜತೆಗೆ ಇದ್ದಾಗ ಅವರೊಬ್ಬ ನಾರ್ಮಲ್ ಅಪ್ಪನಾಗಿದ್ದರು. ಚೆನ್ನೈನಲ್ಲಿದ್ದಾಗ ಮಕ್ಕಳನ್ನೆಲ್ಲ ಬೀಚ್ಗೆ ಕರೆದುಕೊಂಡು ಹೋಗುತ್ತಿದ್ದರು. ಕಬಡ್ಡಿ ಆಡಿಸುತ್ತಿದ್ದರು. ಸ್ಕೂಲ್ಗೆ ರೆಡಿ ಮಾಡಿಸುತ್ತಿದ್ದರು. ಕಾರು ಹತ್ತಿಸಿ ಕಳುಹಿಸುತ್ತಿದ್ದರು. ಶಾಲೆಯಿಂದ ಬಂದ ಮೇಲೆ ಶೂಟಿಂಗ್ಗೆ ಕರೆಸಿಕೊಳ್ಳುತ್ತಿದ್ದರು.
ಇನ್ನು, ಓದಿನ ವಿಷಯದಲ್ಲಿ, ಅವರು ಯಾವತ್ತೂ ಫೋರ್ಸ್ ಮಾಡುತ್ತಿರಲಿಲ್ಲ. ಅದೇ ಮಾಡು, ಇದೇ ಓದು ಎಂದು ಒತ್ತಾಯ ಮಾಡುತ್ತಿರಲಿಲ್ಲ. ಕಾನ್ವೆಂಟ್ನಲ್ಲಿ ಓದಿಸಿದರು. ನಾವೆಲ್ಲರೂ ಒಳ್ಳೆಯ ಶಿಕ್ಷಣ ಪಡೆಯುವಂತೆ ನೋಡಿಕೊಂಡರು. ಇವತ್ತೂ ನಾವು ಏನೇ ಆದರೂ, ಅವರ ಪ್ರಭಾವ ಜೋರಾಗಿದೆ. ಅವರಿಂದ ಕಲಿತಿದ್ದು ಸಾಕಷ್ಟು ಇದೆ. ನಾನು ಎಷ್ಟೇ ಅವರ ಮುದ್ದಿನ ಮಗಳಾದರೂ, ನಾನು ಮಾಡಿದ್ದೆಲ್ಲ ಸರಿ ಎನ್ನುತ್ತಿರಲಿಲ್ಲ. ನನ್ನ ಮಾತು ಸರಿ ಇಲ್ಲ ಎಂದರೆ, ಒಳಗೆ ಕರೆದು ಹೇಗಿರಬೇಕು ಎಂದು ಹೇಳಿದ್ದೂ ಇದೆ. ಹಾಗಾಗಿ, ಅಪ್ಪ-ಅಮ್ಮ ಇಲ್ಲದಿದ್ದರೂ ಈಗಲೂ ಒಂದು ಭಯವಿದೆ. ಅವರು ನಮ್ಮನ್ನು ನೋಡುತ್ತಿರುತ್ತಾರೇನೋ ಅಂತ ಅನಿಸುತ್ತಿರುತ್ತದೆ.
| ಪೂರ್ಣಿಮಾ ರಾಜಕುಮಾರ್
ನಮ್ಮಪ್ಪನಿಗೆ ನಾನೇ ವಿಸ್ಕಿ ಹಾಕಿ ಕೊಡುತ್ತಿದ್ದೆ. ‘ನೀನು ಕುಡಿಯುವುದಿದ್ದರೆ ನನ್ನ ಎದುರು ಕುಡಿ. ಹೊರಗಿನಿಂದ ಯಾರೋ ಬಂದು ನಿಮ್ಮ ಮಗ ಹೀಗೆ ಮಾಡಿದ ಅಂತ ಹೇಳಬಾರದು. ನೀನು ಏನು ಮಾಡುವುದಿದ್ದರೂ ನನ್ನ ಎದುರು ಮಾಡು’ ಎಂದು ಅವರು ಹೇಳಿದ್ದರು. ಹಾಗಾಗಿ, ಮೊದಲಿನಿಂದಲೇ ಒಂದು ಶಿಸ್ತಲ್ಲಿ ಬೆಳೆದೆ.
ಅಪ್ಪ ನಿರ್ವಿುಸಿದ ಚಿತ್ರಗಳನ್ನು ಹೋಗಿ ನೋಡುತ್ತಿದ್ದೆ. ಮುಂದೆ ಏನೋ ಆಗಬೇಕು ಅಂತಲ್ಲ. ನಮ್ಮ ಸಿನಿಮಾ ಅಂತ ನೋಡುತ್ತಿದ್ದೆ. ಒಮ್ಮೆ ‘ನಾರಿ ಸ್ವರ್ಗಕ್ಕೆ ದಾರಿ’ ಚಿತ್ರ ತೋರಿಸುವುದಕ್ಕೆ ಕರೆದುಕೊಂಡು ಹೋಗಿದ್ದರು. ಅದರಲ್ಲಿ ಒಂದು ದೃಶ್ಯ ನೋಡಿ ನಕ್ಕುಬಿಟ್ಟೆ. ವಾಪಸ್ ಬರುವಾಗ, ‘ಅಷ್ಟೊಂದು ಜನ ಇರುವಾಗ ಹಾಗೆಲ್ಲ ನಗಬಾರದು’ ಎಂದರು. ನಾನು ಆ ದೃಶ್ಯ ಸರಿ ಇರಲಿಲ್ಲ, ಸಿಂಕ್ ಆಗುತ್ತಿಲ್ಲ ಎಂದೆ. ಆ ದೃಶ್ಯವನ್ನು ಹೇಗೆ ತೆಗೆಯಬೇಕಿತ್ತು ಎಂದು ಅಪ್ಪ ಕೇಳಿದರು. ನಾನು ನನ್ನ ದೃಷ್ಟಿಕೋನ ವಿವರಿಸಿದೆ. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ, ಆ ನಂತರ ಅವರು ನನ್ನ ಜತೆಗೆ ಸಿನಿಮಾ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಕಥೆ ಕೇಳಿಸುತ್ತಿದ್ದರು. ಆಗಿನ್ನೂ ನನಗೆ ಚಿಕ್ಕ ವಯಸ್ಸು. ಆ ವಯಸ್ಸಿಗೆ ನನಗೆ ಯಾಕೆ ಕೇಳಿಸುತ್ತಿದ್ದರು ಗೊತ್ತಿಲ್ಲ. ನನ್ನ ಭವಿಷ್ಯವನ್ನು ಗೆಸ್ ಮಾಡಿದ್ದರಾ ಗೊತ್ತಿಲ್ಲ. ಆದರೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಒಮ್ಮೆ ಒಂದು ಚಿತ್ರ ಕಥೆ ಹೇಳುತ್ತಿದ್ದರು. ಕಥೆ ಹೇಳುತ್ತಾ ಅವರಿಗೆ ಅಳು ಬಂತು. ಆ ನಂತರ ನನಗೆ ಏನನ್ನಿಸಿತು ಎಂದು ಕೇಳಿದರು. ‘ಕಥೆ ಹೇಳುವಾಗ ನೀವು ಅಳಬಾರದು, ನಮ್ಮನ್ನು ಅಳಿಸಬೇಕು. ನೀವು ಅಳುವ ಮೂಲಕ ಫೋರ್ಸ್ ಮಾಡಿದಂತಾಗುತ್ತಿದೆ, ನನಗೆ ಏನೂ ಅನಿಸುತ್ತಿಲ್ಲ’ ಎಂದಿದ್ದೆ. ಆ ನಂತರ ಅವರಿಗೆ ನನ್ನ ಮೇಲೆ ನಂಬಿಕೆ ಜಾಸ್ತಿ ಆಯಿತು. ಅವರು ನನ್ನ ಮೇಲೆ ನಂಬಿಕೆ ಇಡದಿದ್ದರೆ, ನನಗೆ ‘ಪ್ರೇಮ ಲೋಕ’ದಂತಹ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಅವರು ನನ್ನ ಮೇಲೆ ನಂಬಿಕೆ ಇಡದಿದ್ದರೆ, ನಾನು ಇಷ್ಟು ದೂರ ಬರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.
| ರವಿಚಂದ್ರನ್ ನಟ, ನಿರ್ದೇಶಕ
ನಾನು ಬೆಳೆಯುವ ವಯಸ್ಸಿನಲ್ಲಿ ಅವರು ರಾಜಕೀಯದಲ್ಲಿ ತುಂಬಾ ಬ್ಯುಸಿಯಾಗಿದ್ದರು. 44 ನೇ ವಯಸ್ಸಿನಲ್ಲಿಯೇ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬಂತು. ಅಧಿಕಾರ ಇದ್ದಾಗ ಅವರೊಂದಿಗೆ ಸಂಪರ್ಕ ಕಡಿಮೆಯಾಯಿತು. ಆದರೆ ಸಿಕ್ಕ ಸಮಯದಲ್ಲಿಯೇ ನಮ್ಮ ಬಗ್ಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು.
ಚುನಾವಣೆಯಲ್ಲಿ ಸೋತ ನಂತರ ಹಾಗೂ ಸಂಸದರಾದಾಗ ನಮ್ಮೊಂದಿಗೆ ಬೆರೆಯಲು ಹೆಚ್ಚು ಸಮಯ ಸಿಕ್ಕಿತು. ಆ ಸಂದರ್ಭದಲ್ಲಿ ನಮಗೆ ಅವರ ಹೋರಾಟದ ಇತಿಹಾಸವನ್ನು ಕೇಳುವುದೇ ಒಂದು ರೋಚಕ ವಿಷಯವಾಗಿತ್ತು. ಅವರ ಇತಿಹಾಸ, ರಾಜಕೀಯ ಬದುಕಿನ ಬಗ್ಗೆ ನಮ್ಮೊಂದಿಗೆ ಮಾತನಾಡುತ್ತಿದ್ದರು. ನಮ್ಮ ತಾತಾ ಮುಖ್ಯ ಶಿಕ್ಷಕರಾಗಿದ್ದರು, ಬಹಳ ಶಿಸ್ತಿನ ವ್ಯಕ್ತಿ. ನಮ್ಮ ತಂದೆ ಪದವಿ ಪಡೆದ ನಂತರ ಮನೆಯಲ್ಲಿಲ್ಲದೇ ಹೊರಗಡೆ ಹೆಚ್ಚು ತಿರುಗುತ್ತಿದ್ದಾಗ ನಮ್ಮ ತಾತರಿಗೆ ಆತಂಕ ಇತ್ತು. ಆದರೆ ನಮ್ಮ ತಂದೆ ಜಾತಿಯ ಬೆಂಬಲ ಇಲ್ಲದೇ ಕುಶಾಲನಗರ ಪುರಸಭೆಗೆ ಕಾರ್ವಿುಕರು ಹಾಗೂ ಜನರ ನೆರವಿನಿಂದ ಸ್ವತಂತ್ರವಾಗಿ ಗೆದ್ದಿದ್ದರು. ಬಹಳ ವೇಗವಾಗಿ ಇಂದಿರಾಗಾಂಧಿ, ಸಂಜಯ್ ಗಾಂಧಿ ಅವರ ಸ್ನೇಹ ಸಂಪಾದಿಸಿದರು. ಸಿನಿಮಾದಂತೆ ಅವರ ಬದುಕು ಸಾಗಿತ್ತು. ಅವರ ಜೀವನದ ಬಗ್ಗೆ ಅವರು ವಿವರಿಸುತ್ತಿದ್ದರೆ ಸಿನಿಮಾ ನೋಡಿದ ಅನುಭವ ಆಗುತ್ತಿತ್ತು. ನಮ್ಮ ತಾತ ಬದುಕಿದ್ದಾಗಲೇ ತಂದೆ ಮುಖ್ಯಮಂತ್ರಿ ಆದರು. ಆತಂಕಗೊಂಡಿದ್ದ ತಾತ ಸಂಭ್ರಮಿಸಿದ್ದನ್ನು ನೋಡಿ ತಂದೆ ಸಂತಸಗೊಂಡಿದ್ದರು.
ನಾನು ರಾಜಕಾರಣಿಯಾಗಬೇಕೆಂದು ಅವರು ಯಾವತ್ತೂ ಬಯಸಿರಲಿಲ್ಲ. ಓದಿ, ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ ಎಂದೇ ಸದಾ ಹೇಳುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. ಅವರು ಹೆಚ್ಚು ದಿನ ಬದುಕಿದ್ದರೆ ಬಹುಶಃ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. ಅವರು ಅಧಿಕಾರದಲ್ಲಿ ಇರುವಷ್ಟು ದಿನ ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶವನ್ನೇ ನೀಡಿರಲಿಲ್ಲ. ತಮ್ಮ ಕುಟುಂಬದವರು, ಸ್ನೇಹಿತರಿಗೂ ಅದೇ ಮಾತನ್ನು ಹೇಳುತ್ತಿದ್ದರು. ಬಡವರ ಬಗ್ಗೆ ಅವರಿಗೆ ಯಾವಾಗಲೂ ಕನಿಕರ, ಅವರಿಗಾಗಿ ಏನಾದರೂ ಮಾಡಬೇಕೆಂದು ತುಡಿಯುತ್ತಿದ್ದರು. ಅವರು ಅಧಿಕಾರದಲ್ಲಿದ್ದಾಗ ಪ್ರವಾಸ ಹೋಗುವಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಅವರು ಅವರ ಕೆಲಸ ಮಾಡಿಕೊಂಡಿದ್ದರೆ, ನಾವು ಪ್ರವಾಸಿ ಸ್ಥಳ ಸುತ್ತುತ್ತ ಇದ್ದೆವು. ರಾತ್ರಿ ಊಟಕ್ಕೆ ಒಟ್ಟಿಗೆ ಜತೆಯಾಗುತ್ತಿದ್ದೆವು.
ಸಿನಿಮಾ ನೋಡುವುದು ಹಾಗೂ ಹಾಡು ಕೇಳುವುದು ಅವರಿಗೆ ಬಹಳ ಇಷ್ಟವಾದ ಕಾರ್ಯ ಆಗಿತ್ತು. ನಮ್ಮನ್ನು ಸಹ ಸಮಯ ಸಿಕ್ಕಾಗ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಕಳೆದುಕೊಂಡಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ.
| ದಿನೇಶ್ ಗುಂಡೂರಾವ್ ಶಾಸಕ
ಯಾವಾಗ, ಯಾವ ಸಲಹೆಯನ್ನು ನೀಡುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಸಂಗೀತ ಪಾಠ ಕಲಿಯುವ ಯಾರೇ ಇದ್ದರೂ ಪಾಠ ಮುಗಿದ ತಕ್ಷಣ ಮನೆಗೆ ಹೋಗಬಾರದು. ಗುರುಗಳೊಂದಿಗೆ ಸಮಯ ಕಳೆಯಬೇಕು. ಅವರು ನೀಡುವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು. ತಂದೆಯವರಿಂದ ಸಿತಾರದ ಜತೆಗೆ ಜೀವನದ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಮಾನಸಿಕವಾಗಿ ಸದಾ ನನ್ನೊಂದಿಗೆ ಇದ್ದಾರೆ.
| ಉಸ್ತಾದ್ ಹಫೀಜ್, ಬಾಲೆಖಾನ್ (ಗುನ್ನು), ಸಿತಾರ ವಾದಕ, ಧಾರವಾಡ
ಅವರ ಬಗ್ಗೆ ಇಷ್ಟೆಲ್ಲ ಮಾತನಾಡುವಾಗಲೂ, ನಾನು ಅವರ ಜತೆಗೆ ಇದ್ದೇನೆ. ನಾವಿಬ್ಬರೂ ‘ಮಾಫಿಯಾ’ ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದೇವೆ. ಈ ಹಿಂದೆ ನಾವಿಬ್ಬರೂ ಅಪ್ಪ-ಮಗನಾಗಿ ಸಿನಿಮಾದಲ್ಲಿ ನಟಿಸಿದ್ದೆವು. ಈ ಚಿತ್ರದಲ್ಲಿ ಅವರು ಪೊಲೀಸ್ ಕಮಿಷನರ್ ಆಗಿ, ನಾನು ಇನ್ಸ್ಪೆಕ್ಟರ್ ಆಗಿ ನಟಿಸುತ್ತಿದ್ದೇನೆ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಮತ್ತು ಆ ನಂತರ ಬಹಳಷ್ಟು ಹಿರಿಯ ನಟರು, ಅಪ್ಪನ ಸಮಕಾಲೀನರು ಒಂದು ಮಾತು ಹೇಳಿದ್ದಾರೆ. ‘ಸಿನಿಮಾದಲ್ಲಿ ನೀನೇನು ಮಾಡುತ್ತೀಯೊ, ಅಪ್ಪನಿಗಿಂತ ಯಶಸ್ವಿಯಾಗುತ್ತೀಯೋ, ಇಲ್ಲವೋ ಗೊತ್ತಿಲ್ಲ. ಅವರ ಹೆಸರು ಉಳಿಸು, ಯಾವತ್ತೂ ಅವರ ಹೆಸರಿಗೆ ಚ್ಯುತಿ ತರಬೇಡ ಎಂದು ಹೇಳಿದ್ದಾರೆ. ಆ ಮಾತು ಸದಾ ನೆನಪಿನಲ್ಲಿರುತ್ತದೆ.
| ಪ್ರಜ್ವಲ್ ದೇವರಾಜ್, ನಟ
ಬ್ಯಾಡ್ಮಿಂಟನ್ ಕೋರ್ಟ್ ಅಲ್ಲದೆ, ಮನೆಯಲ್ಲೂ ಸ್ನೇಹಿತರಂತೆ ಕುಳಿತು ಆಟದ ಬಗ್ಗೆ ಚರ್ಚೆ ನಡೆಸುತ್ತೇವೆ. ನಾನು ಸೋತಾಗಲೇ ಆಗಲಿ, ಗೆದ್ದಾಗಲೇ ಆಗಲಿ ಒಂದೇ ಸಮನಾಗಿ ಸ್ವೀಕರಿಸುತ್ತಾರೆ. ಕೋರ್ಟ್ನಲ್ಲಿ ನಾನು ಮಾಡಿದ ತಪು್ಪಗಳನ್ನು ತಿದ್ದುತ್ತಾರೆ. ಅಭ್ಯಾಸದ ವೇಳೆ ಕೋಚ್ನಂತೆ ಗೈಡ್ ಮಾಡುತ್ತಾರೆ. ಅದರಲ್ಲೂ ಸೋತಾಗ ಅವರು ನೀಡುವ ಮನೋಸ್ಥೈರ್ಯವೇ ನನಗೆ ಮುಂದಿನ ಟೂರ್ನಿಗಳಿಗೆ ಸ್ಪೂರ್ತಿಯಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ತಂದೆಯ ಪ್ರೋತ್ಸಾಹವೇ ಮುಖ್ಯವಾಗಿರುತ್ತದೆ.
ಮನೆಯಲ್ಲಿ ಮಗಳಂತೆ ಕಂಡು ಪ್ರೀತಿ ವಾತ್ಸಲ್ಯ ತೋರಿದರೆ, ಕೋರ್ಟ್ನಲ್ಲಿ ಓರ್ವ ಕ್ರೀಡಾಪಟುವಿನಂತೆ ಕಂಡು ಪ್ರೋತ್ಸಾಹ ನೀಡುತ್ತಾರೆ. ಈ ಜನ್ಮದಲ್ಲಿ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ತಂದೆಗಿಂತ, ಅವರೊಬ್ಬರು ನನಗೆ ಆಪ್ತ ಸ್ನೇಹಿತ ಎಂದುಕೊಂಡಿರುವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪದಕ ಜಯಿಸುವುದೇ ಫಾದರ್ಸ್ ಡೇಗೆ ನಾನು ಅವರಿಗೆ ನೀಡುವ ಉಡುಗೊರೆ.
| ಪಿ.ವಿ.ಸಿಂಧು ಬ್ಯಾಡ್ಮಿಂಟನ್ ಆಟಗಾರ್ತಿ