ಕೊನೆಯದಾಗಿ, ಡಿಕೆಶಿಯವರ ಆದಿಗುರು ಬಂಗಾರಪ್ಪನವರು ಅಂದು ಅಧಿಕಾರ ಕಳೆದುಕೊಳ್ಳುವ ಮುನ್ನ ಪತ್ರಕರ್ತರಿಗೆ ಹೇಳಿದ್ದ ಒಂದು ಶಾಶ್ವತ ಸತ್ಯದ ಮಾತು ಹೊಸ ಸಿಎಂಗೆ ಸದಾ ನೆನಪಿರಬೇಕು. ‘ಮುಖ್ಯಮಂತ್ರಿ ಎಂಬುದು ಕ್ಷಣಿಕ, ಮಾಜಿ ಮುಖ್ಯಮಂತ್ರಿ ಎಂಬುದು ಶಾಶ್ವತ’ ಎಂಬುದು ಆ ಮಾತು. ಬಂಗಾರಪ್ಪನವರು ಅಷ್ಟೆಲ್ಲ ಹೋರಾಟ ಮಾಡಿ, ತರಹೇವಾರಿ ಪಕ್ಷಗಳನ್ನು ಕಟ್ಟಿ, ಹೈಕಮಾಂಡಿಗೆ ಸವಾಲು ಹಾಕಿ ಸಿಎಂ ಆದರೂ ಅಧಿಕಾರ ಅನುಭವಿಸಿದ್ದು ಕೇವಲ 2 ವರ್ಷ 16 ದಿನ ಮಾತ್ರ! ಸಿದ್ದರಾಮಯ್ಯನವರಿಗೆ ಈಗ ಆ ಮಾತಿನ ಮೌಲ್ಯ ಅರ್ಥ ಆಗಿರಬಹುದು. ಡಿಕೆಶಿಯವರಿಗೂ ಅದು ಮುಂದೆ ಅರ್ಥವಾಗುತ್ತದೆ. ಆದರೆ, ಅದರ ನಡುವಿನ ಈ ಆಡಳಿತದ ಅವಧಿಯಲ್ಲಿ ರಾಜಕೀಯ ಜೋಲಿ ತಪ್ಪದೇ, ಸಮತೋಲನ ಕಾಯ್ದುಕೊಂಡರೆ ಅವರಿಗೂ ಒಳಿತು, ರಾಜ್ಯಕ್ಕೂ ಒಳಿತು.