ಚಿಂತ್ಯಾಕ ಮಾಡುತಿದ್ದಿ…: ಮನೋಲ್ಲಾಸ

Fire (2)
Published on

| ಸುಜಾತಾ ಕುಲಕರ್ಣಿ ಛಬ್ಬಿ

ಒಂದು ಊರಿನಲ್ಲಿ ಧನಿಕ ವ್ಯಾಪಾರಿಯಿದ್ದ. ವಯೋಸಹಜ ಕಾಯಿಲೆಯಿಂದ ಅವನು ತೀರಿ ಹೋದನು. ಎಲ್ಲ ಕ್ರಿಯಾಕರ್ಮಗಳು ಮುಗಿದ ನಂತರ, ಅವನ ಮಗ ಕಾರಕೂನನನ್ನು ಕರೆದು ನಮ್ಮ ಬಳಿ ಎಷ್ಟು ಸಂಪತ್ತಿದೆ ಎಂದು ಕೇಳಿದನು. ‘ಮೂರು ತಲೆಮಾರುಗಳಿಗೆ ಸಾಲುವಷ್ಟು ಇದೆ ಸ್ವಾಮಿ’ ಎಂದ ಕಾರಕೂನ. ತನ್ನ ನಾಲ್ಕನೆಯ ತಲೆಮಾರಿನವರು ಜೀವನಕ್ಕೆ ಏನು ಮಾಡಬೇಕು?’ ಎಂಬ ಆಲೋಚನೆ ಅವನ ತಲೆಹೊಕ್ಕಿತು.

ಅದು ಚಿಂತೆಯಾಗಿ ಮಾರ್ಪಟ್ಟು ಅವನು ಸೊರಗತೊಡಗಿದ. ಔಷಧೋಪಚಾರ, ಪಥ್ಯಾದಿಗಳಿಂದಲೂ ಪ್ರಯೋಜನವಾಗಲಿಲ್ಲ. ಕೊನೆಗೆ ಪ್ರತಿ ದಿನ ಮುಂಜಾನೆ ಯಾರಾದರೂ ಬಡವನಿಗೆ ಒಂದು ದಿನದ ಆಹಾರ ಧಾನ್ಯ ನೀಡುತ್ತ ಬಂದರೆ ರೋಗ ವಾಸಿಯಾದೀತು ಎಂದು ಜ್ಯೋತಿಷಿಗಳು ಹೇಳಿದರು. ಅದರಂತೆ ಆತ ದಾನ ಮಾಡತೊಡಗಿದ. ಒಂದು ದಿನ ದಾನ ಸ್ವೀಕರಿಸಲು ಯಾರೂ ಬರಲಿಲ್ಲ. ಹಾಗಾಗಿ ಆತ ಬೀದಿಯಲ್ಲಿ ಹೋಗುತ್ತಿದ್ದ ಬಡವನೊಬ್ಬನನ್ನು ಕರೆದು ದಾನ ತೆಗೆದುಕೊಂಡು ಹೋಗು ಎಂದ. ಆತ ‘ಸ್ವಲ್ಪ ತಡೆಯಿರಿ, ಮನೆಗೆ ಹೋಗಿ ಇಂದಿನ ಮಟ್ಟಿಗೆ ಸಾಲುವಷ್ಟು ಧಾನ್ಯ ಇದೆಯೇ ಎಂದು ನೋಡಿ ಬರುತ್ತೇನೆ’ ಎಂದ.

ಸ್ವಲ್ಪ ಹೊತ್ತಿನ ನಂತರ ಆತ ತಿರುಗಿ ಬಂದು ‘ಸ್ವಾಮಿ, ನನಗೆ ಧಾನ್ಯ ಬೇಡ. ಇಂದಿನ ಮಟ್ಟಿಗೆ ಬೇಕಾಗುವಷ್ಟು ಧಾನ್ಯ ಇದೆ ಮನೆಯಲ್ಲಿ’ ಎಂದ. ‘ಹಾಗಾದರೆ ನಾಳಿನ ಸಲುವಾಗಿ ಧಾನ್ಯ ತೆಗೆದುಕೊಂಡು ಹೋಗು’ ಎಂದು ಧನಿಕನ ಮಗ ಹೇಳಲು, ‘ನಾಳಿನ ಚಿಂತೆಯನ್ನು ನಾನು ಇಂದು ಮಾಡುವುದಿಲ್ಲ’ ಎಂದು ಆ ಬಡವ ಹೇಳಿದ. ಅಲ್ಲ ಇಷ್ಟು ಬಡವನಾದಾಗ್ಯೂ, ಇವನು ನಾಳಿನ ಚಿಂತೆ ಮಾಡುವುದಿಲ್ಲ ಎಂದ ಮೇಲೆ ನೂರು ವರ್ಷಗಳ ನಂತರದ ನಾಲ್ಕನೆಯ ಪೀಳಿಗೆಯವರ ಚಿಂತೆ ಹಚ್ಚಿಕೊಂಡು ಕೊರಗುವ ನಾನೆಂಥ ಮೂರ್ಖ ಎಂಬ ವಿಚಾರ ಧನಿಕನ ಮಗನಿಗೆ ಬಂದು ಅಂದಿನಿಂದ ಆ ಚಿಂತೆಯನ್ನು ಬಿಟ್ಟ. ಅಂದಿನಿಂದ ಅವನ ರೋಗ ಗುಣವಾಗತೊಡಗಿತು.

ಚಿಂತೆ ಎಂದರೆ ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ಋಣಾತ್ಮಕ ಸ್ವರೂಪದ ಯೋಚನೆಗಳು, ಹಾಗೂ ಭಾವನೆಗಳು. ಚಿಂತೆಯ ಕುರಿತು ಪುರಾತನವಾದ ಶ್ಲೋಕವೊಂದು ಹೀಗಿದೆ:

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುರೇಕೋ ವಿಶಿಷ್ಯತೇ||

ಚಿತಾ ದಹತಿ ನಿರ್ಜೀವಂ ಚಿಂತಾ ತು ಸಜೀವಕಂ||

‘ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ನಿರ್ಜೀವವಾದುದನ್ನು ಸುಟ್ಟರೆ, ಚಿಂತೆ ಸಜೀವವಾದುದನ್ನೇ ಸುಡುತ್ತದೆ.’ ನಮ್ಮ ಹಿರಿಯರು ಇದ್ದುದರಲ್ಲಿಯೇ ಸುಖದಿಂದ ಜೀವನ ಮಾಡುತ್ತಿದ್ದರು. ಇದರರ್ಥ ಅವರಿಗೆ ಚಿಂತೆಯೇ ಇರಲಿಲ್ಲವೆಂದಲ್ಲ. ಆದರೆ ಅವರು ಚಿಂತೆಯನ್ನು ಎದುರಿಸುವ ಪರಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ವಿಧಾನ ಬೇರೆ ಇತ್ತು. ಪ್ರಕೃತಿಯ ಸೌಂದರ್ಯ ಮತ್ತು ಕೌತುಕವನ್ನು ಸವಿಯುತ್ತ ಧನಾತ್ಮಕ ದೃಷ್ಟಿಯನ್ನು ಬೆಳೆಸಿಕೊಂಡಾಗಲೇ ನೆಮ್ಮದಿಯಾಗಿ ಜೀವಿಸಲು ಸಾಧ್ಯ. ಜೀವನವನ್ನು ಪ್ರೀತಿಸೋಣ, ಚಿಂತೆಯನ್ನಲ್ಲ.

(ಲೇಖಕರು ಸಹಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net