

ಮೊದಲನೆಯ ಪ್ರಶ್ನೆ, ಭವಿಷ್ಯದ ದೃಷ್ಟಿಯಿಂದ ದುರ್ಬಲ ವಿಂಡೀಸ್ ವಿರುದ್ಧ ಯುವ ತಂಡವನ್ನೇ ಆಡಿಸುವಂತಿದ್ದರೆ, ಪೂರ್ಣಪ್ರಮಾಣದ ತಂಡವನ್ನು ಆಯ್ಕೆ ಮಾಡಿದ್ದೇಕೆ? ರೋಹಿತ್ ಮತ್ತು ವಿರಾಟ್ರಂಥ ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟು ಮಾಡುವ ಪ್ರಯೋಗದಿಂದ ಏನಾದರೂ ಸಕಾರಾತ್ಮಕ ಫಲಿತಾಂಶ ಹೊರಹೊಮ್ಮಲು ಸಾಧ್ಯವೇ?
ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ವಿಚಾರದಲ್ಲಿ ಹೀಗೆ ಹೇಳಬೇಕೆನಿಸಿತು.
ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಜತೆಗಿನ ತರಬೇತಿದಾರಿಕೆ ಒಪ್ಪಂದವನ್ನು ವಿಸ್ತರಿಸದೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಲಿ ಎಂದು ಆಗಿನ ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದಾಗ ಎಲ್ಲರೂ ಸಂತೋಷಪಟ್ಟಿದ್ದರು. ಅದಕ್ಕೆ ಕಾರಣ ರವಿಶಾಸ್ತ್ರಿ ಬಗ್ಗೆ ಇದ್ದ ಅಸಮಾಧಾನವೇನಲ್ಲ.. ಬದಲಿಗೆ ಕ್ರಿಕೆಟಿಗನಾಗಿ ದಿಗ್ಗಜನ ಎತ್ತರಕ್ಕೇರಿರುವ ದ್ರಾವಿಡ್ ಕೋಚ್ ಆಗಿ ಕೂಡ ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಏರಿಸಬಹುದು ಎಂಬ ನಿರೀಕ್ಷೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಅವರ ತರಬೇತಿಯಲ್ಲಿ ಭಾರತೀಯ ಕ್ರಿಕೆಟ್ ಸಿಹಿ ಸವಿದಿದ್ದಕ್ಕಿಂತ ಕಹಿ ನುಂಗಿದ್ದೇ ಹೆಚ್ಚು. ಹೀಗೇಕಾಯಿತು?
ದ್ರಾವಿಡ್ರ ಕ್ರಿಕೆಟ್ ಪ್ರೌಢಿಮೆ ಬಗ್ಗೆ ಯಾವುದೇ ತಕರಾರಿಲ್ಲ. ಕ್ರಿಕೆಟ್ ಅನ್ನು ಒಂದು ಪಂದ್ಯ, ಪ್ರತ್ಯಕ್ಷ ಘಟನೆಗಿಂತ ನಿರಂತರ ಪ್ರಕ್ರಿಯೆ ಎಂದು ಪರಿಭಾವಿಸುವ ಅವರ ವೃತ್ತಿಪರತೆಯ ಬಗ್ಗೆಯೂ ಯಾರ ಆಕ್ಷೇಪವೇನಿಲ್ಲ. ಆದರೆ, ಕ್ರೀಡೆಯಲ್ಲಿರಲಿ, ಪ್ರಯೋಗಾಲಯದಲ್ಲಿರಲಿ ಅಂತಿಮವಾಗಿ ಮುಖ್ಯವೆನಿಸುವುದು ಫಲಿತಾಂಶ ಮಾತ್ರ. ಫಲಿತಾಂಶ ನಕಾರಾತ್ಮಕವಾಗಿದ್ದರೆ, ಪ್ರಕ್ರಿಯೆ ಸಾಗಿದ ಹಾದಿ, ದಾಟಿದ ಘಟ್ಟಗಳು ಮುಖ್ಯವಾಗುವುದಿಲ್ಲ.
ದ್ರಾವಿಡ್ ಆಟಗಾರರಾಗಿದ್ದ ಕಾಲಘಟ್ಟದಲ್ಲಿ, ಟಿ20 ಕ್ರಿಕೆಟ್ನ ಗಂಧಗಾಳಿ ಇನ್ನೂ ಬೀಸಿರದ, ಏಕದಿನಗಳೂ ಪಿಂಚ್ಹಿಟ್ಟರ್ ಪ್ರಯೋಗಕ್ಕಷ್ಟೇ ಸೀಮಿತವಾಗಿ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ನಡೆಯುತ್ತಿದ್ದ ಆ ದಿನಗಳಲ್ಲಿ ದ್ರಾವಿಡ್ರ ಬ್ಯಾಟಿಂಗ್ ಟೀಮ್ ಇಂಡಿಯಾಕ್ಕೆ ಜೀವಾಮೃತದಂತಿರುತ್ತಿತ್ತು. ತೆಂಡುಲ್ಕರ್ ಔಟಾದರೂ, ಲಕ್ಷ್ಮಣ್ ಔಟಾದರೂ, ಇನ್ನೂ ದ್ರಾವಿಡ್ ಇದ್ದಾರಲ್ಲ.. ಎಂಬ ಭರವಸೆಯೇ ಭಾರತ ತಂಡವನ್ನು ಫಾಲೋಆನ್ ಮುಜುಗರದಿಂದ ಪಾರು ಮಾಡುತ್ತಿತ್ತು. ಸುರಕ್ಷಿತ ಗಡಿ ತಲುಪಿಸುತ್ತಿತ್ತು. ಆದರೆ, ದ್ರಾವಿಡ್ ಕೋಚ್ ಆದ ಮೇಲೆ ಅವರು ಟೀಮ್ ಇಂಡಿಯಾದಲ್ಲಿ ಆರಂಭಿಸಿದ ಪ್ರಕ್ರಿಯಾತ್ಮಕ ತರಬೇತಿ ಫಲ ಕೊಡುವುದಕ್ಕಿಂತ ಅಸಹನೆ ಹೆಚ್ಚಿಸುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೇ ಮುಗ್ಗರಿಸಿದ್ದು, ಏಷ್ಯಾ ಕಪ್ನಲ್ಲಿ ಫೈನಲ್ ತಲುಪಲೂ ವಿಫಲವಾಗಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ನೆಲಕಚ್ಚಿದ್ದು ಹತಾಶೆ ಉಂಟು ಮಾಡಿದರೆ, ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ತವರಿನಲ್ಲಿ ಏಷ್ಯಾ ಕಪ್, ಏಕದಿನ ವಿಶ್ವಕಪ್ ಆಡುವುದಕ್ಕೆ ತಂಡದ ಸನ್ನದ್ಧತೆ ಸಾಲದು ಎಂಬ ಭಾವನೆ ಮೂಡುತ್ತಿದೆ.
ದೂರದ ಉದಾಹರಣೆಗಳಿಗಿಂತ ಹಾಲಿ ವೆಸ್ಟ್ ಇಂಡೀಸ್ ಪ್ರವಾಸದ ಕುರಿತೇ ಹೇಳುವುದಾದರೆ, ಮಂಗಳವಾರ ಮುಗಿದ ಏಕದಿನ ಸರಣಿಯಲ್ಲಿ ಆಡಿದ್ದು ಭಾರತದ ‘ಬಿ’ ತಂಡವಾಗಿತ್ತು. ತಂಡದೊಂದಿಗೆ ತೆರಳಿದ್ದ ಎಲ್ಲ ಯುವ ಆಟಗಾರರು ಅವಕಾಶ ಪಡೆದರು. ಹೊಸ ಆಟಗಾರರನ್ನು ಉತ್ತೇಜಿಸುವ ದೃಷ್ಟಿಯಿಂದ, ಖುದ್ದು ದ್ರಾವಿಡ್ ಹೇಳಿಕೊಂಡಂತೆ ಭವಿಷ್ಯದ ಸಂಭವನೀಯತೆಗಳಿಗೆ ಸಜ್ಜಾಗಿರುವ ಉದ್ದೇಶದಿಂದ ಈ ರೀತಿ ಅವಕಾಶ ಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ, ಇಂಥ ಪ್ರಯೋಗಕ್ಕಾಗಿ ಬಲಿಪಶು ಆದವರು ಯಾರು?
ಯಾವುದೇ ಕ್ರೀಡೆ ಇರಲಿ, ಯಾವುದೇ ಕ್ಷೇತ್ರ ಇರಲಿ, ಪ್ರಯೋಗಗಳನ್ನು ಮಾಡುವಾಗ ಅದಕ್ಕೊಂದು ವಿಧಾನ ಅನುಸರಿಸುವುದು ಅಪೇಕ್ಷಿತ. ಏಷ್ಯಾ ಕಪ್ನಲ್ಲಿ, ವಿಶ್ವಕಪ್ನಲ್ಲಿ ಖಚಿತವಾಗಿ ಆಡುವ ಒಂದು ಕೋರ್ ತಂಡವನ್ನು ಉಳಿಸಿಕೊಂಡು, ಉಳಿದ ಸ್ಥಾನಗಳಿಗೆ ಪ್ರಯೋಗ ಮಾಡಬೇಕಿತ್ತು. ಬೌಲಿಂಗ್ ಕುರಿತು ಹೇಳುವುದಾದರೆ, ಭಾರತಕ್ಕೊಂದು ನಿರ್ದಿಷ್ಟ, ಖಚಿತ ಬೌಲಿಂಗ್ ಪಡೆ ಇಲ್ಲವೇ ಇಲ್ಲ. ಈಗಷ್ಟೇ ಫಿಟ್ನೆಸ್ ಸಂಪಾದಿಸಿರುವ (?) ಜಸ್ಪ್ರೀತ್ ಬುಮ್ರಾ ಒಂದೂವರೆ ವರ್ಷದಿಂದ ಕ್ರಿಕೆಟ್ ಆಡಿಲ್ಲ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇಬ್ಬರೇ ಬಹುಶಃ ತಂಡದ ಖಚಿತ ಆಯ್ಕೆಗಳು. ದ್ರಾವಿಡ್ ಕೋಚ್ ಆದ ಮೇಲೆ ಹತ್ತಾರು ವೇಗಿಗಳಿಗೆ ಅವಕಾಶ ನೀಡಿದ್ದರೂ, ವಿಶ್ವಕಪ್ ತಂಡಕ್ಕೆ ಬೇಕೇಬೇಕು ಎಂಬಂಥ ಆಯ್ಕೆ ಒಂದೂ ದೊರಕಿಲ್ಲ.
ಹೀಗಿರುವಾಗ ಕನಿಷ್ಠ ಬ್ಯಾಟಿಂಗ್ನಲ್ಲಾದರೂ ಈ ಹೊತ್ತಿಗಾಗಲೇ ತಂಡ ಒಂದು ಖಚಿತ ಆಯ್ಕೆಗಳನ್ನು, ನಿರ್ದಿಷ್ಟ ಕ್ರಮಾಂಕವನ್ನು ಕಂಡುಕೊಳ್ಳಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ವಿಶ್ವಕಪ್ನ ಲೀಗ್ ಪಂದ್ಯಗಳಲ್ಲೂ ಕ್ರಮಾಂಕದ ಪ್ರಯೋಗ ಮುಂದುವರಿಯುವ ಲಕ್ಷಣ ತೋರುತ್ತಿದೆ.
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬೆಂಚ್ನಲ್ಲಿ ಕೂರಿಸಿ ಹೊಸಬರಿಗೆ ಅವಕಾಶ ಕೊಡಲಾಯಿತು. ಭಾರತ ಒಂದು ಪಂದ್ಯ ಸೋತು, ಎರಡು ಗೆದ್ದು ಸರಣಿಯನ್ನೇನೋ ಗೆದ್ದುಕೊಂಡಿತು. ಆದರೆ, ವಿಶ್ವಕಪ್ ಹೊಸ್ತಿಲಲ್ಲಿ ರೋಹಿತ್, ಕೊಹ್ಲಿಯನ್ನು ಕೈಬಿಟ್ಟು ಯಾವ ಸಂದೇಶ ನೀಡಿದಂತಾಯಿತು ಎಂಬುದು ಪ್ರಶ್ನಾರ್ಹ.
ಮೊದಲನೆಯ ಪ್ರಶ್ನೆ, ಭವಿಷ್ಯದ ದೃಷ್ಟಿಯಿಂದ ದುರ್ಬಲ ವಿಂಡೀಸ್ ವಿರುದ್ಧ ಯುವ ತಂಡವನ್ನೇ ಆಡಿಸುವಂತಿದ್ದರೆ, ಪೂರ್ಣಪ್ರಮಾಣದ ತಂಡವನ್ನು ಆಯ್ಕೆ ಮಾಡಿದ್ದೇಕೆ? ರೋಹಿತ್ ಮತ್ತು ವಿರಾಟ್ರಂಥ ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟು ಮಾಡುವ ಪ್ರಯೋಗದಿಂದ ಏನಾದರೂ ಸಕಾರಾತ್ಮಕ ಫಲಿತಾಂಶ ಹೊರಹೊಮ್ಮಲು ಸಾಧ್ಯವೇ? ಹತ್ತಾರು ವರ್ಷ ಭಾರತದ ಪರ ಆಡಿ ವಿಶ್ವಕ್ರಿಕೆಟ್ನಲ್ಲಿ ತಮ್ಮದೇ ವರ್ಚಸ್ಸು ಗಳಿಸಿಕೊಂಡಿರುವ ರೋಹಿತ್, ವಿರಾಟ್ ಸ್ಥಾನವೂ ಟೀಮ್ ಇಂಡಿಯಾದಲ್ಲಿ ಖಾಯಂ ಅಲ್ಲ ಎಂದಾದರೆ, ಯುವ ಪೀಳಿಗೆಗೆ ಯಾವ ಸಂದೇಶ ಹೋಗುತ್ತದೆ? ಮ್ಯಾನೇಜರ್ಗಳೇ ಪರಮಾಧಿಕಾರ ಹೊಂದಿರುವ ಫುಟ್ಬಾಲ್ನಲ್ಲಿ ತಂಡದ ನಾಯಕನನ್ನು ಪಂದ್ಯದಿಂದ ಹೊರಗಿಡುವ, ಅರ್ಧ ಪಂದ್ಯದಲ್ಲೇ ಬದಲಿಸುವ ಪರಿಪಾಠವನ್ನು ನಾವು ಕಂಡಿದ್ದೇವೆ. ಕಳೆದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡದ ನಾಯಕ ರೊನಾಲ್ಡೊರನ್ನು ಕೋಚ್ ಫರ್ನಾಂಡೊ ಸ್ಯಾಂಟೊಸ್ ಕೈಬಿಟ್ಟಿದ್ದು ಅದಕ್ಕೊಂದು ಉದಾಹರಣೆ. ಆದರೆ, ಕ್ರಿಕೆಟ್ನಲ್ಲಿ ಯಾವುದೇ ಕೋಚ್ ತಂಡದ ನಾಯಕನನ್ನೇ ಕೈಬಿಟ್ಟು ಪ್ರಯೋಗ ನಡೆಸಿದ ಉದಾಹರಣೆ ಹಿಂದೆಂದೂ ಇರಲಿಲ್ಲ. ಸರಣಿಯಿಂದಲೇ ರೋಹಿತ್, ವಿರಾಟ್ರನ್ನು ಕೈಬಿಟ್ಟು ಯುವ ತಂಡ ಆಯ್ಕೆ ಮಾಡಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ, ಆಯ್ಕೆ ಮಾಡಿದ ಮೇಲೆ ಗಾಯ ಅಥವಾ ಅನಿವಾರ್ಯ ಸಂದರ್ಭದ ಹೊರತು ನಾಯಕನನ್ನೇ ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡುವುದು ಸಾಧುವೂ ಅಲ್ಲ, ಅಪೇಕ್ಷಣೀಯವೂ ಅಲ್ಲ.
ಮೊದಲ ಏಕದಿನ ಪಂದ್ಯದಲ್ಲಿ ಸಣ್ಣ ಮೊತ್ತ ಬೆನ್ನಟ್ಟುವಾಗ ಬ್ಯಾಟಿಂಗ್ ಕ್ರಮಾಂಕ ಅಲ್ಲೋಲಕಲ್ಲೋಲ ಮಾಡಲಾಯಿತು. ರೋಹಿತ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರೆ, ವಿರಾಟ್ಗೆ ಬ್ಯಾಟಿಂಗ್ ಅವಕಾಶವೇ ಸಿಗಲಿಲ್ಲ. ಉಳಿದೆರಡು ಪಂದ್ಯಗಳಲ್ಲಿ ಅವರಿಬ್ಬರನ್ನು ಆಡಿಸಲೇ ಇಲ್ಲ. ಪ್ರಯೋಗವೇ ಉದ್ದೇಶವಾಗಿದ್ದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲೇ ತಂಡ ಆಯ್ಕೆ ಮಾಡಬಹುದಿತ್ತು.
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಪೇಕ್ಷೆಯಂತೆ ದ್ರಾವಿಡ್ ಕೋಚ್ ಆಗಿ, ರೋಹಿತ್ ನಾಯಕರಾಗಿ ಒಂದೇ ಅವಧಿಯಲ್ಲೇ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಎರಡು ವರ್ಷ ಕಳೆದರೂ ರೋಹಿತ್ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕ ಎಂಬ ಭಾವನೆ ಬರಲೇ ಇಲ್ಲ. ಕಾರಣ ಪ್ರಯೋಗ. ಕಳೆದ ವರ್ಷ ಪ್ರಯೋಗದ ಹೆಸರಲ್ಲಿ ಬೇರೆಬೇರೆ ಸರಣಿಗಳಲ್ಲಿ ಬರೋಬ್ಬರಿ 7 ಆಟಗಾರರು ನಾಯಕರಾಗಿ ಟೀಮ್ ಇಂಡಿಯಾ ಮುನ್ನಡೆಸಿದರು. ರೋಹಿತ್ ಹೆಸರಿಗಷ್ಟೇ ನಾಯಕ. ಆದರೆ, ಅವರು ಯಾವ ಸರಣಿಯಲ್ಲಿ, ಯಾವ ಪಂದ್ಯದಲ್ಲಿ ಆಡುತ್ತಾರೆ ಎಂಬ ಬಗ್ಗೆ ಸ್ವತಃ ಅವರಿಗೂ ಖಾತರಿ ಇಲ್ಲದೇ ಹೋದರೆ, ಏಕದಿನ ವಿಶ್ವಕಪ್ನಲ್ಲಿ ರೋಹಿತ್ ನಾಯಕತ್ವದಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಪ್ರಯೋಗಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ರೋಹಿತ್, ವಿರಾಟ್, ಶುಭಮಾನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯರ ಕ್ರಮಾಂಕ ನಿಗದಿಗೊಳಿಸಿ ಉಳಿದ ಕ್ರಮಾಂಕಗಳಿಗೆ ಪ್ರಯೋಗ ಮಾಡುವುದು ಒಂದು ವಿಧಾನ. ಇನ್ನು ಆಕಸ್ಮಿಕ ಗಾಯದಂಥ ಸಂದರ್ಭಗಳಿಗೆ ಈ ನಾಲ್ಕು ಜನರ ಪರ್ಯಾಯ ಆಯ್ಕೆಗಳನ್ನು ಕಂಡುಕೊಳ್ಳುವುದಕ್ಕೂ ಸಾಕಷ್ಟು ಆಯ್ಕೆ, ಅವಕಾಶಗಳಿರುತ್ತವೆ. ಮನೆಯ ಯಜಮಾನನನ್ನೇ ಮನೆಯಿಂದ ಆಚೆ ಕಳಿಸಿ, ಹೊಸಬರನ್ನು ಕರೆತಂದು ನಡೆಸುವ ಪ್ರಯೋಗದ ಬಗ್ಗೆ ಯಾವ ರೀತಿ ಅರ್ಥೈಸಿಕೊಳ್ಳಬೇಕೆಂಬುದೇ ಪ್ರಶ್ನೆ.
ಟೀಮ್ ಇಂಡಿಯಾ 2011ರ ಬಳಿಕ ವಿಶ್ವಕಪ್ ಗೆಲ್ಲುವ ಕನಸನ್ನೇನೋ ಕಾಣುತ್ತಿದೆ. ಆ ಗುರಿ ಸಾಧನೆ ನಿಟ್ಟಿನಲ್ಲಿ ಸಂಭಾವ್ಯ ತಂಡ ಈಗಾಗಲೇ ಕಾಗದದ ಮೇಲೆ ಅಂತಿಮವಾಗಿರಬೇಕಿತ್ತು. ಆದರೆ, ಟೂರ್ನಿಗೆ ಎರಡು ತಿಂಗಳಿಗಿಂತ ಕಡಿಮೆ ಅವಧಿ ಇರುವಾಗಲೂ ಇನ್ನೂ ಸೂಕ್ತ ಆಟಗಾರರಿಗಾಗಿ ಪ್ರಯೋಗವನ್ನೇ ನಡೆಸುತ್ತಿದ್ದರೆ, ತಂಡ ಮಾನಸಿಕವಾಗಿ ಸಜ್ಜಾಗುವುದು ಯಾವಾಗ? ಹೇಗೆ?
ರೋಹಿತ್ ಮತ್ತು ವಿರಾಟ್ ಈ ವರ್ಷ ಕೇವಲ 9 ಏಕದಿನಗಳಲ್ಲಷ್ಟೇ ಆಡಿದ್ದಾರೆ. 2021ರಿಂದೀಚೆಗೆ ಭಾರತ ಆಡಿರುವ 41 ಏಕದಿನಗಳ ಪೈಕಿ ರೋಹಿತ್ 22 ಪಂದ್ಯ ತಪ್ಪಿಸಿಕೊಂಡಿದ್ದರೆ, ವಿರಾಟ್ 18 ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿದ್ದಾರೆ. ವಿಂಡೀಸ್ ಸರಣಿಯಲ್ಲೂ ಅವಕಾಶ ತಪು್ಪವುದರೊಂದಿಗೆ ಇನ್ನು ಏಷ್ಯಾ ಕಪ್ವರೆಗೂ ಅವರಿಗೆ ಮತ್ತೆ ಕಣಕ್ಕಿಳಿಯುವ ಅವಕಾಶ ಸಿಗುವುದಿಲ್ಲ. ಆಗಸ್ಟ್ನಲ್ಲಿ ಅವರಿಬ್ಬರು ಯಾವುದೇ ಪಂದ್ಯ ಆಡುತ್ತಿಲ್ಲ. ಐರ್ಲೆಂಡ್ ಪ್ರವಾಸಕ್ಕೂ ಅವರು ತೆರಳುತ್ತಿಲ್ಲ. ಅಂದರೆ, ಮಹತ್ವದ ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಮುನ್ನ ತಂಡದ ನಾಯಕ ಮತ್ತು ಮುಂಚೂಣಿಯ ಬ್ಯಾಟ್ಸ್ಮನ್ ಮ್ಯಾಚ್ಪ್ರಾಕ್ಟೀಸ್ ಇಲ್ಲದೆ ನೇರವಾಗಿ ಟೂರ್ನಿಯಲ್ಲಿ ಆಡಬೇಕಿದೆ. ಇದು ಯಾವ ಬಗೆಯ ಸಿದ್ಧತೆ? ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದೆ ಕೇವಲ ನೆಟ್ ಪ್ರಾಕ್ಟೀಸ್ ಮಾತ್ರ ಮಾಡಿಕೊಂಡು ಏಷ್ಯಾ ಕಪ್, ವಿಶ್ವಕಪ್ಗಳಲ್ಲಿ ಸಕಾರಾತ್ಮಕ ಮನಸ್ಥಿತಿಯಿಂದ ಆಡುವುದು ಸಾಧ್ಯವೇ ಎಂಬುದಕ್ಕೆ ಬಿಸಿಸಿಐ ಮಾತ್ರ ಉತ್ತರ ಕೊಡಲು ಸಾಧ್ಯ.
ಕೊನೆಯದಾಗಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಪೀಳಿಗೆಗೊಮ್ಮೆ ಪ್ರವರ್ಧಮಾನಕ್ಕೆ ಬರುವ ಆಟಗಾರರು. ಅವರ ಬ್ಯಾಟಿಂಗ್ ನೋಡಲೆಂದೇ ಕ್ರೀಡಾಂಗಣಕ್ಕೆ ಬರುವ ಅಪಾರ ಸಂಖ್ಯೆಯ ವೀಕ್ಷಕರಿದ್ದಾರೆ. ವಿಂಡೀಸ್ನಲ್ಲೂ ಇವರಿಬ್ಬರ ಆಟವನ್ನು ನೋಡಲೆಂದೇ ಕಾದಿದ್ದದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು. ಕೊಹ್ಲಿಗೆ 35 ವರ್ಷವಾದರೆ, ರೋಹಿತ್ಗೆ 36 ವರ್ಷ. ಅವರು ಇನ್ನೆಷ್ಟು ಕಾಲ ಕ್ರಿಕೆಟ್ ಆಡಿಕೊಂಡಿರಬಹುದು? ಬಹುಶಃ ಈ ವಿಶ್ವಕಪ್ ರೋಹಿತ್ ಪಾಲಿಗೆ ಕೊನೆಯ ಟೂರ್ನಿ ಆಗಬಹುದು. ವಿರಾಟ್ ಇನ್ನೊಂದಷ್ಟು ವರ್ಷ ಆಡಿದರೂ, ಕೇವಲ ಟೆಸ್ಟ್ಗೆ ಸೀಮಿತರಾಗಲೂ ಬಹುದು. ಇವರು ಆಡುವಷ್ಟು ಪಂದ್ಯಗಳನ್ನಾದರೂ ಕಣ್ತುಂಬಿಕೊಳ್ಳುವ ಆಸೆ ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸುವ ಕೋಟ್ಯಂತರ ಅಭಿಮಾನಿಗಳಿಗೆ ಇರುವುದಿಲ್ಲವೇ? ಪಂದ್ಯವನ್ನೇ ಆಡಿಸದೆ, ವಿಶ್ರಾಂತಿ ನೀಡುವ ಮೂಲಕ ಅಷ್ಟೊಂದು ಅಭಿಮಾನಿಗಳಿಗೆ ನಿರಾಸೆ ಪಡಿಸಿದಂತಾಗುವುದಿಲ್ಲವೇ? ಇನ್ನು ಇಂಥ ನಿರ್ಧಾರಗಳಲ್ಲಿ ಕೋಚ್ನಷ್ಟೇ ಆಯ್ಕೆಗಾರರೂ ಹೊಣೆಗಾರರು. ದುರಂತವೆಂದರೆ, ಇತ್ತೀಚೆಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅಧಿಕಾರ ವಹಿಸಿಕೊಳ್ಳುವವರೆಗೂ ತಂಡಕ್ಕೆ ಆರು ತಿಂಗಳಿಗೂ ಹೆಚ್ಚು ಕಾಲ ಮುಖ್ಯ ಆಯ್ಕೆಗಾರರೇ ಇರಲಿಲ್ಲ.
ಈ ಎಲ್ಲ ದೃಷ್ಟಿಯಿಂದ ಯೋಚಿಸುವಾಗ ಪ್ರಯೋಗದ ಹೆಸರಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಎಷ್ಟು ಅಪಾಯಕಾರಿ ಎಂದು ಭಯವಾಗುತ್ತದೆ. ಏಷ್ಯಾ ಕಪ್ನಲ್ಲಿ, ವಿಶ್ವಕಪ್ನಲ್ಲಿ ವಿಫಲರಾದರೆ ಅಭಿಮಾನಿಗಳಿಂದ ಹೆಚ್ಚಿನ ದೂಷಣೆಗೊಳಗಾಗುವವರು ನಾಯಕ ರೋಹಿತ್ ಮತ್ತು ವಿರಾಟ್. ಭಾರತ ಏಷ್ಯಾ ಕಪ್ ಮತ್ತು ವಿಶ್ವಕಪ್ ಟ್ರೋಫಿ ಗೆಲ್ಲಬೇಕಾದರೂ, ಇವರಿಬ್ಬರ ಪಾತ್ರವೇ ಪ್ರಮುಖ. ತಂಡದ ಯಾವುದೇ ಪ್ಲಾ್ಯನ್, ಪ್ರಯೋಗಗಳಿದ್ದರೂ, ಇವರಿಬ್ಬರನ್ನು ಕೇಂದ್ರೀಕರಿಸಿಯೇ ಸಿದ್ಧವಾಗಬೇಕು. ಅದಾಗದೆ ನಾಯಕ, ಪ್ರಮುಖ ಆಟಗಾರನನ್ನು ಬಿಟ್ಟು ಏನೋ ಪ್ರಯೋಗ ಮಾಡುತ್ತೇವೆಂದು ಹೊರಟರೆ, ಅದು ಬಿಸಿಲುಗುದುರೆ ಏರುವ ಪ್ರಯತ್ನವಾದೀತು.
ತಿಳಿದವರು ಈ ನಿಟ್ಟಿನಲ್ಲಿ ಆಲೋಚಿಸುವರೇ..?
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)