

ನ್ಯಾಯಾಲಯದಲ್ಲಿ ತಡೆ ಆಜ್ಞೆ ಇರುವಾಗ ಆಸ್ತಿಗಳನ್ನು ಮಾರಬಹುದೇ? ನ್ಯಾಯಾಲಯದಲ್ಲಿ ಆಸ್ತಿಗಳನ್ನು ಮಾರಾಟ ಮಾಡಬಾರದೆಂದು ಆದೇಶವಾಗಿದ್ದರೂ ನಮ್ಮ ಅಣ್ಣಂದಿರು ಆಸ್ತಿ ಮಾರಾಟ ಮಾಡಲು ವ್ಯವಹಾರ ಮಾಡುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆಯೇ ಇಲ್ಲವೇ? ನಮಗೆ ಏನೂ ಮಾರ್ಗವೇ ಇಲ್ಲವೇ?
ಉತ್ತರ: ನ್ಯಾಯಾಲಯದಲ್ಲಿ ತಡೆ ಆಜ್ಞೆ ಆಗಿದ್ದು, ಆ ತಡೆ ಆಜ್ಞೆ ಜಾರಿಯಲ್ಲಿ ಇರುವಾಗ, ಯಾರಿಗೂ ಅದನ್ನು ಉಲ್ಲಂಘಿಸುವ ಹಕ್ಕು ಇರುವುದಿಲ್ಲ. ನ್ಯಾಯಾಲಯದ ಆದೇಶ ಏನಾಗಿದೆ ಎನ್ನುವುದನ್ನು ಮೊದಲಿಗೆ ನೋಡಿ. ಆ ಆಜ್ಞೆ ಎದುರುದಾರರ ತಿಳುವಳಿಕೆಗೆ ಬಂದಿದೆಯೇ ಎನ್ನುವುದನ್ನೂ ಗಮನಿಸಿ. ಎದುರುದಾರರಿಗೆ ನ್ಯಾಯಾಲಯದ ಆದೇಶ ತಿಳಿದ ನಂತರ, ಅವರು ಮಾರಾಟ ಮಾಡಿದರೆ ಆಗ ನ್ಯಾಯ ನಿಂದನೆಯೂ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಕಂಟೆಂಪ್ಟ್ ಆಫ್ ಕೋರ್ಟ್ ಕೆಳಗೆ ಅಥವಾ ಸಿ.ಪಿ.ಸಿ ಯ ಆರ್ಡರ್ 39 ರೂಲ್ 2ಎ ಕೆಳಗೆ ಕ್ರಮ ಜರುಗಿಸಬಹುದು. ನ್ಯಾಯಾಲಯದ ಆದೇಶ ತಿಳಿದೂ ಮಾರಾಟ ಮಾಡಿದ ನಂತರ ನೀವು ಅವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ.
ಮಗುವನ್ನು ನೋಡಲು ತಂದೆಗೆ ಅವಕಾಶವಿಲ್ಲವೇ? ನನ್ನ ಮಗುವಿಗೆ ಈಗ ಹನ್ನೊಂದು ತಿಂಗಳು. ಮಗು ಹುಟ್ಟಿದಾಗ ಆಸ್ಪತ್ರೆಯಲ್ಲಿ ಮಾತ್ರ ನಾನು ಮಗುವನ್ನು ನೋಡಿದ್ದೆ. ನಾನು ಮಗುವಿನ ತಂದೆ ಆಗಿದ್ದರೂ ನನ್ನ ಮಗುವನ್ನು ನಾನು ನೋಡಲು ನನ್ನ ಹೆಂಡತಿ ಮತ್ತು ಅವಳ ತಾಯಿ ಬಿಡುತ್ತಿಲ್ಲ, ಇದಕ್ಕೆ ನಾನು ಏನು ಮಾಡಬೇಕು? ಉತ್ತರ: ನೀವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಮಗುವನ್ನು ನೋಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳಬಹುದು. ಸಾಮಾನ್ಯವಾಗಿ ನ್ಯಾಯಾಲಯ ನಿಮ್ಮ ಕೋರಿಕೆಯನ್ನು ಮನ್ನಿಸುತ್ತದೆ. ಅದಕ್ಕೆ ಬದಲಾಗಿ, ಮೊದಲಿಗೆ ನಿಮ್ಮ ಊರಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ, “ನನ್ನ ಮತ್ತು ನನ್ನ ಪತ್ನಿಯ ನಡುವೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ, ಅದನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಿ ಕೊಡಲು ಸಹಾಯ ಮಾಡಿ” ಎಂದು ಅರ್ಜಿ ಕೊಡಿ. ಆಗ ಕೇಂದ್ರದವರು, ನಿಮ್ಮನ್ನೂ ನಿಮ್ಮ ಪತ್ನಿಯನ್ನೂ ಕರೆಯಿಸಿ ಮಾತಾಡುತ್ತಾರೆ. ಎರಡೂ ಕುಟುಂಬದ ಹಿರಿಯರೂ, ಹಿತೈಷಿಗಳೂ ಮಧ್ಯಸ್ಥಿಕೆಯಲ್ಲಿ ಭಾಗವಹಿಸಬಹುದು. ಅಲ್ಲಿ ಎಲ್ಲರೂ ಕೂತು ಮಾತಾಡಿದಾಗ ನಿಮ್ಮ ಸಮಸ್ಯೆ ಪರಿಹಾರ ಆಗಬಹುದು. ಹಾಗೆ ಅಲ್ಲಿ ಏನೂ ಪ್ರಯೋಜನ ಆಗದಿದ್ದರೆ ಆ ನಂತರ ನೀವು ನ್ಯಾಯಾಲಯದ ಮೆಟ್ಟಿಲು ಹತ್ತುವುದು ಒಳ್ಳೆಯದು.
(ಲೇಖಕರು, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗು ಹಿರಿಯ ಮಧ್ಯಸ್ಥಿಕೆಗಾರರು)