ನಿಂದನೆ ಮಾಡುವುದೇ ಸಾಧನೆಯೇ?: ಜನಮತ

Janamatha1
Published on

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರ ವೈಖರಿ ಬೇಸರ ಮೂಡಿಸಿದೆ. ಚುನಾವಣೆ ಕಣದಲ್ಲಿ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಅಭಿವೃದ್ಧಿಯ ಹೊಸ ಚಿಂತನೆ, ಆಶಯಗಳನ್ನು ಹಂಚಿಕೊಳ್ಳುವ ಜತೆಗೆ ಅವುಗಳನ್ನು ಕಾರ್ಯಾನುಷ್ಠಾನಕ್ಕೆ ತರುವ ಬಗ್ಗೆ ಮಾತನಾಡಬೇಕು. ಕ್ಷೇತ್ರವನ್ನು ಮಾದರಿಯಾಗಿಸಲು ಕೈಗೊಳ್ಳುವ ಕ್ರಮಗಳನ್ನು ಮತದಾರರಿಗೆ ತಿಳಿಸಬೇಕು. ಆಗಲೇ, ಜನರಿಗೂ ಯಾರನ್ನು ಜನಪ್ರತಿನಿಧಿಯಾಗಿಸಿದರೆ ಉತ್ತಮ ಎಂಬ ನಿಟ್ಟಿನಲ್ಲಿ ಸ್ಪಷ್ಟ ಚಿಂತನೆ ಮೂಡಲು ಸಾಧ್ಯವಾಗುತ್ತದೆ.

ಆದರೆ, ವಿಪರ್ಯಾಸದ ಸಂಗತಿ ಎಂದರೆ ಇವರ ಪ್ರಚಾರ ಭರಾಟೆಯಲ್ಲಿ ಅಭಿವೃದ್ಧಿ ಬಗ್ಗೆ ಪ್ರಸ್ತಾಪವೇ ಇಲ್ಲ. ನಾಯಕರು ಪರಸ್ಪರ ಆರೋಪದಲ್ಲಿ ತೊಡಗಿದ್ದಾರೆ. ಈ ಟೀಕೆಗಳು ಕೂಡ ನೀತಿ, ಮೌಲ್ಯ ಆಧಾರಿತವಾಗಿಲ್ಲ. ತೀರಾ ವೈಯಕ್ತಿಕ ಮಟ್ಟದಲ್ಲಿ ತೆಗಳುತ್ತ, ಹೇಳಿಕೆಶೂರರೆಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತ ಮತದಾರರಿಗೆ ಇವರು ನೀಡಲು ಹೊರಟಿರುವ ಸಂದೇಶವಾದರೂ ಏನು? ಈ ನಾಯಕರು ಬಳಸುತ್ತಿರುವ ಭಾಷೆ, ಅವರ ಉದ್ವೇಗ, ದ್ವೇಷ ಇದೆಲ್ಲವನ್ನು ಕಂಡಾಗ ಪ್ರಜಾತಂತ್ರದ ಮೌಲ್ಯಗಳು ಕಣ್ಣೆದುರಲ್ಲೇ ಅವಸಾನವಾಗುತ್ತಿರುವ ಬಗ್ಗೆ ಖೇದವೆನಿಸುತ್ತದೆ. ಇವರ ಇಂಥ ಹೇಳಿಕೆಗಳಿಗೆ ಜನರು ಮರುಳಾಗುತ್ತಾರೆ ಎಂದು ರಾಜಕಾರಣಿಗಳು ಭಾವಿಸಿದರೆ ಅದು ಮೂರ್ಖತನವಾದೀತು. ರಾಜಕೀಯ ನಾಯಕರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಆರೋಪಗಳು, ಟೀಕೆಗಳು ಮರ್ಯಾದೆಯ ಚೌಕಟ್ಟಿನಲ್ಲಿ ಇದ್ದರೇನೆ ಚೆನ್ನ. ಈ ವಾಸ್ತವವನ್ನು ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಲಿ. ಮಾತಿಗಿಂತ ಕೆಲಸದ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಲಿ.

| ಭುವನ್ ಕುಮಾರ್ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net