ಮತದಾರರ ಸಮಗ್ರ ಪರಿಷ್ಕರಣೆ ಎಂಬ ಸಾಮಾನ್ಯ ವಿವೇಕ!

ಇವಿಎಂ
ಇವಿಎಂ
Published on

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ಮತದಾರರ ಸಮಗ್ರ ಪರಿಷ್ಕರಣೆ ಅಥವಾ ಮತದಾರರ ಸಮಗ್ರ ನೋಂದಣಿ. ಅದು ಈಗ ವ್ಯಾಪಕ ಸುದ್ದಿಯಲ್ಲಿದೆ. ಈ ಪರಿಷ್ಕರಣೆಗೆ ಪ್ರಧಾನಿ ನರೇಂದ್ರ ಮೋದಿಯೂ ಒಳಪಡಬೇಕು. ಬೇಕೋ ಬೇಡವೋ, ಇಷ್ಟ ಇದೆಯೋ ಇಲ್ಲವೋ, ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಸದಾಗಿ ನೋಂದಾಯಿಸಿಕೊಳ್ಳಲೇಬೇಕು. ಏಕೆಂದರೆ ಅದು ರಾಹುಲ್ ಗಾಂಧಿ ಪಠಿಸುತ್ತಿರುವ ಸಂವಿಧಾನದ ಶಕ್ತಿ ತಂದ ವರ. ಸಾಂವಿಧಾನಿಕ ಚುನಾವಣಾ ಆಯೋಗದ ಬಲ ಮತ್ತು ಚಮತ್ಕಾರ ಕಾರಣ ಎಂದೂ ಹೇಳಬಹುದು. 

ಈ ಮತಶುದ್ಧೀಕರಣ ಕಾರ್ಯಾಚರಣೆ ವರ್ಷಕ್ಕಿಂತ ಮೊದಲು ಬಿಹಾರದಲ್ಲಿ ಆರಂಭವಾದಾಗ ಇಡೀ ದೇಶದಲ್ಲಿ ‘ವೋಟ್ ಚೋರಿ’ ಗುಲ್ಲೆದ್ದಿತು. ಎಬ್ಬಿಸಿದವರು ಯಾರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ವಿವಾದ, ವಿರೋಧ ಏನೇ ಇದ್ದರೂ ಅಂತಿಮವಾಗಿ ಪರಿಷ್ಕರಣೆ ಕಾನೂನುಬದ್ಧವಾಗಿಯೇ ನಡೆಯಿತು. ಬಿಹಾರ ಒಂದೇ ರಾಜ್ಯದಲ್ಲಿ ಹೆಚ್ಚೂಕಡಿಮೆ 47 ಲಕ್ಷ ಅಕ್ರಮ ಮತದಾರರು ಮತಪಟ್ಟಿಯಿಂದ ಔಟ್ ಆದರು. ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಫಲಿತಾಂಶವೂ ಬಂದಾಗಿದೆ. ಈಗ ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್​ಐಆರ್ ಪ್ರಗತಿಯಲ್ಲಿದೆ. ಆ ಪೈಕಿ ಬಂಗಾಳದಲ್ಲಿ ಸಿಎಂ ಮಮತಾ ಕೃಪಾಪೋಷಿತ ಪ್ರತಿರೋಧ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಅಕ್ರಮ ಮತದಾರರಿದ್ದಾರೆ. ದೇಶದ ಬೇರೆಬೇರೆ ರಾಜ್ಯಗಳಲ್ಲಿ ಅಕ್ರಮ ಮತದಾರರ ಸೋಂಕು ಹರಡುವುದಕ್ಕೂ ಬಂಗಾಳವೇ ಮೂಲಕಾರಣ ಎಂಬ ಮಾತಿದೆ.

ಹಾಗೆಯೇ, ತಮಿಳುನಾಡಿನಲ್ಲಿ ಪರಿಷ್ಕರಣೆ ಪ್ರಕ್ರಿಯೆ ಮುಗಿದು ಬರೋಬ್ಬರಿ 97 ಲಕ್ಷ ಅಕ್ರಮ ಮತದಾರರು ಮತಪಟ್ಟಿಯಿಂದ ಹೊರಬಿದ್ದಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡಲ್ಲೂ ಸನಿಹದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿಕ್ಕಿದೆ. 2 ವರ್ಷದ ನಂತರ ಚುನಾವಣೆ ನಡೆಯುವ ಕರ್ನಾಟಕವೂ ಸೇರಿ ಇತರ ರಾಜ್ಯಗಳಲ್ಲೂ ಆ ಪ್ರಕ್ರಿಯೆ ಆರಂಭವಾಗಿದೆ. ಈ ಎಲ್ಲ ಕಾರಣಗಳಿಂದಲೂ ಈ ರಾಜ್ಯಗಳಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಮತ್ತಷ್ಟು ಮಹತ್ವ ಬಂದಿದೆ. ಎಂಥ ವಿಪರ್ಯಾಸ ನೋಡಿ, ಬಿಹಾರದ ಮತದಾರರು ವಿತಂಡವಾದವನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿದ ಬಳಿಕವೂ ಕಾಂಗ್ರೆಸ್ ಮತ್ತು ಅದರ ಕೆಲ ಮಿತ್ರಪಕ್ಷಗಳು ತಪ್ಪು ತಿದ್ದಿಕೊಳ್ಳುವ ಮನಸ್ಸು ಮಾಡುತ್ತಲೇ ಇಲ್ಲ. 

ದೆಹಲಿಯ ರಾಮಲೀಲಾ ಮೈದಾನದಲ್ಲಿ ಅದೇ ಸವಕಲು ವೋಟ್ ಚೋರಿ ವಿರೋಧಿ ಸಮಾವೇಶವನ್ನು ನಡೆಸಿದವು. ವೋಟ್ ಚೋರಿ ಗುಲ್ಲಿನ ಕಾರಣಕ್ಕೆ ಕೆಲ ಮುಖ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುವುದು ಉಚಿತ. ಒಂದು, ಅಕ್ರಮ ಮತದಾರರು. ಮತ್ತೊಂದು, ಅನಗತ್ಯ ಮತದಾರರು. ಅಕ್ರಮ ಮತದಾರರು ಎಂದರೆ ಭಾರತೀಯರಲ್ಲದವರು ಮತ್ತು ಅಸ್ತಿತ್ವದಲ್ಲೇ ಇಲ್ಲದ ಕಾಲ್ಪನಿಕ ಮತದಾರರು. ಅನುಮಾನಾಸ್ಪದ ಮತದಾರರು. ಇವರೆಲ್ಲರೂ ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕರಾದವರು. ಇನ್ನು ಅನಗತ್ಯ ಮತದಾರರು ಎಂದರೆ ಒಂದಕ್ಕಿಂತ ಹೆಚ್ಚು ಮತಕ್ಷೇತ್ರದಲ್ಲಿ ಮತದಾರರಾಗಿ ನೋಂದಣಿ ಮಾಡಿಕೊಂಡಿರುವವರು. ಉದಾಹರಣೆಗೆ, ಕರ್ನಾಟಕದ ಯಾವುದೇ ಗ್ರಾಮವನ್ನು ಬೇಕಾದರೂ ತೆಗೆದುಕೊಳ್ಳಿ. ಶೇಕಡ 50ರಷ್ಟು ಕುಟುಂಬಗಳ ಕನಿಷ್ಠ ಇಬ್ಬರು, ಮೂವರು ವ್ಯಕ್ತಿಗಳು ಉದ್ಯೋಗದ ಕಾರಣಕ್ಕೆ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಅವರು ಬೆಂಗಳೂರಿನ ಒಂದಲ್ಲ ಒಂದು ಕ್ಷೇತ್ರದಲ್ಲಿ ಮತದಾರರಾಗಿರುತ್ತಾರೆ. 

ಹಾಗೆಯೇ ಹುಟ್ಟೂರಿನಲ್ಲೂ ಮತಾಧಿಕಾರವನ್ನು ಉಳಿಸಿಕೊಂಡಿರುತ್ತಾರೆ. ಈಗ ನೆನಪು ಮಾಡಿಕೊಳ್ಳಿ, ಬೆಂಗಳೂರಲ್ಲಿ ಪಾಲಿಕೆ ಚುನಾವಣೆಯಿಂದ ಸಂಸತ್ತಿನ ಚುನಾವಣೆಯವರೆಗೆ ಶೇ. 40/50, ಗರಿಷ್ಠ 60ರಷ್ಟು ಮತದಾನ ಆಗುತ್ತದೆ ಎಂದು ಬೊಬ್ಬೆ ಹೊಡೆಯುತ್ತೇವೆಯಲ್ಲ, ಅದಕ್ಕೆಲ್ಲ ಇಲ್ಲಿ ಉತ್ತರ ಸಿಗುತ್ತದೆ. ಈಗ ಸಮಗ್ರ ಮತಪಟ್ಟಿ ಪರಿಷ್ಕರಣೆ ನಂತರ ಓರ್ವ ಮತದಾರ ಒಂದು ಮತಗಟ್ಟೆ ಅಥವಾ ಒಂದು ಕ್ಷೇತ್ರದಲ್ಲಿ ಮಾತ್ರ ಮತದಾರನಾಗಲು ಸಾಧ್ಯವಾಗುತ್ತದೆ. ಹಾಗೆಯೇ ಮೃತಪಟ್ಟವರು, ಕಾಣೆಯಾದವರು, ನಕಲಿ ಅಥವಾ ಅಸ್ತಿತ್ವದಲ್ಲೇ ಇಲ್ಲದ ಮತದಾರರು ಮತಪಟ್ಟಿಯಿಂದ ಡಿಲೀಟ್ ಆಗುತ್ತಾರೆ. ಸಕ್ರಮವಾಗಿರುವ ಹಳೆಯ ಮತ್ತು ಹೊಸ ಮತದಾರರಿಬ್ಬರೂ ಮತ್ತೆ ಮತಪಟ್ಟಿಗೆ ಸೇರ್ಪಡೆ ಆಗುತ್ತಾರೆ. ಈ ಪರಿಷ್ಕರಣೆ ಪ್ರಕ್ರಿಯೆ ಶುರುವಾದ ಬಳಿಕ ಬೆಳಕಿಗೆ ಬಂದ ಸತ್ಯ ಏನು ಗೊತ್ತಾ? ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಅಕ್ರಮ, ಅಸ್ತಿತ್ವದಲ್ಲಿಲ್ಲದ ಮತ್ತು ಅನುಮಾನಾಸ್ಪದವಾದ 15ರಿಂದ 25 ಸಾವಿರದವರೆಗೆ ಮತಗಳು ಡಿಲೀಟ್ ಆಗುತ್ತಿವೆ. 

ಇಷ್ಟು ದೊಡ್ಡ ಸಂಖ್ಯೆಯ ಅಕ್ರಮ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲುದಾರರಾದರೆ ಮತದಾನ ಪವಿತ್ರ ಎಂದು ಭಾವಿಸುವ ಸಕ್ರಮ ಮತದಾರರಿಗೆ ಆತ್ಮಗೌರವ ಉಳಿಯಲು ಹೇಗೆ ಸಾಧ್ಯ? ಪರಮ ಪವಿತ್ರ ಸಂವಿಧಾನಕ್ಕೆ, ಸಂವಿಧಾನಬದ್ಧ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಬರಲು ಸಾಧ್ಯವೇ? ಶೇ. 20ರಿಂದ 80ರಷ್ಟು ಕ್ಷೇತ್ರಗಳಲ್ಲಿ ಗೆಲುವಿನ ಸರಾಸರಿ ಅಂತರ 2ರಿಂದ 8 ಸಾವಿರವಾದರೆ, ಗೆಲುವನ್ನು ನಿರ್ಣಯಿಸುವ ನಿರ್ಣಾಯಕ ಮಾರ್ಜಿನ್ ಮತ ತರುವ ಮತದಾರರು ಯಾರು? ಇದೇ ಅಕ್ರಮ, ಅಸ್ತಿತ್ವದಲ್ಲಿ ಇಲ್ಲದ ಮತ್ತು ಅನುಮಾನಾಸ್ಪದ 15ರಿಂದ 25 ಸಾವಿರ ಮತದಾರರು ತಾನೇ? ಇದರಲ್ಲಿ ಚೋರಿ ಎಲ್ಲಿಂದ ಬಂತು? ಹಾಗೆ ಬೊಬ್ಬೆ ಹೊಡೆಯುವವರ ಚೋರಿಗೆ ಬ್ರೇಕ್ ಬಿತ್ತು ಅಂತಲಾ ಈ ಚಡಪಡಿಕೆ?

ಹಾಂ... ಈ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಕಾನೂನುಬಾಹಿರವೇ? ಇದೇ ಮೊದಲ ಬಾರಿಗೆ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆಯೇ? ಹಾಗೂ ಇಲ್ಲ, ಪ್ರತಿ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಅರ್ಹ ಮತದಾರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಸ್ವಾತಂತ್ರ್ಯ ಬಂದ ನಂತರ ಅಂದರೆ 1951ರ ಬಳಿಕ ಇದುವರೆಗೆ 8 ಬಾರಿ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಆಗಿದೆ. ಕೊನೆಯ ಬಾರಿಗೆ ಸಮಗ್ರ ಪರಿಷ್ಕರಣೆ ಆಗಿದ್ದು 2001-2004ರ ಅವಧಿಯಲ್ಲಿ. ಅಂದರೆ 21 ವರ್ಷಗಳ ಹಿಂದೆ. ಈ ಸತ್ಯ ಸಂಗತಿ ಕಾಂಗ್ರೆಸ್ ಪಕ್ಷಕ್ಕೆ ತಿಳಿಯದೇ ಹೋದದ್ದು ಹೇಗೆ?ಹಾಗೆಯೇ ಅಕ್ರಮ ಮತದಾರರ ಯಾದಿಗೆ ಕತ್ತರಿ ಹಾಕುವ ಅಥವಾ ಡಿಲೀಟ್ ಮಾಡುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯುವುದು ಕೂಡ ಇಲ್ಲಿ ಮುಖ್ಯ. 

ಮತದಾರ ಪಟ್ಟಿ ನಿರ್ಧರಿಸುವುದರಲ್ಲಿ ಚುನಾವಣಾ ಆಯೋಗದ ಪರಮಾಧಿಕಾರ ನಿಜವೇ ಆದರೂ, ಆಯೋಗದ ಅಧಿಕಾರಿಗಳು ಎಲ್ಲೋ ಒಂದು ಕಡೆ ಕುಳಿತುಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾತಿಗಣತಿ ಮಾಡಿದಂತೆ ಬೇಕಾಬಿಟ್ಟಿ ಹೆಸರುಗಳ ಸೇರ್ಪಡೆ, ಬೇರ್ಪಡೆ ಮಾಡುವುದಿಲ್ಲ. ಅದಕ್ಕೆ ಅವಕಾಶ ಇಲ್ಲವೇ ಇಲ್ಲ. ಪ್ರತಿ ತಾಲೂಕಿನಲ್ಲಿ ಸ್ಥಳೀಯ ತಹಸೀಲ್ದಾರರ ಮೂಲಕ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತದೆ. ಮತಗಟ್ಟೆಯ ಪ್ರತಿ ಮನೆಗೆ ಆಯೋಗದ/ಸರ್ಕಾರದ ಪ್ರತಿನಿಧಿ ಜೊತೆಯಲ್ಲಿ ಎಲ್ಲ ಅಧಿಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಬೂತ್ ಲೆವೆಲ್ ಏಜೆಂಟ್- ಫಾಮ್ರ್ 2 (ಬಿಎಲ್​ಎ-2) ಆಗಿ ನೇಮಕ ಮಾಡಲಾಗುತ್ತದೆ. ಆ ಬಿಎಲ್​ಎಗಳಿಗೆ ಅಧಿಕೃತ ಗುರುತು ಪತ್ರ ಇರುತ್ತದೆ. ಉದಾಹರಣೆಗೆ, ಬಿಜೆಪಿ ಮಾಡಬಹುದಾದ ಅಕ್ರಮ ಮತದಾರ ಸೇರ್ಪಡೆ ಅಥವಾ ಬೇರ್ಪಡೆಗೆ ಕಾಂಗ್ರೆಸ್ ಪ್ರತಿನಿಧಿ ಆಕ್ಷೇಪ ದಾಖಲಿಸಬಹುದು. ಕಾಂಗ್ರೆಸ್ ತಪ್ಪು ಮಾಡಿದರೆ ಬಿಜೆಪಿ ಅಥವಾ ಬೇರೊಂದು ಪಕ್ಷ ಆಕ್ಷೇಪ ದಾಖಲಿಸಬಹುದು. ಅದಕ್ಕೆ ಕಾಲಮಿತಿಯೂ ಇದೆ. ಒಟ್ಟು ಈ ಪ್ರಕ್ರಿಯೆಯೇ ಏಕಪಕ್ಷೀಯವಲ್ಲ! ಅಪಾರದರ್ಶಕವಲ್ಲ! ಇಷ್ಟೆಲ್ಲ ಕ್ಷೇತ್ರವಾರು ಪರಿಷ್ಕರಣೆ ಆದ ಬಳಿಕವೂ ಸಮಗ್ರ ಆಕ್ಷೇಪಣೆಗೆ ಕಾಲಬದ್ಧ ಅವಕಾಶವಿದೆ.

ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಬದಲು ಎಲ್ಲೋ ವಿದೇಶಿ ನೆಲದಲ್ಲಿ ಚುನಾವಣಾ ಆಯೋಗದ ವಿರುದ್ಧ ಪತ್ರಿಕಾಗೋಷ್ಠಿ ಮಾಡಿದರೆ, ಜಾಥಾಗಳನ್ನು ಮಾಡಿದರೆ, ರಾಮಲೀಲಾ ಮೈದಾನದಲ್ಲಿ ಸಮಾವೇಶ ಮಾಡಿದರೆ ಏನು ಪ್ರಯೋಜನ? ಯಾವ ಪರಿಣಾಮ? ಪ್ರಜ್ಞಾವಂತರು ಈ ಹುಸಿಬೊಬ್ಬೆಯ ವಿಚಾರದಲ್ಲಿ ಆಲೋಚನೆ ಮಾಡಬೇಕಿದೆ. ಇವಿಎಂ ವಿರೋಧಿ ಪ್ರತಿಭಟನೆ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನ ಕುರಿತು ಕಾಂಗ್ರೆಸ್ ಮಿತ್ರಪಕ್ಷ ಎನ್​ಸಿಪಿ ಸಂಸದೆ ಸುಪ್ರಿಯಾ ಸುಲೆ ಏನು ಹೇಳಿದರು ಗೊತ್ತಾ? ‘ನಾನೂ ಅದೇ ಇವಿಎಂ ಯಂತ್ರದ ಮೂಲಕವೇ ಆಯ್ಕೆ ಆಗಿದ್ದು, ಇಂಥ ಮೂರ್ಖತನದ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲಾರೆ’ ಎಂದು. ಪ್ರಾಮಾಣಿಕವಾಗಿ ಮಾತನಾಡಿದರೆ ಕರ್ನಾಟಕ/ ತೆಲಂಗಾಣ/ ಹಿಮಾಚಲದ ಕಾಂಗ್ರೆಸ್ ಶಾಸಕರು ಸುಪ್ರಿಯಾ ಸುಲೆ ಅವರ ಹೇಳಿಕೆಯನ್ನು ಬೆಂಬಲಿಸದೇ ಇದ್ದಾರೆಯೇ?

ಆ ಸ್ವಾತಂತ್ರ್ಯ ಕಾಂಗ್ರೆಸ್ ಶಾಸಕರು ಮತ್ತು ಸಂಸದರಿಗೆ ಎಂದು ಬಂದೀತು?! ವೋಟ್ ಚೋರಿ ವ್ಯರ್ಥಾಲಾಪದ ಬಳಿಕ ದೇಶದ ಮತದಾರರ ಆಲೋಚನೆಯಲ್ಲಿ ಹೊಸ ಬದಲಾವಣೆ ಆಗುತ್ತಿರುವುದನ್ನು ನಾವು ಗಮನಿಸಬೇಕಿದೆ. ಮುಸ್ಲಿಂ ಸಮುದಾಯದ ವಿಷಯದಲ್ಲಿ ಬಿಜೆಪಿ ಹತ್ತು ಹಲವು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆ ವಿಷಯದಲ್ಲಿ ಪಕ್ಷಕ್ಕೆ ಅತ್ಯಂತ ಸ್ಪಷ್ಟ ಕಲ್ಪನೆ ಇದೆ. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ದೇಶದ ಏಕತೆ, ಅಖಂಡತೆಗೆ ಭಂಗ ತರುವ ದೇಶದ ಆತ್ಮವಾದ ಬಹುತ್ವ, ನೈಜ ಜಾತ್ಯತೀತತೆ ಒಪ್ಪದ ಮತಾಂಧ ಮುಸ್ಲಿಂ ಧೋರಣೆಯನ್ನು ಅಥವಾ ಯಾವುದೇ ವ್ಯಕ್ತಿ, ಸಮುದಾಯ ಮತ್ತು ಪಕ್ಷದ ಧೋರಣೆಯನ್ನು ಬಿಜೆಪಿ ಸುತರಾಂ ಒಪ್ಪುವುದಿಲ್ಲ. ಇಷ್ಟೇ, ಹಿಂದೆ, ಇಂದು, ಮುಂದೆ ಇದೇ ನಿಲುವು ಇದೇ ಧೋರಣೆ. ಇದರಲ್ಲಿ ರಾಜಿ ಇಲ್ಲವೇ ಇಲ್ಲ. ಕಾಲಕಾಲಕ್ಕೆ ಬಿಜೆಪಿ ಸರ್ಕಾರಗಳ ಕಾರ್ಯಕ್ರಮ ಅವಲೋಕನ ಮಾಡಿದರೆ ಇದು ಎಂಥವನಿಗೂ ಅರ್ಥ ಆಗುವ ವಿಚಾರ. ಮುಚ್ಚುಮರೆ ಇಲ್ಲವೇ ಇಲ್ಲ. ಆದರೂ ಕಾಂಗ್ರೆಸ್ ಮತ್ತಿತರ ಮತೀಯವಾದಿ ಪಕ್ಷಗಳು ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಭಾವನೆಯನ್ನು ಆಳವಾಗಿ ಬಿತ್ತಿದ್ದವು. ಒಂದು ರೀತಿಯಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರರನ್ನು ಲಂಬವಾಗಿ ಸೀಳಿ ಇಷ್ಟು ದಿನ ತಮ್ಮ ರಾಜಕೀಯದ ಬೇಳೆಯನ್ನು ಬೇಯಿಸಿಕೊಂಡವು. 

ಈಗ ಈ ಮೋಸ ಆ ಸಮುದಾಯಕ್ಕೆ ನಿಧಾನವಾಗಿ ಅರ್ಥ ಆಗುತ್ತಿದೆ. ಅದಕ್ಕೆ ತಾಜಾ ಉದಾಹರಣ- ಬಿಹಾರದ ಬಹುತೇಕ ಮುಸ್ಲಿಮರು ನಿರ್ಣಾಯಕ ಆಗಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಶ್ವಾಸಾರ್ಹ ಅಂತರದಿಂದ ಗೆಲುವು ಪಡೆದಿರುವುದು. ಕೇರಳದ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿದಿರುವುದು. ಕೇರಳದ ಇನ್ನೂ ಅನೇಕ ಸ್ಥಳೀಯಾಡಳಿತ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎಡಪಕ್ಷ, ಎಸ್​ಡಿಪಿಐ ಮುಂತಾದ ಪಕ್ಷಗಳ ಮುಸ್ಲಿಂ ಅಭ್ಯರ್ಥಿಗಳ ಎದುರು ಬಿಜೆಪಿ ಕಣಕ್ಕಿಳಿಸಿದ್ದ ಮುಸ್ಲಿಂ ಅಭ್ಯರ್ಥಿಗಳು ಗಣನೀಯ ಅಂತರದಲ್ಲಿ ಗೆಲುವು ಸಾಧಿಸಿರುವುದು. ಇದಕ್ಕೇ ಅಲ್ಲವೇ ಹೇಳುವುದು- ಹರಿಯುವ ನೀರಿಗೆ, ಉದಯಿಸುವ ಸೂರ್ಯನಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ? ಸುಳ್ಳಿನ ಸಾಮ್ರಾಜ್ಯದಲ್ಲಿ ಸತ್ಯದ ಸಮಾಧಿ ಮಾಡಲಾಗದು ಇತ್ಯಾದಿ ಇತ್ಯಾದಿ... ಭರವಸೆಯೇ ಬದುಕು, ಸತ್ಯವೇ ಎಲ್ಲದಕೂ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net