

ಎರಡನೆಯದು ಆಯುರ್ವೆದದ ಗ್ರಂಥಗಳನ್ನೇ ಆಕರವನ್ನಾಗಿ ಇಟ್ಟುಕೊಂಡು ನೂತನವಾಗಿ ಶೋಧಿಸಲ್ಪಟ್ಟು ಔಷಧಿಯ ಹಕ್ಕುಗಳ ಮಾಲೀಕ ತನ ಹೊಂದಿರುವ ಔಷಧಗಳು. ಇಂತಹ ಏಕಸ್ವಾಮ್ಯದ ಔಷಧಿಗಳಲ್ಲಿ ಅನೇಕ ಔಷಧಗಳಿಗೆ ದೇಶೀಯ ಅಥವಾ ಜಾಗತಿಕ ಪೇಟೆಂಟ್ ಅನ್ನು ವ್ಯಕ್ತಿ ಅಥವಾ ಸಂಸ್ಥೆಗಳು ಪಡೆದಿರುತ್ತವೆ. ಸಾಮಾನ್ಯವಾಗಿ ಪ್ರತಿಯೊಂದು ಔಷಧವೂ ಹಲವಾರು ಘಟಕ ದ್ರವ್ಯಗಳ ಸಂಮಿಶ್ರಣದಿಂದ ತಯಾರಾಗಿರುತ್ತದೆ. ಉದಾಹರಣೆಗೆ ಚ್ಯವನಪ್ರಾಶ ಅವಲೇಹದಲ್ಲಿ ನಲವತ್ತಕ್ಕೂ ಹೆಚ್ಚು ಘಟಕ ಅಂಶಗಳಿವೆ. ಆಯುರ್ವೆದದಲ್ಲಿ ಔಷಧಿಗಳು ಒಬ್ಬರಿಂದ ಮತ್ತೊಬ್ಬರಿಗೆ ಬೇರೆಯೇ ಬೇಕಾಗುತ್ತದೆ. ಅಂದಮೇಲೆ ಮೊದಲೇ ತಯಾರಿಸಿ ಸಿದ್ಧವಾಗಿಟ್ಟುಕೊಂಡ ಔಷಧಗಳನ್ನು ರೋಗಿಗಳಿಗೆ ನೀಡಿದರೆ ಅವುಗಳು ಹೇಗೆ ತಾನೇ ಪರಿಣಾಮ ಬೀರಲು ಸಾಧ್ಯ ಎಂಬ ವಿಚಾರ ಮನಃಪಟಲದಲ್ಲಿ ಮೂಡಿಬರುತ್ತದೆ.
ಆಯುರ್ವೆದದ ಶಾಸ್ತ್ರೀಯ ಔಷಧಿಗಳ ಗಟ್ಟಿತನ ಅರಿತರೆ ಬೆರಗಾಗುತ್ತೇವೆ. ಚರಕ ಸಂಹಿತೆಯೇ ಮೊದಲಾದ ಗ್ರಂಥಗಳಲ್ಲಿ ವಿವರಿಸಲ್ಪಟ್ಟ ಸಾವಿರಾರು ಶಾಸ್ತ್ರೀಯ ಔಷಧಗಳಿವೆ. ಕೆಲವು ಸಾವಿರ ವರ್ಷ ಹಿಂದೆಯೇ ಶಿಸ್ತುಬದ್ಧವಾಗಿ ಅಂಗೀಕರಿಸಿ ಬಳಸಿ ದಾಖಲಿಸಲ್ಪಟ್ಟ ಔಷಧಿಗಳಿವು. ಅಚ್ಚರಿಯ ವಿಷಯವೆಂದರೆ ಇವುಗಳಲ್ಲಿ ಯಾವುದೂ ಇಲ್ಲಿಯ ತನಕ ನಿಷೇಧಿಸಲ್ಪಟ್ಟಿಲ್ಲ. ಅಷ್ಟೇ ಅಲ್ಲ, ಇಂದಿಗೂ ಆಯುರ್ವೆದ ವೈದ್ಯರಿಂದ ಉಪಯೋಗಿಸಲ್ಪಡುತ್ತಿವೆ. ಇದರಲ್ಲೇನಿದೆ ವಿಶೇಷ ಎಂದೆನಿಸಬಹುದು. ಹತ್ತಾರು ವರ್ಷಗಳ ಸಂಶೋಧನೆಗಳ ಬಳಿಕ ಮಾರುಕಟ್ಟೆ ಪ್ರವೇಶಿಸುವ ಇಂದಿನ ರಾಸಾಯನಿಕ ಔಷಧಿಗಳು ಹತ್ತಿಪ್ಪತ್ತು ವರುಷಗಳ ಒಳಗಾಗಿ ನಿಷೇಧಿಸಲ್ಪಟ್ಟು ನಾಮಾವಶೇಷವಾಗುತ್ತವೆ. ಪ್ರತಿದಿನವೂ ಹಲವಾರು ರಾಸಾಯನಿಕ ಔಷಧಿಗಳು ಅಡ್ಡಪರಿಣಾಮಗಳ ಕಾರಣದಿಂದ ಅಥವಾ ಅಪೇಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂಬá-ದರಿಂದ ನಿಷೇಧಿಸಲ್ಪಡುತ್ತಲೇ ಇರುತ್ತವೆ. ಕಳಪೆ ಗುಣಮಟ್ಟದಿಂದ ಬಳಕೆಗೆ ಅಯೋಗ್ಯವಾಗá-ವುದು ಪ್ರತ್ಯೇಕ. ಆಯá-ರ್ವೆದದ ಶಾಸ್ತ್ರೀಯ ಔಷಧಗಳು ಹಿಂದೆಯೂ, ಇಂದೂ, ಮುಂದೂ ಜನಪ್ರಿಯ, ಪರಿಣಾಮಕಾರಿ, ಸುರಕ್ಷಿತ ಎಂಬುದು ಭಾರತೀಯ ವೈದ್ಯವಿಜ್ಞಾನಿಋಷಿಗಳ ಪರಂಪರೆಗೇ ಹೆಮ್ಮೆಯ ಸಂಗತಿ. ಈ ಶಾಸ್ತ್ರೀಯ ಔಷಧಿಗಳು ಮುಖ್ಯವಾಗಿ ರೋಗಗಳನ್ನು ಸಂಪೂರ್ಣವಾಗಿ ಮೂಲದಿಂದಲೇ ಕಿತ್ತೊಗೆಯುವ ಧ್ಯೆಯದೊಂದಿಗೆ ಹುಟ್ಟಿಕೊಂಡವು. ತಾತ್ಕಾಲಿಕ ಉಪಶಮನ, ಲಕ್ಷಣಗಳ ಹತೋಟಿಯೇ ಅವುಗಳ ಲಕ್ಷ್ಯವಲ್ಲ. ಶಮನ, ಶೋಧನಗಳಿಂದ ರೋಗಗಳ ನಿಮೂಲನೆಯೇ ಅವುಗಳ ಗಮ್ಯ.
ಆಯುರ್ವೆದ ಚಿಕಿತ್ಸೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎರಡು ಚಿಕಿತ್ಸಾ ಪಥಗಳನ್ನು ನೋಡಬಹುದು. ಮೊದಲನೆಯದು ದೋಷ ಪ್ರತ್ಯನೀಕ ಚಿಕಿತ್ಸಾ. ದೋಷ, ಧಾತು ಹಾಗೂ ಮಲಗಳಲ್ಲಿ ಆಗುವ ವ್ಯತ್ಯಯವೇ ರೋಗ, ಇವುಗಳೆಲ್ಲಾ ಸಮಾವಸ್ಥೆಯಲ್ಲಿ ಇದ್ದಾಗ ಆರೋಗ್ಯ ಎಂಬುದು ಆಯುರ್ವೆದದ ಮೂಲ ಸಿದ್ಧಾಂತ. ರೋಗವನ್ನು ಇದೇ ಚಿಂತನೆಯ ಹಾದಿಯೊಂದಿಗೆ ಸಾಗಿ ರೋಗಿಯನ್ನು ಗುಣಪಡಿಸುವುದೇ ದೋಷ ಪ್ರತ್ಯನೀಕ ಚಿಕಿತ್ಸಾ. ಅನೇಕ ವಿಚಾರಗಳ ಹಾಗೂ ತತ್ತ್ವ ಸಿದ್ಧಾಂತಗಳ ಅಧಾರದಲ್ಲಿ ನೀಡಲಾಗುವ ಶಾಸ್ತ್ರೀಯ ಚಿಕಿತ್ಸೆಯಿದು. ಇದು ಜನಜನಿತ ಚಿಕಿತ್ಸಾ ಸೂತ್ರ. ಆಯುರ್ವೆದದ ಶಾಸ್ತ್ರೀಯ ಔಷಧಿಗಳನ್ನೆಲ್ಲ ಇದರ ಆಧಾರದಲ್ಲಿ ತಯಾರಿಸಲಾಗುತ್ತದೆ, ಹಾಗಾಗಿ ಇವುಗಳು ಸಿದ್ಧ ಔಷಧ ಸೂತ್ರಗಳು. ಎಲ್ಲವೂ ಒಂದು ಚೌಕಟ್ಟಿನ ಪರಿಮಿತಿಯೊಳಗೆ ಇರುತ್ತವೆ. ಪ್ರಯೋಗಿಸುವ ವೈದ್ಯರ ತರ್ಕ ಹಾಗೂ ಯುಕ್ತಿಗೆ ಅನುಗುಣವಾಗಿ ಫಲಿತಾಂಶದಲ್ಲಿ ಸ್ವಾಭಾವಿಕವಾದ ಭಿನ್ನತೆ ಕಾಣಸಿಗುತ್ತದೆ. ಔಷಧಿಗಳು ಒಬ್ಬರಿಂದ ಇನ್ನೊಬ್ಬರಿಗೆ ಬೇರೆಯೇ ಬೇಕಾಗುತ್ತದೆ ಎಂಬುದಿಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬಹುತೇಕ ಜನರಿಗೆ ತಿಳಿಯದ ಇನ್ನೊಂದು ವ್ಯಾಧಿ ಪ್ರತ್ಯನೀಕಾ ಚಿಕಿತ್ಸಾ. ರೋಗ ಗುಣಪಡಿಸುವುದೇ ಇಲ್ಲಿನ ಮುಖ್ಯ ಉದ್ದೇಶ. ಆಯುರ್ವೆದದ ಚಿಕಿತ್ಸಾ ತತ್ತ್ವಗಳನ್ನು ಇಲ್ಲಿಯೂ ಅಳವಡಿಸಿಕೊಂಡರೆ ಫಲಿತಾಂಶ ನಿಚ್ಚಳವಾಗಿರುತ್ತದೆ. ಬಹುತೇಕ ಹಕ್ಕುಸ್ವಾಮ್ಯದ ಔಷಧಿಗಳೂ ಇದೇ ಸಾಲಿನಲ್ಲಿ ನಿಲ್ಲುತ್ತವೆ. ಲಕ್ಷಣಗಳ ಉಪಶಮನಕ್ಕೆ ಸಾಮಾನ್ಯವಾಗಿ ಹೆಚ್ಚಿನ ಒತ್ತು ನೀಡುವುದರಿಂದ ಅನೇಕರಲ್ಲಿ ಈ ಔಷಧಗಳು ಪರಿಣಾಮಕಾರಿ ಆಗುವುದು ಸಾಧ್ಯವಾಗುತ್ತದೆ. ಉದಾಹರಣೆಗೆ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಸಮಯದ ಹಾಗೂ ವೈದ್ಯರ ಅಭಾವವಿರುತ್ತದೆ. ಆಗ ಎಲ್ಲರಿಗೂ ಒಂದೇ ತೆರನಾದ ಔಷಧಿ ನೀಡುವುದು ಅನಿವಾರ್ಯವಾಗುತ್ತದೆ. ಯೋಜಕ ವೈದ್ಯರ ಬುದ್ಧಿಶಕ್ತಿಗನುಗುಣವಾಗಿ ಹಕ್ಕುಸ್ವಾಮ್ಯದ ಔಷಧಗಳೂ ದೋಷ ಪ್ರತ್ಯನೀಕ ಚಿಕಿತ್ಸೆಯಲ್ಲಿ ಬಳಸಲ್ಪಟ್ಟರೆ ಫಲಿತಾಂಶದಲ್ಲಿ ಔನ್ನತ್ಯ ಸಾಧಿಸುವುದು ಸಾಧ್ಯವಾಗುತ್ತದೆ.