ಬೇಸಿಗೆಯಲ್ಲಿ ಮಕ್ಕಳ ಪ್ರಾಣಕ್ಕೆ ಕುತ್ತು ತಂದೀತು ಕೃಷಿ ಹೊಂಡ...!

Putani
Published on

ಬೇಸಿಗೆಯಲ್ಲಿ ಕೆರೆ-ತೊರೆ ಕಂಡರೆ, ಮಿಂದು ಮೈ ತಂಪಾಗಿಸಿಕೊಳ್ಳೋಣ ಅಂತ ಅನಿಸುವುದು ಸಹಜ. ಅದರಲ್ಲೂ ಮಕ್ಕಳು ನೀರಾಟ ಆಡುವುದಕ್ಕೆ ಸದಾ ಮುಂದು. ಆ ಉತ್ಸಾಹದಲ್ಲಿ ಅವರು ಅಪಾಯವನ್ನೂ ಲೆಕ್ಕಿಸುವುದಿಲ್ಲ. ಹಾಗಾಗಿಯೇ ಇತ್ತೀಚೆಗೆ ಕೃಷಿ ಹೊಂಡಗಳಲ್ಲಿ ಮುಳುಗಿ ಮಕ್ಕಳು ಸಾವಿಗೀಡಾಗುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆ ಬಗ್ಗೆ ಮಕ್ಕಳು, ಪಾಲಕರು, ರೈತರು ಎಲ್ಲರೂ ಎಚ್ಚರ ವಹಿಸುವುದು ಅಗತ್ಯ.

| ಗಿರೀಶ್ ಗರಗ

‘‘ಯಪ್ಪಾ ಎಷ್ಟು ಬಿಸಿಲು... ಕೆರೆ, ತೊರೆಗಳಲ್ಲಿನ ನೀರಿನಲ್ಲಿ ಆಟವಾಡಿದರೆ ಹಾಯೆನಿಸುತ್ತದೆ...’’ ಎಂಬುದು ಈ ಬಿರುಬಿಸಿಲಿನ ಸಮಯದಲ್ಲಿ ಪ್ರತಿಯೊಬ್ಬರಲ್ಲೂ ಉಂಟಾಗುವ ಭಾವನೆ. ಅದಕ್ಕೆ ಮಕ್ಕಳೂ ಹೊರತಲ್ಲ. ಅದರಲ್ಲೂ ಹಳ್ಳಿಗಳಲ್ಲಿ ಮಕ್ಕಳು ಬೇಸಿಗೆಯ ಬೇಗೆಯನ್ನು ತಡೆಯಲಾಗದೆ ಮನೆಯಿಂದ ಹೊರಗೆ ಹೋದರೆ, ಪಾಲಕರು ಅವರ ಮೇಲೆ ಒಂದು ಕಣ್ಣಿಟ್ಟಿರುವುದು ಒಳ್ಳೆಯದು. ಇಲ್ಲದಿದ್ದರೆ ಕೃಷಿ ಚಟುವಟಿಕೆಗೆಂದು ನಿರ್ವಿುಸಲಾದ ಹೊಂಡಗಳು ಮಕ್ಕಳ ಜೀವಕ್ಕೆ ಕುತ್ತು ತಂದೊಡ್ಡಬಹುದು.

ಒಂದು ಕಾಲವಿತ್ತು... ಬೇಸಿಗೆ ಬಂತೆಂದರೆ ಮಕ್ಕಳು ಅಜ್ಜ-ಅಜ್ಜಿಯ ಊರಿಗೆ ಹೋಗಿ ಬೇಸಿಗೆ ರಜೆಯನ್ನು ಮಜವಾಗಿ ಕಳೆಯುತ್ತಿದ್ದರು. ಈಗ ಆ ಪರಿಪಾಠ ಕಡಿಮೆಯಾಗಿದೆ. ಕರೊನಾ ಸೋಂಕಿನ ಕಾರಣದಿಂದಾಗಿ ಶಾಲೆಗಳಿಗೆಲ್ಲ ರಜೆ ನೀಡಲಾಗಿದೆ. ಅಲ್ಲದೆ, ನಗರಗಳಲ್ಲಿ ಕರೊನಾ ಸೊಂಕು ಹೆಚ್ಚುತ್ತಿರುವ ಕಾರಣದಿಂದ ಮಕ್ಕಳೆಲ್ಲ ಅಜ್ಜ-ಅಜ್ಜಿ ಜತೆ ಕಾಲ ಕಳೆಯಲು ಹಳ್ಳಿಗಳತ್ತ ತೆರಳಿದ್ದಾರೆ. ಹೀಗೆ ಹಳ್ಳಿಗೆ ಹೋದ ಮಕ್ಕಳು ಕುಳಿತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ. ಅದರಲ್ಲೂ ಬೇಸಿಗೆಯ ಬಿಸಿಲಿನಿಂದ ಹೈರಾಣಾಗುವ ಮಕ್ಕಳು ನೀರಿರುವ ಕೃಷಿ ಹೊಂಡ, ತೊರೆಗಳಿಗೆ ಹೋಗಿ ಆಟವಾಡುತ್ತಾರೆ. ಹೀಗೆ ಆಡುವ ಮಕ್ಕಳ ಬಗ್ಗೆ ಎಚ್ಚರ ವಹಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಪಾಲಿಥೀನ್ ಶೀಟ್ ಅಳವಡಿಸಲಾದ ಕೃಷಿ ಹೊಂಡಗಳು ಮಕ್ಕಳ ಜೀವಕ್ಕೆ ಎರವಾಗುವ ಎಲ್ಲ ಸಾಧ್ಯತೆಗಳಿವೆ.

ಬೇಸಿಗೆಯಲ್ಲೂ ಕೃಷಿ ಹೊಂಡಗಳಲ್ಲಿ ನೀರು: ರಾಜ್ಯದಲ್ಲಿನ ಒಣಭೂಮಿಯಲ್ಲಿ ಮಳೆ ನೀರು ಸಂಗ್ರಹಿಸಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ವಿುಸಲಾಗಿದೆ. 2014-15ರಿಂದ 2019-20ರವರೆಗೆ ರಾಜ್ಯದಾದ್ಯಂತ 1.3 ಲಕ್ಷ ಕೃಷಿ ಹೊಂಡಗಳನ್ನು ನಿರ್ವಣವಾಗಿವೆ. ಈ ಕೃಷಿ ಹೊಂಡಗಳಿಗೆ ಪಾಲಿಥೀನ್ ಶೀಟ್​ಗಳನ್ನು ಅಳವಡಿಸಿ, ಮಣ್ಣಿನಲ್ಲಿ ನೀರು ಇಂಗದೆ ಹೊಂಡದಲ್ಲಿ ಶೇಖರಣೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಿಂದಾಗಿ ಬೇಸಿಗೆಯಲ್ಲೂ ಆ ಹೊಂಡಗಳಲ್ಲಿ ನೀರು ಇರುತ್ತದೆ. ರೈತರು ಅದನ್ನು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ.

ಮೃತ್ಯು ಕೂಪ ಆಗುತ್ತಿರುವ ಹೊಂಡಗಳು: ಇತ್ತೀಚೆಗೆ ಮಂಡ್ಯದ ಪಾಂಡವಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಮೃತಪಟ್ಟಿದ್ದಾರೆ. ಅದೇ ರೀತಿ ಫೆಬ್ರವರಿಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇವು ಕಳೆದ 3 ತಿಂಗಳಲ್ಲಿ ರಾಜ್ಯದಲ್ಲಿ ಕೃಷಿ ಹೊಂಡದಿಂದ ಆಗಿರುವ ದುರ್ಘಟನೆಗಳು. ಮೂರ್ನಾಲ್ಕು ವರ್ಷಗಳಿಂದ 30ಕ್ಕೂ ಹೆಚ್ಚಿನ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಎಲ್ಲ ಘಟನೆಗಳು ನಡೆದಿರುವುದು, ಬೇಸಿಗೆ ಕಾಲದಲ್ಲಿಯೇ ಎಂಬುದನ್ನು ರೈತರು, ಪಾಲಕರು ಮತ್ತು ಮಕ್ಕಳು ಗಮನಿಸಬೇಕಾಗಿದೆ.

ಪಾಲಕರೇನು ಮಾಡಬೇಕು?: ಅಸುರಕ್ಷಿತ ಕೃಷಿ ಹೊಂಡಗಳಲ್ಲಿ ಮಕ್ಕಳು ಈಜಲು ಅಥವಾ ಆಡಲು ಹೋದಾಗ ಅಲ್ಲಿ ಮುಳುಗಿ ಸಾವನ್ನಪು್ಪವ ಅಪಾಯವಿದೆ ಎಂಬುದರ ಬಗ್ಗೆ ಪಾಲಕರು ಮೊದಲೇ ತಿಳಿಹೇಳಬೇಕು. ಒಂದು ವೇಳೆ ಹಠ ಹಿಡಿದರೆ ಅವರಿಗೆ ಜೀವ ರಕ್ಷಕಗಳನ್ನು ತೊಡಿಸಿ ಕಳುಹಿಸಬಹುದು. ಜತೆಗೆ ಯಾರಾದರೂ ಈಜು ಬರುವವರನ್ನು ಮಕ್ಕಳೊಂದಿಗೆ ಕಳುಹಿಸಿ, ಸುರಕ್ಷಿತರಾಗಿರುವಂತೆ ನೋಡಿಕೊಳ್ಳಬಹುದು. ಕೃಷಿ ಹೊಂಡಕ್ಕೆ ಕಳುಹಿಸಲು ಇಷ್ಟವಿಲ್ಲದವರು, ಮನೆಯ ಆವರಣದಲ್ಲಿ ಅಥವಾ ತಮ್ಮ ಹೊಲದಲ್ಲಿ ಸಣ್ಣದಾದ ಕೊಳ ಸಿದ್ಧಪಡಿಸಿ ಅದಕ್ಕೆ ನೀರು ಭರ್ತಿ ಮಾಡಿ ಅದರಲ್ಲಿ ಆಟವಾಡಲು ಬಿಡಬಹುದು. ಅದು ಸಾಧ್ಯವಾಗದಿದ್ದರೆ, ಮಕ್ಕಳ ಆಟದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್​ನಲ್ಲಿ ಸಿದ್ಧಪಡಿಸಲಾದ ಕೃತಕ ಈಜು ಕೊಳವನ್ನು ಖರೀದಿ, ಅದರಲ್ಲಿ ನೀರು ತುಂಬಿಸಿ ಮಕ್ಕಳನ್ನು ಆಟವಾಡಿಸಬಹುದು.

ಅಪಾಯ ತರುವ ಪಾಲಿಥೀನ್ ಶೀಟ್: ಹಿಂದೆಲ್ಲ ಕೃಷಿ ಹೊಂಡಗಳನ್ನು ತೋಡಿ ಅದನ್ನು ಹಾಗೆಯೇ ಬಿಡಲಾಗುತ್ತಿತ್ತು. ಆದರೆ, 2014-15ರಿಂದೀಚೆಗೆ ಕೃಷಿ ಹೊಂಡಗಳನ್ನು ನಿರ್ವಿುಸಿದ ನಂತರ ಅದಕ್ಕೆ ಪಾಲಿಥೀನ್ ಶೀಟ್ ಅಳವಡಿಸಲಾಗುತ್ತಿದೆ. ಅದು ನೀರು ಸಂಗ್ರಹಕ್ಕೆ ಸಹಕಾರಿ ಆಗುತ್ತದೆಯಾದರೂ, ಪಾಲಿಥೀನ್ ಶೀಟ್ ಭಾರಿ ಅಪಾಯ ತಂದೊಡ್ಡುತ್ತಿದೆ. ಶೀಟ್​ನ ಮೇಲ್ಭಾಗ ನಯವಾಗಿರುವ ಕಾರಣ, ಅದರ ಮೇಲೆ ಕಾಲಿಟ್ಟವರು ಜಾರಿ ಬೀಳುತ್ತಾರೆ. ಅದರಲ್ಲೂ ಕೃಷಿ ಹೊಂಡದಲ್ಲಿ ಅಳವಡಿಸಲಾದ ಪಾಲಿಥೀನ್ ಶೀಟ್​ಗಳ ಮೇಲೆ ನೀರಿನ ಅಂಶವೂ ಇರುತ್ತದೆ. ಅದರ ಮೇಲೆ ಕಾಲಿಟ್ಟವರು ಜಾರುವ ಸಾಧ್ಯತೆ ಜಾಸ್ತಿ. ಪಾಲಿಥೀನ್ ಶೀಟ್ ಹಾಕದ ಕೃಷಿ ಹೊಂಡಗಳ ಕೆಳಭಾಗದಲ್ಲಿ ಕೆಸರು ಹೆಚ್ಚಿರುತ್ತದೆ. ಜಾರಿದವರು ಅದರಲ್ಲಿ ಹೂತು ಹೋಗುವ ಸಾಧ್ಯತೆಗಳಿರುತ್ತವೆ. ಮೇಲೆ ಬರುವುದು ಬಹಳ ಕಷ್ಟ. ನೀರು ಎದೆಮಟ್ಟಕ್ಕಿಂತ ಮೇಲಿದ್ದರೆ, ಕೃಷಿ ಹೊಂಡದೊಳಗೆ ಇಳಿಯುವವರು ನೀರಿನಲ್ಲಿ ಮುಳುಗುವ ಸಾಧ್ಯತೆಗಳಿರುತ್ತವೆ.

ಮುನ್ನೆಚ್ಚರಿಕೆ ಕಡ್ಡಾಯ: ರಾಜ್ಯದ ಮಲೆನಾಡು, ಕರಾವಳಿ ಭಾಗವನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗದ ಪ್ರತಿ ಹಳ್ಳಿಯಲ್ಲೂ ಒಂದಾದರೂ ಕೃಷಿ ಹೊಂಡವಿದೆ. ಈ ಬಾರಿ ಮಳೆ ಹೆಚ್ಚಾಗಿರುವ ಕಾರಣ ಆ ಹೊಂಡಗಳಲ್ಲಿ ನೀರಿನ ಸಂಗ್ರಹವೂ ಉತ್ತಮವಾಗಿದೆ. ಹಳ್ಳಿಗಳಲ್ಲಿ ನೆಲೆಸಿರುವವರು ಹಾಗೂ ಮಕ್ಕಳೊಂದಿಗೆ ಹಳ್ಳಿಗೆ ಬಂದಿರುವ ಪಾಲಕರು ಮಕ್ಕಳು ಆಡಲು ಹೋದಾಗ ಅವರ ಬಗ್ಗೆ ಎಚ್ಚರಿಕೆ ವಹಿಸಲೇಬೇಕು.

ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆ

  • ಬೇಸಿಗೆಯಲ್ಲಿ ನೀರು ಕಂಡೊಡನೆ ಈಜಲು ಮನಸ್ಸಾಗುವುದು ಸಹಜ. ಆದರೆ ಅದರಿಂದಾಗುವ ಅಪಾಯದ ಬಗ್ಗೆ ಎಚ್ಚರ ಇರಲಿ.
  • ಕೃಷಿ ಹೊಂಡ, ಕೆರೆ, ತೆರೆದಬಾವಿ ಮುಂತಾದವುಗಳ ಹತ್ತಿರ ಹೋಗುವುದಕ್ಕೆ ಮುನ್ನ ಯೋಚಿಸಿ. ಅಲ್ಲಿ ಕಾಲು ಜಾರಿಗೆ ನೀರಿಗೆ ಬೀಳುವ ಸಾಧ್ಯತೆ ಇರುತ್ತದೆ.
  • ನಿಮಗೆ ಈಜಲು ಬರುತ್ತಿದ್ದರೂ ನೀರಿನ ಆಳ ಎಷ್ಟಿದೆ ಎಂಬುದರ ಅರಿವು ಇರುವುದಿಲ್ಲ. ಹಾಗಾಗಿ ಅಂಥ ಕಡೆ ಹೋಗುವಾಗ ಜತೆಯಲ್ಲಿ ದೊಡ್ಡವರಿರುವುದು ಒಳ್ಳೆಯದು.
  • ನೀರಿಗೆ ಧುಮುಕುವ ಅತ್ಯುತ್ಸಾಹವನ್ನು ನೀವಂತೂ ತೋರಿಸಲೇಬೇಡಿ. ನಿಮ್ಮ ಸ್ನೇಹಿತರು ಹಾಗೆ ಮಾಡು ತ್ತಿದ್ದರೆ ತಕ್ಷಣ ಮನೆಯಲ್ಲಿ ಹಿರಿಯರಿಗೆ ತಿಳಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net