ನೇಪಾಳ ಸಂಸತ್ ವಿಸರ್ಜನೆ, ಚುನಾವಣೆ ಘೋಷಣೆ

Videsha Vidyamana
Published on
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಭಾನುವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಏಪ್ರಿಲ್-ಮೇ ತಿಂಗಳಲ್ಲಿ ಮಧ್ಯಂತರ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಅವರು ಪ್ರಕಟಿಸಿದ್ದಾರೆ. ಹಠಾತ್ತನೆ ಈ ನಿರ್ಧಾರ ಕೈಗೊಳ್ಳುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಓಲಿ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಸಿಪಿಎನ್) ಎರಡು ಬಣಗಳ ನಡುವೆ ಹಲವು ತಿಂಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿದೆ. ಏಪ್ರಿಲ್ 30ರಂದು ಮೊದಲ ಹಂತ ಹಾಗೂ ಮೇ 10ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

ರಾಜಕೀಯ ಸಂಚಲನ

ಪ್ರಚಂಡ ಮತ್ತು ಓಲಿ

ಪ್ರಧಾನಿ ಓಲಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆ ಸಂಸತ್ತಿನ ಕೆಳಮನೆಯಾದ ಪ್ರತಿನಿಧಿ ಸಭೆಯನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿತು. 2017ರಲ್ಲಿ ಚುನಾವಣೆ ನಡೆದು 275 ಸದಸ್ಯರ ಪ್ರಸಕ್ತ ಪ್ರತಿನಿಧಿ ಸಭೆ ರಚನೆಯಾಗಿತ್ತು. 2022ರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಇದೀಗ ಒಂದು ವರ್ಷ ಮುಂಚಿತವಾಗಿಯೇ ಚುನಾವಣೆಗೆ ದೇಶ ಸಜ್ಜಾಗಿದೆ. ‘ರಾಷ್ಟ್ರೀಯ ಅಸೆಂಬ್ಲಿ’ ನೇಪಾಳ ಸಂಸತ್ತಿನ ಮೇಲ್ಮನೆಯಾಗಿದೆ. 68 ವರ್ಷದ ಓಲಿ ಮತ್ತು 66 ವರ್ಷದ ಪುಷ್ಪಕುಮಾರ್ ಧಮಾಲ್ ‘ಪ್ರಚಂಡ’ ನೇತೃತ್ವದ ಬಣಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಪ್ರಧಾನಿ ಸ್ಥಾನಕ್ಕೆ ಓಲಿ ರಾಜೀನಾಮೆ ನೀಡಬೇಕೆಂಬುದು ಪ್ರಚಂಡ ಬಣದ ಆಗ್ರಹವಾಗಿತ್ತು. ಕೆಲ ದಿನಗಳ ಹಿಂದೆ ಹೊರಡಿಸಿದ್ದ ಆದೇಶವೊಂದು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿ ಕೆಳಮನೆ ವಿಸರ್ಜನೆಯಲ್ಲಿ ಪರ್ಯವಸಾನ ಹೊಂದಿದೆ. ಸಂಸದೀಯ ಮಂಡಳಿ ಕಾನೂನಿಗೆ ಸಂಬಂಧಿಸಿ ಡಿಸೆಂಬರ್ 15ರಂದು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯುವಂತೆ ಓಲಿ ಮೇಲೆ ತೀವ್ರ ಒತ್ತಡ ಬಂದಿತ್ತು. ಸುಗ್ರೀವಾಜ್ಞೆಯನ್ನು ವಿದ್ಯಾದೇವಿ ಅದೇ ದಿನ ಅನುಮೋದಿಸಿದ್ದರು.

ಕರೊನಾ ಪರಿಸ್ಥಿತಿ ನಿರ್ವಹಣೆ ವೈಫಲ್ಯ: ದೇಶದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಲ್ಲಿ ಓಲಿ ವಿಫಲರಾಗಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದರು. ಒಂದೋ ಪ್ರಧಾನಿ ಪಟ್ಟ ತ್ಯಜಿಸಬೇಕು ಇಲ್ಲವೇ ಪಕ್ಷದ ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ಸ್ವಪಕ್ಷೀಯರೇ ಆಗ್ರಹಿಸಿದ್ದರು.

ತಿರುಗುಬಾಣವಾದ ಭಾರತ-ವಿರೋಧಿ ಧೋರಣೆ: ಈ ವರ್ಷದ ಮಧ್ಯದಲ್ಲಿ, ತನ್ನ ಸರ್ಕಾರ ಅಸ್ಥಿರಗೊಳಿಸಲು ಭಾರತ ಯತ್ನಿಸುತ್ತಿದೆ ಎಂದು ಓಲಿ ಆರೋಪಿಸಿದ್ದು ಅವರಿಗೇ ತಿರುಗುಬಾಣವಾಗಿ ಪರಿವರ್ತನೆಗೊಂಡಿತು. ನೆರೆಯ ಸ್ನೇಹಮಯಿ ದೇಶವಾದ ಭಾರತದ ಮೇಲೆ ಗೂಬೆ ಕೂರಿಸಲು ಯತ್ನಿಸುವ ಮೂಲಕ ಬಾಂಧವ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದ ಪ್ರಚಂಡ ಮೊದಲಾದ ನಾಯಕರು, ಓಲಿ ಪದತ್ಯಾಗಕ್ಕೆ ಆಗ್ರಹಿಸಿದ್ದರು. ಕ್ಷಮೆ ಕೇಳುವಂತೆಯೂ ಪ್ರಚಂಡ ಪಟ್ಟುಹಿಡಿದಿದ್ದರು.

ವಿಸರ್ಜನೆ ವಿವಾದ: ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ಕಾನೂನು ಹೋರಾಟಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಸಂವಿಧಾನಕ್ಕೆ ಅನುಗುಣವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿ ಕೊಂಡಿದ್ದರೂ ಈ ಬಗ್ಗೆ ಸಂವಿಧಾನದಲ್ಲಿ ಯಾವುದೇ ನಿಯಮ ಇಲ್ಲವೆಂಬುದು ಭಿನ್ನತೀಯರ ವಾದ. ಕೆಳಮನೆ ವಿಸರ್ಜನೆಯನ್ನು ಪ್ರಶ್ನಿಸಿ ಪ್ರಚಂಡ ಮತ್ತು ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಮಾಧವಕುಮಾರ್ ನೇಪಾಳ್, ಸುಪ್ರೀಂಕೋರ್ಟ್​ಗೆ ಮೊರೆ ಹೋಗುವ ಸಂಭವವಿದೆ.

ಚೀನಾಕ್ಕೂ ಆಘಾತ: ನೇಪಾಳದಲ್ಲಿ ಕಮ್ಯೂನಿಸ್ಟ್ ಪಕ್ಷದ ಆಡಳಿತ ಮುಂದುವರಿಯುವಲ್ಲಿ ಆಸಕ್ತಿ ಹೊಂದಿರುವ ಚೀನಾಕ್ಕೆ ಸಂಸತ್ ವಿಸರ್ಜನೆ ಕ್ರಮದಿಂದ ಸಿಡಿಲು ಬಡಿದಂತಾಗಿದೆ. ಇಂಥದ್ದೊಂದು ಬೆಳವಣಿಗೆ ನಡೆಯುವುದನ್ನು ತಡೆಯಲು ಚೀನಾ ಕಮ್ಯೂನಿಸ್ಟ್ ಪಕ್ಷ (ಸಿಪಿಸಿ) ಹಲವು ತಿಂಗಳಿಂದ ಪ್ರಯತ್ನಿಸುತ್ತಿತ್ತು. ನೇಪಾಳದಲ್ಲಿರುವ ಚೀನಾ ರಾಯಭಾರಿ ಹೌ ಯಾಂಕಿ ಹಲವು ಸುತ್ತಿನ ಮಾತುಕತೆ ನಡೆಸಿ ನೇಪಾಳದ ಕಮ್ಯೂನಿಸ್ಟ್ ನಾಯಕರು ಒಗ್ಗಟ್ಟಿನಿಂದ ಇರುವಂತೆ ಸಲಹೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net