

ಒಮ್ಮೆ ತಂದೆ ಮತ್ತು ಮಗಳು ಉದ್ಯಾನದಲ್ಲಿ ಆಟವಾಡುತ್ತಿದ್ದರು. ಅಲ್ಲೇ ಸಮೀಪದಲ್ಲಿ ವ್ಯಾಪಾರಿಯೊಬ್ಬ ಮಾರಲಿಕ್ಕಿಟ್ಟಿದ್ದ ಮಾವಿನಹಣ್ಣನ್ನು ಕಂಡ ಮಗಳು ತನಗೆ ಬೇಕೆಂದು ಹಠ ಹಿಡಿದಳು. ಮಗಳ ಆಸೆಯಂತೆ ಹಣ್ಣು ಖರೀದಿಸಿದ ಅಪ್ಪ ಆಕೆಯ ಸಂತೋಷವನ್ನು ಕಂಡು ಹಿಗ್ಗಿದ್ದ. ‘ಮಗಳೇ, ಅಪ್ಪನಿಗೊಂದು ಹಣ್ಣನ್ನು ತಿನ್ನೋಕೆ ಕೊಡೋದಿಲ್ವೆ? ಎರಡನ್ನೂ ನೀನೇ ತಿನ್ನುತ್ತೀಯಾ’ ಎಂದು ಮುದ್ದಿನಿಂದ ಕೇಳಿದ. ಆಗ ಮಗಳು ತಕ್ಷಣಕ್ಕೆ ಕೈಯಲ್ಲಿದ್ದ ಎರಡೂ ಹಣ್ಣನ್ನು ಕಚ್ಚಿ ಎಂಜಲು ಮಾಡಿದಳು. ಮಗಳ ಆ ಅನಿರೀಕ್ಷಿತ ವರ್ತನೆ ಕಂಡ ಅಪ್ಪ ಆಶ್ಚರ್ಯಗೊಂಡ. ಬಹಳ ನೊಂದುಕೊಂಡ. ಹಂಚಿಕೊಂಡು ತಿನ್ನುವ ಗುಣ ಕಲಿಯದೆ ಬೆಳೆಯುತ್ತಿರುವ ಮಗಳ ಬಗ್ಗೆ ಬೇಸರಗೊಂಡ. ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಈ ಪರಿ ದುರಾಸೆ ಎಂದ ಮೇಲೆ ತಾವು ಬೆಳೆಸುತ್ತಿರುವ ರೀತಿಯಲ್ಲೇ ಏನೋ ತಪ್ಪಿದೆ ಎಂಬ ನಿರ್ಧಾರಕ್ಕೆ ಬಂದ. ತನ್ನ ಪತ್ನಿಯು ಮಗಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿಲ್ಲ ಎಂದು ಆಕೆಯ ಮೇಲೂ ಕೋಪಿಸಿಕೊಂಡ. ಮರುಕ್ಷಣಕ್ಕೆ ಆ ಮಗು ಮುಗ್ಧತೆಯಿಂದ ತನ್ನ ಒಂದು ಕೈಯನ್ನು ಮುಂದೆ ಚಾಚುತ್ತ, ‘ಅಪ್ಪಾ, ಯಾವ ಹಣ್ಣು ಹೆಚ್ಚು ರುಚಿಯಾಗಿದೆ ಎಂದು ಕಚ್ಚಿ ನೋಡಿದೆ. ಈ ಹಣ್ಣು ಬಹಳ ಸಿಹಿಯಾಗಿದೆ. ಅದಕ್ಕೇ ಇದು ನಿಮಗೆ. ನಿಮಗೆ ಹುಳಿ ಹಣ್ಣು ಇಷ್ಟ ಆಗೋದಿಲ್ಲ ಅಂತ ನನಗೆ ಗೊತ್ತು, ತಗೊಳಿ’ ಎಂದು ಸಿಹಿಯಾದ ಮಾವಿನಹಣ್ಣನ್ನು ಅಪ್ಪನಿಗೆ ಕೊಟ್ಟಳು. ಮಗಳ ವರ್ತನೆಯ ಹಿಂದಿನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಪ್ಪ ತನ್ನ ಸಣ್ಣ ಬುದ್ಧಿಗೆ ತಲೆತಗ್ಗಿಸಿದ. ಮಗಳ ಔದಾರ್ಯ ಹಾಗೂ ತಿಳಿವಳಿಕೆ ಕಂಡು ಹೆಮ್ಮೆಪಟ್ಟ.
ನಾವೂ ಸಹ ಆ ತಂದೆಯಂತೆ ಅದೆಷ್ಟೋ ಬಾರಿ ಇನ್ನೊಬ್ಬರ ಮಾತು, ವರ್ತನೆ, ಸಮಯ ಹಾಗೂ ಸಂದರ್ಭಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತೇವೆ. ನಮಗೆ ನಾವೇ ಮಾನಸಿಕವಾಗಿ ಶಿಕ್ಷಿಸಿಕೊಳ್ಳುತ್ತೇವೆ. ಇಲ್ಲಸಲ್ಲದ ವಿವಾದ ಸೃಷ್ಟಿಸಿಕೊಳ್ಳುತ್ತೇವೆ. ಇನ್ನು ಕೆಲವೊಮ್ಮೆ ನಮ್ಮ ಮಾತನ್ನು ಬೇರೆಯವರು ತಪ್ಪಾಗಿ ಗ್ರಹಿಸಿದಾಗಲೂ ಇದೇ ಪರಿಸ್ಥಿತಿ ತಲೆದೋರುತ್ತದೆ. ಒಟ್ಟಾರೆ ತಪ್ಪು ಗ್ರಹಿಕೆಗಳು ಮನಸ್ಸಿನ ನೆಮ್ಮದಿ ಹಾಗೂ ಸುಖವನ್ನು ಕಸಿದುಕೊಳ್ಳುತ್ತವೆ. ಸೀಮಿತ ಮಾಹಿತಿ ಮತ್ತು ಕೇವಲ ಆ ಕ್ಷಣದ ಅನಿಸಿಕೆಗಳನ್ನು ಆಧರಿಸಿ ತ್ವರಿತವಾದ ಅಭಿಪ್ರಾಯ ರೂಪಿಸುವುದು ಸೂಕ್ತವಲ್ಲ. ಯಾವುದೇ ಮಾತು, ಘಟನೆ, ಸಮಯ, ಸಂದರ್ಭ ಅಥವಾ ವರ್ತನೆಗಳನ್ನು ಸರಿಯಾಗಿ ಅವಲೋಕಿಸಿ, ತಾಳ್ಮೆಯಿಂದ ಯೋಚಿಸಿ ನಿರ್ಧಾರಕ್ಕೆ ಬಂದಾಗ ಸಮಸ್ಯೆಯಾಗದು. ಕೇವಲ ಮುಖಪುಟವನ್ನು ನೋಡಿ ಪುಸ್ತಕದಲ್ಲೇನಿದೆ ಎಂಬುದನ್ನು ಅಳೆಯದೇ, ತಪ್ಪು ಗ್ರಹಿಕೆಗಳಿಗೆ ಬಲಿಯಾಗದೆ, ಪ್ರತ್ಯಕ್ಷ ಕಂಡುಕೇಳಿದರೂ ಪ್ರಮಾಣಿಸಿ ನೋಡುವ ತಾಳ್ಮೆ, ಜಾಣ್ಮೆ ರೂಢಿಸಿಕೊಂಡು ಪ್ರಬುದ್ಧತೆಯತ್ತ ಸಾಗೋಣ.
(ಲೇಖಕರು ಹವ್ಯಾಸಿ ಬರಹಗಾರರು)