

ಪಶ್ಚಿಮದ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಜೂನ್ 2020ರಲ್ಲಿ ಅತಿಕ್ರಮಣವೆಸಗಿ ಭಾರತೀಯ ಸೇನೆಯಿಂದ ಹೊಡೆತ ತಿಂದು ಹಿಂದೆ ಸರಿದ ನಂತರ ಚೀನೀ ಸೇನೆ ‘ಹೊಸ ಅವಕಾಶ’ಗಳಿಗಾಗಿ ಹುಡುಕುತ್ತಾ ಹಂತಹಂತವಾಗಿ ಪೂರ್ವದತ್ತ ಸರಿಯುತ್ತಾ ಬಂದಿರುವುದನ್ನು ಕಳೆದ ಎರಡೂವರೆ ವರ್ಷಗಳಲ್ಲಿ ನೋಡುತ್ತಿದ್ದೇವೆ. ಸೆಪ್ಟೆಂಬರ್ 2021ರಲ್ಲಿ ಉತ್ತರಾಖಂಡ-ಟಿಬೆಟ್ ಗಡಿಯಲ್ಲಿ ನೂರರಷ್ಟು ಸೈನಿಕರನ್ನು ಭಾರತೀಯ ಪ್ರದೇಶಕ್ಕೆ ಕಳುಹಿಸಿ ಭಾರತೀಯ ಸೇನೆಯ ಜಾಗರೂಕತೆ ಮತ್ತು ಪ್ರತಿಕ್ರಿಯಾ ಸಾಮರ್ಥ್ಯವನ್ನು ಪರೀಕ್ಷಿಸಿದ ಚೀನೀ ಸೇನೆ ಇನ್ನಷ್ಟು ಪೂರ್ವಕ್ಕೆ ಸರಿದು ಇದೇ 9-11 ಅವಧಿಯಲ್ಲಿ ಅರುಣಾಚಲ ಪ್ರದೇಶದ ತವಾಂಗ್ ವಿಭಾಗದಲ್ಲಿ ತಂಟೆ ತೆಗೆದಿದೆ. ಚೀನಾದ ಈ ನಡೆ, ಅದಕ್ಕೆ ಪಾಕಿಸ್ತಾನದ ಸಹಕಾರ ಅನಿರೀಕ್ಷಿತವೇನಲ್ಲ. ಹಾಗೆಯೇ ಚೀನಾ ಕುರಿತಾಗಿ ಕಾಂಗ್ರೆಸ್ ಪಕ್ಷದ ನಿಲುವು - ನಡವಳಿಕೆಗಳೂ ಅನಿರೀಕ್ಷಿತವಲ್ಲ. ಇದೆಲ್ಲವೂ ಸುಮಾರು ಒಂದೂವರೆ ದಶಕದಿಂದಲೂ ಒಂದು ನಿರ್ದಿಷ್ಟ ಕ್ರಮದಲ್ಲಿ ನಡೆಯುತ್ತಾ ಬಂದಿದೆ. ಈ ಪೀಠಿಕೆಯೊಂದಿಗೆ ಚೀನಾ ವಿಷಯದಲ್ಲಿ ಕಾಂಗ್ರೆಸ್ ನಡವಳಿಕೆಯಲ್ಲಿ ಕಂಡುಬರುವ ನಿರ್ದಿಷ್ಟ ಕ್ರಮವನ್ನು ವಿಶ್ಲೇಷಿಸುವುದು ಈ ಲೇಖನದ ವಸ್ತುವಿಷಯ.
ಮೊದಲಿಗೆ, ಪ್ರಸಕ್ತ ಪ್ರಕರಣದ ಪರಿಚಯ ಮಾಡಿಕೊಳ್ಳೋಣ. ಭಾರತೀಯ ಸೇನೆ, ಸರ್ಕಾರ, ದೇಶ-ವಿದೇಶಗಳ ಭೂ-ರಾಜಕೀಯ ವಿಶ್ಲೇಷಕರು ಮತ್ತು ಮಾಧ್ಯಮಗಳಿಂದ ದೊರೆಯುವ ಮಾಹಿತಿಯನ್ನು ಸಮಗ್ರವಾಗಿ ಅಭ್ಯಸಿಸಿ ತವಾಂಗ್ ಪ್ರಕರಣದ ಒಂದು ಚಿತ್ರವನ್ನು ಕಟ್ಟಿಕೊಳ್ಳುವುದು ನಮಗೀಗ ಸಾಧ್ಯವಾಗಿದೆ. ಅದರ ಪ್ರಕಾರ ಮೊದಲಿಗೆ ಮೂವರು ಚೀನೀ ಸೈನಿಕರು ಭಾರತೀಯ ಪ್ರದೇಶದೊಳಗೆ ಅತಿಕ್ರಮಿಸಿ ಬಂದರು. ಭಾರತೀಯ ಸೇನೆಯ ಜಾಗರೂಕತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಬಂದಿರಬಹುದಾದ ಅವರಿಗೆ ಅದರ ಪರಿಚಯ ತಕ್ಷಣವೇ ಆಯಿತು. ಭಾರತೀಯ ಸೇನೆ ಅವರನ್ನು ಬಂಧಿಸಿತು. ಗಡಿಯ ಈ ವಿಭಾಗದಲ್ಲಿ ಚೀನೀ ಸೇನೆಯ ಚಟುವಟಿಕೆಗಳು ಅಸಹಜವಾಗಿರುವಂತೆ ಕಳೆದ ಸುಮಾರು ಹದಿನೈದು ದಿನಗಳಿಂದಲೂ ಕಂಡುಬಂದಿದ್ದರಿಂದ ಸಹಜವಾಗಿಯೇ ಕಟ್ಟೆಚ್ಚರದಿಂದ ಗಡಿ ಕಾಯುತ್ತಿದ್ದ ಭಾರತೀಯ ಸೇನೆ ಬಂಧಿತ ಚೀನೀ ಸೈನಿಕರಿಂದ ಪಡೆದುಕೊಂಡಿರಬಹುದಾದ ಮಾಹಿತಿಗಳಿಂದ ದೊಡ್ಡ ಪ್ರಮಾಣದ ಚೀನೀ ಅತಿಕ್ರಮಣವನ್ನು ನಿರೀಕ್ಷಿಸಿ ಅದಕ್ಕಾಗಿ ಸನ್ನದ್ಧಗೊಂಡಿತು. ನಿರೀಕ್ಷೆಯಂತೇ ದೊಡ್ಡ ಸಂಖ್ಯೆಯಲ್ಲಿ ಚೀನೀ ಸೈನಿಕರು ಅತಿಕ್ರಮಣವೆಸಗಿದರು. ಮೊದಲಿಗೆ ಆರುನೂರು ಎಂದಿದ್ದ ಅವರ ಸಂಖ್ಯೆ ನಂತರ ಈಗ ಮುನ್ನೂರಷ್ಟಕ್ಕೇ ಸೀಮಿತಗೊಂಡರೂ ಅದೂ ದೊಡ್ಡ ಸಂಖ್ಯೆಯೇ. ಇದು ಭಾರತದ ವಿರುದ್ಧ ಅಸಾಧಾರಣವೆನ್ನಿಸುವ ಸೇನಾ ಕಾರ್ಯಾಚರಣೆಗೆ ಚೀನಾ ತಯಾರಿ ನಡೆಸಿದ ಸೂಚನೆ. ಅಂದರೆ ಲಡಾಖ್, ಉತ್ತರಾಖಂಡಗಳಿಗಿಂತಲೂ ತವಾಂಗ್ ಬಗ್ಗೆ ಚೀನಾ ವಿಶೇಷ ಆಸಕ್ತಿ ತಳೆದಂತಿದೆ. ತವಾಂಗ್ ಬಗ್ಗೆ ಮತ್ತು ಅಲ್ಲಿ ಚೀನಾದ ಹಿಂದಿನ ಚಟುವಟಿಕೆಗಳ ಬಗ್ಗೆ ಒಂದಷ್ಟು ವಿವರಗಳು ಅಗತ್ಯ.
ತವಾಂಗ್ ಮತ್ತು ಪೂರ್ವದ ತಿರಾಪ್ ಕಣಿವೆಯ ಹೊರತಾಗಿ ಇಡೀ ಅರುಣಾಚಲ ಪ್ರದೇಶ ಭಾರತದ ಭಾಗವಾದದ್ದು 1904-11ರಲ್ಲಿ. ನಂತರ ಬ್ರಿಟಿಷ್ ಭಾರತದ ಸೆಕ್ರೆಟರಿ ಆಫ್ ಸ್ಟೇಟ್ ಸರ್ ಹೆನ್ನಿ ಮೆಕ್ವುಹೋನ್ 1914ರ ಶಿಮ್ಲಾ ಸಮಾವೇಶದಲ್ಲಿ ಹಿಮಾಲಯದ ಸರಿಸುಮಾರು ನೆತ್ತಿಯ ಮೇಲೆ ಹಾದುಹೋಗುವಂತಹ ಹೊಸ ಗಡಿಯನ್ನು ಚೀನೀ ಮತ್ತು ಟಿಬೆಟನ್ ಪ್ರತಿನಿಧಿಗಳ ಮುಂದಿಟ್ಟರು. ಆದರೆ, ಅದಕ್ಕೆ ಟಿಬೆಟನ್ ಸರ್ಕಾರವಾಗಲೀ, ಟಿಬೆಟ್ ಮೇಲೆ ಪರಮಾಧಿಕಾರ ಹೊಂದಿದ್ದ ಚೀನೀ ಸರ್ಕಾರವಾಗಲೀ ಮಾನ್ಯತೆ ನೀಡಲಿಲ್ಲ. ಆದಾಗ್ಯೂ, ನಂತರ ‘ಮೆಕ್ವುಹೋನ್ ರೇಖೆ’ ಎಂದು ಅನಧಿಕೃತ ಹೆಸರು ಪಡೆದುಕೊಂಡ ಅದೇ ಹೊಸ ಅಂತಾರಾಷ್ಟ್ರೀಯ ಗಡಿ ಎಂಬ ನಿಲುವನ್ನು ಭಾರತ ತಳೆಯಿತು. ಇಷ್ಟಾಗಿಯೂ, ಅಂದು ನಾರ್ತ್ ಈಸ್ಟರ್ನ್ಫ್ರಾಂಟಿಯರ್ ಏಜೆನ್ಸಿ (ಎನ್ಇಎಫ್ಎ, ನೇಫಾ) ಎಂದು ಹೆಸರಿಸಲ್ಪಟ್ಟ ಇಂದಿನ ಅರುಣಾಚಲ ಪ್ರದೇಶವನ್ನು ಬ್ರಿಟಿಷ್ ಭಾರತ ಸರ್ಕಾರ ತನ್ನ ಅಧಿಕೃತ ನಕ್ಷೆಗಳಲ್ಲಿ ಮೊದಲ ಬಾರಿಗೆ ತೋರಿಸಿದ್ದು 1938ರಲ್ಲಿ.
ನಂತರ, 1949ರಲ್ಲಿ ಚೀನಾದಲ್ಲಿ ಅಸ್ತಿತ್ವಕ್ಕೆ ಬಂದ ಕಮ್ಯುನಿಸ್ಟ್ ಸರ್ಕಾರ 1950-51ರಲ್ಲಿ ಟಿಬೆಟ್ನ ತಾತ್ಕಾಲಿಕ ಸ್ವತಂತ್ರ ಅಸ್ತಿತ್ವವನ್ನು ಸೇನಾ ಕಾರ್ಯಾಚರಣೆಯ ಮೂಲಕ ಅಂತ್ಯಗೊಳಿಸಿ ಅದನ್ನು ಚೀನಾದ ಭಾಗವನ್ನಾಗಿಸಿಕೊಂಡಿತು. ಈ ಸಂದರ್ಭದಲ್ಲಿ ಭಾರತದ ನೀತಿ ಆಸಕ್ತಿಕರ. ತವಾಂಗ್ ಭೂಪಟದಲ್ಲಿ ಮೆಕ್ವುಹೋನ್ ರೇಖೆಯ ದಕ್ಷಿಣಕ್ಕಿರುವಂತೆ ತೋರಿಸಿದ್ದರೂ ಅದನ್ನು ವಾಸ್ತವದಲ್ಲಿ ಭಾರತಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಬ್ರಿಟಿಷ್ ಸರ್ಕಾರ ಮಾಡಿರಲಿಲ್ಲ. ಈ ನಿಲುವನ್ನು 1951-52ರಲ್ಲಿ ಬದಲಾಯಿಸಿದ ಸ್ವತಂತ್ರ ಭಾರತ ಅತ್ತ ಟಿಬೆಟ್ ಅನ್ನು ಚೀನಾ ಇಡಿಯಾಗಿ ನುಂಗುತ್ತಿದ್ದಂತೇ ಇತ್ತ ತವಾಂಗ್ ಅನ್ನು ಆಕ್ರಮಿಸಿಕೊಂಡಿತು. ಅಲ್ಲಿಗೆ ಮೆಕ್ವುಹೋನ್ ರೇಖೆಯ ದಕ್ಷಿಣಕ್ಕಿರುವ ಎಲ್ಲ ಪ್ರದೇಶಗಳೂ ಭಾರತದ ಹತೋಟಿಯೊಳಗೆ ಬಂದಂತಾಯಿತು.
ಮೆಕ್ವುಹೋನ್ ರೇಖೆಯನ್ನೇ ಒಪ್ಪದ ಚೀನಾ, ತವಾಂಗ್ ಅನ್ನೂ ಭಾರತದ ನೆಲ ಎಂದು ಒಪ್ಪಲಿಲ್ಲ. 1962ರಲ್ಲಿ ಪೂರ್ವ ವಲಯದಲ್ಲಿ ಭಾರತದ ಮೇಲೆ ಚೀನಾ ಆಕ್ರಮಣವೆಸಗಿದ್ದು ತವಾಂಗ್ ಮೂಲಕವೇ. ತವಾಂಗ್ ಜತೆಗೆ ಅದಕ್ಕೂ ದಕ್ಷಿಣದ ಸೆಲಾವನ್ನೂ ದಾಟಿ ಬೊಂಡಿ ಲಾವರೆಗೆ ಮುಂದೊತ್ತಿ ಬಂದ ಚೀನೀ ಸೇನೆ ನಂತರ ಭೌಗೋಳಿಕ, ಭೂ-ಸಾಮರಿಕ ಕಾರಣಗಳಿಂದಾಗಿ ಆಕ್ರಮಿತ ಪ್ರದೇಶಗಳೆಲ್ಲವನ್ನೂ ಭಾರತಕ್ಕೆ ಬಿಟ್ಟುಕೊಟ್ಟು ಹಿಮಾಲಯದ ಉತ್ತರಕ್ಕೆ ಅಂದರೆ ಮೆಕ್ವುಹೋನ್ ರೇಖೆಯಿಂದಾಚೆಗೆ ಹಿಂತಿರುಗಿ ಹೊರಟುಹೋಯಿತು.
ಅನಂತರ ತವಾಂಗ್ ಮೇಲೆ ಚೀನೀ ಆಸಕ್ತಿ ದೊಡ್ಡದಾಗಿ ಕಾಣಿಸಿಕೊಳ್ಳುವುದು ಸೆಪ್ಟೆಂಬರ್-ಅಕ್ಟೋಬರ್ 2008ರಲ್ಲಿ. ತವಾಂಗ್ ಬಗ್ಗೆ ವಿವಾದಾತ್ಮಕ ಮಾತುಗಳನ್ನಾಡತೊಡಗಿದ ಚೀನಾ ಅದನ್ನು ಆಕ್ರಮಿಸಿಕೊಳ್ಳುವ ಬೆದರಿಕೆಯನ್ನೂ ಹಾಕಿತು. ಇದಕ್ಕೆ ಅಂದಿನ ಯುಪಿಎ ಸರ್ಕಾರದ್ದು ತಣ್ಣನೆಯ ಪ್ರತಿಕ್ರಿಯೆ. ಆದರೆ, ಚೀನೀ ಬೆದರಿಕೆಗೆ ಭಾರತದ ವಿರೋಧಪಕ್ಷಗಳು ಮತ್ತು ಮಾಧ್ಯಮಗಳು
ಮತ್ತು ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿ ದೋರ್ಜಿ ಖಂಡು ಉಗ್ರವಾಗಿ ಪ್ರತಿಕ್ರಿಯಿಸಿದರು. ‘ನಾವು ಭಾರತೀಯ ಟಿಬೆಟನ್ನರು. ತವಾಂಗ್ ಮೇಲೆ ಚೀನಾ ಆಕ್ರಮಣವೆಸಗಿದರೆ ನಾವು ಭಾರತೀಯ ಸೇನೆಯ ಜತೆಗೂಡಿ ಎದುರಿಸುತ್ತೇವೆ’ ಎಂಡು ಖಂಡು ಗುಡುಗಿದರು. ಈ ಬಗೆಯ ಪ್ರತಿಕ್ರಿಯೆ ಭಾರತ ಸರ್ಕಾರದಿಂದ ಬರಲಿಲ್ಲ.
ಹದಿನಾಲ್ಕು ವರ್ಷಗಳ ನಂತರ ತವಾಂಗ್ ಮೇಲೆ ಚೀನಾ ಕಣ್ಣುಹಾಕಿದೆ. ಆದರೆ, ಈಗ ಭಾರತ ಸರ್ಕಾರದ ಹಾಗೂ ಸೇನೆಯ ಪ್ರತಿಕ್ರಿಯೆ 2008ರಲ್ಲಿದ್ದುದಕ್ಕಿಂತ ಸಂಪೂರ್ಣ ಬೇರೆಯಾಗಿದೆ. ವರದಿಗಳ ಪ್ರಕಾರ ಒಂಬತ್ತರಿಂದ ಹದಿನೈದು ಭಾರತೀಯ ಸೈನಿಕರೂ, ಮೂವತ್ತರಿಂದ ನಲವತ್ತು ಚೀನೀ ಸೈನಿಕರೂ ಗಾಯಗೊಂಡಿದ್ದಾರೆ. ಈ ಘರ್ಷಣೆಯಲ್ಲಿ ಬಳಕೆಯಾದ ಆಯುಧಗಳ ಬಗ್ಗೆ ವಿಶೇಷವಾಗಿ ಹೇಳಬೇಕು.
1996ರಲ್ಲಿ ದೇವೇಗೌಡ ಸರ್ಕಾರ ಮತ್ತು 2004ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಚೀನೀಯರೊಂದಿಗೆ ಮಾಡಿಕೊಂಡ ಒಪ್ಪಂದಗಳ ಪ್ರಕಾರ ವಾಸ್ತವ ಹತೋಟಿ ರೇಖೆಯ ಆಚೀಚಿನ ಎರಡು ಕಿಲೋಮೀಟರ್ ವ್ಯಾಪ್ತಿಯೊಳಗೆ ಎರಡೂ ಕಡೆಯ ಸೈನಿಕರು ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ. ಆಕಸ್ಮಿಕವಾಗಿ ಅಥವಾ ದುಸ್ಸಾಹಸದ ಪ್ರಯತ್ನವಾಗಿ ಮಾರಕಾಸ್ತ್ರಗಳು ಬಳಸಲ್ಪಟ್ಟು, ಸಾವುನೋವುಗಳಾಗಿ ಅವು ದೊಡ್ಡ ಪ್ರಮಾಣದ ಸಂಘರ್ಷಕ್ಕೆ ಕಾರಣವಾಗಬಾರದೆಂದು ಈ ಯೋಜನೆ. ಆದರೆ, ಇದನ್ನು ತಿರುಚಿದ ಚೀನೀ ಸೈನಿಕರು ಗಲ್ವಾನ್ ಕಣಿವೆಯಲ್ಲಿ ‘ಮಾರಕಾಸ್ತ್ರಗಳೆಂದು ಪರಿಗಣಿತವಾಗದ’ ಕಲ್ಲುಗಳು, ಚೂಪು ಮೊಳೆಗಳನ್ನು ಅಳವಡಿಸಿದ ಕಬ್ಬಿಣದ ಲಾಠಿಗಳನ್ನು ಹಿಡಿದು ಭಾರತೀಯ ಸೈನಿಕರ ಮೇಲೆ ಎರಗಿದರು. ಅವರದೇ ‘ಆಯುಧ’ಗಳನ್ನು ಕಿತ್ತುಕೊಂಡು ಅವರನ್ನೇ ಬಡಿದು ಭಾರತೀಯ ಸೈನಿಕರು ಓಡಿಸಿದ್ದು ಈಗ ಇತಿಹಾಸ.
ಈಗ ತವಾಂಗ್ನಲ್ಲಾದದ್ದೂ ಅದೇ. ಅಂತಹದೇ ‘ಆಯುಧ’ಗಳನ್ನು ಹಿಡಿದುಬಂದ ಚೀನೀ ಸೈನಿಕರಿಗೆ ಗಲ್ವಾನ್ನಲ್ಲಿ ಮಾಡಿದ್ದನ್ನೇ ಭಾರತೀಯ ಸೈನಿಕರು ಮಾಡಿದ್ದಾರೆ. ಕೆಲವು ಹೆಜ್ಜೆ ಮುಂದೆಯೂ ಹೋಗಿದ್ದಾರೆ. ಸುಮಾರು ಅರವತ್ತು ಚೀನೀ ಸೈನಿಕರನ್ನು ಬಂಧಿಯಾಗಿಸಿಕೊಂಡ ಭಾರತೀಯ ಸೇನೆ ಅವರಿಂದ ಚೀನೀ ಯೋಜನೆಯ ವಿವರಗಳನ್ನು ಕಕ್ಕಿಸಿದೆ. ಉಳಿದ ಚೀನೀ ಸೈನಿಕರು ತಮ್ಮ ‘ಆಯುಧ’ಗಳನ್ನೂ, ಇತರ ಸಾಧನಗಳನ್ನೂ ತೊರೆದು ಓಡಿದ್ದಾರೆ. ಓಡುತ್ತಿದ್ದ ಅವರನ್ನು ಅಟ್ಟಿಸಿಕೊಂಡು ಹೋಗಿ ಭಾರತೀಯ ಸೈನಿಕರು ಹತೋಟಿ ಪ್ರದೇಶದೊಳಗೆ ನುಗ್ಗಿಹೋಗಿದ್ದಾರೆ. ಅವರನ್ನು ಹಿಮ್ಮೆಟ್ಟಿಸಲು ಚೀನೀಯರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ತಿಳಿಯುವುದು ಹಿಂದಿನ ಒಪ್ಪಂದಗಳನ್ನು ಉಲ್ಲಂಘಿಸಿ ಚೀನೀಯರು ಹತೋಟಿ ರೇಖೆಯ ಸನಿಹಕ್ಕೆ ಶಸ್ತ್ರಾಸ್ತ್ರಗಳನ್ನು ತಂದಿದ್ದರು ಎಂದು ಅಥವಾ ಭಾರತೀಯ ಸೈನಿಕರು ಎರಡು ಕಿಲೋಮೀಟರ್ ಚೀನೀ ಪ್ರದೇಶದೊಳಗೆ ಹೋಗಿದ್ದರು ಎಂದು. ನಂತರ ಎರಡೂ ಸೇನೆಗಳ ಸ್ಥಳೀಯ ಅಧಿಕಾರಿಗಳ ನಡುವೆ ನಡೆದ ಫ್ಲ್ಯಾಗ್ ಮೀಟಿಂಗ್ನಲ್ಲಿ ತಮ್ಮಿಂದ ತಪ್ಪಾಗಿದೆ ಎಂದು ಚೀನೀಯರು ಒಪ್ಪಿಕೊಂಡಿದ್ದಾರೆ ಮತ್ತು ಭಾರತೀಯ ಸೇನೆ ಬಂಧಿತ ಚೀನೀ ಸೈನಿಕರನ್ನು ಹಿಂತಿರುಗಿಸಿದೆ. ಪ್ರಸಕ್ತ ಪ್ರಕರಣದಲ್ಲಿ ಭಾರತೀಯ ಸೈನಿಕರ ಪ್ರತಿಕ್ರಿಯೆಯಿಂದ ಚೀನಾ ಅದೆಷ್ಟು ವಿಚಲಿತಗೊಂಡಿದೆಯೆಂದರೆ ಚೀನೀ ಸೇನೆಯ ಪಶ್ಚಿಮ ಕಮಾಂಡ್ ಹೇಳಿಕೆಯೊಂದನ್ನು ನೀಡಿ, ತನ್ನ ಸೈನಿಕರು ನಿಯಂತ್ರಣ ತಪ್ಪಿ ನಡೆದುಕೊಳ್ಳದಂತೆ ಭಾರತೀಯ ಸೇನೆ ನೋಡಿಕೊಳ್ಳಬೇಕೆಂದು ಕೇಳಿಕೊಂಡಿದೆ. ಈ ವಿವರಗಳು ಹೇಳುವುದು ಗಡಿ ವಿಚಾರದಲ್ಲಿ ಚೀನಾ ಈಗ ನಿಜಕ್ಕೂ ಕಂಗೆಟ್ಟಿದೆ ಮತ್ತು ಭಾರತೀಯ ಸೇನೆಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ತನ್ನ ಸೇನೆಗಿಲ್ಲ ಎಂದು ಅದು ಅರಿತಿದೆ ಎಂದು.
ಅಂತಾರಾಷ್ಟ್ರೀಯ ಮಾಧ್ಯಮಗಳು, ವಿಶ್ಲೇಷಕರು ಹೇಳುವುದು ಈ ರೀತಿಯಾದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇರೆಯೇ ರಾಗ ಹಾಡುತ್ತಿದ್ದಾರೆ. ತವಾಂಗ್ನಲ್ಲಿ ಭಾರತೀಯ ಸೈನಿಕರು ಹೊಡೆತ ತಿಂದಿದ್ದಾರೆ ಎಂದು ಹೇಳಿ ಅದಕ್ಕಾಗಿ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಅವರ ಈ ನಡವಳಿಕೆ ಚೀನಾ-ಪರವೆನ್ನದೇ ವಿಧಿಯಿಲ್ಲ. ಹಾಗೆ ನೋಡಿದರೆ ಅವರು ಚೀನಾದ ಪರವಾಗಿ ನಿಂತ ದೊಡ್ಡ ಇತಿಹಾಸವೇ ಇದೆ. ಆಗಸ್ಟ್ 2008ರಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷದೊಂದಿಗೆ ರಹಸ್ಯ ಒಪ್ಪಂದವೊಂದಕ್ಕೆ ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಸಹಿ ಹಾಕಿದರು. ಮುಂದಿನ ತಿಂಗಳು ಚೀನೀಯರು ಲಡಾಖ್ನ ಕೊಂಗ್ಕಾ ಕಣಿವೆಯನ್ನು ಅತಿಕ್ರಮಿಸಿದರು. ಅದನ್ನು ಯುಪಿಎ ಸರ್ಕಾರ ಪ್ರತಿಭಟಿಸಲಿಲ್ಲ. ಅದೇ ಸಮಯದಲ್ಲಿ ತವಾಂಗ್ನಲ್ಲಿ ದುಸ್ಸಹಾಸಕ್ಕೆ ಅಣಿಯಾದ ಚೀನಾವನ್ನು ಖಡಕ್ಕಾಗಿ ಎದುರಿಸಿದ್ದು ಮುಖ್ಯಮಂತ್ರಿ ದೋರ್ಜಿ ಖಂಡು. ಮೂರು ವರ್ಷಗಳೊಳಗೆ ಅವರು ಹೆಲಿಕಾಪ್ಟರ್ ‘ಅಪಘಾತ’ದಲ್ಲಿ ಪ್ರಾಣ ಕಳೆದುಕೊಂಡು, 2002-11ರ ನಡುವೆ ರಹಸ್ಯಮಯ ಅಪಘಾತಗಳಲ್ಲಿ ಮೃತರಾದ ಕಾಂಗ್ರೆಸ್ ನಾಯಕರ ಪಟ್ಟಿಗೆ ಸೇರಿಹೋದರು!
2010-13ರಲ್ಲಿ ಚೀನೀ ಸೇನೆ ಆರುನೂರಕ್ಕೂ ಹೆಚ್ಚು ಬಾರಿ ಹತೋಟಿ ರೇಖೆಯನ್ನು ಉಲ್ಲಂಘಿಸಿತು. ಅಂತಹ ಒಂದು ಅತಿಕ್ರಮಣ ಏಪ್ರಿಲ್ 2013ರಲ್ಲಿ ಉತ್ತರದ ದೆಪ್ಸಂಗ್ನಲ್ಲಾಗಿ ಚೀನೀ ಸೇನೆ 19 ಕಿಲೋಮೀಟರ್ ಒಳಗೆ ಬಂದಾಗ ಅಷ್ಟೂ ಪ್ರದೇಶವನ್ನು ಚೀನೀಯರಿಗೆ ಬಿಟ್ಟುಕೊಡುವಂತೆ ಅಂದಿನ ಕೇಂದ್ರ ಸರ್ಕಾರ ನಮ್ಮ ಸೇನೆಗೆ ಆದೇಶಿಸಿತು! ಮೂರು ತಿಂಗಳ ನಂತರ ಜೂನ್ 17ರಂದು ದಕ್ಷಿಣದ ಚುಮಾರ್ನಲ್ಲಿ ಚೀನೀ ಸೇನೆ ಅತಿಕ್ರಮಿಸಿದ್ದನ್ನು ಸರ್ಕಾರ ಮೂರು ವಾರಗಳವರೆಗೆ ದೇಶದಿಂದ ಬಚ್ಚಿಟ್ಟಿತು. ಹೀಗೆ ಹತ್ತು ವರ್ಷಗಳ ಅವಧಿಯಲ್ಲಿ ಯುಪಿಎ ಸರ್ಕಾರ ಚೀನಾಗೆ ಒಪ್ಪಿಸಿದ ನಮ್ಮ ನೆಲ ಸುಮಾರು 640 ಚದರ ಕಿಲೋಮೀಟರ್ ಅಂತೆ! ಆಗ ರಾಹುಲ್ ಗಾಂಧಿ ಒಮ್ಮೆಯೂ ಬಾಯಿ ತೆರೆಯಲಿಲ್ಲ. ಅವರ ಬಾಯಿ ಮುಚ್ಚಿಸಿದ್ದು ಅವರೇ ಸಹಿಹಾಕಿದ ಕಾಂಗ್ರೆಸ್-ಸಿಸಿಪಿ ರಹಸ್ಯ ಒಪ್ಪಂದದ ನಂತರ ಚೀನಾದಿಂದ ರಾಜೀವ್ ಗಾಂಧಿ ಫೌಂಡೇಷನ್ಗೆ ಬರತೊಡಗಿದ ಹಣವೇ? 2014ರ ನಂತರ ಅದೇ ಹಣ ಅದೇ ಬಾಯಿಯನ್ನು ಮೋದಿ ಸರ್ಕಾರದ ವಿರುದ್ಧ, ಚೀನಾದ ಪರ ಮತ್ತೆಮತ್ತೆ ತೆರೆಸುತ್ತಿದೆಯೇ? ಈ ಪ್ರಶ್ನೆ ಈಗ ಹಲವೆಡೆ ಕೇಳಿಬರುತ್ತಿದೆ. ಇದರ ಜತೆಗೆ, ತವಾಂಗ್ನಲ್ಲಿರುವ ಭಾರತೀಯ ಸೇನೆಯ ಕುರಿತಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಎತ್ತಿದ ಪ್ರಶ್ನೆಗಳು ದೇಶದ ರಕ್ಷಣೆಯ ದೃಷ್ಟಿಯಿಂದ ರಹಸ್ಯವಾಗಿಯೇ ಇಡಬೇಕಾದ ಸೂಕ್ಷ್ಮ ವಿವರಗಳಿಗೆ ಸಂಬಂಧಿಸಿವೆ!
ಈಗ ಉದ್ಭವಿಸುವ ಪ್ರಶ್ನೆ- ನಮ್ಮ ಶತ್ರುಗಳಿರುವುದು ಗಡಿಯಾಚೆ ಮಾತ್ರವೇ?
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)