

| ಡಾ. ರವಿ ಎಸ್. ಕೋಟೆಣ್ಣವರ
ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಕೂಡ ಅತ್ಯಮೂಲ್ಯ. ಕೀಟದಿಂದ ಹಿಡಿದು ವ್ಯಾಘ್ರಗಳವರೆಗೆ ಎಲ್ಲವೂ ಪರಿಸರದ ಸಮತೋಲನ ಕಾಪಾಡುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತವೆ. ಅಂತೆಯೇ ಹಾವುಗಳು ಕೂಡ. ಹಾವುಗಳು ಇಲ್ಲದೆ ಭೂಮಿ ಇಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.
ಭೂಮಿಯ ಮೇಲೆ 3500ಕ್ಕೂ ಹೆಚ್ಚು ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಹಾವುಗಳ ಉಳಿವು ಮತ್ತು ಸಂರಕ್ಷಣೆ ಬಗೆಗೆ ನಾವು ಯಾರೂ ಹೆಚ್ಚಾಗಿ ಚರ್ಚೆ ನಡೆಸುವುದಿಲ್ಲ. ಅದೇ ಕಾರಣಕ್ಕೆ ಹಾವುಗಳ ಬಗೆಗೆ ಜ್ಞಾನಕ್ಕಿಂತ ಅಜ್ಞಾನವೇ ಹೆಚ್ಚು. ಪ್ರೀತಿಗಿಂತ ಭಯವೇ ಅಧಿಕ. ಆದರೆ, ಹಲವಾರು ಪರಿಸರ ವ್ಯವಸ್ಥೆಗಳಿಗೆ ಹಾವುಗಳು ಅತ್ಯಗತ್ಯ. ಹೀಗಾಗಿ, ವಿವಿಧ ಜಾತಿಯ ಹಾವುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಅವುಗಳನ್ನು ಸಂರಕ್ಷಿಸಲು ವಿಶ್ವ ಹಾವುಗಳ ದಿನವನ್ನು ಪ್ರತಿ ವರ್ಷ ಜುಲೈ 16ರಂದು ಆಚರಿಸಲಾಗುತ್ತದೆ.
ಹಾವು ಎಂಬ ಪದ ಕಿವಿಗೆ ಬಿದ್ದೊಡನೆಯೇ ಎಲ್ಲರಿಗೂ ಒಂದು ರೀತಿಯ ಭಯ, ಆಶ್ಚರ್ಯಗಳು ಉಂಟಾಗುವುದರಲ್ಲಿ ಸಂಶಯವಿಲ್ಲ. ಅದರ ಮಹಿಮೆಯೇ ಹಾಗೆ. ಆಕಾರದಲ್ಲಿ ಮಾನವನಿಗಿಂತ ಚಿಕ್ಕದು ಎನಿಸಿದರೂ ಅದರ ವಿಷವು ಮಾತ್ರ ಆನೆಗಳಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ನಿಮಿಷಾರ್ಧದಲ್ಲೇ ಸಾಯಿಸಿಬಿಡಬಹುದು. ಆದರೆ, ಗಮನದಲ್ಲಿಡಬೇಕಾದ ಒಂದು ಅಂಶವೆಂದರೆ ಎಲ್ಲ ಹಾವುಗಳು ವಿಷಕಾರಿಯಲ್ಲ.
ಹಾವಿನ ವಿಷದಲ್ಲಿ ಮಾರಣಾಂತಿಕ ವಿಷಗಳ ಹೊರತಾಗಿಯೂ, ಮಾನವನ ಕೆಲವು ಕಾಯಿಲೆಗಳನ್ನು ಗುಣಪಡಿಸಲು ಅವುಗಳನ್ನು ಬಳಸಲಾಗುತ್ತದೆ ಎಂಬುದು ಸಮಯ ಪರೀಕ್ಷಿತ ವಿದ್ಯಮಾನವಾಗಿದೆ. ಸ್ವಾತಂತ್ರ್ಯ ಮೊದಲು, ಕೆಲವು ಬ್ರಿಟಿಷ್ ಶಸ್ತ್ರಚಿಕಿತ್ಸಕರು ಮತ್ತು ನೈಸರ್ಗಿಕವಾದಿಗಳು ಭಾರತದಲ್ಲಿ ಹಾವುಗಳನ್ನು ಕುರಿತು ಅಭ್ಯಸಿಸಿದರು. ಜಗತ್ತಿನಲ್ಲಿರುವ 3500ಕ್ಕೂ ಹೆಚ್ಚು ಜಾತಿಯ ಹಾವುಗಳಲ್ಲಿ ಅಂದಾಜು 216 ವಿವಿಧ ಜಾತಿಗಳು ಭಾರತದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ 52 ಮಾತ್ರ ವಿಷಕಾರಿ ಹಾವುಗಳಾಗಿವೆ. ಹೆಚ್ಚಿನ ಹಾವುಗಳು ವಿಷಕಾರಿಯಲ್ಲ ಮತ್ತು ಹಾನಿಕಾರಕವಲ್ಲ. ವಿಷಪೂರಿತ ಹಾವುಗಳು ಭಾರತ, ಆಫ್ರಿಕಾ, ಬ್ರೆಜಿಲ್, ಬರ್ವ, ಶ್ರೀಲಂಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದಂತಹ ಉಷ್ಣವಲಯದ ದೇಶಗಳಲ್ಲಿ ಪ್ರಮುಖ ವೈದ್ಯಕೀಯ ಸಮಸ್ಯೆಯನ್ನು ಉಂಟು ಮಾಡುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯಂತೆ ಪ್ರಪಂಚದಾದ್ಯಂತ ಪ್ರತಿ ವರ್ಷ 60,000 ರಿಂದ 70,000 ಜನರು ಹಾವಿನ ಕಡಿತದಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ನಮ್ಮ ಭಾರತದಲ್ಲಿಯೂ ಪ್ರತಿವರ್ಷ 18,000 ರಿಂದ 20,000 ಜನರು ವಿಷ ಸರ್ಪದ ಕಡಿತದಿಂದ ಮರಣ ಹೊಂದುತ್ತಾರೆ.
ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿ ಕೂಡ ಹಾವಿನ ವಿಷಗಳಿಂದ ಔಷಧಿಗಳನ್ನು ತಯಾರಿಸುತ್ತಾರೆ. ಮೂಲತಃ ಜರ್ಮನ್ ದೇಶದವರಾದ ಹೋಮಿಯೋಪಥಿಯ ಜನಕ ಡಾ. ಸ್ಯಾಮುಯಲ್ ಹಾನಿಮನ್ ಅವರು ‘ಉಷ್ಣ ಉಷ್ಣೆ ಸಾಮ್ಯತಿ’ ಅಂದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ಸಿಮಿಲಿಯಾ ಸಿಮಿಲಿಬಸ್ ಕುರೇಂಟರ್ ಎಂಬ ಶಾಸ್ತ್ರೀಯ ಹಾಗೂ ವೈಜ್ಞಾನಿಕವಾದ ತತ್ವ ಸಿದ್ಧಾಂತಗಳ ಮೇಲೆ ರೂಪಿತವಾದ ಈ ವೈದ್ಯ ವಿಜ್ಞಾನದಲ್ಲಿ ಔಷಧಿಗಳ ತಯಾರಿಕೆಯಲ್ಲಿ ನಿಸರ್ಗದಲ್ಲಿ ದೊರೆಯುವ, ಭೂಮಿಯ ಮೇಲೆ ಉಪಲಬ್ಧವಿರುವ ಎಲ್ಲ ವಸ್ತುಗಳಿಂದ ಔಷಧಿಗಳನ್ನು ಅನ್ವೇಷಣೆ ಮಾಡಿದರು. ಉದಾಹರಣೆಗೆ - ಸಸ್ಯಜನ್ಯ (Plant Kingdom) ಪ್ರಾಣಿಜನ್ಯ (Animal Kingdom), ಖನಿಜ ಸಂಪತ್ತು (Minerals), ಮಾನವ ಅಥವಾ ಪ್ರಾಣಿಯ ದೇಹದ ಭಾಗಗಳು (Sarcodes), ರೋಗಗ್ರಸ್ಥ ದೇಹದ ಭಾಗಗಳಿಂದ (Nosodes) ಹಾಗೂ ಭಾರವನ್ನು ಅಳತೆ ಮಾಡಲಾಗದ ಶಕ್ತಿಯುತ ಕಿರಣಗಳಾದ ವಿದ್ಯುಚ್ಛಕ್ತಿ, ಆಯಸ್ಕಾಂತ ಕಿರಣಗಳು, ಕ್ಷ-ಕಿರಣಗಳು, ಸೂರ್ಯಕಿರಣಗಳು, ಚಂದ್ರನ ಕಿರಣಗಳು (lmpoderabilia). ಇವುಗಳೆಲ್ಲಾ ಹೋಮಿಯೋಪಥಿ ಔಷಧಗಳ ಪ್ರಮುಖ ಆಗರಗಳಾಗಿವೆ. ಇಲ್ಲಿ ಪ್ರಾಣಿಜನ್ಯಗಳಿಂದ ತಯಾರಿಸಲ್ಪಡುವ ಔಷಧಿಗಳ ಆಗರಗಳಾದ ಸ್ಪೈಡರ್ಸ್, ಕೀಟಗಳು, ಮೀನುಗಳಂತೆ ವಿಷಕಾರಿ ಹಾವುಗಳು ವಿಶೇಷವಾಗಿವೆ. ಇವುಗಳನ್ನು ಓಫಿಡಿಯಾ ಮೆಡಿಸಿನ್ಸ್ ಎನ್ನುತ್ತಾರೆ. ಹೋಮಿಯೋಪಥಿ ಔಷಧಿಗಳ ತಯಾರಿಕೆಯಲ್ಲಿ 10 ವಿವಿಧ ಜಾತಿಯ ಹಾವಿನ ವಿಷವನ್ನು ಉಪಯೋಗಿಸುವರು. ಡಾ. ಎಸ್. ಹಾನಿಮನ್ ಸಿದ್ಧಾಂತಗಳಲ್ಲಿ ಒಂದಾದ ಔಷಧ ನಿರ್ಣಯದಲ್ಲಿ (Drug Proving) ಉಲ್ಲೇಖಿಸಿದ ಹಾಗೆ ಆರೋಗ್ಯವಂತ ಮನುಷ್ಯನ ಮೇಲೆ ಪ್ರಯೋಗ ಮಾಡಿ ಔಷಧಿ ನಿರ್ಣಯಿಸುವರು. ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಜೀವನದ ಹಂಗು ತೊರೆದು ಸ್ವಂತ ತಮ್ಮ ಮೇಲೆ ಔಷಧಿ ನಿರ್ಣಯ ಮಾಡಿದ ಪಿತಾಮಹರುಗಳಾದ ಡಾ. ಸ್ಯಾಮುಯಲ್ ಹಾನಿಮನ್ . ಡಾ. ಕಾನ್ಸಟೆಂಟೈನ್ ಹೆರಿಂಗ್, ಡಾ. ರಸೆಲ್ ಅವರುಗಳಿಗೆ ಗೌರವದ ಸಲಾಮ್
ರೋಗದ ಹೆಸರಿಗೆ ಅನುಗುಣವಾಗಿ ಹೋಮಿಯೋಪಥಿ ಔಷಧಿಗಳನ್ನು ನೀಡಲಾಗುವುದಿಲ್ಲ. ವ್ಯಕ್ತಿಯ ಒಟ್ಟು ಮಾನಸಿಕ, ದೈಹಿಕ ರೋಗ ಲಕ್ಷಣಗಳನ್ನು ಅಭ್ಯಸಿಸಿ ಔಷಧಿ ನೀಡಲಾಗುವುದು. ಹಾವಿನ ವಿಷದಿಂದ ತಯಾರಿಸಲ್ಪಡುವ ಔಷಧಿಗಳು ಮಾನವನ ಮಿದುಳು, ನರಮಂಡಲದ ವ್ಯಾಧಿಗಳು, ಮಾಂಸಖಂಡದ ನ್ಯೂನತೆಗಳು, ರಕ್ತ ಸಂಚಾರದ ಏರುಪೇರುಗಳು, ಚರ್ಮರೋಗಗಳು, ಹೃದಯ ಹಾಗೂ ಯಕೃತ್ತಿನ ತೊಂದರೆಗಳ ಚಿಕಿತ್ಸೆಗಳಲ್ಲಿ ರಾಮಬಾಣದಂತೆ ಕಾರ್ಯನಿರ್ವಹಿಸುತ್ತವೆ. ಹಾವಿನ ವಿಷಗಳಿಂದ ತಯಾರಿಸಿರುವ ಔಷಧಿಗಳು ಈ ರೀತಿಯಾದ ವಿಚಿತ್ರ ಹಾಗೂ ವಿಶೇಷ ರೋಗ ಲಕ್ಷಣ ಹೊಂದಿದ ವ್ಯಕ್ತಿಗಳ ಚಿಕಿತ್ಸೆಯಲ್ಲಿ ಸಹಕಾರಿಯಾಗಿವೆ. ಯಾವಾಗಲೂ ಆತಂಕದಿಂದ ಬಳಲುವವರು, ಅತಿಯಾಗಿ ತಳಬುಡವಿಲ್ಲದೆ ಮಾತನಾಡುವುದು, ಅನುಮಾನಾಸ್ಪದ ಸ್ವಭಾವದ ಇರುವವರಿಗೆ, ಸಾವಿನ ಭಯ ಹೊಂದಿದವರಿಗೆ, ಹುಚ್ಚುತನದ ಧಾರ್ವಿುಕತೆ, ಕೆರಳಿಸುವ ಸ್ವಭಾವದವರು, ವಿನಾಕಾರಣ ಜಗಳ ತೆಗೆಯುವವರು, ಅಹಂಕಾರ ಹೊಂದಿದವರು, ಅಸೂಯೆ ಈ ರೀತಿಯಾದ ಮನೋ ಲಕ್ಷಣವುಳ್ಳವರಿಗೆ ಅತ್ಯಂತ ಸಹಕಾರಿಯಾಗಿವೆ. ಹಾವಿನ ವಿಷಗಳಿಂದ ಮಾಡಲ್ಪಡುವ ಹೋಮಿಯೋಪಥಿ ಔಷಧಿಗಳು ಈ ರೀತಿಯಾದ ದೈಹಿಕ ಲಕ್ಷಣವುಳ್ಳವರಿಗೆ ಸಹಕಾರಿಗಳಾಗಿವೆ. ದೇಹದ ಯಾವುದೇ ಭಾಗದಿಂದ ಅತಿಯಾದ ಕಡು ಕೆಂಪು ರಕ್ತಸ್ರಾವವಾಗುವವರಿಗೆ, ಎಲ್ಲ ಹಾವಿನ ವಿಷದಿಂದ ತಯಾರಿಸಿದ ಔಷಧಿಗಳು ದೇಹದ ಎಡಭಾಗದ ಆರೋಗ್ಯ ತೊಂದರೆಯನ್ನು ಉಪಶಮನ ಮಾಡುವ ಶಕ್ತಿ ಹೊಂದಿವೆ. ಗ್ಯಾಂಗ್ರಿನ್, ರಕ್ತದ ನಂಜು, ಪಾರ್ಶ್ವವಾಯು, ಒಣಗಿದ ಚರ್ಮ. ಉರಿಯೂತ, ವಿಪರೀತ ಅಶಕ್ತತೆ, ಕತ್ತು ಹಿಸುಕಿದಂತೆ ಭಾಸವಾಗುವದಕ್ಕೆ ಈ ಮದ್ದುಗಳು ಸಹಾಯಕ. ಮದ್ಯವ್ಯಸನಿಗಳಿಗೆ ಹಾಗೂ ಪ್ರತಿ ವಸಂತ ಋತುವಿನಲ್ಲಿ ಹಾಗೂ ಸ್ತ್ರೀಯರ ಪ್ರತಿ ಮಾಸಿಕ ಋತುವಿನಲ್ಲಿ ಕಾಣುವ ಆರೋಗ್ಯ ಸಮಸ್ಯೆಗಳಿಗೆ ಬಹಳ ಉಪಯುಕ್ತವಾಗಿವೆ. ಆದರೆ, ಸ್ವತಃ ಇಂತಹ ಔಷಧಿ ಬಳಕೆ ಅಪಾಯಕಾರಿ, ನುರಿತ ಹೋಮಿಯೋಪಥಿ ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.
(ಲೇಖಕರು ಬಾಗಲಕೋಟೆ ಬಿ.ಬಿ.ಬಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು)