ಹೊಸ ಸುಧಾರಣೆಯ ಹಂತ: ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯಿಂದ ಹಲವು ಅನುಕೂಲ

PM Modi
Published on

ಹಲವು ಮಹತ್ವದ ಪ್ರಯತ್ನಗಳು ಮತ್ತು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಕೇಂದ್ರ ಸರ್ಕಾರ ‘ಒಂದು ದೇಶ ಒಂದು ತೆರಿಗೆ’ (ಜಿಎಸ್​ಟಿ) ವ್ಯವಸ್ಥೆಯನ್ನು ಜಾರಿಗೆ ತಂದದ್ದು ಗೊತ್ತೇ ಇದೆ. ಹಲವು ಬಗೆಯ ತೆರಿಗೆಗಳನ್ನು ಕಟ್ಟುವ ಕಿರಿಕಿರಿಯನ್ನು ಜಿಎಸ್​ಟಿ ಹೊಗಲಾಡಿಸಿದೆ. ಪ್ರಸಕ್ತ, ತೆರಿಗೆಯ ಹೊಸ ಸುಧಾರಣೆಯ ಹಂತವನ್ನು ಪ್ರವೇಶಿಸಿರುವ ಕೇಂದ್ರ, ‘ಪಾರದರ್ಶಕ ತೆರಿಗೆ ವ್ಯವಸ್ಥೆ-ಪ್ರಾಮಾಣಿಕತೆಗೆ ಗೌರವ’ ಎಂಬ ವೇದಿಕೆಗೆ ಚಾಲನೆ ನೀಡಿದೆ. ಈ ಮೊದಲು ಜನರಲ್ಲಿ ತೆರಿಗೆ ಕುರಿತಾದ ಅನೇಕ ಗೊಂದಲ, ಭಯ ನೆಲೆಸಿದ್ದವು. ‘ತೆರಿಗೆ ಭಯೋತ್ಪಾದನೆ’ ಎಂಬ ಪದವೇ ಚಾಲ್ತಿಗೆ ಬಂದದ್ದು, ಆ ವ್ಯವಸ್ಥೆಯ ಕರಾಳತೆಗೆ ಸಾಕ್ಷಿಯಾಗಿತ್ತು. ಈ ಹಿಂದೆ ಕೂಡ ತೆರಿಗೆ ಸುಧಾರಣೆಗಳ ಬಗ್ಗೆ ಹಲವು ಬಾರಿ ಚರ್ಚೆ ನಡೆದಿವೆಯಾದರೂ, ಅದರ ಪರಿಣಾಮಕಾರಿ ಜಾರಿ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಅಂಥ ಕ್ರಮಗಳ ಅನುಷ್ಠಾನಕ್ಕೆ ಮುಂದಾದರೂ, ಆರಂಭಿಕ ಹಂತದಲ್ಲೇ ಹಿನ್ನಡೆ ಕಂಡಿದ್ದವು ಎಂಬುದು ವಾಸ್ತವ. ಇದನ್ನೂ ಓದಿ: ನಮ್ಮ ದೇಶದಲ್ಲಿ ಇದುವರೆಗೆ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?

ಪ್ರಧಾನಿ ಗುರುವಾರ ಚಾಲನೆ ನೀಡಿರುವ ತೆರಿಗೆ ಸುಧಾರಣೆಯ ಹೊಸ ವೇದಿಕೆ, ಆನ್​ಲೈನ್ ಮೌಲ್ಯಮಾಪನ, ಆನ್​ಲೈನ್ ಮನವಿ, ತೆರಿಗೆದಾರರ ಚಾರ್ಟರ್​ಗಳಂಥ ವಿನೂತನ ಸೌಲಭ್ಯಗಳನ್ನು ಒಳಗೊಂಡಿದೆ. ಈ ರೀತಿಯ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಗುರುವಾರದಿಂದಲೇ ಜಾರಿಗೆ ಬಂದಿದ್ದರೆ, ಆನ್​ಲೈನ್ ಮೇಲ್ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ. ತೆರಿಗೆ ಪಾವತಿ ಜನಸ್ನೇಹಿ, ಪಾರದರ್ಶಕ ಮತ್ತು ಸುರಕ್ಷಿತವಾಗಲು ಈ ಮೂಲಕ ಸಾಧ್ಯವಾಗಲಿದೆ. ‘ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ದ ಆಶಯಕ್ಕೂ ಬಲ ತುಂಬುತ್ತದೆ.

‘ಪ್ರಾಮಾಣಿಕ ತೆರಿಗೆದಾರರಿಂದ ದೇಶದ ಅಭಿವೃದ್ಧಿ ಸಾಧ್ಯ. ಪ್ರಾಮಾಣಿಕ ತೆರಿಗೆ ಪಾವತಿ ಎಲ್ಲರ ಕರ್ತವ್ಯ. ತೆರಿಗೆ ವಂಚನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಸರ್ಕಾರ ಪ್ರಾಮಾಣಿಕ ತೆರಿಗೆದಾರರನ್ನು ಗುರುತಿಸಿ, ಗೌರವಿಸುತ್ತದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ‘130 ಕೋಟಿ ಜನಸಂಖ್ಯೆಯ ದೇಶದಲ್ಲಿ ಕೇವಲ 1.5 ಕೋಟಿ ಜನ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆದಾರರ ಸಂಖ್ಯೆ ತುಂಬ ಕಡಿಮೆ ಇದ್ದು, ಈ ನಿಟ್ಟಿನಲ್ಲಿ ಜನರೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿರುವುದು, ಸೂಕ್ತವಾಗಿಯೇ ಇದೆ. ಇದನ್ನೂ ಓದಿ: ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!

ತೆರಿಗೆ ಸುಧಾರಣೆ ಜಾರಿಗೆ ಮುನ್ನ ಬ್ಯಾಂಕಿಂಗ್ ವಲಯದಲ್ಲಿಯೂ ಭಾರಿ ಬದಲಾವಣೆಗಳನ್ನು ತರಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದ ಜನರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಕ್ರಮಗಳ ಬಳಿಕ ಪ್ರಾಮಾಣಿಕರನ್ನು ಗೌರವಿಸುವ ಚಿಂತನೆ ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆ. ತೆರಿಗೆದಾರರ ಸಮಸ್ಯೆಗಳಿಗೆ ಕಿವಿಗೊಡುವುದು, ಅವುಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಯತ್ನಿಸುವುದು, ತಂತ್ರಜ್ಞಾನದ ಸರಳ ಮತ್ತು ಪರಿಣಾಮಕಾರಿ ಪ್ರಯೋಜನವನ್ನು ಪಡೆಯುವುದು ಸೇರಿ ಹಲವು ಹೆಜ್ಜೆಗಳು ಆಶಾವಾದ ಮೂಡಿಸಿರುವುದಂತೂ ನಿಜ. ಇದರಿಂದಾಗಿ, ತೆರಿಗೆ ಬಗೆಗಿನ ಭಯ ಅಂತ್ಯಗೊಂಡು, ತೆರಿಗೆದಾರರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net