

ಯಾವುದೇ ಮಂದಿರಗಳು ಸುಖಾಸುಮ್ಮನೆ ನಿರ್ವಣಗೊಂಡಿಲ್ಲ. ಅಲ್ಲಿನ ಜಾಗಕ್ಕೆ ಶಕ್ತಿಯಿದೆ, ಪೌರಾಣಿಕ ಐತಿಹ್ಯವಿದೆ, ತಪಸ್ಸು ಆಚರಿಸಿದ ತೇಜಸ್ಸಿದೆ. ಅಲ್ಲದೆ, ದೇವರೇ ನಡೆದಾಡಿದ ಜಾಗಗಳಿವೆ, ಋಷಿಗಳು ನೆಲೆಸಿದ ತಾಣಗಳಿವೆ. ಅವಧೂತರು, ಸಂತ-ಮಹಂತರು, ಸಾಧು-ಸಂನ್ಯಾಸಿಗಳು, ಧರ್ವಚಾರ್ಯರು, ಮಠಾಧಿಪತಿಗಳು ಈ ಸಮಾಜವನ್ನು ಎಚ್ಚರಿಸಿದ, ಸುಪಥಕ್ಕೆ ತಂದ ನೆನಪುಗಳಿವೆ.
ಇವೆಲ್ಲವೂ ಖಂಡಿತವಾಗಿಯೂ ಸಂಸ್ಕೃತಿ ಪುನರ್ ಪ್ರತಿಷ್ಠಾಪನೆ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳೇ. ಆದರೆ, ನಮ್ಮಲ್ಲಿ ಪ್ರಾಚೀನ ಕಾಲದಲ್ಲಿ ನಿರ್ವಣವಾದ, ಸಾಂಸ್ಕೃತಿಕ, ಆಧ್ಯಾತ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದ್ದ ಅಸಂಖ್ಯ ದೇವಸ್ಥಾನಗಳು ಶಿಥಿಲಾವಸ್ಥೆ ತಲುಪಿವೆ. ಮಂದಿರ ಶಿಥಿಲಾವಸ್ಥೆ ತಲುಪುವುದು ಎಂದರೆ ಕೇವಲ ಒಂದು ಕಟ್ಟಡ ಪಾಳುಬಿದ್ದಂತಲ್ಲ; ಅಲ್ಲಿನ ಸಂಸ್ಕೃತಿಯ ಪ್ರವಾಹ, ಆಧ್ಯಾತ್ಮಿಕ ಚೈತನ್ಯವೇ ನಶಿಸಿದಂತೆ. ನೂರಾರು ವರ್ಷಗಳ ಸಾತ್ವಿಕ ಪ್ರಭಾವಳಿಯೊಂದು ನಿಂತುಹೋದರೆ ಅದರಿಂದ ಇಡೀ ಸಮಾಜಕ್ಕೆ ನಷ್ಟ. ಹಾಗಾಗಿ, ಇಂಥ ದೇವಸ್ಥಾನಗಳ ಜೀಣೋದ್ಧಾರದ ಅಗತ್ಯವನ್ನು ಮನಗಂಡು, ಅದಕ್ಕಾಗಿ ಶ್ರಮಿಸುತ್ತ ಭಕ್ತಿಲೋಕವನ್ನು ವಿಶಾಲಗೊಳಿಸುತ್ತಿರುವ ತೆರೆಮರೆಯ ಹಲವು ಸಾಧಕರು ನಮ್ಮ ನಡುವೆಯೇ ಇದ್ದಾರೆ. ಸತತ ಪ್ರಯತ್ನ ಮತ್ತು ಶ್ರದ್ಧೆಯಿಂದ ಒಂದೊಂದು ದೇಗುಲಗಳು ಮತ್ತೆ ತಲೆಎತ್ತಿದಂತೆ ಸೃಷ್ಟಿಯಾಗಿರುವ ಸಕಾರಾತ್ಮಕ ವಾತಾವರಣ, ಆಯಾ ಪ್ರದೇಶಕ್ಕೆ ನವಚೈತನ್ಯವನ್ನೇ ತುಂಬುತ್ತಿವೆ.
ಬ್ರಹ್ಮಚಾರಿ ಶ್ರೀ ನರೇಶ್ ಚೈತನ್ಯ ಮಹಾರಾಜ್. ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡು ಪ್ರಸ್ತುತ ಬೆಂಗಳೂರು ಬಸವನಗುಡಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಳೆಯ ದೇವಸ್ಥಾನಗಳ ಜೀಣೋದ್ಧಾರದ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆಯಾ ಗ್ರಾಮ ಅಥವಾ ಪ್ರದೇಶದ ದೇವಸ್ಥಾನಗಳು ಜೀಣೋದ್ಧಾರಗೊಂಡು, ಅಲ್ಲಿನ ದೇವತೆಗಳು ಪುನಃ ಪ್ರತಿಷ್ಠಾಪನೆಗೊಂಡರೆ ಅವು ಆಯಾ ಪ್ರದೇಶಕ್ಕೆ ರಕ್ಷಾಕವಚವಾಗಿರುವ ಜತೆಗೆ ನೈತಿಕತೆಯ ವೃದ್ಧಿಗೂ ಕಾರಣವಾಗುತ್ತವೆ ಎಂದು ಪ್ರತಿಪಾದಿಸುವ ನರೇಶ್ ಚೈತನ್ಯ ಮಹಾರಾಜರು ಈ ನಿಟ್ಟಿನಲ್ಲಿ ಹಾಕಿರುವ ಶ್ರಮ ಅಸಾಧಾರಣ. ಅಲ್ಲದೆ, ಇಂಥ ಮಹತ್ವದ ಕೆಲಸಗಳನ್ನು ಹಂತ-ಹಂತವಾಗಿಯೇ ಕೈಗೊಂಡು, ಎಲ್ಲರ ಸಹಮತದೊಂದಿಗೆ ನೆರವೇರಿಸುವುದು ಅಷ್ಟೇ ಅವಶ್ಯಕವಾಗಿರುತ್ತದೆ.
ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಮಹಾರಾಜ್ ದೇವಸ್ಥಾನಗಳ ಸ್ವಚ್ಛತಾಕಾರ್ಯ ಆರಂಭಿಸಿದರು. ನೈರ್ಮಲ್ಯ ಇಲ್ಲದೆ ದೈವತ್ವ ನೆಲೆಸದು ಎಂದು ಮನದಟ್ಟು ಮಾಡಿಕೊಟ್ಟು ಸ್ಥಳೀಯರ ಸಹಕಾರದಿಂದ ಮಂದಿರಗಳನ್ನು ಸ್ವಚ್ಛಗೊಳಿಸಿದರು. ಆ ಬಳಿಕ ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವ ಸಂಘಗಳನ್ನು ವಿಸ್ತರಿಸಿ, ನೈತಿಕ, ಧಾರ್ವಿುಕ ಶಿಕ್ಷಣವನ್ನು ನೀಡಿ, ಯುವಮನಸುಗಳ ವ್ಯಕ್ತಿತ್ವ ಉತ್ಕರ್ಷಗೊಳ್ಳುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ದೇವಸ್ಥಾನಗಳ ಮಹತ್ವವನ್ನೂ ತಿಳಿಸಿಕೊಟ್ಟರು. ಸ್ಥಳೀಯ ಸಂಸ್ಕೃತಿ ರಕ್ಷಣೆಯಲ್ಲಿ ಅವುಗಳ ಪಾತ್ರ ವಿವರಿಸಿದರು. ಸ್ಥಳೀಯರನ್ನು, ಗಣ್ಯರನ್ನು ಸೇರಿಸಿ ಧರ್ಮಸಭೆಗಳನ್ನೂ ನಡೆಸಿದರು. ಸ್ಥಳೀಯ ಉತ್ಸಾಹಿ ಯುವಕರಿಗೆ ಪ್ರೇರಣೆ ನೀಡಿ, ಈ ಕೆಲಸಕ್ಕೆ ಕೈಜೋಡಿಸುವಂತೆ ಮಾಡಿದರು. ಇದೆಲ್ಲದರ ಪರಿಣಾಮ, ಪಾಳುಬಿದ್ದ ದೇವಸ್ಥಾನಗಳು ನವರೂಪ, ನವಶಕ್ತಿ ಪಡೆದು, ನೈತಿಕ, ಆಧ್ಯಾತ್ಮಿಕ ಜಾಗೃತಿಯ ಕೇಂದ್ರಗಳಾಗಿ ಬದಲಾಗಿರುವುದು ನಿಜಕ್ಕೂ ಅಸಾಧಾರಣ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಮಾಚೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಸ್ಥಳೀಯರು ಹನುಮಂತದೇವರ (ಆಂಜನೇಯ) ದೇವಾಲಯ ನಿರ್ವಿುಸಲು ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ, ಒಂದಲ್ಲ ಒಂದು ಅಡ್ಡಿ ಸೃಷ್ಟಿಯಾಗಿ ಕೆಲಸ ಮುಂದುವರಿಯುತ್ತಿರಲಿಲ್ಲ. ಆ ಪ್ರದೇಶವನ್ನು ಅವಲೋಕಿಸಿದ ನರೇಶ ಚೈತನ್ಯರು, ಅಲ್ಲಿದ್ದ ಅಡ್ಡಿಆತಂಕಗಳನ್ನು ನಿವಾರಿಸಿದ್ದಲ್ಲದೆ, ಒಂದಿಷ್ಟು ಸ್ಥಳೀಯ ಯುವಕರನ್ನು ಹುರಿದುಂಬಿಸಿ ಕೇವಲ 21 ದಿನಗಳಲ್ಲಿ ಮಂದಿರ ನಿರ್ವಣವಾಗುವಂತೆ ಮಾಡಿದ್ದು ದಾಖಲೆಯೇ ಸರಿ! ಗ್ರಾಮಸ್ಥರಿಗೆಲ್ಲ ಅಚ್ಚರಿ; ಇಪ್ಪತ್ತನಾಲ್ಕು ವರ್ಷಗಳಲ್ಲಿ ಸಾಧ್ಯವಾಗದ್ದು ಇಪ್ಪತ್ತೊಂದು ದಿನಗಳಲ್ಲೇ ಸಾಕಾರಗೊಂಡಿತ್ತು. ಅಯೋಧ್ಯೆಯಲ್ಲಿ ಬಾಲಕರಾಮನ ಪ್ರತಿಷ್ಠಾಪನೆ ನಡೆದ ಐತಿಹಾಸಿಕ ದಿನವಾದ ಜನವರಿ 22ರಂದೇ ಹನುಮಂತದೇವರ ಈ ದೇವಾಲಯ ಉದ್ಘಾಟನೆಯಾಯಿತು. ಈ ಮಂಗಳಮಯ ಕಾರ್ಯಕ್ರಮಕ್ಕೆ ತುರುವೇಕೆರೆ ತಾಲೂಕಿನ ಮಾದಿಹಳ್ಳಿಯ ಶ್ರೀರಾಮಕೃಷ್ಣ ಮಠದ ಸ್ವಾಮಿ ಹೃದಾನಂದಜೀ ಮಹಾರಾಜ್ ಮತ್ತು ಸ್ವಾಮಿ ಉತ್ತಾರಣಾನಂದಜೀ ಮಹಾರಾಜ್ ಸಾಕ್ಷಿಯಾದರು. ನರೇಶ್ ಚೈತನ್ಯ ಮಹಾರಾಜರು ದೇವಾಲಯದ ಕಳಸಾರೋಹಣ ನೆರವೇರಿಸುವ ಮೂಲಕ, ಮಾಚೇನಹಳ್ಳಿಯ ಗೊಲ್ಲರಹಟ್ಟಿ ನವಮನ್ವಂತರಕ್ಕೆ ನಾಂದಿಹಾಡಿದರು.
ತುರುವೇಕೆರೆ ತಾಲೂಕಿನ ಮಾದಿಹಳ್ಳಿ ಪಾಳ್ಯದ ಸಿಂಹವಾಹಿನಿ (ಚಿಕ್ಕಮ್ಮ) ದೇವಸ್ಥಾನ ತುಂಬ ಜಾಗೃತವಾಗಿತ್ತು. ಆದರೆ, ಕಾಲದ ಹೊಡೆತಕ್ಕೆ ಜೀರ್ಣಾವಸ್ಥೆ ತಲುಪಿದ್ದ ದೇವಸ್ಥಾನವನ್ನು ಮರು ನಿರ್ವಿುಸಲು ಕಳೆದ 20 ವರ್ಷಗಳಲ್ಲಿ 3 ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಸ್ಥಳೀಯರ ಕೋರಿಕೆ ಮೇರೆಗೆ ಮಹಾರಾಜ್ ಮಾರ್ಗದರ್ಶನ ಮಾಡಿದ ಫಲವಾಗಿ 2023ರಲ್ಲಿ ದೇವಸ್ಥಾನ ಜೀಣೋದ್ಧಾರ ಗೊಂಡು, ಕುಂಭಾಭಿಷೇಕ ಕೂಡ ನಡೆಯಿತು. ಅದೇ ರೀತಿ, ತುರುವೇಕೆರೆ ತಾಲೂಕಿನ ಮಾಚೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಶ್ರೀಮಾತೆ ರೇಣುಕಾ ದೇವಿ, ರಂಗನಾಥ ದೇವಸ್ಥಾನ ಪುನರ್ ನಿರ್ವಣಗೊಂಡಿದ್ದು, ಇದೇ ಮಾರ್ಚ್-ಏಪ್ರಿಲ್ನಲ್ಲಿ ಕುಂಭಾಭಿಷೇಕ ನಡೆಯಲಿದೆ. ತುರುವೇಕೆರೆ ಕಳ್ಳನಕೆರೆ ಗ್ರಾಮದಲ್ಲಿ ಚಿಲ್ಮರದಮ್ಮ (ಕಾಳಿದೇವಿ) ದೇವಸ್ಥಾನಕ್ಕೆ ನವರೂಪ ನೀಡಿ, ಪ್ರತಿಷ್ಠಾಪನೆ ಮಾಡಲಾಗಿದೆ.
‘ಸ್ಥಳೀಯ ದೇವಸ್ಥಾನಗಳನ್ನು ಕಳೆದುಕೊಂಡರೆ ನಮ್ಮ ಸಂಸ್ಕೃತಿಯನ್ನೇ ಕಳೆದುಕೊಂಡಂತೆ. ನೈತಿಕತೆ ಬೆಳೆದು, ಜನರು ಧರ್ಮಮಾರ್ಗದಲ್ಲಿ ಸಾಗಲು ಮಂದಿರಗಳ ಜೀಣೋದ್ಧಾರ ಅಗತ್ಯ’ ಎಂದು ಹೇಳುವ ಶ್ರೀ ನರೇಶ್ ಚೈತನ್ಯ ಮಹಾರಾಜರು; ಈ ಶ್ರೇಷ್ಠ ಕೆಲಸಕ್ಕಾಗಿ ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿದ್ದಾರೆ ಮತ್ತು ಜನರಲ್ಲಿ ಅರಿವು ಮೂಡಿಸುವ ಮೂಲಕ ಜಾಗೃತಿ ಪರ್ವವನ್ನೂ ಕೈಗೊಂಡಿದ್ದಾರೆ.
ಹಳೆಯ ದೇವಸ್ಥಾನಗಳ ಸ್ಥಿತಿಯನ್ನು ನೋಡಿ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಲೇ ಬೇಕು ಎಂದು ಸಂಕಲ್ಪ ತೊಟ್ಟು, ಏಳೆಂಟು ಪುರಾಣಪ್ರಸಿದ್ಧ ದೇವಸ್ಥಾನಗಳನ್ನು ಜೀಣೋದ್ಧಾರಗೊಳಿಸಿದ ಶ್ರೇಯಸ್ಸು ನಟರಾಜ್ ಪಂಡಿತ್ ಅವರದ್ದು. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪಂಡಿತರು ಐತಿಹಾಸಿಕ ದೇವಾಲಯಗಳ ಸಂರಕ್ಷಣೆಯ ಸಲುವಾಗಿ ತಮ್ಮದೇ ಒಂದು ಪುಟ್ಟ ತಂಡವನ್ನೂ ಮಾಡಿಕೊಂಡಿದ್ದಾರೆ. ‘ಹಾಸನ ಜಿಲ್ಲೆ ಐತಿಹಾಸಿಕ ದೇವಾಲಯಗಳ ಸಂರಕ್ಷಣಾ ವೇದಿಕೆ’ಯನ್ನು ರಚಿಸಿ, ಅದರ ಸಂಚಾಲಕರಾಗಿ ಮಂದಿರಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.
ತುರುವೇಕೆರೆಯ ಚನ್ನಕೇಶವ ದೇವಾಲಯದಲ್ಲಿ ಪೂಜೆ ನಿಂತುಹೋಗಿ, ಅಸ್ವಚ್ಛತೆ ತಾಂಡವವಾಡುತ್ತಿತ್ತು. ಗರ್ಭಗುಡಿ ಇಲಿ, ಜಿರಳೆಗಳ ಅವಾಸಸ್ಥಾನವಾಗಿತ್ತು. ಹಾಗಾಗಿ, ದೇವಾಲಯದ ಹೊರ ಆವರಣ ಮತ್ತು ಒಳಭಾಗ ಸ್ವಚ್ಛತಾ ಕಾರ್ಯ ಕೈಗೊಂಡು, ಚನ್ನಕೇಶವನಿಗೆ ಪಂಚಾಮೃತ ಅಭಿಷೇಕ ಮಾಡಿ, ನಿತ್ಯಪೂಜೆ ಆರಂಭಿಸಲಾಯಿತು. ಹೊಯ್ಸಳರ ದಂಡನಾಯಕ ಸೋಮಣ್ಣ ಕ್ರಿ.ಶ.1258ರಲ್ಲಿ ನಿರ್ವಿುಸಿದ ಈ ದೇವಾಲಯ ವಿಶಿಷ್ಟ ವಾಸ್ತುಶಿಲ್ಪದಿಂದ ಕಣ್ಮನ ಸೆಳೆಯುತ್ತದೆ. ಆದರೆ, ನಿರ್ವಹಣೆ ಇಲ್ಲದ್ದರಿಂದ ಸೊರಗಿ ಹೋಗಿತ್ತು. ನಟರಾಜ್ ಪಂಡಿತರು ರಾಜ್ಯ ಪುರಾತತ್ವ ಇಲಾಖೆಗೆ ಪತ್ರ ಬರೆದು, ದೇವಾಲಯ ಅಭಿವೃದ್ಧಿಗೊಳಿಸುವಂತೆ ವಿನಂತಿಸಿದರು. ಆ ಬಳಿಕ ಪಿಟಿಶನ್ ಕಮಿಟಿಗೆ ಅರ್ಜಿ ಸಲ್ಲಿಸಿದಾಗ ವಿಧಾನ ಪರಿಷತ್ನ ಆಗಿನ ಉಪಸಭಾಪತಿ ಎಸ್. ಮಲ್ಲಿಕಾರ್ಜುನಯ್ಯ ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಆ ಬಳಿಕ 3 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀಣೋದ್ಧಾರ ನೆರವೇರಿತು. ಬಳಿಕ ಕುಂಭಾಭಿಷೇಕ ಕಾರ್ಯಕ್ರಮ ಮಾಡುವ ಮೂಲಕ, ಮಂದಿರ ಮತ್ತೆ ಜೀವಕಳೆ ಪಡೆಯಿತು. ವಾರ್ಷಿಕವಾಗಿ ಕಾರ್ತಿಕ ದೀಪೋತ್ಸವ, ವಿಷ್ಣು ದೀಪೋತ್ಸವ. ಮತ್ತು ರಥೋತ್ಸವ ಸಂಭ್ರಮದಿಂದ ನಡೆಯುತ್ತಿವೆ.
ಈ ಯಶಸ್ಸಿನ ಬಳಿಕ ನಟರಾಜ್ ಪಂಡಿತರು ವಿಶ್ರಮಿಸಲಿಲ್ಲ. ಐತಿಹಾಸಿಕ ದೇವಸ್ಥಾನಗಳಿಗೆ ಗತವೈಭವ ಕಲ್ಪಿಸುವುದು ಅವರ ಗುರಿಯಾಯಿತು. ಅದರಂತೆ, ಸ್ಥಳೀಯರ, ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದರು. ಈ ಪ್ರಯತ್ನಗಳ ಫಲವಾಗಿ ತುಮಕೂರು ಜಿಲ್ಲೆಯ ತುರುವೇಕೆರೆಯ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಮರುನಿರ್ವಣಗೊಂಡು 2023 ಡಿಸೆಂಬರ್ನಲ್ಲಿ ಲೋಕಾರ್ಪಣೆಗೊಂಡಿತು. ಹಾಸನ ಜಿಲ್ಲೆಯ ದುದ್ದ ಹೋಬಳಿಯ ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯವು 1149ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನ ಕಾಲದಲ್ಲಿ ಕೊನೆಯ ಶಂಕರ ದಂಡನಾಥನಿಂದ ಲೋಕಾರ್ಪಣೆಗೊಂಡಿತ್ತು. ಅವನತಿಯ ಅಂಚಿಗೆ ತಲುಪಿದ್ದ ಈ ಮಂದಿರವನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀಣೋದ್ಧಾರಗೊಳಿಸಲಾಗಿದೆ. ಅದರಂತೆ, ಚನ್ನರಾಯಪಟ್ಟಣದ ಚನ್ನಕೇಶವ, ತುರುವೇಕೆರೆಯ ಶ್ರೀ ಶಂಕರೇಶ್ವರ ಮಂದಿರ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದಡಗ ಗ್ರಾಮದ ಯೋಗಾ ನರಸಿಂಹ ದೇವಾಲಯ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೊಬಳಿಯ, ಸಂತೇಶಿವರ ಗ್ರಾಮ ಪಂಚಾಯಿತಿಯ ಅಗ್ರಹಾರ ಬೆಳಗುಲಿ ಗ್ರಾಮದ ಶ್ರೀ ಹರಿಹರೇಶ್ವರ ಸ್ವಾಮಿ (ಬೆಟ್ಟೇಶ್ವರ ಸ್ವಾಮಿ) ದೇಗುಲ (ಹೊಯ್ಸಳ ಕಾಲದ್ದು), ಹಾಸನ ಜಿಲ್ಲೆ ಆಲೂರು ತಾಲೂಕಿನ ಗಂಗಾಪುರ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮಂದಿರ ಕೂಡ ಮರುಹಟ್ಟು ಪಡೆದಿವೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ ಕ್ರಿ.ಶ. 1369ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ವೀರ ಬಕ್ಕಣ್ಣನಿಂದ ನಿರ್ವಿುತವಾದ ಶ್ರೀರಾಮ ದೇವಸ್ಥಾನ ಇತಿಹಾಸ ಪ್ರಸಿದ್ಧ. 1996 ಅಕ್ಟೋಬರ್ 28ರಿಂದ ಜೀಣೋದ್ಧಾರ ಕಾರ್ಯ ಆರಂಭವಾಯಿತು. ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ.ಮಧುಸೂಧನ ಅವರು ಶಾಸಕರ ನಿಧಿಯಿಂದ ನೆರವು ನೀಡಿದ್ದಲ್ಲದೆ, ಹರವು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದರು. ಪರಿವಾರ ಸಮೇತ ಶ್ರೀರಾಮಚಂದ್ರನ ಪುನರ್ ಪ್ರತಿಷ್ಠಾಪನೆಯಾಗಿ ದೇವಸ್ಥಾನ ಗತವೈಭವ ಪಡೆದುಕೊಂಡಿದೆ. ಜೀಣೋದ್ಧಾರದ ಬಳಿಕ ದೇವಾಲಯದ ಸುತ್ತ ಔಷಧ ಸಸ್ಯಗಳ ವನವನ್ನು ನಿರ್ವಿುಸಲಾಗಿದೆ.
‘ದೇವಸ್ಥಾನಗಳು ಅಭಿವೃದ್ಧಿಗೊಂಡು, ಮೊದಲಿನಂತೆ ಪೂಜೆ, ಉತ್ಸವಗಳು ನಡೆಯುತ್ತಿರುವುದು ನನಗೆ ಆತ್ಮಸಂತೃಪ್ತಿಯನ್ನು ತಂದಿದೆ. ಎಲ್ಲರೂ ಪ್ರಾಚೀನ ಮತ್ತು ಐತಿಹಾಸಿಕ ದೇವಸ್ಥಾನಗಳ ಉಳಿವಿಗೆ ಶ್ರಮಿಸಬೇಕು. ಆಗ ಮಾತ್ರ, ನಮ್ಮ ಜೀವನಮೌಲ್ಯಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಸಾಧ್ಯ’ ಎನ್ನುವ ನಟರಾಜ್ ಪಂಡಿತರು (99645-36150) ಕೆರೆಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
ಯಾವ ದಾರಿಯಲ್ಲಿ ಸಾಗಬೇಕು ಎಂಬ ಗೊಂದಲ ಕಾಡಿದಾಗ, ನೈತಿಕತೆ ತೊರೆದ ಅಪಸವ್ಯಗಳು ಹೆಚ್ಚಿದಾಗ ನಮ್ಮನ್ನು ಅರಿತುಕೊಳ್ಳುವ, ಆ ದಿವ್ಯಶಕ್ತಿಯೆಡೆಗೆ ಸಾಗುವ ಪ್ರೇರಣೆ ಸಿಗುವುದು ಮಂದಿರಗಳಿಂದಲೇ. ಇಂಥ ಮಂದಿರಗಳು ರಾಷ್ಟ್ರವೈಭವವನ್ನೂ ಎತ್ತಿ ಹಿಡಿಯುತ್ತವೆ. ಇನ್ನು ಮುಂದೆ, ಮಂದಿರ ಪ್ರವೇಶಿಸುವಾಗ ನಮ್ಮ ದೃಷ್ಟಿ ಬದಲಾಗಲಿ. ನಮ್ಮ ಉದ್ಧಾರಕ್ಕಾಗಿ, ಸಮಾಜದ ಒಳಿತಿಗಾಗಿ, ರಾಷ್ಟ್ರದ ಉತ್ಕರ್ಷಕ್ಕಾಗಿ ಆ ಭಗವಂತ ಎಂಬ ಪರಮಶಕ್ತಿಯ ಮುಂದೆ ನಿಂತಿದ್ದೇವೆ ಎಂಬ ಭಾವ ಆವರಿಸಿಕೊಳ್ಳಲಿ.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)