ಸಿಲುಕದಿರಿ ಕೋಪದ ತಾಪದಿ: ಮನೋಲ್ಲಾಸ

Snake (1)
Published on
| ಸುಮಾವೀಣಾ 
ಒಮ್ಮೆ ಮರಗೆಲಸದವನು ತನ್ನ ನಿತ್ಯದ ಕೆಲಸ ಮುಗಿಸಿ ಒಳ ಸೇರಿದ್ದ ದೊಡ್ಡ ಹಾವನ್ನು ಗಮನಿಸದೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೊರಡುತ್ತಾನೆ. ಅಷ್ಟರಲ್ಲಿ ಹಾವೂ ಸಹ -ಆ ಅಂಗಡಿಯಲ್ಲಿ ಸಿಲುಕಿಕೊಂಡು ಆಚೆ ಬರಲಾರದೆ ಚಡಪಡಿಸುತ್ತಿರುತ್ತಿದೆ. ಕೆಲ ಸಮಯಾನಂತರ ಬೀಗವೂ ಹಾಕಿರುವುದನ್ನು ತಿಳಿದು ಆಚೆ ಹೋಗಲು ಸಾಧ್ಯವಾಗುವುದೇ ಇಲ್ಲವಲ್ಲ ಎಂಬ ಕಾರಣಕ್ಕೆ ಕೋಪಗೊಳ್ಳುತ್ತದೆ. ಕೋಪದ ತಾಪದಲ್ಲಿ ಅಲ್ಲೆ ಕಂಡ ಗರಗಸಕ್ಕೆ ಬಾಯಿ ಹಾಕಿ ಅದನ್ನು ಕಚ್ಚಲು ಯತ್ನಿಸುತ್ತದೆ. ಪರಿಣಾಮ ರಕ್ತ ಒಸರಲು ಪ್ರಾರಂಭವಾಗುತ್ತದೆ ಆಗಂತೂ ಇನ್ನಷ್ಟು ರೇಜಿಗೆ ಹೋಗಿ ಇನ್ನಷ್ಟು ಬಲವಾಗಿ ಗರಸವನ್ನು ಕಚ್ಚುತ್ತದೆ. ಮತ್ತಷ್ಟು ಹೆಚ್ಚಾದ ನೋವು, ಉರಿಗೆ ಇನ್ನೂ ಕೋಪ ಸಂಚಯಿಸಿಕೊಂಡು ಅದಕ್ಕೆ ಸುತ್ತಿಕೊಂಡು ತನ್ನ ಬಲ ಪ್ರದರ್ಶನ ಮಾಡಲು ಮುಂದಾಗುತ್ತದೆ ಕೋಪಕ್ಕೆ ಬುದ್ಧಿಕೊಟ್ಟ ಹಾವು ಕಡೆಗೆ ಸಾಯುತ್ತದೆ.

ಹಾವು ಇಲ್ಲಿ ಬೇರೆಯವರ ಕಾರಣದಿಂದ ನೋವು ಅನುಭವಿಸುವುದಿಲ್ಲ ಬದಲಾಗಿ ತನ್ನ ಆಕ್ರೋಶಕ್ಕೆ ತಾನೆ ಬಲಿಯಾಗುತ್ತದೆ. ಇದೊಂದು ನಿದರ್ಶನ. ಇದರಂತೆ ಮನುಷ್ಯನೂ ಕೋಪ ಮತ್ತು ಹಗೆಯನ್ನು ಸಾಧಿಸಹೊರಟರೆ ಮನಸ್ಸು ಇಬ್ಬಾಯ ಖಡ್ಗಕ್ಕೆ ಸಿಲುಕಿದಂತಾಗಿತ್ತದೆ ಕೋಪ ಮತ್ತು ಹಗೆ ಹಾಗೆಯೇ! ಹಗೆಯ ಆತ್ಯಂತಿಕ ಪರಿಣಾಮ ಉರಿ ಅರ್ಥಾತ್ ಅಂತ್ಯವೇ ಅಲ್ಲವೆ! ದೇಹ ಹಾಗು ಮನಸ್ಸು ಎರಡನ್ನೂ ಧ್ವಂಸ ಮಾಡುತ್ತದೆ. ಉರಿ ತಾನು ಹುಟ್ಟಿದ ಸ್ಥಳವನ್ನು ಹಾನಿ ಮಾಡುವಂತೆ ಕೋಪವೂ ವಿನಾಶಿ. ಕೋಪ ಎಂಬುದು ಅನರ್ಥ ಸಾಧನ ಎಂಬ ಮಾತು ಸರ್ವವಿದಿತ.

ಕೋಪ ಯಾರಿಗೆ ಬಾರದು? ಎಲ್ಲರಿಗೂ ಬರುವಂಥದ್ದೆ! ಜಿ.ಪಿ ರಾಜರತ್ನಂ ರವರ ಪದ್ಯದಲ್ಲಿ ಮಗುವಿನ ಕೋಪದ ಕುರಿತು ಸಣ್ಣ ಪಾಪ ಕೋಪಗೊಂಡು ತನ್ನ ಮೈಯ ತಾನೇ ಪರಚಿಕೊಳ್ವುದು ಎಂದು ಹೇಳಿದ್ದಾರಲ್ಲವೆ? ಅಂದರೆ ಅಬಾಲವೃದ್ಧರಾದಿಯಾಗಿ ಎಲ್ಲರೂ ಕೋಪಗೊಳ್ಳುತ್ತಾರೆ. ಈ ಕೋಪದ ಒಂದಂಶ ಮನಸ್ಸಿನಲ್ಲಿ ದೇಹದಲ್ಲಿ ಇದ್ದೇ ಇರುತ್ತದೆ. ಚಿತ್ತ ವಿಕಾರದ ಇನ್ನೊಂದು ರೂಪವೇ ಈ ಕೋಪ ಜೊತೆಗೆ ಆರೋಗ್ಯನಾಶಿಯೂ ಹೌದು! ಅಲ್ಲದೆ ಘನತೆಗೆ ಸಂಚಕಾರವನ್ನು ತಂದುಕೊಡುವುದು ಕೋಪದ ಇನ್ನೊಂದು ಮುಖ. ಬಸವಣ್ಣನವರು ತನುವಿನ ಕೋಪ ತನ್ನ ಹಿರಿತನದ ಕೇಡು ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಎಂದಿದ್ದಾರೆ. ಈ ಕೋಪವೇ ಹಾಗೆ! ಸಮಯ ಶಕ್ತಿ ಘನತೆಯನ್ನು ಮುಕ್ಕಾಗಿಸುತ್ತದೆ.

(ಲೇಖಕರುವಾಗ್ಮಿ, ಲೇಖಕಿ, ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net