

| (ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)
ಈ ಎರಡೂ ಸಂಗತಿಗಳು ತೀರಾ ವಿಚಿತ್ರವಾದವು. ಸಾಮಾಜಿಕ ಜಾಲತಾಣಗಳಲ್ಲಂತೂ ಸ್ವಘೊಷಿತ ಶಾಂತಿದೂತರು, ಎಡಪಂಥೀಯರು, ಸೆಕ್ಯುಲರ್ವಾದಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಮೆರಿಕ, ಇಸ್ರೇಲ್ ಜಂಟಿ ದಾಳಿಗೆ ಮೋದಿ ಮತ್ತು ಸಂಘಪರಿವಾರದ ಸಂಚು ಕಾರಣವೆಂದು ಜರಿಯುವ ಜತೆಗೆ, ಓತಪ್ರೋತವಾಗಿ ಖಮೇನಿ ಗುಣಗಾನ ಮಾಡುವ ಪೋಸ್ಟ್ಗಳು ಬೆಳಗಾಗುವುದರೊಳಗೆ ರಾರಾಜಿಸತೊಡಗಿದವು.
ಮತ್ತೊಂದೆಡೆ ನಮ್ಮ ಕರ್ನಾಟಕದ ಹತ್ತಾರು ಊರು, ಕೇರಿಗಳಿಂದ ಹಿಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ಉದ್ದಗಲಕ್ಕೆ ಒಂದು ವರ್ಗ ಗುಂಪು ಗುಂಪಾಗಿ ಸೇರಿ ಗದ್ಗದಿತರಾಗಿ ಖಮೇನಿ ಸಾವಿಗೆ ಕಣ್ಣೀರು ಸುರಿಸತೊಡಗಿದರು. ಈ ಪ್ರವೃತ್ತಿ ಇನ್ನು ಕೆಲ ದಿನಗಳಲ್ಲಿ ನಾನಾ ತೆರನಾದ ಸ್ವರೂಪ ಪಡೆದುಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದರೆ ಇವರೆಂಥ ವಿತಂಡವಾದಿಗಳು ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ವಾಸ್ತವದಲ್ಲಿ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಆ ಎರಡೂ ದೇಶಗಳಿಗೆ ಅದರದ್ದೇ ಕಾರಣಗಳು ಇವೆ.
ಆ ದಾಳಿಗೆ, ಅವರ ವೈರತ್ವಕ್ಕೆ ನಲ್ವತ್ತರಿಂದ ನಲ್ವತೆôದು ವರ್ಷಗಳ ಸುದೀರ್ಘ ಹಿನ್ನೆಲೆ ಇದೆಯೆಂಬ ಸತ್ಯದ ಅರಿವಿದ್ದೂ ಅದಕ್ಕೆ ಮೋದಿ ಮತ್ತು ಸಂಘದ ಸಂಚು ಕಾರಣವೆಂದು ಜರಿಯತೊಡಗಿದ್ದಾರೆ. ಇದು ಸ್ಥಾಪಿತ ಹಿತಾಸಕ್ತಿಗಳ ಮೈ ಪರಚಿಕೊಳ್ಳುವ ಪ್ರಹಸನ ಎನ್ನದೆ ವಿಧಿಯಿಲ್ಲ. ಅದಕ್ಕಿಂತ ಹೆಚ್ಚಾಗಿ ಮುಂಬರುವ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅನುವಾಗಲಿ ಎಂದು ಮೋದಿ ಅವರ ಗೆಳೆಯ ಬೆಂಜಮಿನ್ ನೆತನ್ಯಾಹು ಮುಸ್ಲಿಂ ಜಗತ್ತಿನಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿ ಮಾಡಿದ್ದಾರೆಂಬ ಅತಿರೇಕದ, ಅವಾಸ್ತವದ ತರ್ಕವನ್ನೂ ಕೆಲವರು ಮುಂದಿಡತೊಡಗಿದ್ದಾರೆ.
ವಿಶೇಷ ಎಂದರೆ ಇವರ ಶಾಂತಿ ಮತ್ತು ಸೆಕ್ಯುಲರ್ ಕಣ್ಣಿಗೆ ಇಡೀ ಮುಸ್ಲಿಂ ಜಗತ್ತನ್ನು ಭಯೋತ್ಪಾದನೆಯ ಕೂಪಕ್ಕೆ ತಳ್ಳುವ ಪ್ರೖೆಮ್ ಅಜೆಂಡಾ ಹೊಂದಿ, ಆ ದಿಶೆಯಲ್ಲಿ ಅಣುಬಾಂಬ್ ಸಹಿತ ಸನ್ನದ್ಧನಾಗುತ್ತಿದ್ದ ಅಯಾತೊಲ್ಲಾ ಖಮೇನಿ ಶಾಂತಿದೂತನಾಗಿ ಕಾಣುತ್ತಾನೆ. ‘ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್’ ಎಂಬ ತತ್ವವನ್ನು ಅನುಸರಿಸುವ ಪ್ರಧಾನಿ ಮೋದಿ ಯುದ್ಧದ ಸಂಚುಕೋರನಾಗಿ, ಮುಸ್ಲಿಂವಿರೋಧಿಯಾಗಿ ಕಾಣುತ್ತಾರೆ. ಈ ಮೂರ್ಖತನದ ಪರಮಾವಧಿ ಆಲೋಚನೆಗೆ, ವರ್ತನೆಗೆ ಯಾರಾದರೂ ಪರಿಹಾರ ಹೇಳಲು ಸಾಧ್ಯವುಂಟೇ!?
ಹಾಗೆ ನೋಡಿದರೆ ಇರಾನ್, ಯೆಮೆನ್, ಬಹರೈನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಕತಾರ್, ಯುಎಇ, ಕುವೈತ್, ಸಿರಿಯಾ, ಲಿಬಿಯಾ ಮುಂತಾದ ದೇಶಗಳಲ್ಲಿ ತೀವ್ರತರನಾದ ಯುದ್ಧದ ಕಾರ್ವೇಡ ಆವರಿಸಿದೆ. ಇದಕ್ಕೆ ಮೂಲ ಕಾರಣ ಮೋದಿ, ಇಸ್ರೇಲಿನ ನೆತನ್ಯಾಹು ಅಥವಾ ಅಮೆರಿಕದ ಟ್ರಂಪ್ ಕಾರಣ ಅಲ್ಲವೇ ಅಲ್ಲ. ಮುಸ್ಲಿಂ ಒಳಪಂಗಡಗಳಾದ ಶಿಯಾ, ಸುನ್ನಿ ದಂಗೆ ಮತ್ತು ಮುಸ್ಲಿಮೇತರರನ್ನು ಗುರಿಯಾಗಿಸಿ ಭಯೋತ್ಪಾದನೆ ಬೆಳೆಸಲು ಆಯಾ ದೇಶಗಳ ಆಳುವ ಸತ್ತೆಗಳು ಪ್ರೇರಣೆ ಮತ್ತು ಪೋಷಣೆ ನೀಡಿದ್ದೇ ಕಾರಣ. ಈ ಸಂಗತಿಯನ್ನು ಅರಿಯುವ ಸಣ್ಣ ಪ್ರಯತ್ನವನ್ನೂ ಮುಸ್ಲಿಂ ಮನಸ್ಥಿತಿಯಾಗಲಿ ಅಥವಾ ಅವರ ಬೆಂಬಲಕ್ಕೆ ಕಣ್ಣೀರು ಸುರಿಸುವ ಸೆಕ್ಯುಲರ್ ಮನಸ್ಥಿತಿಯಾಗಲಿ ಮಾಡುವುದಿಲ್ಲ ಎಂಬುದೇ ವಿಚಿತ್ರವಾದ್ದು.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಲು ಅಸಲಿ ಕಾರಣ ಬೇರೆ ಇದೆ. ಆ ಕಡೆ ಗಮನ ಹರಿಸೋಣ. ಇರಾನ್ ಮತ್ತು ಮಧ್ಯಪ್ರಾಚ್ಯದ ದೇಶಗಳು ಮಾರಕ ಯುದ್ಧಾಸ್ತ್ರಗಳನ್ನು ಉತ್ಪಾದಿಸಿ, ಸಂಗ್ರಹಿಸುತ್ತಿರುವುದರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೇ ಇದ್ದರು. ಆ ಹಿನ್ನೆಲೆಯಲ್ಲಿ ಖಮೇನಿ ಜೊತೆಗೆ ಜಿನೇವಾದಲ್ಲಿ ಮಾತುಕತೆಯೂ ನಡೆಯಿತು. ಆದರೆ ಅದರ ಪರಿಣಾಮ ಮಾತ್ರ ಶೂನ್ಯ ಆಗಿತ್ತು.
ನಿಜದಲ್ಲಿ ಇರಾನ್ ಮುಖ್ಯಸ್ಥ ಖಮೇನಿ ಅಣ್ವಸ್ತ್ರ ಸನ್ನದ್ಧತೆಯಲ್ಲಿ ತೊಡಗಿ ದಶಕಗಳೇ ಕಳೆದವು. ಯುದ್ಧೋನ್ಮಾದವನ್ನು ತೊರೆಯುವಂತೆ, ಅಣ್ವಸ್ತ್ರ ಸಂಗ್ರಹ ಪ್ರವೃತ್ತಿ ಕೈಬಿಡುವಂತೆ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಬೇರೆಬೇರೆ ಮುಸ್ಲಿಂ ದೇಶಗಳ ಮೂಲಭೂತವಾದಿಗಳು ಮತ್ತು ಭಯೋತ್ಪಾದಕ ಶಕ್ತಿಗಳ ಸಂಗ ತೊರೆಯುವಂತೆ ಖಮೇನಿ ಮೇಲೆ ಟ್ರಂಪ್ ಈ ಹಿಂದಿನ ಅವಧಿ ಮತ್ತು ಈಗಿನ ಅವಧಿಯಲ್ಲಿ ನಿರಂತರ ಒತ್ತಡ ಹಾಕುತ್ತಲೇ ಇದ್ದರು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡ ಇದೇ ಕಿವಿಮಾತು ಹೇಳಿ, ಜಗತ್ತಿನ ಹಿತದೃಷ್ಟಿಯಿಂದ ಅಣ್ವಸ್ತ್ರ ಯೋಜನೆ ಕೈಬಿಡುವಂತೆ ಖಮೇನಿಗೆ ಸ್ಪಷ್ಟ ಫರ್ವನು ಹೊರಡಿಸಿತ್ತು. ಇದ್ಯಾವುದನ್ನೂ ಖಮೇನಿ ಕಿವಿಗೆ ಹಾಕಿಕೊಳ್ಳದೇ ಹೋದಾಗ, ಖಮೇನಿ ಪದಚ್ಯುತಿಗೆ ಸಂಕಲ್ಪ ಮಾಡಿದ್ದ ಇರಾನ್ ಆಂತರಿಕ ಹೋರಾಟಗಾರರಿಗೂ ಟ್ರಂಪ್ ಬೆಂಬಲ ನೀಡಿ ನೋಡಿದರು.
ಈ ಯಾವ ಪ್ರಯೋಗವೂ ಪರಿಣಾಮ ಬೀರದೆ ಇದ್ದಾಗ ಖಮೇನಿ ಮತ್ತು ಇರಾನ್ ಮೇಲೆ ಟ್ರಂಪ್ ಡೈರೆಕ್ಟ್ ಆಕ್ಷನ್ಗೆ ಇಳಿಯಬೇಕಾಗಿ ಬಂತು. ಇನ್ನು ಇರಾನ್ ಮತ್ತು ಅದರ ದೋಸ್ತಿ ರಾಷ್ಟ್ರಗಳ ಮೇಲೆ ಇಸ್ರೇಲ್ ಮುಗಿಬೀಳಲು ಕಾರಣ ಏನು ಗೊತ್ತಾ? ಅದೂ ಕೂಡ ಇಂಟೆರೆಸ್ಟಿಂಗ್. ಈ ಖಮೇನಿ ಮಾಡುತ್ತಿದ್ದ ಕಿತಾಪತಿ ಒಂದೆರಡಲ್ಲ, ಪ್ಯಾಲೆಸ್ತೀನ್ ಮತ್ತು ಗಾಜಾ ಬಂಡುಕೋರ ಗುಂಪು ಹಮಾಸ್, ಲೆಬನಾನ್ನಲ್ಲಿ ಹಿಜ್ಬುಲ್ಲ, ಸಿರಿಯಾ ಮತ್ತು ಇರಾಕ್ನಲ್ಲಿ ಶಿಯಾ ಉಗ್ರರಿಗೆ, ಯೆಮೆನ್ನ ಹೌತಿ ಉಗ್ರರಿಗೆ ಹಣದ ನೆರವು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸ್ಥಳೀಯ ಮತಾಂಧ ಶಕ್ತಿಗಳಿಗೆ ಮಾರಕ ಖಂಡಾಂತರ ಕ್ಷಿಪಣಿ ತಯಾರಿ ಸೇರಿ ಎಲ್ಲ ರೀತಿಯ ಶಸ್ತ್ರಾಸ್ತ್ರ ಉತ್ಪಾದನೆಗೆ ಸಕಲ ನೆರವನ್ನೂ ನೀಡುತ್ತಿದ್ದ. ಇಂಥಾ ಖಮೇನಿಯ ಹೆಸರಲ್ಲಿ ಜಾತಿ, ಧರ್ಮದ ಕಾರಣಕ್ಕೆ ಕಣ್ಣೀರು ಸುರಿಸಬೇಕಾ?
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಇರಾನ್ ಮಾತ್ರವಲ್ಲ, ಇರಾನ್ ಸಹವಾಸದಲ್ಲಿದ್ದ ಎಲ್ಲಾ ದೇಶಗಳಲ್ಲಿ ಯುದ್ಧದ ವಾತಾವರಣ ಇದೆ. ಅದಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಕೂಡ ಹೊರತಲ್ಲ. ತೆಹ್ರೀಕ್ -ಇ-ತಾಲಿಬಾನ್ ಪಾಕಿಸ್ತಾನ (ಖಖಕ) ಅಥವಾ ಪಾಕಿಸ್ತಾನ ತಾಲಿಬಾನ್ ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನದ ಮೇಲೆ ದಾಳಿ ಆರಂಭಿಸಿದೆ. ಮೂಲಭೂತವಾದಕ್ಕೆ ಜೋತುಬಿದ್ದು ನಲುಗಿಹೋಗಿರುವ ಅಫ್ಘಾನಿಸ್ತಾನದ ಅವಸ್ಥೆ ನೋಡಿ, ಬ್ಲಾ್ಯಕ್ ಮಾರ್ಕೆಟಲ್ಲಿ ಅಷ್ಟೋಇಷ್ಟೋ ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಂಡು ಪಾಕಿಸ್ತಾನದ ವಿರುದ್ಧ ಪ್ರತಿದಾಳಿಗೆ ಯತ್ನಿಸುತ್ತಿದೆ.
ಎಂಥ ವೈರುಧ್ಯ ನೋಡಿ, ಸ್ವತಃ ಭಯೋತ್ಪಾದಕರ ಪೋಷಣೆ ಮಾಡಿ, ಅದರ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಪಾಕಿಸ್ತಾನ ಈಗ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಮೂಲನೆಗೆ ಮಿಲಿಟರಿ ಕಾರ್ಯಾಚರಣೆಗೆ ಇಳಿದಿದೆಯಂತೆ. ಇದೇ ಅಲ್ಲವೇ ಕರ್ಮಫಲ ಅಂದರೆ. ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಇಸ್ರೇಲ್, ಅಮೆರಿಕ ನಂಟಿನ ಗಂಟೇನು ಹಾಗಾದರೆ? ಖಮೇನಿ ಖೇಲ್ ಖತಂ ಆದ ಬಳಿಕ ಇರಾನ್ನಲ್ಲಿ ಮಹಿಳಾ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದೆ. ಖಮೇನಿ ಆ ಮಹಿಳೆಯರಿಗೆ ಅದೆಂಥಾ ಟಾರ್ಚರ್ ಕೊಟ್ಟಿರಲಿಕ್ಕೆ ಸಾಕು? ಖಮೇನಿ ಮೇಲೆ ಅಲ್ಲಿನ ಮಹಿಳೆಯರಿಗೆ ಅದೆಂಥಾ ಸಿಟ್ಟಿರಲಿಕ್ಕೆ ಸಾಕು? ಅಲ್ಲಿನ ಮಹಿಳೆಯರೂ ನಿರಾಳತೆ ಅನುಭವಿಸಲಿ, ಸ್ವಾತಂತ್ರ್ಯದ ಸವಿಯನ್ನು ಸವಿಯಲಿ ಅಲ್ಲವೇ? ಏನಂತೀರಿ, ಸಂವೇದನಾಶೀಲ ಮಹಿಳೆಯರೇ, ಮಹನೀಯರೇ?