ಗುರುಸ್ಥಾನದಲ್ಲಿ ದ್ರಾವಿಡ್, ಹೊಸದಿಕ್ಕಿನಲ್ಲಿ ಭಾರತೀಯ ಕ್ರಿಕೆಟ್

Dravid
Published on
2014 ಮೇ 25...

ಇಂಡಿಯನ್ ಪ್ರೀಮಿಯರ್ ಲೀಗ್​ನ ಇತಿಹಾಸದಲ್ಲೇ ರೋಚಕವಾದ, ಮರೆಯಲಾಗದ ಹಣಾಹಣಿ ಅದು. ಆ ದಿನ ಮುಖಾಮುಖಿಯಾಗಿದ್ದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು. ಮುಂಬೈಗೆ ರೋಹಿತ್ ಶರ್ಮ ನಾಯಕರಾಗಿದ್ದರೆ, ರಾಜಸ್ಥಾನಕ್ಕೆ ರಾಹುಲ್ ದ್ರಾವಿಡ್ ಮೆಂಟರ್.

ಆ ಋತುವಿನ ಕೊನೆಯ ಲೀಗ್ ಪಂದ್ಯ ಅದಾಗಿತ್ತು. ಆ ಹೊತ್ತಿಗಾಗಲೇ ಚೆನ್ನೈ ಸೂಪರ್ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತ ನೈಟ್​ರೈಡರ್ಸ್ ಪ್ಲೇಆಫ್ ಪ್ರವೇಶ ಪಡೆದಾಗಿತ್ತು. ಹೀಗಾಗಿ ಬಾಕಿ ಇದ್ದ ಕೊನೆಯ ಅರ್ಹತೆ ಸ್ಥಾನಕ್ಕೆ ನಿರ್ಣಾಯಕ ಪಂದ್ಯ ಅದಾಗಿತ್ತು. ರಾಜಸ್ಥಾನ ತಂಡ ಅರ್ಹತೆ ಪಡೆಯಲು ಗೆದ್ದರೆ ಸಾಕಿತ್ತು. ಆದರೆ, ಮುಂಬೈ ತಂಡ ಗೆಲುವು ಮಾತ್ರವಲ್ಲ, ರನ್​ರೇಟ್​ನಲ್ಲೂ ರಾಜಸ್ಥಾನವನ್ನು ಹಿಂದಿಕ್ಕುವ ಬ್ರಹ್ಮಾಂಡ ಸವಾಲು ಪಡೆದಿತ್ತು. ಉಭಯ ತಂಡಗಳು ಖಡಕ್ ಹೋರಾಟ ನಡೆಸಿದವು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 4 ವಿಕೆಟ್​ಗೆ 189 ರನ್​ಗಳ ದೊಡ್ಡ ಮೊತ್ತ ಪೇರಿಸಿತು. ರಾಯಲ್ಸ್ ಪರವಾಗಿ ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 74 ರನ್, ಕರುಣ್ ನಾಯರ್ 27 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಪ್ರತಿಯಾಗಿ ಮುಂಬೈ ಅರ್ಹತೆ ಗಳಿಸಬೇಕಾದರೆ 14.4 ಓವರ್​ಗಳಲ್ಲಿ ಈ ಮೊತ್ತ ಹಿಂದಿಕ್ಕಿ ಗೆಲ್ಲಬೇಕಾದ ಸವಾಲು ಎದುರಾಗಿತ್ತು. ಹೀಗಾಗಿ ರಾಜಸ್ಥಾನಕ್ಕೆ ಇನ್ನೇನು ಪ್ಲೇಆಫ್ ಗ್ಯಾರಂಟಿ ಎಂಬ ಭಾವನೆ. ಆದರೆ, ಮುಂಬೈ ಯೋಚನೆ ಆ ದಿನ ಬೇರೆಯೇ ಇತ್ತು. ಲೆಂಡ್್ಲ ಸಿಮ್ಮನ್ಸ್ ಮತ್ತು ಮೈಕ್ ಹಸ್ಸೆ ಆರಂಭದಲ್ಲಿ ಚುರುಕಿನ ಆಟವಾಡಿದರು. ತಂಡ ಮೊದಲ 4 ಓವರ್​ಗಳಲ್ಲಿ 50 ರನ್ ಗಡಿ ದಾಟಿತು. 3ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನ್ಯೂಜಿಲೆಂಡ್ ದಾಂಡಿಗ ಕೋರೆ ಆಂಡರ್​ಸನ್ ಜೀವಮಾನದಲ್ಲಿ ಮರೆಯಲಾಗದ ಇನಿಂಗ್ಸ್ ಆಡಿದ್ದರು. 44 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಚಚ್ಚಿದ ಅವರು 95 ರನ್ ಗಳಿಸಿ ಅಜೇಯರಾಗುಳಿಯುವ ಮೂಲಕ ಮುಂಬೈಯ ಪ್ರಚಂಡ ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಅಂಬಟಿ ರಾಯುಡು 10 ಎಸೆತಗಳಲ್ಲಿ 30 ರನ್ ಚಚ್ಚಿದರು. ಮುಂಬೈ 14.3 ಓವರ್​ಗಳಲ್ಲಿ 189 ರನ್ ಗಳಿಸಿ ಪಂದ್ಯ ಟೈ ಆಗಿದ್ದಾಗ ರಾಯುಡು ಔಟ್ ಆದರು. ಆ ಕ್ಷಣದಲ್ಲಿ ತುಸು ಗೊಂದಲ. ಮುಂಬೈ ಇಷ್ಟೆಲ್ಲ ಸಾಹಸ ಮಾಡಿ ಕೊನೆಯ ಕ್ಷಣದಲ್ಲಿ ಎಡವಿತೇ ಎಂಬ ಭಾವನೆ. ಪಂದ್ಯ ಗೆಲುವಿಗೆ ಮುಂಬೈಗೆ ಒಂದೇ ರನ್ ಸಾಕಿತ್ತು. ಆದರೆ, ರನ್​ರೇಟ್ ಲೆಕ್ಕಾಚಾರದಲ್ಲಿ ಗೆಲ್ಲಲು ಉಳಿದಿದ್ದೂ ಒಂದೇ ಎಸೆತ. ಅದರಲ್ಲಿ ಕನಿಷ್ಠ ಬೌಂಡರಿ ಬಾರಿಸಲೇ ಬೇಕಿತ್ತು. ಅಷ್ಟರಲ್ಲಾಗಲೇ ಮಧ್ಯಮ ಕ್ರಮಾಂಕದಲ್ಲಿ ಕೈರಾನ್ ಪೊಲ್ಲಾರ್ಡ್, ರೋಹಿತ್ ಶರ್ಮ ಎಲ್ಲರೂ ಔಟಾಗಿದ್ದರು. ಕೋರೆ ಆಂಡರ್​ಸನ್ ನಾನ್​ಸ್ಟ್ರೈಕರ್ ತುದಿಯಲ್ಲಿದ್ದರು. ಹೀಗಾಗಿ ಸವಾಲು ಹೊಸ ಬ್ಯಾಟ್ಸ್​ಮನ್ ಆದಿತ್ಯ ತಾರೆ ಹೆಗಲೇರಿತ್ತು. ಆದರೆ, ಆ ದಿನ ಮುಂಬೈ ಸಾಹಸದ ದಿನವಾಗಿತ್ತು. ಜೇಮ್್ಸ ಫೌಕ್ನರ್ ಎಸೆತಕ್ಕೆ ಮಂಡಿಯೂರಿ ಬೀಸಿದ ತಾರೆ ಚೆಂಡನ್ನು ಸಿಕ್ಸರ್ ಗಡಿ ದಾಟಿಸಿಯೇ ಬಿಟ್ಟರು. ಅದೊಂದು ಅದ್ಭುತ ಕ್ಷಣ. ಮುಂಬೈ ಕೇವಲ 14.4 ಓವರ್​ಗಳಲ್ಲಿ 194 ರನ್ ಗಳಿಸಿ ಪ್ಲೇಆಫ್​ಗೇರಿತ್ತು. ರಾಜಸ್ಥಾನ ಕೂದಲೆಳೆ ಅಂತರದಿಂದ ವಂಚಿತವಾಗಿತ್ತು. ಸದಾ ಸ್ಥಿತಪ್ರಜ್ಞರಾಗಿರುವ ರಾಹುಲ್ ದ್ರಾವಿಡ್ ಆ ಕ್ಷಣದಲ್ಲಿ ಹತಾಶೆಯಿಂದ, ಸಿಟ್ಟಿನಿಂದ ತಮ್ಮ ಕ್ಯಾಪ್ ನೆಲಕ್ಕೆ ಒಗೆದಿದ್ದರು.

ಸ್ಟಾರ್ ಆಟಗಾರರ ಭಾರವಿಲ್ಲದ, ಹೊಸಬರು, ಯುವಕರ ತಂಡವಾಗಿದ್ದ ರಾಜಸ್ಥಾನ ಆ ವರ್ಷ ಭರ್ಜರಿ ಪ್ರದರ್ಶನ ನೀಡಿತ್ತು. 2013 ಋತುವಿನ ಅಂತ್ಯಕ್ಕೆ ಆಟಗಾರನಾಗಿ ಐಪಿಎಲ್​ಗೂ ವಿದಾಯ ಹೇಳಿದ್ದ ದ್ರಾವಿಡ್, ಮೆಂಟರ್ ಆಗಿ ಮೊದಲ ಪ್ರಯತ್ನದಲ್ಲೇ ರಾಜಸ್ಥಾನವನ್ನು ಪ್ಲೇಆಫ್ ಸನಿಹಕ್ಕೆ ಮುನ್ನಡೆಸಿದ್ದರು. ಆ ಸ್ಮರಣೀಯ ಪಂದ್ಯದಲ್ಲಿ ಕೋಚ್ ಮತ್ತು ನಾಯಕರಾಗಿ ಪರಸ್ಪರ ಮುಖಾಮುಖಿಯಾಗಿದ್ದ ದ್ರಾವಿಡ್ ಮತ್ತು ರೋಹಿತ್ ಶರ್ಮ ಸದ್ಯ ಭಾರತ ಟಿ20 ತಂಡದ ಕೋಚ್ ಮತ್ತು ನಾಯಕರಾಗಿ ಒಟ್ಟಾಗಿರುವುದು ಕಾಲದ ಮಹಿಮೆಯೇ ಸರಿ. ಈ ಏಳು ವರ್ಷಗಳಲ್ಲಿ ದ್ರಾವಿಡ್ ಕೋಚ್ ಆಗಿ ಮತ್ತು ರೋಹಿತ್ ನಾಯಕರಾಗಿ ಸಾಕಷ್ಟು ಮಾಗಿದ್ದಾರೆ. ಸಾಕಷ್ಟು ಯಶಸ್ಸು ಕಂಡಿದ್ದಾರೆ. ಕೊನೆಗೂ ಒಟ್ಟಿಗೇ ಭಾರತ ತಂಡ ಮುನ್ನಡೆಸುವ ಅವಕಾಶ ಅವರಿಬ್ಬರಿಗೆ ದೊರೆತಿದೆ. ಇದರ ಪ್ರಯೋಜನ ಭಾರತೀಯ ಕ್ರಿಕೆಟ್​ಗೆ ಸಿಗಬೇಕಿದೆ.

ದ್ರಾವಿಡ್ ಎಂದೊಡನೆ ನೆನಪಾಗುವ ಶಬ್ದ ಬದ್ಧತೆ. ಅಂದುಕೊಂಡ ಗುರಿ ಈಡೇರುವವರೆಗೂ ಪ್ರಯತ್ನ ನಿಲ್ಲಿಸುವುದಿಲ್ಲ ಎನ್ನುವಂಥ ಕಮಿಟ್​ವೆುಂಟ್ ಅದು. ಯಶಸ್ಸು ಯಾವತ್ತೂ ಆಕಸ್ಮಿಕವಾಗಿ, ಅದೃಷ್ಟದ ಫಲವಾಗಿ ಎಟುಕುವುದಿಲ್ಲ; ಸತತ ಪ್ರಯತ್ನ ಬೇಕು ಎಂಬುದನ್ನು ಜೀವನದುದ್ದಕ್ಕೂ ನಂಬಿಕೊಂಡು ಬಂದವರು ಅವರು. ಪ್ರತೀ ಕೆಲಸಕ್ಕೆ ಮುನ್ನ ವೃತ್ತಿಪರ ಚಿಂತನೆ, ರ್ತಾಕ ಆಲೋಚನೆಗಳ ಮೂಲಕ ವಾಸ್ತವಿಕ ಗುರಿ ಹಾಕಿಕೊಂಡು, ಅದಕ್ಕೆ ಪೂರಕವಾಗಿ ಹೊಂದಾಣಿಕೆಗಳು, ಸುಧಾರಣೆಗಳು, ಪ್ರಯತ್ನಶೀಲತೆಯ ನಿರಂತರ ಪ್ರಕ್ರಿಯೆಯ ಮೂಲಕ ಗುರಿಮುಟ್ಟುವುದು ಅವರ ಸ್ಟೈಲ್. ಮೆಂಟರ್ ಆಗಿ ಮೊದಲ ವರ್ಷ ರಾಜಸ್ಥಾನ ತಂಡವನ್ನು ಪ್ಲೇಆಫ್ ಅಂಚಿಗೆ ಮುನ್ನಡೆಸಿದ ದ್ರಾವಿಡ್, ಮಾರನೇ ವರ್ಷ ಇನ್ನೂ ಎರಡು ಹೆಜ್ಜೆ ಮುಂದೆ ಸಾಗಿದರು. 2015ರಲ್ಲಿ ರಾಜಸ್ಥಾನ ಪ್ಲೇಆಫ್ ಸುತ್ತಿಗೇರಿ 3ನೇ ಸ್ಥಾನ ಪಡೆದುಕೊಂಡಿತು. ಅಲ್ಲಿಗೆ ತರಬೇತುದಾರನಾಗಿ ಎರಡು ವರ್ಷಗಳ ಅನುಭವದಿಂದ ಸ್ಪಷ್ಟತೆ ಪಡೆದುಕೊಂಡ ದ್ರಾವಿಡ್ ಹೊಸ ಸವಾಲಿಗೆ ಸಜ್ಜಾದರು. ಭಾರತದ 19 ವಯೋಮಿತಿ ಮತ್ತು ‘ಎ’ ತಂಡಗಳ ಕೋಚ್ ಹುದ್ದೆಯನ್ನು ಅವರು ಒಪ್ಪಿಕೊಂಡರು.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್​ನಲ್ಲಿ ಭಾರತ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ರಿಷಬ್ ಪಂತ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ ಆ ಟೂರ್ನಿ ಮೂಲಕವೇ ಪ್ರವರ್ಧಮಾನಕ್ಕೆ ಬಂದರು. 2018ರಲ್ಲಿ ನ್ಯೂಜಿಲೆಂಡ್​ನಲ್ಲಿ 19 ವಯೋಮಿತಿ ವಿಶ್ವಕಪ್ ನಡೆದಾಗ ದ್ರಾವಿಡ್ ಮಾರ್ಗದರ್ಶನದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿತು. ಪೃಥ್ವಿ ಶಾ, ಶುಭಮಾನ್ ಗಿಲ್, ಕಮಲೇಶ್ ನಾಗರಕೋಟಿ, ಶಿವಂ ಮಾವಿಯಂಥ ಆಟಗಾರರು ಈ ಟೂರ್ನಿಯಿಂದ ಹೊರಹೊಮ್ಮಿದರು. ಆಟಗಾರನಾಗಿ ವಿಶ್ವಕಪ್ ಟ್ರೋಫಿಯಿಂದ ವಂಚಿತರಾಗಿದ್ದ ದ್ರಾವಿಡ್ ಕೋಚ್ ಆಗಿ ಚಾಂಪಿಯನ್ ಸಾಧನೆ ಮಾಡಿದ್ದರು.

ಅದಾದ ಬಳಿಕ ದ್ರಾವಿಡ್ 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಹುದ್ದೆ ಒಪ್ಪಿಕೊಂಡು ಭಾರತೀಯ ಕ್ರಿಕೆಟ್​ಗೆ ಯುವ ಆಟಗಾರರ ಗೊಂಚಲನ್ನೇ ನೀಡಿದರು. ದ್ರಾವಿಡ್ ಎನ್​ಸಿಎ ಹುದ್ದೆಗೇರಿದ ಮೇಲೆ ಭಾರತ ತಂಡಕ್ಕೆ ಮೀಸಲು ಆಟಗಾರರ ಕೊರತೆಯೇ ಉದ್ಭವಿಸಲಿಲ್ಲ. ಹೊಸ ಹೊಸ ಆಟಗಾರರು ಪ್ರವರ್ಧಮಾನಕ್ಕೆ ಬಂದರು. ಎಲ್ಲಿಯವರೆಗೆಂದರೆ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಭಾರತದ 2ನೇ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಅಂತಾರಾಷ್ಟ್ರೀಯ ಸರಣಿಗಳನ್ನಾಡಿತು. ದ್ರಾವಿಡ್ ಈ ತಂಡದೊಂದಿಗೆ ಕೋಚ್ ಆಗಿ ತೆರಳಿದರು. ಶಿಖರ್ ಧವನ್ ನಾಯಕತ್ವದಲ್ಲಿ ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡ ಭಾರತ, ತಂಡದ 8 ಆಟಗಾರರು ಕರೊನಾ ಪಾಸಿಟಿವ್​ಗೆ ಸಿಲುಕಿದ ಕಾರಣ ಟಿ20 ಸರಣಿ ಬಿಟ್ಟುಕೊಡಬೇಕಾಯಿತು.

ದ್ರಾವಿಡ್ ಮೃದುಭಾಷಿ, ಮಿತಭಾಷಿ. ಆವೇಶ ಅವರ ಹತ್ತಿರ ಸುಳಿಯದು. ಪೂರ್ವಸಿದ್ಧತೆ, ಪ್ರಯತ್ನಶೀಲತೆಗೆ ಅವರು ಹೆಚ್ಚಿನ ಮಹತ್ವ ಕೊಡುತ್ತಾರೆ. ಕೋಚ್ ಆಗಿ ಅವರದೇ ವಿಧಾನ ರೂಪಿಸಿದ್ದಾರೆ. ಆಟಗಾರರ ದೌರ್ಬಲ್ಯಗಳ ಪಟ್ಟಿ ಮಾಡಿ ನಿರುತ್ತೇಜಿಸುವುದಕ್ಕಿಂತ, ವ್ಯಕ್ತಿಗತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಕ್ಕೆ ಮಹತ್ವ ನೀಡುತ್ತಾರೆ. ಪ್ರತಿಯೊಬ್ಬ ಆಟಗಾರನ ಪಾಸಿಟಿವ್ ಅಂಶ ಅರಿತುಕೊಂಡು, ಕೌಶಲ ಸುಧಾರಣೆಗೆ ಒತ್ತು ಕೊಡುತ್ತಾರೆ. ದ್ರಾವಿಡ್ ಬಳಿ, ಆಟಗಾರರ ಕೌಶಲ ಸುಧಾರಣೆಗೆ ಸಾವಿರ ಸೂತ್ರಗಳಿವೆ. ಆದರೆ, ಗೊತ್ತಿರುವ ಕೌಶಲ ಬಿಟ್ಟು ಹೊಸದೇನೋ ಕಲಿಯುವಂತೆ ಅವರು ಯಾವತ್ತೂ ಬಲವಂತ ಮಾಡುವುದಿಲ್ಲ. ಇನ್ನು ಭಾರತೀಯ ಕ್ರಿಕೆಟ್​ನಲ್ಲಿ ಜೂನಿಯರ್ ಮಟ್ಟದಿಂದ ಹಾಲಿ ಸೂಪರ್​ಸ್ಟಾರ್​ಗಳವರೆಗೆ ಪ್ರತಿಯೊಬ್ಬರಿಗೂ ದ್ರಾವಿಡ್ ಬಗ್ಗೆ ಗೌರವ ಇದೆ.

ಟಿ20 ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ. ಏಕದಿನ ತಂಡದ ನಾಯಕತ್ವದ ಬಗ್ಗೆ ಸದ್ಯ ಅನಿಶ್ಚಿತತೆ ಇದೆ. ಮುಂದಿನ ದಿನಗಳಲ್ಲಿ ದ್ರಾವಿಡ್-ಕೊಹ್ಲಿ ಮತ್ತು ದ್ರಾವಿಡ್-ರೋಹಿತ್ ಕಾಂಬಿನೇಷನ್ ಬಗ್ಗೆ ಯಾವ ಕಾಂಬಿನೇಷನ್ ಹೆಚ್ಚು ಯಶಸ್ವಿ ಆಗಬಹುದೆಂಬ ಕುತೂಹಲ ಇದ್ದೇ ಇದೆ. ವಿರಾಟ್ ಆಕ್ರಮಣಶೀಲ, ರೋಷ-ಆವೇಶ ಎರಡೂ ಜಾಸ್ತಿ. ದ್ರಾವಿಡ್ ಮೃದು. ವಿವೇಕ-ವಿವೇಚನೆಯ ಗೆರೆ ದಾಟುವವರಲ್ಲ. ಕೋಚ್ ಮತ್ತು ನಾಯಕನ ನಡುವೆ ವಿಶ್ವಾಸವಿದ್ದಾಗ, ವ್ಯಕ್ತಿಗತ ಸ್ವಭಾವಗಳು ತಡೆಗೋಡೆ ಆಗಬಾರದು. ಹಿಂದೆ ಮಿತಭಾಷಿ ಜಾನ್ ರೈಟ್ ಮತ್ತು ಆವೇಶಗಾರ ಸೌರವ್ ಗಂಗೂಲಿ ಕಾಂಬಿನೇಷನ್ ಯಶಸ್ವಿ ಆಗಿತ್ತು. ಗ್ಯಾರಿ ಕರ್ಸ್ಟನ್ ಮತ್ತು ಎಂ.ಎಸ್. ಧೋನಿ ಇಬ್ಬರೂ ಯಾವತ್ತೂ ಭಾವನೆಗಳನ್ನು ಮುಖದ ಮೇಲೆ ತೋರಿಸಿದವರಲ್ಲ. ಅವರ ಜೋಡಿಯೂ ಯಶಸ್ವಿಯಾಗಿತ್ತು. ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ನಾಯಕರಾಗಿ ಅಪಾರ ಯಶಸ್ಸು ಕಂಡವರು. ದ್ರಾವಿಡ್ ನಾಯಕತ್ವ ದಿನಗಳ ಸಹನೆ, ಸಂಯಮವನ್ನು ರೋಹಿತ್​ರಲ್ಲೂ ಕಾಣಬಹುದು. ಟೆಸ್ಟ್​ಗಳಲ್ಲಿ ವಿರಾಟ್-ದ್ರಾವಿಡ್, ಸೀಮಿತ ಓವರ್​ಗಳಲ್ಲಿ ರೋಹಿತ್-ದ್ರಾವಿಡ್ ಜೊತೆಯಾಟವನ್ನು ಅನುಭವದ ಕುಲುಮೆಗೊಡ್ಡಿಯೇ ಯಾವ ಜೋಡಿ ಭಾರತೀಯ ಕ್ರಿಕೆಟ್​ಗೆ ಬೆಸ್ಟ್ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಂಡುಕೊಳ್ಳಬೇಕಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೋಚ್ ರವಿಶಾಸ್ತ್ರಿ- ನಾಯಕ ಕೊಹ್ಲಿ ಜತೆಯಾಟ ಭಾರತೀಯ ಕ್ರಿಕೆಟ್ ಪಾಲಿಗೆ ಮಿಶ್ರಫಲ ತಂದುಕೊಟ್ಟಿದೆ. ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ ಎನ್ನುವುದೊಂದು ಹಿನ್ನಡೆಯಾದರೂ, ಉಳಿದಂತೆ ತಂಡ ಸಾಧಿಸಿರುವುದೂ ಕಡಿಮೆಯೇನಲ್ಲ. ಅಷ್ಟಕ್ಕೂ ವಿಶ್ವಕಪ್ ಗೆದ್ದಿಲ್ಲ ಎನ್ನುವುದೊಂದೇ ಒಬ್ಬ ಕೋಚ್ ಅಥವ ನಾಯಕನ ಯೋಗ್ಯತೆ ಅಳೆಯಲು ಮಾನದಂಡ ಆಗಬಾರದು. ಇಂಗ್ಲೆಂಡ್ 2019ರವರೆಗೂ ಏಕದಿನ ವಿಶ್ವಕಪ್ ಒಮ್ಮೆಯೂ ಗೆದ್ದಿರಲಿಲ್ಲ. ನ್ಯೂಜಿಲೆಂಡ್ ಇತ್ತೀಚೆಗೆ ಟೆಸ್ಟ್ ವಿಶ್ವಚಾಂಪಿಯನ್​ಷಿಪ್ ಗೆದ್ದಿದ್ದು ಬಿಟ್ಟರೆ, ಏಕದಿನ, ಟಿ20 ವಿಶ್ವಕಪ್ ಒಮ್ಮೆಯೂ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಕೂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗೆಂದು ಆ ತಂಡಗಳನ್ನಾಗಲೀ, ಕೋಚ್, ನಾಯಕರನ್ನಾಗಲೀ ವಿಫಲ ಎಂದು ಹೇಳಲಾಗದು. ಹಾಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಾದರೂ ಅಷ್ಟೇ. ಪ್ರಧಾನ ಸುತ್ತಿನಲ್ಲಿ ಕೇವಲ 12 ತಂಡಗಳು ಆಡಿದ ಟೂರ್ನಿಯಲ್ಲಿ ಭಾರತ ತಂಡ ಕೇವಲ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಸೋತ ಮಾತ್ರಕ್ಕೆ ಹೊರಬೀಳುತ್ತದೆ ಎಂದರೆ, ಟೂರ್ನಿಯಲ್ಲಿ ಒಮ್ಮೆಯಾದರೂ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶವೇ ಸಿಗದೇ ನಿರ್ಗಮಿಸುತ್ತದೆಂದರೆ, ಟೂರ್ನಿ ಫಾರ್ವಟ್​ನಲ್ಲೇ ದೋಷವಿದೆ ಎಂದರ್ಥ. ಇನ್ನು ಟಾಸ್ ಸೋತವರು ಪಂದ್ಯ ಸೋಲುವ ಅಂಶವಂತೂ ಟೂರ್ನಿಯ ಸ್ಪರ್ಧಾತ್ಮಕತೆಯನ್ನೇ ಕಸಿದುಕೊಂಡಿದೆ.

ಆಗಿದ್ದು ಆಗಿಹೋಗಿದೆ. ತಾಂತ್ರಿಕ ಕಾರಣಕ್ಕೆ ರವಿಶಾಸ್ತ್ರಿ ನಿರ್ಗಮಿಸಿದ್ದಾರೆ. ಕೊಹ್ಲಿ ಕೂಡ ಟಿ20 ನಾಯಕತ್ವ ತೊರೆದಿದ್ದಾರೆ. ದ್ರಾವಿಡ್, ರೋಹಿತ್ ನೇತೃತ್ವದಲ್ಲಿ ಹೊಸ ದಿಕ್ಕು, ಹೊಸ ಹೆಜ್ಜೆ ಕ್ರಮಿಸುವ ಕಾಲ ಬಂದಿದೆ. ಭಾರತೀಯ ಕ್ರಿಕೆಟ್​ಗೆ ಒಳಿತು ತರಲಿ ಎಂದು ಆಶಿಸೋಣ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net