ದಾನ ಪತ್ರ ನೋಂದಣಿ ಆಗಿರಲೇಬೇಕು: ನ್ಯಾಯದೇವತೆ

Document
Published on
ನಮ್ಮ ತಾಯಿಗೆ ಅವರ ತಾಯಿ ಒಂದು ಆಸ್ತಿಯನ್ನು ದಾನ ಪತ್ರದ ಮೂಲಕ ಕೊಟ್ಟಿದ್ದಾರೆ. ಅದರಲ್ಲಿ ನಾವೇ ವಾಸ ಇದ್ದೇವೆ. ಆದರೆ ಆ ಪತ್ರ ರಿಜಿಸ್ಟರ್ ಆಗಿಲ್ಲ. ಈಗ ನಮ್ಮ ಅಜ್ಜಿ ತೀರಿಕೊಂಡಿದ್ದಾರೆ. ನಮ್ಮ ತಾಯಿಯೂ ಇಲ್ಲ, ನಾವು ಖಾತೆ ಮಾಡಿಕೊಡಿ ಎಂದು ಕೇಳಿದರೆ, ಅಧಿಕಾರಿಗಳು ಒಪ್ಪುತ್ತಿಲ್ಲ. ಅಜ್ಜಿಯ ಹೆಸರಿನಲ್ಲಿಯೇ ಇವತ್ತಿಗೂ ಖಾತೆ ಇದೆ. ನಮ್ಮ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಅವರು ತಮಗೂ ಅದರಲ್ಲಿ ಭಾಗ ಇದೆ ಎನ್ನುತ್ತಿದ್ದಾರೆ. ಈಗ ನಾವು ಆಸ್ತಿ ಉಳಿಸಿಕೊಳ್ಳಲು ಏನು ಮಾಡಬೇಕು?

ನಿಮ್ಮ ಅಜ್ಜಿಯಿಂದ ನೋಂದಣಿ ಆಗದೇ ಇರುವ ದಾನ ಪತ್ರದ ಮೂಲಕ ನಿಮ್ಮ ತಾಯಿಗೇ ಯಾವ ಹಕ್ಕೂ ಬರುವುದಿಲ್ಲ. ಇನ್ನು ನಿಮಗೆ ಯಾವ ಹಕ್ಕೂ ಬರಲು ಸಾಧ್ಯವಿಲ್ಲ. ಆದರೆ, ನಿಮ್ಮ ಅಜ್ಜಿಯ ಎಲ್ಲ ಮಕ್ಕಳಿಗೂ ತಲಾ ಮೂರನೇ ಒಂದು ಭಾಗ ಹಕ್ಕು ಇರುತ್ತದೆ. ನಿಮ್ಮ ತಾಯಿಯ ಮೂರನೇ ಒಂದು ಭಾಗ ನಿಮಗೆ (ನಿಮ್ಮ ತಾಯಿಯ ಮಕ್ಕಳಿಗೆ ಮತ್ತು ನಿಮ್ಮ ತಂದೆ ಇದ್ದರೆ ಅವರಿಗೂ) ಸೇರುತ್ತದೆ. ನಿಮಗೆ ಮಾತ್ರ ಆಸ್ತಿ ಉಳಿಯುವ ಸಾಧ್ಯತೆ ಇಲ್ಲ. ನೂರು ರೂಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿಯ ದಾನ ಪತ್ರ ರಿಜಿಸ್ಟರ್ ಆಗಿದ್ದರೆ ಮಾತ್ರ ಹಕ್ಕು ಬರುತ್ತದೆ.

  • ಹೆಂಡತಿ ವಿಚ್ಛೇದನ ಕೇಳಿ ಕೇಸು ಹಾಕಿದರೆ ಗಂಡ , ತನಗೆ ಹೆಂಡತಿ ಬೇಕು ಎಂದು ಹಾಕಿರುವ ಕೇಸು ವಜಾ ಆಗುತ್ತದೆಯೇ?

ನಿಮ್ಮ ಪತ್ನಿ ಹಾಕಿರುವ ಪ್ರಕರಣದಲ್ಲಿ ನೀವು ತಕರಾರನ್ನು ಹಾಕಿ., ಅದರಲ್ಲಿ, ನಿಮಗೆ ಪತ್ನಿ ಬೇಕು ಎನ್ನುವ ವಿಷಯವನ್ನು ತಿಳಿಸಿ. ಎರಡೂ ಪ್ರಕರಣಗಳನ್ನು ಒಟ್ಟಾಗಿ ನಡೆಸುವಂತೆ ನ್ಯಾಯಾಲಯದಲ್ಲಿ ನೀವು ಕೇಳಿಕೊಳ್ಳಬಹುದು. ಆ ನಂತರ ಎಲ್ಲ ಸಂದರ್ಭಗಳನ್ನೂ ನ್ಯಾಯಾಲಯ ಗಮನಿಸಿ, ನಿಮ್ಮ ಪತ್ನಿಗೆ ವಿಚ್ಛೇದನದ ಆದೇಶವನ್ನು ಕೊಡಬಹುದು ಅಥವಾ ನಿರಾಕರಿಸಬಹುದು. ಹಾಗೆಯೇ ನಿಮ್ಮ ಪ್ರಕರಣದಲ್ಲಿ ನಿಮ್ಮ ಪರವಾಗಿ ನ್ಯಾಯಾಲಯ ಆದೇಶ ಮಾಡಬಹುದು ಅಥವಾ ವಜಾಗೊಳಿಸಬಹುದು. ವಿಚ್ಛೇದನದ ಪ್ರಕರಣ ಹಾಕಿದ್ದಾರೆ ಎನ್ನುವ ಏಕೈಕ ಕಾರಣದಿಂದ ಹೆಂಡತಿ ಬೇಕು ಎಂದು ನೀವು ಹಾಕಿರುವ ಪ್ರಕರಣ ವಜಾ ಆಗುವುದಿಲ್ಲ. ಯಾವುದಕ್ಕೂ ಒಮ್ಮೆ ಮಧ್ಯಸ್ಥಿಕೆಯ ಮೂಲಕ ನೀವಿಬ್ಬರೂ ಒಂದು ತೀರ್ವನಕ್ಕೆ ಬರಲು ಸಾಧ್ಯವಿದೆಯೇ ಎಂದು ಪ್ರಯತ್ನ ಮಾಡಿ ನೋಡಿ.

(ಲೇಖಕಿ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಹಿರಿಯ ಮಧ್ಯಸ್ಥಿಕೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net