

ಜಗತ್ತಿಗೆ ಪಾರ್ವತಿ-ಪರಮೇಶ್ವರರು ತಂದೆತಾಯಿ ಆಗಿದ್ದರೆ, ಮಕ್ಕಳಿಗೆ ತಂದೆತಾಯಿಯೇ ದೇವರು. ದೇವರನ್ನು ಪ್ರತ್ಯಕ್ಷವಾಗಿ ಕಂಡವರಿಲ್ಲ. ಆದರೆ, ಈ ಜಗತ್ತಿಗೆ ಮಕ್ಕಳನ್ನು ತಂದ ತಂದೆ-ತಾಯಿಗಿಂತ ಬೇರೆ ದೇವರಿಲ್ಲ. ನಮ್ಮ ನಮ್ಮ ಮನೆಯಲ್ಲಿರುವ ಪ್ರತ್ಯಕ್ಷ ದೇವರನ್ನು ತಿರಸ್ಕಾರ ಮಾಡದೆ ಗೌರವದಿಂದ, ಅನುಕಂಪದಿಂದ, ಪ್ರೀತಿಯಿಂದ ಕಂಡರೆ ಅದೇ ಮಕ್ಕಳು ಅಪ್ಪಅಮ್ಮನಿಗೆ ಮಾಡುವ ಉಪಕಾರ.
ಹೆತ್ತವರಿಗೆ ಮಕ್ಕಳು ಹೇಗಿದ್ದರೂ ಚೆಂದ. ಮಕ್ಕಳು ಮೈಮೇಲೆ ಒಂದು-ಎರಡು ಏನೇ ಮಾಡಿದರೂ ಅಪ್ಪ-ಅಮ್ಮ ಬೇಸರ ಪಟ್ಟುಕೊಳ್ಳುವುದಿಲ್ಲ. ಮಕ್ಕಳನ್ನು ಸ್ವಚ್ಛಗೊಳಿಸುವಾಗ ಅಸಹ್ಯಪಟ್ಟುಕೊಳ್ಳುವುದಿಲ್ಲ. ಆದರೆ, ವಯಸ್ಸಾದ ತಂದೆ-ತಾಯಿ ಸ್ವಲ್ಪ ಕೆಮ್ಮಿದರೆ, ಸೀನಿದರೆ ಮಕ್ಕಳು ಹತ್ತಿರ ಹೋಗುವುದಿಲ್ಲ. ಕಾಯಿಲೆ ಬಿದ್ದು ಹಾಸಿಗೆ ಹಿಡಿದರಂತೂ ಮುಗಿಯಿತು. ದುಡ್ಡು ಖರ್ಚಾದರೂ ಪರವಾಗಿಲ್ಲ, ನರ್ಸ್ಗಳನ್ನು, ಆರೈಕೆ ಮಾಡುವವರನ್ನು ನೇಮಿಸಿಕೊಳ್ಳುತ್ತೇವೆ.. ನಮಗೆ ಅದಕ್ಕೆಲ್ಲ ಟೈಮೆಲ್ಲಿ ಎನ್ನುವ ಮಕ್ಕಳೇ ಹೆಚ್ಚು.
ಮಕ್ಕಳು ತಂಟೆ ಮಾಡಿದರೂ, ತರಲೆ ಮಾಡಿದರೂ ಪಾಲಕರ ಕಣ್ಣಿಗೆ ಹಬ್ಬ. ಮಕ್ಕಳು ಎಷ್ಟು ಬೇಗ ಬೆಳೆದು ದೊಡ್ಡವರಾಗಿ ಬಿಡುತ್ತಾರೆ.. ಮಕ್ಕಳನ್ನು ಎತ್ತಿಕೊಳ್ಳುವ, ಮುದ್ದಾಡುವ ಸೊಗಸು ಇಷ್ಟು ಬೇಗ ಕಳೆದುಹೋಯಿತಲ್ಲ ಎಂಬ ಬೇಸರ ಅಪ್ಪ-ಅಮ್ಮನಿಗಿರುತ್ತದೆ. ಆದರೆ, ವಯಸ್ಸಾದ ಮೇಲೆ ಹೆಚ್ಚು ಕಾಲ ಇರಬಾರದು.. ಕಾಯಿಲೆ-ಕಸಾಲೆ ಬಂದರೆ ಅನುಭವಿಸುವವರಿಗೂ ಕಷ್ಟ, ನೋಡಿಕೊಳ್ಳುವವರಿಗೂ ಕಷ್ಟ ಎಂದು ಬೇಸರ ಪಟ್ಟುಕೊಳ್ಳುವ ಮಕ್ಕಳು-ಬಂಧುಗಳ ಸಂಖ್ಯೆ ಕಡಿಮೆಯೇನಿಲ್ಲ.
ಹಣವಿದ್ದರೆ ವೃದ್ಧಾಪ್ಯದಲ್ಲಿ ನೆಮ್ಮದಿ ಎನ್ನುವ ಹಾಗೆಯೂ ಇಲ್ಲ. ಶ್ರೀಮಂತರೆಲ್ಲರೂ ಮೊಮ್ಮಕ್ಕಳು, ಮರಿಮಕ್ಕಳ ಜತೆ ಕೂಡುಕುಟುಂಬದಲ್ಲಿ ಸುಖವಾಗಿರುತ್ತಾರೆ ಎನ್ನುವಂತೆಯೂ ಇಲ್ಲ. ಆಗರ್ಭ ಶ್ರೀಮಂತ ಕುಟುಂಬಗಳ ಮಕ್ಕಳೇ ಅಪ್ಪ-ಅಮ್ಮನನ್ನು ಬೀದಿಗೆ ತಳ್ಳಿದ ಹಲವಾರು ಉದಾಹರಣೆಗಳಿವೆ.
ಬರುವಾಗ ಒಂಟಿ, ಹೋಗುವಾಗ ಒಂಟಿ ಎಂಬುದು ಮಾತಿಗಷ್ಟೇ. ಆದರೆ, ಮನುಷ್ಯ ಒಂಟಿಯಾಗಿ ಹುಟ್ಟಿಸಾಯಲು ಸೃಷ್ಟಿಯಾದವನಲ್ಲ. ಆತ ಸಂಘಜೀವಿ. ಭಾರತೀಯ ಕುಟುಂಬ ವ್ಯವಸ್ಥೆಯ ಮೂಲಾಧಾರವೇ ಅದು. ಬಾಲ್ಯದಲ್ಲಿ ತಂದೆತಾಯಿ, ಬಳಿಕ ಪತಿ/ಪತ್ನಿ, ವೃದ್ಧಾಪ್ಯದಲ್ಲಿ ಮಕ್ಕಳ ಅವಲಂಬನೆ ನಮ್ಮ ಸಮಾಜದ ಪದ್ಧತಿ. ಆದರೆ, ಆ ದೇಶ ಈ ದೇಶವೆನ್ನದೆ ಜಗತ್ತಿನ ಯಾವ ಮೂಲೆಗೆ ಹೋದರೂ ವೃದ್ಧಾಪ್ಯವೆನ್ನುವುದು ಯಾತನೆ. ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಸಾಮಾಜಿಕ ಸೌಲಭ್ಯಗಳಲ್ಲಿ ವ್ಯತ್ಯಾಸ ಇರಬಹುದಾದರೂ, ವೃದ್ಧ ತಂದೆತಾಯಿಗಳ ಮಾನಸಿಕ ವೇದನೆ ಜಾಗತಿಕ.
ಹಿಂದಿನ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಮನೆಯಲ್ಲಿ ಹತ್ತಾರು ಜನರಿದ್ದಾಗ ವಯಸ್ಸಾದವರನ್ನು ನೋಡಿಕೊಳ್ಳುವ ಒಂದೆರಡು ಮನಸ್ಸುಗಳಾದರೂ ಇರುತ್ತಿದ್ದವು. ಆದರೆ, ಈಗ ಪ್ರತಿಯೊಬ್ಬರೂ ಅವರವರ ದುಡಿಮೆಯಲ್ಲಿ, ಕಾಯಕದಲ್ಲಿ ಬಿಜಿಯೋಬಿಜಿ. ಯಾರ ಬಳಿಯೂ ವಯಸ್ಸಾದ ಅಪ್ಪ-ಅಮ್ಮನಿಗಾಗಿ ಹತ್ತು ನಿಮಿಷ ಸಮಯವಿಲ್ಲ. ಹೆಂಡತಿ ತಲೆನೋವೆಂದರೆ ಜಗತ್ತೇ ತಲೆಯ ಮೇಲೆ ಬಿದ್ದಂತೆ ಹೌಹಾರುವ ಕುಲಪುತ್ರರಿಗೆ ಅಮ್ಮನ ಜತೆ ಬ್ಯಾಂಕ್ಗೋ, ಅಂಚೆ ಕಚೇರಿಗೋ, ಕ್ಲಿನಿಕ್ಗೋ ತೆರಳಲು ಸಮಯವಿಲ್ಲ. ಅಯ್ಯೋ, ‘ಇದಕ್ಕೆಲ್ಲ ನನ್ನನ್ನು ಕರೀಬೇಡ, ವಿಪರೀತ ಕೆಲಸ, ಇಪ್ಪತೆôದು ತಲೆಬಿಸಿ.. ಇಷ್ಟರ ಮಧ್ಯೆ ನಿನ್ನ ರಗಳೆ ಬೇರೆ’ ಎಂಬ ಬೈಗುಳ...
ಮಕ್ಕಳು ಬುದ್ಧಿವಂತರಾಗಲಿ ಎಂದು ಅಪ್ಪ-ಅಮ್ಮ ಪಡುವ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗ ಮಾಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಅಗತ್ಯ ಸೌಕರ್ಯ ಒದಗಿಸುವಲ್ಲಿ ಕಷ್ಟ ಪಟ್ಟಿರುತ್ತಾರೆ. ಮಕ್ಕಳಿಗೆ ಲೋಕಜ್ಞಾನವನ್ನು, ಸಮಾಜದಲ್ಲಿ ಬದುಕುವ ರೀತಿ-ರಿವಾಜುಗಳನ್ನು ತಾಳ್ಮೆಯಿಂದ ಹೇಳಿಕೊಟ್ಟಿರುತ್ತಾರೆ. ಆದರೆ, ಅದೇ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಜನರೇಷನ್ ಗ್ಯಾಪ್ ಅಡ್ಡ ಬರುತ್ತದೆ. ತಮ್ಮ ತಿಳುವಳಿಕೆ ಆಧುನಿಕ, ಅಪ್ಪ-ಅಮ್ಮಹಳೆಯ ಕಾಲದವರೆಂಬ ತಿರಸ್ಕಾರದ ಭಾವನೆ ಕೆಲವು ಮಕ್ಕಳಲ್ಲಿ ಬಂದುಬಿಡುತ್ತದೆ. ತಾವು ಬಾಲ್ಯದಲ್ಲಿ ಪೆದ್ದುಪೆದ್ದಾಗಿ ಮಾತನಾಡಿದಾಗ ಮುದ್ದು ಮಾಡಿದ್ದ ಅಪ್ಪ- ಅಮ್ಮನಿಗೇ ‘ನಿನಗೇನೂ ಗೊತ್ತಾಗಲ್ಲ ಸುಮ್ನಿರು’ ಎಂಬ ಮೂದಲಿಕೆ ಮಕ್ಕಳ ಬಾಯಿಂದ ನಿತ್ಯ ಕೇಳುವಂತಾಗಿರುತ್ತದೆ.
ಮಕ್ಕಳು ಏನೇ ಮಾಡಿದರೂ ಸಹಿಸಿಕೊಳ್ಳುವ ತಂದೆ-ತಾಯಿ ತಾವು ರೂಢಿಸಿಕೊಂಡ ತಾಳ್ಮೆಯನ್ನು ಮಕ್ಕಳಿಗೆ ಕಲಿಸಿರುವುದಿಲ್ಲ ಎನ್ನುವುದೊಂದು ಸಾಮಾಜಿಕ ದುರಂತ. ವಯಸ್ಸಾಗುತ್ತ ಆಗುತ್ತ ಕಣ್ಣು ಮಂಜಾಗಿರುತ್ತದೆ, ಕಿವಿ ಮಂದವಾಗಿರುತ್ತದೆ. ಮೆದುಳು ದುರ್ಬಲವಾಗಿರುತ್ತದೆ. ಶೀಘ್ರ ಸ್ಪಂದನೆ ಇಳಿವಯಸ್ಸಿನಲ್ಲಿ ಸಾಧ್ಯವಾಗುವುದಿಲ್ಲ. ಯಾವುದೇ ವಸ್ತು ಒಂದೇ ನೋಟಕ್ಕೆ ಕಾಣುವುದಿಲ್ಲ. ಯಾವುದೇ ವಿಷಯ ಒಮ್ಮೆ ಕೇಳಿಸಿಕೊಂಡರೆ ಅರ್ಥವಾಗುವುದಿಲ್ಲ. ಮರೆವು ಕಾಯಿಲೆಯಾಗಿ ಕಾಡುತ್ತದೆ. ಆದರೆ, ವಯೋವೃದ್ಧರ ದೈಹಿಕ- ಮಾನಸಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಮಾಧಾನ ಪ್ರವೃತ್ತಿ ಮಕ್ಕಳಿಗಿರುವುದಿಲ್ಲ. ಒಮ್ಮೆ ಹೇಳಿದ್ದು ಅರ್ಥವಾಗದಿದ್ದರೆ, ಎರಡನೇ ಬಾರಿ ಅದೇನೆಂದು ಕೇಳಿದರೆ ಕೆಂಡದಂಥ ಕೋಪ ಬಂದುಬಿಡುತ್ತದೆ. ಗಂಟಲು ಸಿಡಿಲಾಗುತ್ತದೆ..
ಎಲ್ಲರ ಮನೆ ಸಮಸ್ಯೆಗಳು ಒಂದೇ ರೀತಿ ಇರುವುದಿಲ್ಲ. ಎಲ್ಲ ವೃದ್ಧರ ಸಮಸ್ಯೆಗಳೂ ಒಂದೇ ಬಗೆ ಇರುವುದಿಲ್ಲ. ಎಲ್ಲವೂ ಇರುವಾಗ ಕೆಲವೊಮ್ಮೆ ಸ್ವಾಭಿಮಾನ ಅಡ್ಡ ಬರುತ್ತದೆ. ಕೆಲವರು ಸ್ವಯಂಕೃತಾಪರಾಧದಿಂದ ಮಕ್ಕಳನ್ನು ದೂರ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಆಸ್ತಿ ಪಾಲು ಮಾಡುವ ವಿಚಾರ ತಂದೆ-ತಾಯಿ- ಮಕ್ಕಳ ನಡುವೆ ಕಂದಕ ತಂದೊಡ್ಡುತ್ತದೆ. ಹೆಚ್ಚು ಮಕ್ಕಳಿರುವಾಗ ಒಬ್ಬ ಮಗ-ಮಗಳ ಕುರಿತ ಅತಿಯಾದ ವ್ಯಾಮೋಹ ಅಥವಾ ಕೆಲವರ ಬಗ್ಗೆ ಅಪನಂಬಿಕೆ ಮಕ್ಕಳನ್ನು ದೂರ ಮಾಡುತ್ತದೆ.
ಗೌರವ, ಘನತೆ, ಶ್ರೀಮಂತಿಕೆಯಿಂದ ಜೀವನ ಸಾಗಿಸಿದ ಆ ವ್ಯಕ್ತಿಗೆ ವೃದ್ಧಾಪ್ಯ ಆವರಿಸಿದಂತೆ ಮಕ್ಕಳ ಮೇಲೂ ಅಪನಂಬಿಕೆ. ತಾನು ಬದುಕಿರುವವರೆಗೂ ಆಸ್ತಿ ಭಾಗ ಮಾಡುವುದಿಲ್ಲ ಎಂಬ ಹಟ. ಇರುವುದೆಲ್ಲವೂ ಸ್ವಯಾರ್ಜಿತ. ಕೊಡುವುದಾದರೂ ನನ್ನಿಷ್ಟ. ಹೆಚ್ಚಿನ ಭಾಗ ಚಿಕ್ಕ ಮಗನಿಗೆ. ಕೊಡುವಷ್ಟನ್ನು ತೆಗೆದುಕೋ ಎಂದು ದೊಡ್ಡ ಮಗನೊಂದಿಗೆ ಜಗಳ. ಸ್ವಾಭಿಮಾನಿ ಹಿರಿಯ ಮಗ ನಿನ್ನ ಆಸ್ತಿಯೂ ಬೇಡ, ಸಹವಾಸವೂ ಬೇಡ ಎಂದು ತನ್ನ ದುಡಿಮೆ ನಂಬಿಕೊಂಡು ದೂರ ಸರಿದ. ಜತೆಗುಳಿದ ಚಿಕ್ಕಮಗನಿಗೆ ಸ್ವಂತ ದುಡಿಮೆಯೂ ಇಲ್ಲ. ಅಪ್ಪನನ್ನು ನೋಡಿಕೊಳ್ಳುವ ಅಕ್ಕರೆಯೂ ಇಲ್ಲ. ಆಸ್ತಿ ಕರಗಿಸಿದ್ದೊಂದೇ ಆತನ ಸಾಧನೆ. ಈ ಬಗೆಯ ಸ್ವಯಂಕೃತಾಪರಾಧದಿಂದ ವೃದ್ಧಾಪ್ಯ ನರಕವಾಗಿಸಿಕೊಂಡವರ ಸಂಖ್ಯೆಯೂ ಕಡಿಮೆ ಏನಿಲ್ಲ..
ದೊಡ್ಡ ಮಗ ಅಮೆರಿಕದಲ್ಲಿ ದುಡಿಯುತ್ತಿದ್ದಾನೆ, ಇನ್ನೊಬ್ಬ ದೊಡ್ಡ ಕಂಪೆನಿ ಕಟ್ಟಿದ್ದಾನೆ. ಜತೆಯಲ್ಲಿರುವ ಮೂರನೇ ಮಗನಿಗೆ ಸಣ್ಣ ಕೆಲಸ, ಸಣ್ಣ ಸಂಬಳ ಎಂದು ಆ ತಂದೆತಾಯಿಗೆ ತಾತ್ಸಾರ. ಹಾಗೆಂದು ಅಮೆರಿಕದಲ್ಲಿರುವ ಮಗನಾಗಲೀ, ಕಂಪೆನಿ ಕಟ್ಟಿದ ಮಗನಾಗಲೀ ಇವರನ್ನು ಜತೆಯಲ್ಲಿದ್ದು ನೋಡಿಕೊಳ್ಳುತ್ತಿಲ್ಲ. ವರ್ಷಕ್ಕೊಮ್ಮೆ ಬಂದು ದರ್ಪ, ದೌಲತ್ತು ಪ್ರದರ್ಶಿಸಿ ಹೋಗುವ ಅವರಿಬ್ಬರು ಒಳ್ಳೆಯವರು. ಜತೆಯಲ್ಲಿದ್ದು ಬೇಕು-ಬೇಡ ವಿಚಾರಿಸಿಕೊಳ್ಳುವ ಮಗ ಕೆಲಸಕ್ಕೆ ಬಾರದವನು. ಇನ್ನು ಮಗಳ ಬಗ್ಗೆ ಇರುವ ಮಮಕಾರ ಸೊಸೆಯ ಬಗ್ಗೆ ಇಲ್ಲ. ಕೈಲಾಗದಿದ್ದರೂ, ತಾನೇ ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ತಿನ್ನುವ ಹಟ. ನೆರೆ-ಹೊರೆಯವರ ಜತೆ, ನೆಂಟರಿಷ್ಟರ ಜತೆ ಮಕ್ಕಳು ಸರಿಯಿಲ್ಲ ಎಂದು ದೂರುವ ಚಾಳಿ. ಜತೆಯಲ್ಲಿದ್ದರೆ ತಾನೆ ಇಂಥ ರಗಳೆ, ದೂರ ಸರಿದು ಬಿಡೋಣ ಎಂದು ಮಕ್ಕಳು ಪ್ರತ್ಯೇಕ ಹೋದರೆ, ತುರ್ತು ಸಂದರ್ಭಗಳಲ್ಲಿ ಗಮನಿಸುವುದಕ್ಕೂ ಯಾರೂ ಗತಿಯಿಲ್ಲದೆ ಪಾಡು ಅನುಭವಿಸುವವರೂ ಇದೇ ವೃದ್ಧರೇ.
ಐದು ಕೈಬೆರಳುಗಳೇ ಒಂದು ರೀತಿ ಇರದಿರುವಾಗ ಮನುಷ್ಯ ಸ್ವಭಾವಗಳು ಒಂದೇ ರೀತಿ ಇರಲು ಹೇಗೆ ಸಾಧ್ಯ? ಒಂದೇ ಮನೆಯಲ್ಲಿದ್ದರೂ ಮನಸ್ಸುಗಳು ಒಂದೇ ರೀತಿ ಇರಬೇಕೆಂದೇನೂ ಇಲ್ಲ. ಪ್ರತಿಯೊಬ್ಬರೂ ಯೋಚಿಸುವ ರೀತಿ, ಅರ್ಥೈಸುವ ರೀತಿ ಭಿನ್ನವಾಗಿರುವಾಗ ವಯಸ್ಸು, ಅಂತಸ್ತು, ನಿತ್ಯಬದುಕಿನ ಒತ್ತಡಗಳು, ಕೌಟುಂಬಿಕ ಪರಿಸ್ಥಿತಿಗಳು ಮನುಷ್ಯನ ಮಾತು, ಸ್ವಭಾವ, ಜೀವನದ ಮೇಲೆ ಪರಿಣಾಮ ಬೀರಿಯೇಬೀರುತ್ತವೆ. ಹಾಗಾಗಿ ಒಂದೊಂದು ಮನೆಯ ಕಥೆ ಒಂದೊಂದು ರೀತಿ...
ಮಾನವೀಯತೆ ಎನ್ನುವುದು ಮನೆಯಿಂದಲೇ ಆರಂಭವಾಗಬೇಕು. ಅನೇಕ ಬಾರಿ, ಸಮಾಜದಲ್ಲಿ ಗಣ್ಯರು, ಉದಾರಿಗಳು ಎನಿಸಿಕೊಂಡವರು ಮನೆಯಲ್ಲಿ ಹಿರಿಯ ಜೀವಗಳ ವಿಚಾರದಲ್ಲಿ ಕ್ರೂರಿಗಳಾಗಿರುತ್ತಾರೆ. ಇಂಥ ಮಕ್ಕಳು ‘ಯಾವುದೇ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಅಪ್ಪ-ಅಮ್ಮನ ಮೇಲೆ ಕೋಪಗೊಳ್ಳುವುದಿಲ್ಲ’ ಎಂಬ ಸಂಕಲ್ಪ ಮಾಡಿಬಿಟ್ಟರೆ, ಹಿರಿಯ ಜೀವಗಳ ಪಾಲಿಗೆ ಅಷ್ಟರ ಮಟ್ಟಿಗೆ ನೆಮ್ಮದಿ. ಕೆಲವೊಮ್ಮೆ ತಂದೆ-ತಾಯಿಯದೇ ತಪ್ಪಿರುತ್ತದೆ. ಮಕ್ಕಳಿಗೆ ಶಾಪ ಹಾಕುತ್ತಿರುತ್ತಾರೆ. ಆದರೆ, ಒಂದಂತೂ ನಿಜ. ಯಾವ ತಂದೆತಾಯಿಯೂ ಮಕ್ಕಳಿಗೆ ಕೆಡುಕು ಬಯಸುವುದಿಲ್ಲ. ಒಂದು ವೇಳೆ ನಿಜವಾಗಿ ಶಾಪ ಹಾಕಿದರೂ ಅಪ್ಪಅಮ್ಮನ ಶಾಪವೂ ವರ ಎಂಬ ಭಾವನೆ ಮಕ್ಕಳಲ್ಲಿದ್ದರೆ ಅನೇಕ ಸಮಸ್ಯೆಗಳು ಪರಿಹಾರವಾಗಿಬಿಡುತ್ತವೆ.
ಹಳ್ಳಿಗಳಿಂದು ವೃದ್ಧಾಶ್ರಮಗಳಂತಾಗಿವೆ. ವಿದ್ಯಾಭ್ಯಾಸ ಮಾಡಿದ ಮಕ್ಕಳು ಬೆಂಗಳೂರು, ವಿದೇಶಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಊರಿನಲ್ಲಿ ವಯಸ್ಸಾದ ಅಪ್ಪ ಅಮ್ಮ ಮಾತ್ರ. ಅವರ ಜತೆಗೆ ಒಂದೆರಡು ದನಕರು, ಒಂದಷ್ಟು ಜಮೀನು.. ಮಕ್ಕಳು ಎಲ್ಲೋ ಸುಖವಾಗಿದ್ದಾರೆ ಎಂಬ ಭರವಸೆಯಿಂದ ಈ ಅಪ್ಪಅಮ್ಮ ತಮ್ಮ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲೂ ಅಷ್ಟೇ. ಮಕ್ಕಳು ವಿದೇಶ ಸೇರಿಕೊಂಡ ಮೇಲೆ, ಜೀವಮಾನದ ಸಂಪಾದನೆಯನ್ನೆಲ್ಲ ಸುರಿದು ಕಟ್ಟಿದ ಕನಸಿನ ಮನೆಯಲ್ಲಿ ಮುದುಕ ದಂಪತಿ ಮಾತ್ರ. ‘ಅಪ್ಪನಿಗೆ ಅಮೆರಿಕ ಅಡ್ಜೆಸ್ಟ್ ಆಗಲ್ಲ, ಹೊತ್ತು ಕಳೆಯುವುದು ಕಷ್ಟ. ಅವರು ಬೆಂಗಳೂರು ಬಿಟ್ಟು ಬರುವುದಿಲ್ಲ’ ಎಂಬ ನೆಪ. ಕೆಲವು ಮಕ್ಕಳು ಅಪ್ಪ-ಅಮ್ಮನನ್ನು ಹೈಟೆಕ್ ವೃದ್ಧಾಶ್ರಮಗಳಿಗೆ ಸೇರಿಸಿದ್ದಾರೆ. ದುಡ್ಡಿನಿಂದ ಆಳು-ಕಾಳು- ಇಪ್ಪತ್ನಾಲ್ಕು ಗಂಟೆ ಶುಶ್ರೂಷೆ ಪಡೆದುಕೊಳ್ಳಬಹುದು. ಆದರೆ, ಮಕ್ಕಳ ಪ್ರೀತಿ ಖರೀದಿಸಲು ಸಾಧ್ಯವೇ? ಹಣ ಪಡೆದು ಮಕ್ಕಳಂತೆ ಸೇವೆ ಮಾಡುವುದಕ್ಕೂ, ಮಕ್ಕಳೇ ಸೇವೆ ಮಾಡುವುದಕ್ಕೂ ವ್ಯತ್ಯಾಸವಿಲ್ಲವೇ?
ಹಿರಿಯ ನಾಗರಿಕರ ಸಮಸ್ಯೆಗಳಿಗೆ ನಾನಾಮುಖ. ಕುಡಿಯಲು ಹಣ ಕೊಡಲಿಲ್ಲ ಎಂದು ಅಮ್ಮನನ್ನೇ ಕೊಲೆ ಮಾಡುವ ಮಕ್ಕಳು, ಆಸ್ತಿ ಭಾಗ ಮಾಡಲಿಲ್ಲ ಎಂದು ತಂದೆಯನ್ನು ಹತ್ಯೆಗೈದ ಮಕ್ಕಳು, ಇದಲ್ಲದೆ, ನಾನಾ ಕಾರಣಗಳಿಗೆ ವೃದ್ಧರ ಮೇಲೆ ಹಲ್ಲೆ, ಸಂಬಂಧಿಕರಿಂದ, ಅಪರಿಚಿತರಿಂದ ಒಂಟಿ ವೃದ್ಧರ ಹತ್ಯೆ, ಹಣಕಾಸು ವಂಚನೆ, ಫೋರ್ಜರಿ, ಕಳ್ಳತನ, ಆಸ್ತಿ ವಂಚನೆ.. ಒಂದೇ ಎರಡೇ? ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್ಸಿಆರ್ಬಿ) ಇತ್ತೀಚಿನ ಮಾಹಿತಿ ಪ್ರಕಾರ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2021ರಲ್ಲಿ 26110ರಷ್ಟಿದ್ದ ಪ್ರಕರಣಗಳ ಸಂಖ್ಯೆ 2022ರಲ್ಲಿ 28545ಕ್ಕೇರಿದೆ. ಇದು ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಭೀರ ಪ್ರಕರಣಗಳು. ಬೆಳಕಿಗೆ ಬಾರದ, ಮನೆಮಟ್ಟಿಗೆ ನಡೆದುಹೋಗುವ ದೌರ್ಜನ್ಯ ಪ್ರಕರಣಗಳು ಲೆಕ್ಕವಿಲ್ಲದಷ್ಟು.
ಎಷ್ಟೋ ಮಕ್ಕಳು ಅಪ್ಪಅಮ್ಮನ ಮುಖವನ್ನೇ ಕಂಡಿರುವುದಿಲ್ಲ. ಹುಟ್ಟುವಾಗಲೇ ಅನಾಥರಾಗಿರುತ್ತಾರೆ. ಅನೇಕರು ಸಣ್ಣ ವಯಸ್ಸಿನಲ್ಲೇ ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡಿರುತ್ತಾರೆ. ಶಾಲೆಗೆ ಹೋಗುವ ವಯಸ್ಸಿನಲ್ಲಿ ದಿಢೀರನೆ ಅಪಘಾತದಲ್ಲೋ, ಅಪರಾಧದಲ್ಲೋ, ಅನಾರೋಗ್ಯಕ್ಕೋ ಅಪ್ಪ-ಅಮ್ಮನನ್ನು ಕಳೆದುಕೊಂಡು ಬೀದಿಗೆ ಬೀಳುವ ಮಕ್ಕಳ ಪಾಡು ಯಾರಿಗೂ ಬೇಡ. ಇಂಥ ಮಕ್ಕಳಿಗೆ ಹೋಲಿಸಿದರೆ, ಕೆಲವು ಪುಣ್ಯವಂತರು ತಾವೇ ನಿವೃತ್ತಿಯ ವಯಸ್ಸಿಗೆ ಹತ್ತಿರವಾದರೂ, ಮನೆಯಲ್ಲಿ ಅಪ್ಪ-ಅಮ್ಮನ ಪ್ರೀತಿ ಹೊಂದಿರುತ್ತಾರೆ. ಅಪ್ಪ-ಅಮ್ಮನ ಬೆಲೆ ಜತೆಯಲ್ಲಿರುವವರಿಗಿಂತ ಕಳೆದುಕೊಂಡವರಿಗೆ ಹೆಚ್ಚು ಗೊತ್ತಿರುತ್ತದೆ. ಹಾಗಾಗಿ ಇರುವಷ್ಟು ಕಾಲ ಅಪ್ಪ-ಅಮ್ಮನ ಕಣ್ಣಲ್ಲಿ ನೀರು ಹಾಕಿಸದಂತೆ, ಅವರ ಕೊನೆಯ ದಿನಗಳು ನಿರುಮ್ಮಳವಾಗಿರುವಂತೆ ನೋಡಿಕೊಳ್ಳುವುದು ಮಕ್ಕಳ ಕೈಯಲ್ಲಿರುತ್ತದೆ.
ಮಹಾಕವಿ ಕಾಳಿದಾಸ ಹೇಳುವಂತೆ ಜಗತ್ತಿಗೆ ಪಾರ್ವತಿ-ಪರಮೇಶ್ವರರು ತಂದೆತಾಯಿ ಆಗಿದ್ದರೆ, ಮಕ್ಕಳಿಗೆ ತಂದೆತಾಯಿಯೇ ದೇವರು. ದೇವರನ್ನು ಪ್ರತ್ಯಕ್ಷವಾಗಿ ಕಂಡವರಿಲ್ಲ. ಆದರೆ, ಈ ಜಗತ್ತಿಗೆ ಮಕ್ಕಳನ್ನು ತಂದ ತಂದೆ-ತಾಯಿಗಿಂತ ಬೇರೆ ದೇವರಿಲ್ಲ. ನಮ್ಮ ನಮ್ಮ ಮನೆಯಲ್ಲಿರುವ ಪ್ರತ್ಯಕ್ಷ ದೇವರನ್ನು ತಿರಸ್ಕಾರ ಮಾಡದೆ ಗೌರವದಿಂದ, ಅನುಕಂಪದಿಂದ, ಪ್ರೀತಿಯಿಂದ ಕಂಡರೆ ಅದೇ ಮಕ್ಕಳು ಅಪ್ಪಅಮ್ಮನಿಗೆ ಮಾಡುವ ಉಪಕಾರ.
ಜಗತ್ತಿನಲ್ಲಿ ಎಲ್ಲ ಸಂಬಂಧಗಳನ್ನು ಬದಲಾಯಿಸಬಹುದು. ಒಂದು ಕಳೆದರೆ, ಹೊಸದನ್ನು ಜೋಡಿಸಬಹುದು. ಆದರೆ, ಅಪ್ಪ-ಅಮ್ಮ ಹಾಗಲ್ಲ. ತಂದೆ-ತಾಯಿಗೆ ಹಲವು ಮಕ್ಕಳಿರಬಹುದು. ಆದರೆ, ಮಕ್ಕಳಿಗೆ ಅಪ್ಪ-ಅಮ್ಮ ದೇವರ ವರ. ಜತೆಯಲ್ಲಿದ್ದಾಗ ತಿರಸ್ಕಾರ ಮಾಡಿ, ಕಳೆದುಕೊಂಡ ಮೇಲೆ ಕೊರಗುವುದರಿಂದ ಪ್ರಯೋಜನವಿಲ್ಲ. ಮೂರು ದಿನದ ಬದುಕಿನಲ್ಲಿ ಕಣ್ಣಿಗೆ ಕಾಣುವ ದೇವರ ಸೇವೆ ಮಾಡುವುದನ್ನು ‘ಕರ್ಮ’ ಎಂದು ಭಾವಿಸದೆ ‘ಕರ್ತವ್ಯ’ ಎಂದು ಪ್ರೀತಿಸಿದರೆ ಬದುಕಿಗೊಂದು ಅರ್ಥ..
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)