ಆರಂಭದಲ್ಲಿ ಪ್ರತಿ ಊರಿನಲ್ಲಿ ಶಾಲೆ, ಅಂಚೆ ಕಚೇರಿ, ಆಸ್ಪತ್ರೆ, ಅಂಗನವಾಡಿ ಇರುವಂತೆ ಸಾರ್ವಜನಿಕ ಹಿಂದೂ ರುದ್ರಭೂಮಿ ಅವಶ್ಯವಾಗಿ ಬೇಕು ಎಂದು ಊರಿನವರಿಗೆ ಮನದಟ್ಟು ಮಾಡಿದೆವು. ಅದಕ್ಕಾಗಿ ಊರವರೇ ಒಟ್ಟುಗೂಡಿ ರುದ್ರಭೂಮಿಗೆ ಬೇಕಾದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರೇರಣೆಯನ್ನು ಶ್ರೀ ಕ್ಷೇತ್ರದಿಂದ ನೀಡಿದೆವು. ಕೆಲವು ಕಡೆಗಳಲ್ಲಿ ರುದ್ರಭೂಮಿಗೆ ಜಾಗ ಮೀಸಲಿಟ್ಟಿದ್ದರೂ ಅತಿಕ್ರಮಣಗೊಂಡಿದ್ದವು. ಅದನ್ನು ತೆರವುಗೊಳಿಸಿ ಸ್ಥಳೀಯವಾಗಿ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯನ್ನು ರಚಿಸಿದೆವು. ಬಳಿಕ ನಿಗದಿತವಾಗಿರುವ ರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಸಮಿತಿಯ ವತಿಯಿಂದ ಮಾಡಿಸುವ ಮತ್ತು ನಿರಂತರವಾಗಿ ನಿರ್ವಹಣೆ ಮಾಡಲು ಮಾರ್ಗದರ್ಶನ ನೀಡಲಾಯಿತು. ಪ್ರತಿ ರುದ್ರಭೂಮಿಗೆ ರುದ್ರಭೂಮಿಯ ಸ್ಥಳ ಸಮತಟ್ಟುಗೊಳಿಸುವುದು, ಆವರಣ ರಚನೆ, ಗೇಟು ನಿರ್ಮಾಣ, ದಹನ ಶೆಡ್ ರಚನೆ, ಸಿಲಿಕಾನ್ ಛೇಂಬರ್ ಅಳವಡಿಸುವುದು, ಕಟ್ಟಿಗೆ ದಾಸ್ತಾನಿಗೆ ಶೆಡ್ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನಗೃಹ ಮತ್ತು ಶೌಚಾಲಯ ರಚನೆ, ಸಂಪರ್ಕ ರಸ್ತೆ, ಉದ್ಯಾನವನ, ವಿದ್ಯುತ್ ಸಂಪರ್ಕ, ವಿಶ್ರಾಂತಿ ಕೊಠಡಿ, ಕಾವಲುಗಾರನ ವ್ಯವಸ್ಥೆ, ಧಾರ್ಮಿಕ ಕ್ರಿಯೆ, ವೈದಿಕ ವಿಧಿಗಳಿಗೆ ಕಟ್ಟಡ ರಚನೆ, ರಸ್ತೆ, ತ್ಯಾಜ್ಯ ಗುಂಡಿ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ 2.50 ಲಕ್ಷ ರೂ.ವರೆಗೆ ಶ್ರೀಕ್ಷೇತ್ರದಿಂದ ನೆರವನ್ನು ನೀಡಲಾಗುತ್ತದೆ. ಈಗಾಗಲೇ ರಾಜ್ಯದ 816 ರುದ್ರಭೂಮಿಗಳಿಗೆ 11.39 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಲಾಗಿದೆ. ಇನ್ನು ಕೆಲವೆಡೆಗಳಲ್ಲಿ ರುದ್ರಭೂಮಿ ನಿರ್ಮಾಣ ಕಾರ್ಯ ನಡೆಯುತ್ತಲಿದೆ. ಹಿಂದೆ ಶವ ಸಂಸ್ಕಾರಕ್ಕೆ ಸಂಬಂಧಿಸಿದ ಸ್ಥಳದ ಕೊರತೆ, ವ್ಯವಸ್ಥೆ ಇಲ್ಲದಿರುವುದು ಮುಂತಾದ ಸಮಸ್ಯೆಗಳು ಈಗೀಗ ಬಹಳಷ್ಟು ಕಡಿಮೆಯಾಗಿದೆ. ರುದ್ರಭೂಮಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು.