ಶಿಕ್ಷಣದ ಜತೆಗೆ ಕೌಶಲ ಸೇರಿದರೆ ಅಭಿವೃದ್ಧಿಗೆ ವೇಗ

SDM
Published on
ಭಾರತ ಸಂಪನ್ಮೂಲ ಭರಿತ ರಾಷ್ಟ್ರ. ನೆಲ, ಜಲ ಮಾತ್ರವಲ್ಲದೆ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಈ ಸಂಪನ್ಮೂಲಗಳನ್ನು ಹೇಗೆ, ಯಾವಾಗ, ಯಾವ ರೀತಿಯಲ್ಲಿ ಬಳಸಬೇಕೆಂಬ ಅರಿವು ಇದ್ದಾಗ ಮಾತ್ರ ಸಂಪನ್ಮೂಲಗಳು ಪೋಲಾಗದೆ ಸದ್ಬಳಕೆಯಾಗುವುದು. ಆ ಮೂಲಕ ನಮ್ಮ ನಾಡು ಅಭಿವೃದ್ಧಿ ಹೊಂದುವುದು. ಈ ಅರಿವು ಎಂಬುದನ್ನು ಜ್ಞಾನ ಎನ್ನಬಹುದು. ಈ ಜ್ಞಾನ ಹೇಗೆ ದೊರೆಯುತ್ತದೆ? ಹುಟ್ಟಿನಿಂದಲೇ ದೊರೆಯುವಂತಹದ್ದಲ್ಲ. ಅದು ಮನೆ, ಸಮಾಜ, ಶಾಲಾ, ಕಾಲೇಜುಗಳಲ್ಲಿ ಶಿಕ್ಷಣದ ಮೂಲಕ ಪಡೆಯುವಂತಹದ್ದು. ಹಾಗೆಂದ ಮಾತ್ರಕ್ಕೆ ಜ್ಞಾನವನ್ನು ಶಾಲಾ, ಕಾಲೇಜು ಕಲಿಕೆಗೆ ಸೀಮಿತಗೊಳಿಸುವ ಹಾಗಿಲ್ಲ. ಜ್ಞಾನಾರ್ಜನೆ ಹರಿಯುವ ನೀರಿನಂತೆ ನಿತ್ಯವೂ ನಿರಂತರವೂ ಆಗಿರುವಂತಹದ್ದು.

ಕ್ಷಣಶಃಕಣಶಶೆ ್ಚ ೖವ ವಿದ್ಯಾಮರ್ಥಂ ಚ ಸಾಧಯೇತ್ |

ಕ್ಷಣತ್ಯಾಗೇ ಕುತೋ ವಿದ್ಯಾ? ಕಣತ್ಯಾಗೇ ಕುತೋ ಧನಮ್ ||

‘ಕ್ಷಣಕ್ಷಣದಲ್ಲಿ ವಿದ್ಯೆಯನ್ನು, ಕಣ-ಕಣವಾಗಿ ಧನವನ್ನು ಸಂಪಾದಿಸಬೇಕು. ಕ್ಷಣವನ್ನು ಬಿಟ್ಟರೆ ವಿದ್ಯೆಯಾಗಲಿ, ಕಣವನ್ನು ಬಿಟ್ಟರೆ ಧನವಾಗಲಿ ಹೇಗೆ ತಾನೆ ದೊರಕಿತು?’ ಎಂಬರ್ಥ. ಮನುಷ್ಯ ಬದುಕಿರುವರೆಗೂ ವಿದ್ಯೆ, ಹಣವನ್ನು ಸಂಪಾದಿಸುತ್ತಲೇ ಇರಬೇಕಲ್ಲವೇ?

ವಿದ್ಯೆ ಅರ್ಥಾತ್ ಜ್ಞಾನವನ್ನು ಪ್ರತಿಕ್ಷಣವೂ ಪಡೆದುಕೊಳ್ಳುತ್ತ ಹೋಗುತ್ತೇವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ-ತಾಯಿಯಿಂದ ಮೊದಲ್ಗೊಂಡು, ನೆರೆ-ಹೊರೆ ಸಮಾಜದ ಮೂಲಕವಾಗಿ ಜ್ಞಾನವನ್ನು ಪಡೆಯಲಾರಂಭಿಸುತ್ತೇವೆ. ಈ ಜ್ಞಾನವೆಲ್ಲ ನಮ್ಮ ಪೂರ್ವಜರ ಆಸ್ತಿ. ಅವೆಲ್ಲವೂ ಆಯಾ ಕಾಲಕ್ಕೆ ಅನುಗುಣವಾಗಿ ಮಾರ್ಪಾಡು, ಸುಧಾರಣೆಗೊಳ್ಳುತ್ತ ನಮಗೆ

ಬಳುವಳಿಯಾಗಿ ಬಂದಿರುವಂತಹದ್ದು. ಉದಾಹರಣೆಗೆ, ಕೃಷಿಕನಾದರೆ ಯಾವಾಗ ಏನು ಬೆಳೆ ಬೆಳೆಯಬೇಕು? ಯಾವ ಗೊಬ್ಬರ ಹಾಕಬೇಕು? ಹೇಗೆ ನಿರ್ವಹಣೆ ಮಾಡಬೇಕು ಎಂಬಿತ್ಯಾದಿಗಳನ್ನು ಅಜ್ಜ ತನ್ನ ಮಗ(ಅಪ್ಪ)ನಿಗೆ, ಆತನು ತನ್ನ ಮಗ(ಮೊಮ್ಮಗ)ನಿಗೆ ತಿಳಿಸುತ್ತಾನೆ. ಅಕ್ಕಸಾಲಿಗ ಬಂಗಾರವನ್ನು ತಿಕ್ಕಿ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ? ಹಿಂದಿನ ವಿನ್ಯಾಸಗಳು ಏನು? ಈಗ ಜನ ಯಾವ ವಿನ್ಯಾಸ ಬಯಸುತ್ತಾರೆ, ಹೇಗೆ ಆಭರಣ ತಯಾರಿಸಬಹುದು, ಗ್ರಾಹಕರ ಜೊತೆ ವ್ಯವಹಾರ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳನ್ನು ಮಗ, ಮೊಮ್ಮನಿಗೆ ವರ್ಗಾಯಿಸುತ್ತಾನೆ. ಇಂದಿನ ಪ್ರಕಸ್ತ ಜೀವನಶೈಲಿಗೆ ಒಪು್ಪವಂಥ ವಿನ್ಯಾಸ ಮತ್ತು ಆಕರ್ಷಣೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವುದನ್ನು ತಾನೇ ಅರಿತು ಬೆಳೆಸಬೇಕಾಗುತ್ತದೆ. ಅಂದರೆ ಆಧುನಿಕ ಸಮಾಜದ ಬೇಕು, ಬೇಡಗಳನ್ನು ಅರಿತುಕೊಳ್ಳುವ ಕೌಶಲವನ್ನು ಹೊಂದಿರಬೇಕಾದುದು ಅವಶ್ಯ. ಯಾವುದೇ ಕ್ಷೇತ್ರವಿರಲಿ ಅದರ ಬಗ್ಗೆ ಬರೀಜ್ಞಾನವಿದ್ದರೆ ಸಾಲದು, ಜ್ಞಾನವನ್ನು ಬಳಸುವ ಕೌಶಲವೂ ಅಷ್ಟೇ ಅಗತ್ಯ.

ಪ್ರಸ್ತುತ ಸಂದರ್ಭದಲ್ಲಿ ಬುದ್ಧಿ, ಶಕ್ತಿ, ಆಸಕ್ತಿ ಇತ್ಯಾದಿಗಳ ಅನುಸಾರವಾಗಿ ಯಾರು ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಕೃಷಿಕನ ಮಗ ಉದ್ಯಮಿಯಾಗಬಹದು. ಉದ್ಯಮಿಯ ಮಗ ಕೃಷಿಯಲ್ಲಿ ತೊಡಗಿ ಕೊಳ್ಳಬಹುದು. ಎಲ್ಲವೂ ಅವರವರ ಇಚ್ಛೆಯನುಸಾರ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕಾಗಿ ವ್ಯವಸ್ಥಿತವಾದ ಶಿಕ್ಷಣವನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತಿದೆ. ಇನ್ನೂ ಮುಂದುವರಿದು ಶಿಕ್ಷಣದ ಜೊತೆಗೆ ಕೌಶಲವನ್ನೂ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಆದರೂ, ವ್ಯಾಸಂಗ ಸಮಯದಲ್ಲೇ ಕೌಶಲಯುಕ್ತ ಶಿಕ್ಷಣಕ್ಕೆ

ಆದ್ಯತೆ ನೀಡುವ ಕಾರ್ಯ ಇನ್ನೂ ಹೆಚ್ಚಬೇಕಿದೆ. ಮೈಸೂರಿನ ಇನ್​ಸ್ಟಿಟ್ಯೂಟ್ ಫಾರ್ ಮ್ಯಾನೇಜ್​ವೆುಂಟ್​ನಲ್ಲಿ ಮತ್ತು ಧಾರವಾಡದ ಎಸ್​ಡಿಎಂ ವಿಶ್ವವಿದ್ಯಾಲಯದಲ್ಲಿ ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಸಹಕಾರದೊಂದಿಗೆ ನೋಡಲ್ ಕೇಂದ್ರಗಳನ್ನು ಶ್ರೀ ಧರ್ಮಸ್ಥಳದ ವತಿಯಿಂದ ಆರಂಭಿಸಿದೆವು. ಪ್ರಾಯೋಗಿಕ ಕಾರ್ಪೆರೇಟ್ ಶಿಕ್ಷಣದ ಜೊತೆಗೆ ನೈತಿಕ, ಸಾಮಾಜಿಕ ಜವಾಬ್ದಾರಿ ಮತ್ತು ಸುಸ್ಥಿರತೆ ಬಗ್ಗೆ ಅರಿವು ವಿದ್ಯಾರ್ಥಿಗಳಿಗೆ ಲಭಿಸಬೇಕು ಎಂಬುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಶ್ರೀ ಕ್ಷೇತ್ರ ಧರ್ಮಸ್ಥಳದ

ಶಿಕ್ಷಣ ಸಂಸ್ಥೆಗಳಲ್ಲಿ ಈ ಅಂಶಗಳನ್ನು ರೂಢಿಸಿಕೊಂಡಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ, ಭಾರತೀಯ ನೀತಿ ಮತ್ತು ಮೌಲ್ಯಗಳ ತಿಳಿವಳಿಕೆಗೆ ವಿಶೇಷ ಪ್ರಾಮುಖ್ಯ ನೀಡಲಾಗುತ್ತಿದೆ. ಸುಗಮ ಕಲಿಕೆಗೆ ಪೂರಕ ಹಾಗೂ ಅವಶ್ಯವಾಗಿರುವ ಆಧುನಿಕ ತಂತ್ರಜ್ಞಾನಗಳನ್ನು ಸಂದರ್ಭಾನುಸಾರವಾಗಿ ಬಳಸುವುದರ ಜೊತೆಗೆ ನೈಜ ಭಾರತೀಯ ಮೌಲ್ಯ, ಮನೋಭಾವಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಗಳಲ್ಲಿ ತಮ್ಮಲಿರುವ ಪ್ರತಿಭೆಗಳನ್ನು ಕಂಡುಕೊಳ್ಳುವಂತೆ ಮಾಡುವುದು, ನಾಯಕತ್ವ ಗುಣ ಬೆಳೆಸುವುದು ನಮ್ಮ ಉದ್ದೇಶ.

ನಾವು ಕಂಡ ಹಾಗೆ ವಿಶ್ವದಲ್ಲಿ ಎಲ್ಲ ರಂಗದಲ್ಲಿ ಆಗಿರುವಂತಹ ಪ್ರಗತಿಯು ಕ್ಷಣ-ಕ್ಷಣಕ್ಕೂ ಸಂಗ್ರಹಿಸಿದ ಜ್ಞಾನದಿಂದಾಗಿದೆ. ಈ ಜ್ಞಾನದ ಜೊತೆಗೆ ಕೌಶಲಗಳು ಬೆರೆತಾಗ ಮತ್ತಷ್ಟು ಸಂಶೋಧನೆ, ಅಭಿವೃದ್ಧಿ, ಪ್ರಗತಿಗಳಾಗಿರುವುದನ್ನು ಕಾಣಬಹುದು. ಉದಾಹರಣೆಗೆ, ಒಂದು ಚಕ್ರ ಉರುಳುತ್ತೆ ಎಂಬುದನ್ನು ಮೊದಲಿಗೆ ಕಂಡುಕೊಂಡರು. ಚಕ್ರದ ಕುರಿತಾದ ಜ್ಞಾನ ವಿಸ್ತಾರಗೊಂಡಂತೆ ಕೌಶಲಗಳನ್ನು ಉಪಯೋಗಿಸಿ ಚಕ್ರಗಳನ್ನು ವಾಹನಕ್ಕೆ, ರಾಟೆ, ವಿವಿಧ ಯಂತ್ರೋಪಕರಣ ಸೇರಿ ನಾನಾ ಬಗೆಯಲ್ಲಿ ಬಳಕೆ ಮಾಡಿಕೊಂಡರು. ಇಂದಿನ ದಿನಗಳಲ್ಲಿ ಚಕ್ರದಿಂದ ಅನೇಕ ಸಂಶೋಧನೆಗಳು ಮತ್ತು ಸಾಧನೆಗಳಾಗಿವೆ. ಹೀಗೆ ಸಾಧಿಸಿದ ಪ್ರಗತಿ ಕೂಡ ಒಂದೇ ದಿನ ದಲ್ಲಿ ಆಗಿದ್ದಲ್ಲ. ಕ್ಷಣ-ಕ್ಷಣದಲ್ಲಿ ವಿದ್ಯೆಯನ್ನು ಕಣ-ಕಣವಾಗಿ ಸಂಗ್ರಹಿಸಿದ ವಿಷಯ, ಕೌಶಲಗಳಿಂದಲೇ ಆಗಿದೆ.

ಮಹಾಕೃತಿ ಮಹಾಭಾರತವನ್ನು ಬರೆಯುವಂತೆ ಬ್ರಹ್ಮನು ಶ್ರೀ ವ್ಯಾಸ ಋಷಿಗಳಿಗೆ ಸೂಚಿಸಿದ. ಇದಕ್ಕಾಗಿ ಗಣೇಶನ ನೆರವು ಪಡೆಯಬಹುದೆಂದೂ ಬ್ರಹ್ಮ ಹೇಳಿದ. ವ್ಯಾಸರು ಕಥೆ ಹೇಳುತ್ತ ಹೋದರೆ, ಗಣೇಶ ಬರೆದುಕೊಳ್ಳುತ್ತ ಹೋಗಬಹುದೆಂದು ಬ್ರಹ್ಮ ವಿವರಿಸಿದ. ಗಣೇಶನು ಬ್ರಹ್ಮನ ಬಳಿಗೆ ಬಂದು ಮಹಾಭಾರತ ಬರೆದುಕೊಳ್ಳಲು ಒಪ್ಪಿದ. ಆದರೆ ಒಂದು ಷರತ್ತಿನ ಮೇಲೆ ತಾನು ಬರೆದುಕೊಳ್ಳುವುದಾಗಿ ತಿಳಿಸಿದ. ವ್ಯಾಸ ಮಹರ್ಷಿಗಳು ಯಾವುದೇ ತಡೆ, ವಿರಾಮ ಇಲ್ಲದೆ ಸತತವಾಗಿ ಕಥೆ ಹೇಳುತ್ತ ಹೋಗಬೇಕು ಎಂಬುದೇ ಆ ಷರತ್ತು. ವ್ಯಾಸರು ಇದಕ್ಕೆ ಒಪ್ಪಿದರು. ಆದರೆ ಅವರೂ ಒಂದು ಷರತ್ತು ಹಾಕಿದರು. ತಾವು ಹೇಳುವ ಪ್ರತಿ ಶಬ್ದವನ್ನೂ ಬರೆಯುವ ಮುನ್ನ ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಹಾಭಾರತ ಕಥೆ ಹೇಳುವ, ಬರೆಯುವ ಕಾರ್ಯ ನಡೆಯಿತು. ಗಣೇಶ ಪದ್ಯವೊಂದನ್ನು ಬರೆದು ಮುಗಿಸಿದ ಕೂಡಲೇ ವ್ಯಾಸರು ಕ್ಲಿಷ್ಟಕರ ಪದ್ಯ ಹೇಳುತ್ತಿದ್ದರು. ಗಣೇಶ ಅದನ್ನು ಅರ್ಥ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ವ್ಯಾಸರಿಗೆ ಮುಂದಿನ ಪದ್ಯ ರಚಿಸಲು ಕಾಲಾವಕಾಶ ಸಿಗುತ್ತಿತ್ತು. ಗಣೇಶ ಹಿಂದಿನ ಪದ್ಯವನ್ನು ಅರ್ಥ ಮಾಡಿಕೊಂಡು ಬರೆದ ಮೇಲೆ ಈ ಮುಂದಿನ ಪದ್ಯ ಬರೆಯಲು ಆರಂಭಿಸುತ್ತಿದ್ದ. ಇಲ್ಲಿ ವ್ಯಾಸರ ಜ್ಞಾನದ ಜೊತೆಗೆ ಗಣೇಶನ ಕೌಶಲವೂ ಸಮ್ಮಿಳಿತಗೊಂಡು ಮಹಾಕಾವ್ಯ ರೂಪುಗೊಂಡಿತು. ಮುಖ್ಯ ವಿಷಯವೇನೆಂದರೆ ಗಣೇಶನ ಏಕಗ್ರಾಹಿತನ, ಅರ್ಥೈಸಿಕೊಳ್ಳುವಿಕೆ, ವಿಶ್ಲೇಷಣ ಚಾತುರ್ಯ ಇತ್ಯಾದಿಗಳೆಲ್ಲ ಇಂದಿನ ಶಿಕ್ಷಣ ಪದ್ಧತಿಗೆ ಅನುಕರಣೀಯವಾದವುಗಳಾಗಿವೆ.

ಒಮ್ಮೆ ಊರಿನ ನಾಯಕನೊಬ್ಬ ತನ್ನ ನಂತರದ ನಾಯಕನಿಗಾಗಿ ತಲಾಶ್ ನಡೆಸುತ್ತಿದ್ದ. ವಿವಿಧ ಪರೀಕ್ಷೆಗಳನ್ನು ಒಡ್ಡುತ್ತಿದ್ದ. ಒಮ್ಮೆ ತಲಾ ನಾಲ್ಕು ಜನರುಳ್ಳ ಎರಡು ತಂಡಗಳನ್ನು ಮಾಡಿ ಅವರ ಕೈಯಲ್ಲಿ ಒಂದೊಂದು ಕೊಡವನ್ನು ನೀಡಲಾಯಿತು. ಬಳಿಕ ಅವರನ್ನುದ್ದೇಶಿಸಿ, ‘ನಾಳೆ ಬೆಳಗ್ಗೆ 10 ಗಂಟೆಯೊಳಗೆ ಈ ಕೊಡದ ತುಂಬ ನೀರನ್ನು ತುಂಬಿಸಬೇಕು’ ಎಂಬ ಆದೇಶ ಕೊಡಲಾಯಿತು. ಹಾಗೂ ಅವರನ್ನು ಹುಲ್ಲುಗಾವಲಿರುವ ಪ್ರದೇಶದಲ್ಲಿ ಬಿಡಲಾಯಿತು. ತಂಡಗಳಲ್ಲಿ ಇದ್ದವರ ಬಳಿ ಉಟ್ಟ ಬಟ್ಟೆ ಹೊರತು ಬೇರಾವುದೇ ಸಲಕರಣೆ, ವ್ಯವಸ್ಥೆಗಳಿರಲಿಲ್ಲ. ಇದ್ದದ್ದು ಮಾತ್ರ ಒಂದೊಂದು ಕೊಡ. ಎ ತಂಡದ ನಾಲ್ವರು ಕುಳಿತು ರ್ಚಚಿಸಿ ನೀರನ್ನು ಹೇಗೆ ತುಂಬುವುದೆಂದು ಯೋಚನೆ ಮಾಡಿದರು. ತಲೆಗೊಬ್ಬರಂತೆ ಒಂದೊಂದು ಹೇಳಿದರು. ಅಲ್ಲಿನವರ ಮಾತು ಯಾರಿಗೂ ಸಮ್ಮತವಾಗದೇ ಇದ್ದಾಗ ಅವರವರು ಬಾವಿ ಸಿಗುತ್ತದೋ, ಕೊಳ ಸಿಗುತ್ತದೋ ಎಂದು ಹುಲ್ಲುಗಾವಲಿನಲ್ಲಿ ಅಲೆಯತೊಡಗಿದರು. ತಂಡ ಬಿ ಸದಸ್ಯರು ಕೂಡ ಕುಳಿತು ಸಮಾಲೋಚಿಸಿದರು. ಒಬ್ಬೊಬ್ಬರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಅದರಲ್ಲಿ ಒಬ್ಬ ಆ ಮೂವರನ್ನುದ್ದೇಶಿಸಿ, ‘ಇಲ್ಲಿ ಯಾವುದೇ ಕೆರೆ, ಬಾವಿಗಳು ಇರುವಂತೆ ತೋಚುತ್ತಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ಕೊಡದ ತುಂಬ ನೀರು ತುಂಬಬೇಕು. ರಾತ್ರಿಯಾದ ಮೇಲೆ ಹುಲ್ಲಿನ ಮೇಲೆ ಇಬ್ಬನಿ ಮೂಡುತ್ತದೆ ಅದನ್ನು ಸಂಗ್ರಹಿಸಬಹುದು. ಅದನ್ನು ಸಂಗ್ರಹಿಸಲು ನಮ್ಮ ಬಳಿ ಯಾವುದೇ ಸಾಧನಗಳಿಲ್ಲ. ಹಾಗಾಗಿ ನಮ್ಮ ಬಳಿಯಿರುವ ಅಂಗಿಯನ್ನು ಹುಲ್ಲಿನ ಮೇಲೆ ಸವರುತ್ತ ಹೋದಾಗ ನೀರಿನಾಂಶವನ್ನು ಬಟ್ಟೆ ಹೀರುತ್ತದೆ. ಬಟ್ಟೆಯನ್ನು ಹಿಂಡಿದಾಗ ನೀರು ದೊರೆಯುತ್ತದೆ ಎಂದ. ಆ ಮೂವರನ್ನು ಆ ಕಾರ್ಯಕ್ಕೆ ಒಪ್ಪಿಸಿ ಕೆಲಸವನ್ನು ಹಂಚಿಕೆ ಮಾಡಿದ. ಮರುದಿನ ಊರಿನ ನಾಯಕ ಬಂದಾಗ ಬಿ ತಂಡದವರಲ್ಲಿ ತುಂಬಿದ ಕೊಡವಿತ್ತು. ಎ ತಂಡದವರು ಖಾಲಿ ಕೊಡದೊಂದಿಗೆ ಮರಳಿದ್ದರು. ಬಿ ತಂಡದಲ್ಲಿ ನಾಯಕನಂತೆ ಇದ್ದ ಯುವಕ ತಾವು ಹೇಗೆ ನೀರನ್ನು ಸಂಗ್ರಹಿಸಿದೆವು ಎಂಬೆಲ್ಲ ವಿಚಾರಗಳನ್ನು ವಿಸõತವಾಗಿ ತಿಳಿಸಿದ. ಊರಿನ ನಾಯಕ ಯುವಕನ ಜಾಣ್ಮೆ ಹಾಗೂ ನಾಯಕತ್ವ ಗುಣವನ್ನು ಮೆಚ್ಚಿಕೊಂಡ. ಇದು ಒಂದು ಉದಾಹರಣೆಯಷ್ಟೇ.

ಕಾಪೋರೇಟ್ ಸಂಸ್ಥೆಗಳು, ಉದ್ಯಮಗಳು ಕಷ್ಟಪಟ್ಟು ಕೆಲಸ ಮಾಡುವವರಿಗಿಂತ ಹೆಚ್ಚಾಗಿ ಜಾಣ್ಮೆಯಿಂದ ಕೆಲಸ ಮಾಡುವವರಿಗೆ ಆದ್ಯತೆ ನೀಡುತ್ತವೆ. ಹಾಗಾಗಿ ಯುವ ಸಮೂಹಕ್ಕೆ ತರಬೇತಿಗಳ ಮೂಲಕ ಕೌಶಲಯುತರನ್ನಾಗಿಸ ಬೇಕಾದುದು ಅಗತ್ಯ. ಜ್ಞಾನ ಮತ್ತು ವಿಜ್ಞಾನ ಸಮ್ಮಿಳಿತವಾಗಬೇಕಿದೆ. ಸಂಸಾರದ ನಿರ್ವಹಣೆಯಿಂದ ಹಿಡಿದು ಬದುಕಿನ ಎಲ್ಲ ರಂಗದಲ್ಲಿಯೂ ಆಡಳಿತ ನಿರ್ವಹಣೆಯ (ಮ್ಯಾನೇಜ್​ವೆುಂಟ್) ವಿಷಯ ಸೇರಿಕೊಳ್ಳುತ್ತದೆ. ಸಂಸಾರ ನಿರ್ವಹಿಸುವುದು ಒಂದು ಕಲೆ. ಕರೊನಾ ಸಂಕಷ್ಟ ಸಂದರ್ಭದಲ್ಲಿ ಒಬ್ಬ ಗೃಹಸ್ಥ ಮತ್ತು ಗೃಹಿಣಿ ಸಂಸಾರವನ್ನು ನಿರ್ವಹಿಸಿಕೊಂಡು ಹೋಗುವ ಕಲೆಯ ಬಗ್ಗೆ ಸಾಕಷ್ಟು ಅರಿತುಕೊಳ್ಳಬೇಕಾಗುತ್ತದೆ. ಎಷ್ಟೋ ಜನ ಕರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲಿದ್ದಾರೆ. ಉಳಿತಾಯ ಮಾಡಿದವರು ಮಾತ್ರ ಸಂಸಾರವನ್ನು ಸಮರ್ಪಕ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿದ್ದಾರೆ. ಹನಿ ಹನಿ ನೀರು ಕೂಡಿ ಹಳ್ಳವಾದ ಹಾಗೆ ಸಣ್ಣ ಸಣ್ಣ ಉಳಿತಾಯಗಳು ಕಷ್ಟಕಾಲದಲ್ಲಿ ನೆರವಾಗುತ್ತವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ತನ್ನ ಸದಸ್ಯರಲ್ಲಿ ವಾರಕ್ಕೆ 10ರಿಂದ 20 ರೂ. ಉಳಿತಾಯ ಮಾಡುವಂತೆ ಪ್ರೇರೇಪಿಸಿದ್ದು, 25 ವರ್ಷದಲ್ಲಿ ಈಗ 1400 ಕೋಟಿ ರೂ. ಉಳಿತಾಯವಾಗಿದೆ. ಅನೇಕ ಬಾರಿ ಉಳಿತಾಯದ ಸಣ್ಣ ಮೊತ್ತವನ್ನು ಕಂಡು ಇಷ್ಟೇನಾ ಎಂದು ಮೂಗು ಮುರಿದವರಿದ್ದಾರೆ. ಆದರೆ ಸಂಗ್ರಹವಾದ ಉಳಿತಾಯದ ಹಣದ ಮೂಲಕ ಸಾಲ ಪಡೆದು ವ್ಯವಹಾರದಲ್ಲಿ ತೊಡಗಿ ಯಶಸ್ವಿಯಾದ ಅನೇಕ ಫಲಾನುಭವಿಗಳಿದ್ದಾರೆ. ಒಂದೇ ದಿನದಲ್ಲಿ ಕೋಟಿಗಟ್ಟಲೆ ಸಂಪಾದನೆ ಆಗುವುದಿಲ್ಲ. ಬೀಜ ಗಿಡವಾಗಿ ಮರವಾಗಿ ಫಸಲು ಕೊಡಲು ಸಾಕಷ್ಟು ಸಮಯ ತೆಗೆದುಕೊಳ್ಳುವಂತೆ ಹಣ ಸಂಪಾದನೆಗೂ ಸಮಯ ಅಗತ್ಯ. ಸೂಕ್ತ ಬಂಡವಾಳದ ಮೂಲಕ ಧನಸಂಗ್ರಹ ಸಾಧ್ಯ ಎಂಬುದನ್ನು ಅರಿಯಬೇಕು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net