

| ಡಾ. ಗಣಪತಿ ಆರ್. ಭಟ್
ಗುರುಕುಲವೊಂದರಲ್ಲಿ ಅಧ್ಯಯನ ನಡೆಸಿದ್ದ ಬೋಪದೇವನೆಂಬ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳಂತೆ ಚುರುಕಾಗಿರಲಿಲ್ಲ. ಮಿಕ್ಕೆಲ್ಲ ವಿದ್ಯಾರ್ಥಿಗಳು ಕಲಿತರೂ ಈತ ಕಲಿಯದೇ ಹೋದಾಗ ಗುರುಗಳು ಆತನಿಗೆ ಮಂದಮತಿಯೆಂದು ಬೈಯ್ಯುತಿದ್ದರು. ಕ್ರಮೇಣ ಆತ ತನ್ನ ಸಹಪಾಠಿಗಳಾಡುತ್ತಿದ್ದ ನಿಂದಾನುಡಿಗಳನ್ನೂ ಕೇಳಬೇಕಾಗಿ ಬಂತು. ಅದೊಂದು ದಿನ ಆತನಿಗೆ ಆ ಗುರುಕುಲ ಮತ್ತು ವಿದ್ಯೆ ಎರಡರ ಸಹವಾಸವೂ ಸಾಕೆನಿಸಿ, ರಾತೋರಾತ್ರಿ ಅಲ್ಲಿಂದ ತನ್ನೂರಿನತ್ತ ಹೊರಟ. ನೂರಾರು ಗಾವುದಗಳಷ್ಟು ದೂರದ ಊರಿಗೆ ಆತ ಕಾಲ್ನಡಿಗೆಯಲ್ಲಿಯೇ ತೆರಳಬೇಕಿತ್ತು. ಹೀಗೆ ಸಾಗುತ್ತ ರಾತ್ರಿಯೆಲ್ಲ ನಡೆದು ಆಯಾಸಗೊಂಡು, ಕೊನೆಗೆ ಅರುಣೋದಯದ ಕಾಲಕ್ಕೆ ತಾನು ತಲುಪಿದ್ದ ಗ್ರಾಮವೊಂದರ ಬಾವಿಯ ಬಳಿಗೆ ಬಂದ. ಅಲ್ಲಿಗೆ ಪ್ರತಿನಿತ್ಯ ಕೊಡವನ್ನು ತೆಗೆದುಕೊಂಡು ಮಹಿಳೆಯರು ನೀರಿಗಾಗಿ ಬರುತ್ತಿದ್ದರು.
ಹಾಗೆ ಬಂದಿದ್ದ ಮಹಿಳೆಯರ ಪೈಕಿ ಓರ್ವಳಲ್ಲಿ ಬೋಪದೇವನು ನೀರು ಕೊಡುವಂತೆ ಕೇಳಿಕೊಂಡ. ಆಕೆಯೋ, ತನ್ನ ಕೈಯಲ್ಲಿದ್ದ ಕೊಡವನ್ನು ಬಾಗಿಸಿ ಆತನ ಬೊಗಸೆಯೊಳಗೆ ನೀರು ಹಾಕುತ್ತಿರುವಾಗ ಆಯಾಸದಿಂದ ಬಾಡಿದ್ದ ಅವನ ಮುಖವನ್ನು ಗಮನಿಸಿ ಕಾರಣವನ್ನು ಕೇಳಿದಳು. ಬೋಪದೇವನು ತನಗಾದ ಬೇಸರವನ್ನೆಲ್ಲ ಅವಳ ಬಳಿ ಹೇಳಿಕೊಂಡನು. ಆ ಮಹಿಳೆಯೋ ಬುದ್ಧಿವಂತೆ. ಆ ಕೂಡಲೇ ಆತನನ್ನು ಬಾವಿಯ ಸಮೀಪ ಕರೆದೊಯ್ದಳು. ಬಾವಿಯ ಕಟ್ಟೆಯ ಮೇಲೆ ಸವಕಳಿಗೊಂಡಿದ್ದ ಅಗಲವಾದ ಕಲ್ಲೊಂದಿತ್ತು. ಪ್ರತಿನಿತ್ಯ ಅಲ್ಲಿಗೆ ಬಂದ ಮಹಿಳೆಯರು ತಮ್ಮ ಮಣ್ಣಿನ ಗಡಿಗೆಯಲ್ಲಿ ಬಾವಿಯಿಂದ ನೀರನ್ನು ಸೇದಿಕೊಂಡು, ತುಂಬಿದ ಗಡಿಗೆಯನ್ನೊಮ್ಮೆ ಆ ಕಲ್ಲಿನ ಮೇಲೆ ಇಟ್ಟುಕೊಂಡು ನಂತರ ಟೊಂಕಕ್ಕೆ ಏರಿಸಿಕೊಳ್ಳುತ್ತಿದ್ದರು. ಹೀಗೆ ನಿರಂತರವಾಗಿ ಮಣ್ಣಿನ ಗಡಿಗೆಯನ್ನು ಇಟ್ಟು ಕಲ್ಲಿನ ಒಂದು ಭಾಗ ಸವೆದುಹೋಗಿತ್ತು. ಅದನ್ನು ತೋರಿಸುತ್ತ ಆ ಮಹಿಳೆ ಹೇಳಿದಳು ‘ಮಗುವೇ, ಮೃದುವಾದ ಮಣ್ಣಿನ ಗಡಿಗೆಯೂ ಮತ್ತೆ ಮತ್ತೆ ತಾಕಿ, ಗಟ್ಟಿಯಾದ ಕಲ್ಲನ್ನೇ ಅದು ಸವೆಸಬಲ್ಲದು ಅಂತಾದರೆ ಕಠಿಣವಾದ ವಿದ್ಯೆಯಾದರೂ ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಅದು ನಿನ್ನ ಬುದ್ಧಿಗೆ ನಾಟದೇ ಇದ್ದೀತೆ?’ ಅವಳ ಮಾತು ಬೋಪದೇವನಿಗೆ ಸರಿಯೆನಿಸಿತು.
ಆಗಸದಲ್ಲಿ ಅದಾಗಲೇ ಸೂರ್ಯ ಉದಯಿಸುತ್ತಲಿದ್ದ. ಭರವಸೆಯ ಕಿರಣಗಳು ಅವನ ಮನದಲ್ಲಿ ಮೂಡಿದವು. ಗುರುಕುಲಕ್ಕೆ ಮರಳಿ, ಪರಿಶ್ರಮವಹಿಸಿ ಪಾಂಡಿತ್ಯ ಸಂಪಾದಿಸಿದ. ಮುಂದೆ ಆತ ಮಂದಮತಿಗಳೂ ಸರಳವಾಗಿ ಅರ್ಥೈಸಿಕೊಳ್ಳುವಂತೆ ‘ಮುಗ್ಧಬೋಧ’ವೆಂಬ ವ್ಯಾಕರಣ ಗ್ರಂಥ ರಚಿಸಿದ. ವಿದ್ಯಾರ್ಜನೆಯಿರಲಿ ಅಥವಾ ಇನ್ನಾವುದನ್ನೋ ಗಳಿಸುವ ಸಂದರ್ಭವೇ ಇರಲಿ ಎದುರಾಗುವ ಸವಾಲುಗಳಿಗೆ ಅಂಜಿ ಕಾರ್ಯದಿಂದಲೇ ವಿಮುಖರಾಗಿ ಬಿಟ್ಟರೆ ಏನನ್ನು ಸಾಧಿಸಿದಂತಾಗುವುದು ಹೇಳಿ? ಮೊದಲ ಬಾರಿಗೆ ನಡೆಯುವಾಗ ಕಲ್ಲು, ಮುಳ್ಳುಗಳಿದ್ದರೂ ಅದೇ ಮಾರ್ಗದಲ್ಲಿ ನಿತ್ಯವೂ ಸಂಚರಿಸಿದರೆ ಹಾದಿ ಸುಗಮವೆನಿಸುವಂತೆ ಜೀವನದ ಅನೇಕ ಜಟಿಲ ಸಂಗತಿಗಳನ್ನು ಮತ್ತೆ ಮತ್ತೆ ಎದುರಿಸಿ ಸರಳಗೊಳಿಸಬಹುದು. ಎದುರಾಗುವ ಸವಾಲುಗಳಿಗೆ ಮುಖವೊಡ್ಡಿ ನಿಲ್ಲಬೇಕು. ಬೆಟ್ಟದಂತಹ ಸಂಕಷ್ಟಗಳು ಮತ್ತೆ ಮತ್ತೆ ಬರುತ್ತಲಿದ್ದರೂ ಬೇಸರಿಸಿಕೊಳ್ಳದೆ, ಛಲ ಮತ್ತು ಸಹನೆಯನ್ನು ಇರಿಸಿಕೊಂಡು ನಿರಂತರವಾಗಿ ಸಮಸ್ಯೆಗಳೊಂದಿಗೆ ಸೆಣೆಸಿದಾಗಲೇ ಯಶಸ್ಸಿನ ಕೀಲಿ ಕೈ ನಮ್ಮ ಕೈಯನ್ನು ತಲುಪುವುದು.
(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)
(ಪ್ರತಿಕ್ರಿಯಿಸಿ: manollasavv@gmail.com)