

‘ಕಡಲ ತೀರದ ಭಾರ್ಗವ’ ಎಂದೇ ಖ್ಯಾತರಾದ ಶಿವರಾಮ ಕಾರಂತರ 120ನೇ ಜನ್ಮದಿನಾಚರಣೆಯನ್ನು ಕುಂದಾಪುರದ ಕೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕೇಂದ್ರವನ್ನು ಬೆಳೆಸಿದ ಕಾರಂತರ ಅಭಿಮಾನಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಿದ್ದರು. ಅನಿವಾರ್ಯ ಕಾರಣಗಳಿಂದ ನನಗೆ ಭಾಗವಹಿಸಲಾಗಲಿಲ್ಲ. ಈ ವೇಳೆ ಕಾರಂತರೊಂದಿಗಿನ ಒಡನಾಟವನ್ನು ಮೆಲುಕು ಹಾಕತೊಡಗಿದೆ. ಧರ್ಮಸ್ಥಳ ಕ್ಷೇತ್ರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರನ್ನು ಬಲು ಹತ್ತಿರದಿಂದ ಕಂಡಿದ್ದೇನೆ. ಅವರಿಗೆ ತಿಳಿಯದ ವಿಷಯವಿರಲಿಲ್ಲ. ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ, ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಸಾಮಾನ್ಯವಾಗಿ ವ್ಯಕ್ತಿಯನ್ನು ಗುರುತಿಸುವಾಗ ಅವರು ಇಂಥಾ ವಿಷಯದಲ್ಲಿ ತಜ್ಞರು, ವಿಶೇಷವಾಗಿ ಅಧ್ಯಯನ ಮಾಡಿದವರು, ಸಾಧನೆ ಮಾಡಿದವರು ಎಂದು ಹೇಳುವುದು ರೂಢಿ. ಆದರೆ, ಕಾರಂತರಿಗೆ ಇದು ಅನ್ವಯಿಸುವುದಿಲ್ಲ. ಅವರನ್ನು ಜೈನ ಧರ್ಮದಲ್ಲಿ ಉದಾಹರಿಸಿ ಹೇಳುವಂಥ ಆನೆಯ ವ್ಯಕ್ತಿತ್ವ ಹೊಂದಿದವರು ಎನ್ನಬಹುದು. ಅಂದರೆ ಆರು ಜನ ಅಂಧರು ಆನೆಯನ್ನು ಪರಿಚಯಿಸಿಕೊಳ್ಳಬೇಕು ಎಂದು ಆನೆಯನ್ನು ಮುಟ್ಟಿದರಂತೆ. ಒಬ್ಬ ಅದರ ಕೈ-ಕಾಲುಗಳನ್ನು ಮುಟ್ಟಿ ಆನೆ ಕಂಬದ ಹಾಗಿದೆ ಎಂದನಂತೆ. ಮತ್ತೊಬ್ಬ ಅದರ ಮೈಯನ್ನು ಮುಟ್ಟಿ ಗೋಡೆಯ ಹಾಗಿದೆ ಎಂದ. ಇನ್ನೊಬ್ಬ ಅದರ ಬಾಲವನ್ನು ಮುಟ್ಟಿ ಆನೆ ಎಂದರೆ ಹಗ್ಗದ ಹಾಗೆ ಇದೆ ಎಂದನಂತೆ. ಆನೆಯ ಕಿವಿಯನ್ನು ರ್ಸ³ಸಿ ಬೀಸಣಿಗೆಯಂತಿದೆ ಎಂದನಂತೆ. ಮತ್ತೊಬ್ಬ ಆನೆಯ ಸೊಂಡಿಲನ್ನು ಮುಟ್ಟಿ ದಪ್ಪದ ಕೊರಡಿನ ಹಾಗಿದೆ ಎಂದನಂತೆ. ಅಂದರೆ ಅವರು ಯಾವ ಭಾಗ ಮುಟ್ಟಿದ್ದಾರೋ ಅಷ್ಟನ್ನೇ ಆನೆ ಎಂದು ತಿಳಿದುಕೊಂಡರಲ್ಲದೆ ಇಡೀ ಆನೆಯ ಆಕಾರದ ಪೂರ್ಣ ಜ್ಞಾನ ಪಡೆದುಕೊಳ್ಳಲಿಲ್ಲ. ಹಾಗೆಯೇ, ಶಿವರಾಮ ಕಾರಂತರ ಬಹುಮುಖ ವ್ಯಕ್ತಿತ್ವವನ್ನು ಒಂದೊಂದೇ ದೃಷ್ಟಿಯಿಂದ ಗುರುತಿಸಬಹುದಲ್ಲದೆ ಅವರ ಸಂಪೂರ್ಣ ವ್ಯಕ್ತಿತ್ವವನ್ನಲ್ಲ. ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇತ್ತು, ಕುತೂಹಲ ಬೆಳೆಸಿಕೊಂಡಿದ್ದರು ಎಂದು ಹೇಳುವುದೇ ಪ್ರಮುಖವಾದುದು. ಅವರಿಗೆ ಸಾಹಿತ್ಯದ ಮೇಲೆ ವಿಶೇಷ ಒಲವು. ಅವರಿಗೆ ಅದು ಪ್ರಧಾನ ಅಧ್ಯಯನದ ವಸ್ತುವಾಗಿತ್ತು. ಅವರು ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆಯದಿದ್ದರೂ ಅಧ್ಯಯನದ ಮೂಲಕ ಎಲ್ಲಾ ವಿಭಾಗಗಳನ್ನೂ ಪರಿಚಯ ಮಾಡಿಕೊಂಡವರು. ಅವರು ಬಾಲ್ಯದಲ್ಲೇ ವಿಜ್ಞಾನದ ಅನೇಕ ವಿಚಾರಗಳನ್ನು ಅರಿತುಕೊಂಡಿದ್ದರು. ಮತ್ತು ಆ ಕುರಿತಾಗಿ ಬಗ್ಗೆ ಸಂಶೋಧನೆಯನ್ನೂ ಮಾಡಿದವರು. ಛಾಯಾಗ್ರಹಣ ಅವರಿಗೆ ಆಸಕ್ತಿಯ ವಿಷಯ. ಹಳ್ಳಿಗಳಿಗೆ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡ ಅನೇಕ ಛಾಯಾಚಿತ್ರಗಳ ಸಂಗ್ರಹವನ್ನೇ ಮಾಡಿದರು. ಜಾನಪದ ಜೀವನದ ಬಗ್ಗೆಯೂ ಅತೀವ ಆಸಕ್ತರಾಗಿದ್ದರು. ಹಾಗಾಗಿ ಮಲೆನಾಡಿನ ಮೂಲೆ-ಮೂಲೆಗೂ ಸಂಚರಿಸಿ ಮಲೆಕುಡಿಯರು ಮತ್ತು ಅನೇಕ ಗುಡ್ಡ-ಗಾಡಿನ ಜನರೊಂದಿಗೆ ಪರಿಚಯಿಸಿಕೊಂಡು, ಅವರ ಜೊತೆಗೆ ಕಾಲಕಳೆದು ಅವರ ಜೀವನ ಪದ್ಧತಿ ಅರ್ಥೈಸಿಕೊಂಡವರು. ಕಾದಂಬರಿ, ಕಾವ್ಯ, ಪ್ರವಾಸ ಕಥನ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದವರು. ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡವರು. ಕೊನೆಗೆ ರಾಜಕೀಯವನ್ನೂ ಪ್ರವೇಶಿಸಿದರು. ಆದರೆ, ಸೋಲುಂಡರೂ ದೇಶದ ಪ್ರಗತಿಯ ಬಗ್ಗೆ ಅವರಿಗೆ ಅಪಾರ ಕಾಳಜಿ ಹಾಗೂ ಅಭಿವೃದ್ಧಿಯ ಉದ್ದೇಶವಿತ್ತು. ದೇಶದ ಪ್ರಗತಿ ಹೇಗೆ ಆಗಬೇಕು, ಅಭಿವೃದ್ಧಿಯ ಮಾರ್ಗ ಯಾವುದು? ಪರಿವರ್ತನೆ ತರುವ ಸಾಧ್ಯತೆಗಳು ಹೇಗೆ? ಎಂಬುದರ ಬಗ್ಗೆ ಅಧ್ಯಯನ ಮಾಡಿದವರು. ಪ್ರವಾಸಕ್ಕೆ ಬಹಳ ಪ್ರಾಶಸ್ತ್ಯ ಕೊಟ್ಟವರು. ಕಾರ್ಯಕ್ರಮಕ್ಕೆ ಯಾರಾದರೂ ಬರುತ್ತೀರಾ.. ಎಂದು ಕರೆದರೆ ತಕ್ಷಣ ಹೊರಟೇ ಬಿಡುವವರು. ಅವರು 90ರ ಇಳಿವಯಸ್ಸಿನಲ್ಲೂ ಪ್ರವಾಸ ಮಾಡಿದ್ದಾರೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರವಚನಗಳನ್ನು ನೀಡಿದ್ದಾರೆ.
ಪೂಜ್ಯ ಮಂಜಯ್ಯ ಹೆಗ್ಗಡೆಯವರ ಜೊತೆ 1930ನೇ ಇಸವಿ ಬಳಿಕ ಅನೇಕ ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ ವ್ಯವಸ್ಥೆಯನ್ನು ಮಾಡಿದವರು. ಅವರಿಗೆ ಬಹಳ ಆತ್ಮೀಯರಾಗಿ ಮತ್ತು ಕ್ಷೇತ್ರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಕ್ಷೇತ್ರದ ಆದರ್ಶವನ್ನು ಒಪ್ಪಿಕೊಂಡು ಶ್ರೀ ಮಂಜಯ್ಯ ಹೆಗ್ಗಡೆಯವರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಅನೇಕ ಸಮಾರಂಭಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದರು. ಜೊತೆಗೆ ಸಹಕಾರಿ ರಂಗದಲ್ಲಿ ಮಳಹಳ್ಳಿ ಶಿವರಾಯರು ಮತ್ತು ಸಮಕಾಲೀನ ಸಹಕಾರಿ ಧುರೀಣರ ಜೊತೆಗೆ ಬೆರೆತುಕೊಂಡು ಸಾಧನೆ ಮಾಡಿದವರು. ದೇಶಸೇವೆಗಾಗಿ ಅರ್ಧದಲ್ಲಿಯೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಂಜಯ್ಯ ಹೆಗ್ಗಡೆಯವರ ಶತಮಾನೋತ್ಸವ ಕಾರ್ಯಕ್ರಮದ ವೇಳೆ ನಡೆದ ಒಂದು ಘಟನೆ ಬಗ್ಗೆ ಹೇಳಲೇಬೇಕು. 1970ರ ಇಸವಿ ಆಸುಪಾಸಿನಲ್ಲಿ ಶ್ರೀ ಮಂಜಯ್ಯ ಹೆಗ್ಗಡೆಯವರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬ ಚರ್ಚೆ ನಡೆದಿತ್ತು. ಆಗ ಅನೇಕರು ಶಿವರಾಮ ಕಾರಂತರು ಸಮಕಾಲೀನರು, ಮತ್ತು ಹೆಗ್ಗಡೆಯವರಿಗೆ ಆಪ್ತರೂ ಹೌದು ಎಂದು ಸೂಚಿಸಿದರು. ಆದರೆ ಅನೇಕರು ಅವರು ಬರುತ್ತಾರೆಯೇ ಎಂದು ಸಂಶಯಪಟ್ಟರು. ಆಹ್ವಾನಿಸಿದಾಗ ಅವರು ಕೂಡಲೇ ಒಪ್ಪಿಕೊಂಡರು. ಶ್ರೀ ಮಂಜಯ್ಯ ಹೆಗ್ಗಡೆಯವರ ಬಗ್ಗೆ ಮೂರು ಪುಸ್ತಕಗಳನ್ನು ಪ್ರಕಟಿಸಿ ಅದರ ಬಿಡುಗಡೆಯನ್ನು ಕಾರಂತರಿಂದ ನೆರವೇರಿಸಲಾಯಿತು. ಕಾರಂತರು ಸಭೆಯನ್ನುದ್ದೇಶಿಸಿ ಮಾತಿಗೆ ನಿಂತಾಗ ಎಲ್ಲರ ಕಿವಿ ಅರಳಿದ್ದವು. ಮಂಜಯ್ಯ ಹೆಗ್ಗಡೆಯವರೊಂದಿಗಿನ ಒಡನಾಟ, ಅವರ ಚಟುವಟಿಕೆ, ಆಸಕ್ತಿಗಳ ಕುರಿತು ಮಾತನಾಡುತ್ತಾರೆ ಎಂದು ಎಲ್ಲರೂ ಆಲೋಚಿಸಿದ್ದರು. ಕಾರಂತರು 20 ನಿಮಿಷದ ಭಾಷಣದಲ್ಲಿ ಅಪ್ಪಿ-ತಪ್ಪಿಯೂ ಮಂಜಯ್ಯ ಹೆಗ್ಗಡೆಯವರ ಹೆಸರನ್ನು ಹೇಳಲಿಲ್ಲ. ಆದರೆ, ಇದು ಶಿವರಾಮ ಕಾರಂತರ ನಿಜಸ್ವಭಾವ ಮತ್ತು ವ್ಯಕ್ತಿತ್ವ ಎಂದು ತಿಳಿದು ಯಾರೂ ತಪ್ಪು ಭಾವಿಸಲಿಲ್ಲ. ‘ನೀವು ಈ ಹಿಂದೆ ನೋಡಿದ್ದ ಗ್ರಾಮೀಣ ಪ್ರದೇಶಗಳು ವಿಶೇಷವಾಗಿ ಬೆಳ್ತಂಗಡಿ ತಾಲೂಕಿನ ನೆರಿಯ ಎಂಬ ದುರ್ಗಮ ಪ್ರದೇಶದಲ್ಲಿ ನಾವು ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೂಲಕ ಸಂಘಟನೆ ಮಾಡಿ, ಕೃಷಿಕರು ಕೃಷಿ ಅಭಿವೃದ್ಧಿಪಡಿಸಲು ಹೊಸ ಆವಿಷ್ಕಾರಗಳನ್ನು ಮಾಡಿದ್ದೇವೆ. ನೀವು ಬಂದು ವೀಕ್ಷಿಸಬೇಕು’ ಎಂದು ಒಮ್ಮೆ ನಾನು ಕೇಳಿಕೊಂಡೆ. ಒಪ್ಪಿದರು. ಕಾರ್ಯಕರ್ತರು ನೆರಿಯ ಗ್ರಾಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅನೇಕ ಮನೆಗಳಿಗೆ ಕಾರಂತರು ಭೇಟಿ ನೀಡಿ, ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದರು. ಅವರ ಹಳೆಯ ಜೀವನಶೈಲಿ, ಆಧುನಿಕ ಕಾಲಕ್ಕೆ ಹೊಂದಿಕೊಂಡಂತಹ ರೀತಿ, ಮಕ್ಕಳ ಶಿಕ್ಷಣ, ಮಹಿಳೆಯರ ಬದುಕಿನಲ್ಲಾದ ಬದಲಾವಣೆಯನ್ನು ಗುರುತು ಮಾಡಿಕೊಂಡರು. ಮೂರು ದಿವಸ ಅಲ್ಲಿದ್ದು ಮರಳಿ ಕ್ಷೇತ್ರಕ್ಕೆ ಬಂದು, ‘ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಬಹಳಷ್ಟು ಪರಿವರ್ತನೆ ಆ ಗ್ರಾಮಗಳಲ್ಲಿ ಆಗಿದೆ. ಮಲೆಕುಡಿಯರು, ಪರಿಶಿಷ್ಟ ಪಂಗಡದವರು, ಗುಡ್ಡ-ಗಾಡು ಜನಾಂಗದವರಲ್ಲಿ ಜಾಗೃತಿ ಮೂಡಿದೆ. ಅಭಿನಂದನೀಯ ಕಾರ್ಯಕ್ರಮ’ ಎಂದು ಶ್ಲಾಘಿಸಿದರು. ಮೂರು ದಿವಸ ನಿಂತು ವೀಕ್ಷಿಸಿದ್ದೇನೆ ಸಾಕೆ ಎಂದು ಪ್ರಶ್ನಿಸಿದರು. ‘ಸಾಕೇ’ ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ. ಬಳಿಕ ಅವರೇ ‘ನಾನು ತುಂಬಾ ಸಂತೋಷಪಟ್ಟಿದ್ದೇನೆ, ಇನ್ನೂ ನೋಡಬೇಕು ಎಂದು ನಿಮಗೆ ಅನ್ನಿಸಿದರೆ ಖಂಡಿತವಾಗಿಯೂ ಮತ್ತಷ್ಟು ದಿನ ಇಲ್ಲಿರುತ್ತೇನೆ’ ಎಂದರು. ಅವರಂತೆ ಶುದ್ಧ ಮನಸ್ಸಿನ, ಪರಿಶುದ್ಧ ಭಾವದ ಮನುಷ್ಯರನ್ನು ನೋಡುವುದು ಅಪರೂಪ. ಕಾರಂತರು ಯಾರನ್ನೂ ಪ್ರಶಂಸೆ ಮಾಡುವುದಿಲ್ಲ. ಅವರು ನಕ್ಕರೆ ಅದೇ ದೊಡ್ಡ ಸ್ವರ್ಗ. ಹಾಗಾಗಿ ಕಾರಂತರ ನಗುವನ್ನು ಅನೇಕರು ಕಂಡಿರಲಿಕ್ಕಿಲ್ಲ. ಅದು ಬಹಳ ಅಪರೂಪ. ನನ್ನ ಮತ್ತು ಅವರ ಅನೇಕ ಭೇಟಿಯಲ್ಲಿ ಅವರ ಮೆಲುವಾದ ನಗುವನ್ನು ಗಮನಿಸಿದ್ದೇನೆ. ಒಂದು ಬಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪತ್ನಿ ಜೊತೆ ಬಂದಿದ್ದರು. ಬೀಡಿಗೆ ಬಂದು ಕುಳಿತಾಗ ಅವರು, ‘ನೀನು ದೇವರ ದರ್ಶನ ಮಾಡಿಕೊಂಡು ಬಾ’ ಎಂದು ಪತ್ನಿಗೆ ಹೇಳಿದರು. ಬಳಿಕ ನನ್ನ ಬಳಿ ಮಾತನಾಡುತ್ತ, ‘ನಾನು ಸಾಮಾನ್ಯವಾಗಿ ಯಾವ ದೇವಸ್ಥಾನಕ್ಕೂ, ದೇವರಿಗೂ ಕೈ ಮುಗಿಯಲು ಹೋಗುವುದಿಲ್ಲ. ಆದರೆ, ಅವಳ ಭಕ್ತಿ ಮತ್ತು ಶ್ರದ್ಧೆಗೆ ನಾನು ಅಡ್ಡ ಬರುವುದಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಕಳುಹಿಸಿದ್ದೇನೆ’ ಎಂದರು. ಹೀಗೆ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಬರದೆ, ಯಾರೊಬ್ಬರ ಧಾರ್ವಿುಕ ನಂಬಿಕೆಗಳ ಬಗ್ಗೆ ಚುಚ್ಚು ಮಾತನಾಡದೆ, ಹೀಯಾಳಿಸದೆ, ಅವರ ನಂಬಿಕೆ ಅವರಿಗೆ, ನನ್ನ ನಂಬಿಕೆ ನನಗೆ ಎನ್ನುವುದು ಅವರ ನಿಲುವಾಗಿತ್ತು. ಒಂದು ಬಾರಿ ಶ್ರೀ ಕ್ಷೇತ್ರದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಹ್ವಾನಿಸಿದಾಗ ಖುಷಿಯಿಂದ ಒಪ್ಪಿಕೊಂಡು ಬಂದಿದ್ದರು. ಸಮ್ಮೇಳನದಲ್ಲಿ ಉದ್ಘಾಟಕರಾಗಿ ಬಂದಿದ್ದವರು ಕಾರಂತರ ಜೊತೆ ಉತ್ತಮ ಬಾಂಧವ್ಯ ಹೊಂದಿರದ ವ್ಯಕ್ತಿ ಎಂದು ತಡವಾಗಿ ಅರಿವಾಯಿತು. ಅಲ್ಲದೆ, ಆಹ್ವಾನ ಪತ್ರಿಕೆ ನೋಡಿದವರು, ‘ನೀವು ಆಹ್ವಾನ ಮಾಡುವಾಗ ಉದ್ಘಾಟಕರು ಮತ್ತು ಅಧ್ಯಕ್ಷರಿಗೆ ಪರಸ್ಪರ ಯಾರು ಬರುತ್ತಾರೆ ಎಂದು ತಿಳಿಸಿರಲಿಲ್ಲವೇ?’ ಎಂದು ಪ್ರಶ್ನಿಸಿದರು. ‘ಸಹಜವಾಗಿ ನಾವು ಆಹ್ವಾನಿಸಿದೆವು, ಅವರು ಒಪ್ಪಿದರು. ಉದ್ಘಾಟಕರು ಯಾರು ಎಂದು ಅವರು ಕೇಳಲಿಲ್ಲ, ನಾವು ಹೇಳಲಿಲ್ಲ’ ಎಂದೆವು. ‘ನೋಡಿ ಎಚ್ಚರಿಕೆಯಿಂದಿರಿ, ಅವರಿಬ್ಬರ ಧೋರಣೆ, ವಿಚಾರಧಾರೆಗಳು ಹೊಂದಿಕೊಳ್ಳುವುದಿಲ್ಲ. ಅವರು ಪರಸ್ಪರ ಅಭಿಪ್ರಾಯಗಳನ್ನು ಭಿನ್ನವಾಗಿ ವ್ಯಕ್ತಪಡಿಸುವ ಸಾಧ್ಯತೆಯಿದೆ’ ಎಂದರು. ನಮಗೂ ಸ್ವಲ್ಪ ಮುಜುಗರವಾಗಿ ಒತ್ತಡದಲ್ಲಿ ಕಾರ್ಯಕ್ರಮ ನಡೆಸಿದಾಗ ಈರ್ವರೂ ಮಾತಿನ ಮೂಲಕ ಛಾಟಿ ಏಟನ್ನು ಪರಸ್ಪರ ಕೊಟ್ಟುಕೊಂಡರು. ಆದರೆ, ಸಮ್ಮೇಳನಕ್ಕೆ ಅಗೌರವವಾಗುವ ರೀತಿಯಲ್ಲಿ ವರ್ತಿಸಲಿಲ್ಲ.
ಅವರ ಮನಸ್ಸು ಪರಿಶುದ್ಧವಾಗಿತ್ತು. ಮುಲಾಜಿಲ್ಲದೆ ಅಭಿಪ್ರಾಯ ವ್ಯಕ್ತಪಡಿಸಿದರೂ ಅವರ ಸಾಮೀಪ್ಯವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಯಕ್ಷಗಾನದಲ್ಲೂ ಅವರು ಹೊಸ ಆವಿಷ್ಕಾರಗಳನ್ನು ಮಾಡಿದರು. ಯಕ್ಷಗಾನ ಕಲೆಯಲ್ಲಿ ಅಭಿವ್ಯಕ್ತಿಗಳು ಹೇಗೆ ಉಂಟಾದವು, ಪುರಾಣ ಕಥೆಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ವಿಧಾನ ಏನು? ಎಂಬಿತ್ಯಾದಿ ಅಧ್ಯಯನ ಮಾಡಿದರು. ಧಾರ್ವಿುಕ ಆಚರಣೆಗಳ ಕುರಿತಾಗಿ ಅಷ್ಟಾಗಿ ನಂಬಿಕೆ ಇಲ್ಲದಿದ್ದರೂ ಜೀವನಾದರ್ಶ ಮೈಗೂಡಿಸಿಕೊಳ್ಳಲೇಬೇಕು ಎಂಬ ತತ್ವ ಪ್ರತಿಬಿಂಬಿಸಿದವರು. ಅವರ ಹೆಸರಿನಲ್ಲಿ ಒಂದು ಸಂಘಟನೆಯೂ ಇದೆ. ಸ್ಮಾರಕವನ್ನು ನಿರ್ವಿುಸಲಾಗಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೋಟದಲ್ಲಿ ಕಾರಂತರ ಸಂಘಟನೆಯನ್ನು ಮಾಡಿದರು. ತನ್ಮೂಲಕ ಕಾರಂತರ ಸ್ಮರಣೆಯನ್ನು ಪ್ರತಿವರ್ಷ ಮಾಡಲಾಗುತ್ತದೆ. ಶಿವರಾಮ ಕಾರಂತರನ್ನು ಹತ್ತಿರದಿಂದ ಬಲ್ಲವರು, ಅವರ ಜೊತೆ ಬೆಳೆದವರು, ಒಡನಾಟ ಹೊಂದಿದವರು, ಅವರ, ಕೃತಿ, ನಡೆ-ನುಡಿಯಿಂದ ಪ್ರೇರಣೆ ಪಡೆದ ನನ್ನಂತಹ ಅನೇಕ ಮಂದಿ ಇದ್ದಾರೆ. ಕಾರಂತರ ವ್ಯಕ್ತಿತ್ವದ ಆದರ್ಶಗಳನ್ನು ಯುವ ಪೀಳಿಗೆ ಅರಿತುಕೊಳ್ಳಲಿ. ಅವರ ಕೆಲಸ-ಕಾರ್ಯ, ಸಾಧನೆಗಳು ಪ್ರೇರಣೆಯಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ತನ್ಮೂಲಕ ಕಾರಂತರು ಅಮರರಾಗಿರಲಿ ಎಂಬುದೇ ನಮ್ಮ ಆಶಯ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)