

ಈ ಬಾರಿ ಹೊಸ ವರ್ಷದ ಸ್ವಾಗತ ಎಂದಿನಂತೆ ಇರಲಿಲ್ಲ. ‘ನಿಜಕ್ಕೂ ಈ ವರ್ಷ ಒಳಿತಾಗಲಿ, ತಪು್ಪಗಳು ಘಟಿಸಿದ್ದರೆ ಕ್ಷಮೆ ಸಿಗಲಿ...’ ಎಂಬ ಕಾರುಣ್ಯಭಾವದ ಕೋರಿಕೆಯೇ ಭಾರತ ಸೇರಿದಂತೆ ಜಗದಗಲ ಪ್ರತಿಧ್ವನಿಸಿತು. ಸಂಭ್ರಮ ಇತ್ತಾದರೂ, ಅದರ ಜತೆಗೆ ಕೊಂಚ ಅಳುಕಿತ್ತು, ‘ಉತ್ತಮ ನಾಳೆಗಳು ಬಂದೇ ಬರುತ್ತವೆ...’ ಎಂಬ ವಿಶ್ವಾಸವೂ ಕಾಣುತ್ತಿಲ್ಲ. ಹಾಗಾಗಿಯೇ, ಹೃದಯದಲ್ಲಿ ನೋವಿನ ಭಾರ ಪೂರ್ಣವಾಗಿ ಕರಗದಿದ್ದರೂ, 2022 ನಿಜವಾದ ನಲಿವನ್ನೇ ತರಲಿ ಎಂಬ ಅಪೇಕ್ಷೆ. ಹೌದು, 2020 ಮತ್ತು 2021 ಈ ಎರಡೂ ವರ್ಷಗಳು ಕರೊನಾ ಸಾಂಕ್ರಾಮಿಕದ ಪರಿಣಾಮ ಜಗತ್ತು ಸಾವು-ನೋವುಗಳನ್ನು ಅನುಭವಿಸಿದೆ. ಈ ಮಧ್ಯೆ ಕೆಲ ದೇಶಗಳಲ್ಲಿ ಮೂರನೇ ಅಲೆ, ಮತ್ತೆ ಕೆಲವೆಡೆ ಮೂರನೇ ಅಲೆಯ ಆರ್ಭಟ. ಈ ಕಾಲಘಟ್ಟ ಮನುಕುಲಕ್ಕೆ ಹಲವು ಪಾಠಗಳನ್ನು ಕಲಿಸಿದೆ. ಜೀವನಶೈಲಿ ಬದಲಾಗಿದೆ, ಆರ್ಥಿಕ ಸ್ಥಿತಿ ಸೊರಗಿದೆ. ಅದೇನಿದ್ದರೂ, ‘ನಾಳೆ’ ಎಂಬ ಬತ್ತಳಿಕೆಯಲ್ಲಿ ಖುಷಿಯ ಅಚ್ಚರಿಗಳಿವೆ ಎಂಬುದನ್ನು ಮನುಷ್ಯ ನಿರೀಕ್ಷಿಸಲೇ ಬೇಕು.
2022ನ್ನು ಸ್ವಾಗತಿಸಿಕೊಳ್ಳುವಾಗ ಮುಂದಿನ ದಿನಗಳನ್ನು, ಉಳಿದಿರುವ ಬದುಕನ್ನು ಸಾರ್ಥಕತೆಯಿಂದ ಸಾಗಿಸುವ ಸಂಕಲ್ಪವೂ ಹೊಮ್ಮಿದೆ. ಅಮೆರಿಕದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳು ತಂದೆ-ತಾಯಿ ಸಮಾಧಿಗೆ ಹೂವಿಟ್ಟು, ಪ್ರೀತಿ ತೋರಿ, ‘ಚೆನ್ನಾಗಿ ಬದುಕುತ್ತೇವೆ’ ಎಂದು ಪ್ರಮಾಣ ಮಾಡಿ, ಮರಳಿದ್ದಾರೆ. ಭಾರತವಂತೂ ಅಫ್ಘಾನಿಸ್ತಾನಕ್ಕೆ ಹೊಸವರ್ಷದ ನಿಮಿತ್ತ ಐದು ಲಕ್ಷ ಲಸಿಕೆಗಳನ್ನು ಕಳುಹಿಸಿಕೊಟ್ಟು, ಮತ್ತೊಮ್ಮೆ ಮಾನವೀಯತೆ ಮೆರೆದಿದೆ. ಇನ್ನು, ಭಾರತದ ಮುಂಬೈ, ಪುಣೆ ಸೇರಿದಂತೆ ವಿವಿಧ ನಗರಗಳಲ್ಲಿ ಯುವಕರು ಸಮಾಜ ಕಾರ್ಯಕ್ಕಾಗಿ ಹೆಚ್ಚು ಸಮಯ ಮೀಸಲಿಡಲು ಸಂಕಲ್ಪ ಕೈಗೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ರಕ್ತದಾನದ ಪ್ರಮಾಣ ಕಡಿಮೆಯಾಗಿರುವುದರಿಂದ ಹಲವೆಡೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ ನಡೆದಿವೆ. ‘ಆರೋಗ್ಯ ರಕ್ಷಣೆಯೇ ಈ ವರ್ಷದ ಮೊದಲ ಆದ್ಯತೆ’ ಎಂಬ ಘೋಷವಾಕ್ಯ ಮೊಳಗಿವೆ.
ಮನೆಗಳಲ್ಲಿ ಭಾವಮಿಲನ: ದೇಶದ ಹಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಜನರಿಗೆ ಹೊರಗಡೆ ಬಂದು ಸಂಭ್ರಮಿಸಲಾಗಿಲ್ಲ. ಆದರೇನಂತೆ, ಆಚರಣೆಗೆ ತೊಡಕಾಗಿಲ್ಲ. ಮನೆಗಳಲ್ಲಿ, ಅಪಾರ್ಟ್ವೆುಂಟ್ಗಳ ನೆಲಮಾಳಿಗೆಯಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ, ಹೆಚ್ಚು ಅಬ್ಬರವಿಲ್ಲದೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ: ಹೊಸ ವರ್ಷ ಎಂದಾಕ್ಷಣ ಹೊಸ ಸಂಕಲ್ಪಗಳು, ಅದನ್ನು ಸಾಕಾರಗೊಳಿಸುವ ಮಾರ್ಗಗಳು ಇರಲೇಬೇಕಲ್ಲ. ಈ ನಿಟ್ಟಿನಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಅಸಂಖ್ಯ ಜನರು ಹೊಸ ಸಂಕಲ್ಪಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತೆರೆದಿಟ್ಟರು ಮತ್ತು ‘ನಾನು ಹೀಗೆ ಬದಲಾಗಲಿದ್ದೇನೆ’ ಎಂಬ ಸಕಾರಾತ್ಮಕ ಪರಿವರ್ತನೆಯ ಪರಿಯನ್ನು ಹೇಳಿಕೊಂಡರು. ಇವು ಇತರರಿಗೆ ಪ್ರೇರಣೆ ನೀಡಿ, ಲೈಕ್, ಶೇರ್ಗೆ ಕಾರಣವಾದರೆ, ಕೆಲವೆಡೆ ವಿನೋದದ ತುಣುಕುಗಳು ಕೂಡ ವೈರಲ್ ಆದವು.
ಕಾಲದ ಓಟವೇ ಹಾಗೆ. ನೋವು-ನಲಿವಿನ ಏರಿಳಿತದ ಪ್ರಯಾಣದಲ್ಲಿ ಬದುಕಿನ ಬಂಡಿ ಸಾಗಬೇಕು. ಆದರೆ, ಹಳೆಯ ಹಳಹಳಿಕೆ, ನಕಾರಾತ್ಮಕ ಚಿಂತನೆ, ದ್ವೇಷ, ಅಸೂಯೆ, ಮತ್ಸರ, ಕೋಪವನ್ನು ತ್ಯಜಿಸಿ ಮಾನವೀಯತೆ, ಮುಖದಲ್ಲಿ ಮಂದಹಾಸ, ಕರುಣೆ, ಪರೋಪಕಾರದ ಗುಣವನ್ನು ಬೆಳೆಸಿಕೊಂಡರೆ ಇಡೀ ವರ್ಷ ಸಂತೋಷದಲ್ಲೇ ಕಳೆಯಲು ಸಾಧ್ಯವಾಗುತ್ತದೆ.