ರುದ್ರಪೂಜೆಯ ಸಾರ: ಗುರುದೇವ್ ಶ್ರೀ ಶ್ರೀ ರವಿಶಂಕರ್

Rudra Pooja
Published on

ಭಾರತದಾದ್ಯಂತ, ಈ ಶ್ರಾವಣ ಮಾಸದಲ್ಲಿ ಪವಿತ್ರವಾದ ರುದ್ರ ಮಂತ್ರದ ಪಠಣವು ಅತ್ಯಂತ ಮಹತ್ವದ್ದಾಗಿದೆ. ರುದ್ರಪೂಜೆಯು ಶಿವನ ಆರಾಧನೆಗಿರುವ ಶ್ರೇಷ್ಠವಾದ ವಿಧಾನವಾಗಿದೆ.

ಪರಮ ದಯಾಮಯ ಮತ್ತು ದುಷ್ಟನಾಶಕನಾದ ರುದ್ರನು ಶಿವನ ರೂಪವೇ ಆಗಿದ್ದಾನೆ. ಪೂಜೆ ಎಂದರೆ ಪೂರ್ಣತೆಯಿಂದ ಜನಿಸಿದುದು. ಭಗವಂತನನ್ನು ತುಂಬು ಹೃದಯದಿಂದ ಗೌರವಿಸಿ ಮನಸ್ಸು ವಿಕಾಸಗೊಂಡಾಗ ಅಭಿವ್ಯಕ್ತವಾಗುವ ಕ್ರಿಯೆಯನ್ನು ಪೂಜೆ ಎನ್ನುತ್ತಾರೆ. ರುದ್ರ ಪೂಜೆಯಲ್ಲಿ ನಾವು ರುದ್ರಾಧ್ಯಾಯದ ಮಂತ್ರಗಳನ್ನು ಪಠಿಸುತ್ತಾ ಶಿವ ತತ್ವವನ್ನು ವೈಭವದಿಂದ ಆವಾಹಿಸುತ್ತೇವೆ. ಶಾಂತಿಯುತ ಜೀವನವನ್ನು ನಡೆಸಲು ಮನುಷ್ಯರಿಗೆ ಅವಶ್ಯವಿರುವ 346 ಆಸೆಗಳನ್ನು ಪೂರೈಸುವ ಭಗವಾನ್ ರುದ್ರನನ್ನು, ಈ ಮಂತ್ರದ ಪಠಣದ ಮೂಲಕ ಆವಾಹಿಸುತ್ತೇವೆ. ಈ ಪುರಾತನ ಮಂತ್ರ ಪಠಣೆಯ ತರಂಗಗಳಲ್ಲಿ ಮಿಂದೇಳುವುದರಿಂದ ಭಕ್ತರ ಆಸೆಗಳ ಪೂರೈಕೆಯಾಗುವುದು ಮಾತ್ರವಲ್ಲದೆ ಅವರ ಮನಸ್ಸು ಅನಾಯಾಸವಾಗಿ ಸ್ಥಿತಗೊಳ್ಳುತ್ತದೆ. ಈ ಮಂತ್ರಗಳ ಪಠಣದಿಂದ ಭಕ್ತರು ಶಿವತತ್ವದೊಂದಿಗೆ ಒಂದಾಗಿ ಬಿಡುತ್ತಾರೆ. ಅಲ್ಲದೇ ಇಡೀ ವಾತಾವರಣವು ಈ ತರಂಗಗಳಿಂದ ಆವೃತವಾಗಿ ಚೈತನ್ಯಭರಿತವಾಗಿಬಿಡುತ್ತದೆ. ಶಿವನು ಪರಮ ದಯಾಮಯ, ಪರಿವರ್ತಕ ಮತ್ತು ವಿಘ್ನನಿವಾರಕನೂ ಆಗಿದ್ದಾನೆ.

ರುದ್ರ ಪೂಜೆಯಲ್ಲಿನ, ಮಂತ್ರಗಳ ಅರ್ಥಕ್ಕಿಂತಲೂ ಅದರಿಂದಾಗುವ ಪ್ರಭಾವವು ಮಹತ್ವವಾದುದು. ಮಂತ್ರೋಚ್ಛಾರಣೆಯಲ್ಲಿ, ಶಬ್ದಾರ್ಥವನ್ನು ತಿಳಿಯುವುದಕ್ಕಿಂತ, ಅದರ ತರಂಗಗಳು ಮತ್ತು ಸ್ವರಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಇಡಿಯ ವಿಶ್ವವೇ ತರಂಗಗಳಿಂದಾಗಿದೆ, ಪ್ರಜ್ಞೆಯೂ ತರಂಗವಲ್ಲದೆ ಬೇರಲ್ಲ. ಹಾಗಾಗಿ ಕೇವಲ ಶಬ್ದಾರ್ಥದ ಮೂಲಕವೇ ಅರ್ಥವನ್ನು ಕಂಡುಕೊಳ್ಳ ಬಯಸುವುದು ನಿಮ್ಮನ್ನು ದಾರಿ ತಪ್ಪಿಸುತ್ತದೆ.

ಹೇಗೆ ಒಂದು ಮರದ ಜೀವರಸವು, ಅದರ ತೊಗಟೆ, ಹಣ್ಣು, ಹೂವು, ಕೊಂಬೆಗಳು, ಎಲೆಗಳೆಲ್ಲವನ್ನೂ ಪೋಷಿಸುವುದೋ ಹಾಗೆಯೇ ವೇದಗಳು ಈ ಸೃಷ್ಟಿಯನ್ನು ಪೋಷಿಸುವ ಬೀಜಗಳಂತಿವೆ. ಸಮೂಹ ಮತ್ತು ವಿಶ್ವ ಪ್ರಜ್ಞೆಯ ಡಿಎನ್​ಎಯನ್ನು ವೇದಗಳು ಹೊಂದಿವೆ. ವೇದಗಳನ್ನು ಅರ್ಥ ಮಾಡಿಕೊಳ್ಳುವುದು ಅಮೂಲ್ಯವಾದುದಾದರೂ ಅವುಗಳ ತರಂಗಗಳನ್ನು ಅನುಭವಿಸುವುದು ಅದಕ್ಕಿಂತಲೂ ಮಿಗಿಲಾಗಿದೆ. ಪ್ರಜ್ಞೆಯು ವಿಸ್ತರಿಸಿದಂತೆ ಅರ್ಥೈಸುವಿಕೆ ಮತ್ತು ಗ್ರಹಿಕೆಯು ಸಹ ಉನ್ನತವಾಗುತ್ತದೆ. ರುದ್ರ ಭಯಂಕರನಾದರೂ ಆತ ಪ್ರೇಮಮಯಿ. ಅವನು ನಮ್ಮ ಹೃದಯದಲ್ಲಿ ಮನೆ ಮಾಡಿರುವ ಭಯವನ್ನು ನಿವಾರಿಸಿಬಿಡುತ್ತಾನೆ. ‘ಅಘೊರೇಭ್ಯೊà—ಥ ಘೊರೇಭ್ಯೋ ಘೊರ ಘೊರ ತರೇಭ್ಯಃ’ ಎಂಬ ಮಂತ್ರವು ರುದ್ರದೇವರ ರೌದ್ರ ರೂಪವನ್ನು ಹೇಳá-ವುದರೊಂದಿಗೆ, ಆತನು ಭಯವನ್ನು ನಿವಾರಿಸುವ ಶಕ್ತಿಯನ್ನೂ ಸೂಚಿಸುತ್ತಿದೆ. ಭಯವನ್ನು ದೈವತ್ವದ ಒಂದು ಭಾಗ ಎಂದು ಗುರುತಿಸಿ ಸ್ವೀಕರಿಸುವುದರಿಂದ ಭಯದೊಂದಿಗಿನ ನಮ್ಮ ಸಂಬಂಧವು ಪರಿವರ್ತನೆಯಾಗುತ್ತದೆ. ಕೋಪವು ಶಕ್ತಿಯ ಮತ್ತೊಂದು ರೂಪ. ಆಕ್ರಮಣಶೀಲರಾಗದೆ ಇದನ್ನು ಗುರುತಿಸುವುದರಿಂದ ನಮ್ಮ ಕೆಲಸಗಳನ್ನು ಹೆಚ್ಚು ಅರಿವಿನಿಂದ ನಿರ್ವಹಿಸಬಹುದು. ಸಾಮಾನ್ಯವಾಗಿ ರುದ್ರನು ರೌದ್ರತೆಗೆ ಮತ್ತು ಇತರರು ಅಳುವಂ ತಾಗುವ ಕಾರಣಕ್ಕೆ ಸಂಬಂಧಿಸಲ್ಪಡುತ್ತಾನೆ. ಜೀವನದಲ್ಲಿ ಕ್ಷುಲ್ಲಕ ವಿಷಯಗಳಿಗಾಗಿ ಅಳುತ್ತಿರುತ್ತೇವೆ. ಆದರೆ ನೀವು ಎಂದಾದರೂ ಭಗವಂತನಿಗಾಗಿ ಹೃದಯಾಂತರಾಳದಿಂದ ಹಂಬಲಿಸಿದ್ದೀರಾ? ಅಳುವ ಒಂದು ಕ್ರಿಯೆ ಮಾನವನ ಅಸ್ತಿತ್ವದ ಒಂದು ಅವಿಭಾಜ್ಯ ಅಂಗವಾಗಿದೆ. ನಾವು ಹುಟ್ಟಿದ ಕೂಡಲೇ ಮಾಡುವ ಮೊದಲನೆಯ ಕೆಲಸವೇ ಇದು. ಅಳು, ಭಾವನೆಗಳು ಮತ್ತು ನೋವನ್ನು ಅಭಿವ್ಯಕ್ತಗೊಳಿಸುವ ಕ್ರಿಯೆ. ಅಳುವನ್ನು ಪ್ರೇಮಿಸಿ ಎಂದೊಬ್ಬ ಸಂತ ಸಲಹೆ ನೀಡಿದನಂತೆ. ಏಕೆಂದರೆ ಅದು ಕೃತಜ್ಞತೆಯ ಕಣ್ಣೀರು ಮತ್ತು ಆನಂದ ಭಾಷ್ಪಕ್ಕೂ ಸಂಬಂಧಿಸಿದೆ. ಪ್ರೇಮ ಹಾಗೂ ಕರುಣಾಪೂರ್ಣವಾದ ಮತ್ತು ನಮ್ಮೆಲ್ಲ ನೋವನ್ನು ನಿವಾರಿಸುವ ಅಳುವ ಕ್ರಿಯೆಯು ರುದ್ರನ ಪ್ರತೀಕವಾಗಿದೆ. ರುದ್ರ ಅಥವಾ ಪ್ರಜ್ಞೆಯನ್ನು ಭಗವಂತ ಎಂದು ಸಂಬೋಧಿಸಲಾಗುತ್ತದೆ. ಭಗವಂತ ಎಂಬುದು ಎಲ್ಲದರ ಮೇಲಿನ ಒಡೆತನವನ್ನು ಸೂಚಿಸುತ್ತದೆ. ದೇಶದ ಪ್ರಧಾನಮಂತ್ರಿ, ಅಧ್ಯಕ್ಷರು ಅಥವಾ ಯಾವುದೋ ಒಂದು ಕ್ಷೇತ್ರದ ಒಡೆತನ - ಹೀಗೆ ವ್ಯಕ್ತಿಗಳು ಸೀಮಿತವಾದುದರ ಮೇಲೆ ತಮ್ಮ ಒಡೆತನವನ್ನು ಹೊಂದಿರುತ್ತಾರೆ. ಆದರೆ ಭಗವಂತನು ಸರ್ವವ್ಯಾಪಿಯಾಗಿ, ಶಕ್ತಿ, ಅಧಿಕಾರ, ಸಂಪತ್ತು, ಕೀರ್ತಿ, ಜ್ಞಾನ ಮತ್ತು ವೈರಾಗ್ಯ ಇವೆಲ್ಲದರ ಒಡೆತನವನ್ನು ಸೂಚಿಸುತ್ತಾನೆ.

ರುದ್ರಾಧ್ಯಾಯ ಅಥವಾ ವೇದ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ವಾತಾವರಣದ ಮೇಲೆ ಅದ್ಭುತವಾದ ಪರಿಣಾಮ ಉಂಟಾಗುತ್ತದೆ. ಈ ಮಂತ್ರಗಳನ್ನು ಪಠಿಸಿದಾಗ ವಾತಾವರಣವು ಸಕಾರಾತ್ಮಕ ತರಂಗಗಳಿಂದ ತುಂಬುತ್ತದೆ ಮತ್ತು ಎಲ್ಲರ ಮನಸ್ಸನ್ನು ಔನ್ಯತ್ಯಕ್ಕೇರಿಸುತ್ತದೆ. ಇದರಿಂದಾಗಿ, ಸಕಾಲದಲ್ಲಿ ಮಳೆ, ರೋಗ ನಿವಾರಣೆ, ಸಂತೋಷ ಮುಂತಾದ ಪ್ರಾಪಂಚಿಕ ಮತ್ತು ದೈಹಿಕ ಪ್ರಯೋಜನಗಳು ಉಂಟಾಗುವುದೆಂಬ ಪ್ರತೀತಿಯಿದೆ. ಸಾವಿರಾರು ವರ್ಷಗಳಿಂದ ಅಸಂಖ್ಯಾತ ಜನರು ಇದರ ಲಾಭವನ್ನು ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net