

ಭಾರತದಂತಹ ಬೃಹತ್ ರಾಷ್ಟ್ರಕ್ಕೆ ನಿರಂತರ ಆಹಾರ ಭದ್ರತೆ, ಕೋಟ್ಯಂತರ ಕೃಷಿಕರಿಗೆ ಜೀವನ ಭದ್ರತೆ ಕಲ್ಪಿಸುತ್ತಿರುವ ಕೃಷಿ ಕ್ಷೇತ್ರ ದೇಶದ ಆಧಾರ ಸ್ಥಂಭ. ಕೃಷಿ ನಮ್ಮ ಪಾರಂಪರಿಕ ಕಸುಬಾಗಿದ್ದರೂ, ವೈಜ್ಞಾನಿಕ ಆವಿಷ್ಕಾರಗಳು ಕೃಷಿ ಕ್ಷೇತ್ರದ ಬೆಳವಣಿಗೆ ಗತಿಯನ್ನು ಬದಲಿಸಿವೆ. ಮೊದಲೆಲ್ಲ ಕೃಷಿಕರು ತಾವೇ ಉತ್ತಿ, ಬಿತ್ತಿ, ಕೋಯ್ಲು ಮಾಡುತ್ತಿದ್ದ ಕಾಲ ದೂರವಾಗಿದೆ. ವೈವಿಧ್ಯಮಯ ಬೆಳೆ, ಬೆಳೆ ಪದ್ಧತಿಗಳು, ಸುಧಾರಿತ ತಳಿ-ತಂತ್ರಜ್ಞಾನಗಳು, ಯಾಂತ್ರೀಕರಣ... ಒಟ್ಟಾರೆ ವ್ಯವಸಾಯ ಕ್ಷೇತ್ರಕ್ಕೆ ಹೊಸ ಆಯಾಮ ಕಲ್ಪಿಸಿದ್ದು, ಇದರ ಫಲಶೃತಿಯಿಂದ ಭಾರತ ಆಹಾರ ಕ್ಷೇತ್ರದಲ್ಲಿ ಈಗ ಸ್ವಾವಲಂಬಿಯಾಗಿದೆ. ಬದಲಾದ ಪರಿಸ್ಥಿತಿಗಳಿಗನುಗುಣವಾಗಿ ಕೃಷಿ ಶಿಕ್ಷಣವೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಂದಿಗೂ ಎಂದೆಂದಿಗೂ ನಿತ್ಯಹರಿದ್ವರ್ಣ, ನಿರಂತರ ಬೇಡಿಕೆ ಹೊಂದಿರುವ ಕ್ಷೇತ್ರ ಕೃಷಿ ಶಿಕ್ಷಣ. ರಾಜ್ಯದಲ್ಲಿ ಪ್ರಸ್ತುತ ಆರು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ (ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಕೃಷಿ ವಿಶ್ವವಿದ್ಯಾಲಯ, ಧಾರವಾಡ. ಕೃಷಿ ವಿಶ್ವವಿದ್ಯಾಲಯ, ರಾಯಚೂರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೊಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ. ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ. ಕರ್ನಾಟಕ ಪಶುವೈದಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್) ಮೂಲಕ ಕೃಷಿ ಸಂಬಂಧಿತ ಪದವಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಏಕರೂಪದ ಪ್ರವೇಶಾವಕಾಶವಿದ್ದರೆ, ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಕಲ್ಪಿಸಿರುವುದು ವಿಶೇಷ.
ವಿವಿಗಳಲ್ಲಿ ಆಧುನಿಕ ಸೌಲಭ್ಯ: ಸಾಮಾನ್ಯವಾಗಿ ಕೃಷಿ ವಿಶ್ವವಿದ್ಯಾನಿಲಯದ ಆವರಣಗಳಿಗೆ ತನ್ನದೇ ಆದ ವೈಶಿಷ್ಟತೆ ಇದೆ. ನಗರಗಳಿಂದ ಸ್ವಲ್ಪ ದೂರದಲ್ಲಿ ಸದಾ ಅಚ್ಚಹಸಿರಿನಿಂದ ಕಂಗೊಳಿಸುವ ಆವರಣಗಳಲ್ಲಿ ಆಧುನಿಕ ಬೋಧನಾ ಕೊಠಡಿಗಳು, ಪ್ರಯೋಗಾಲಯ, ಸಂಶೋಧನಾ ತಾಕುಗಳು, ಗ್ರಂಥಾಲಯ, ಹಾಸ್ಟೇಲ್ ಸೌಲಭ್ಯಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿವೆ. ಕೃಷಿ ಪದವಿಗಳ ಪಠ್ಯಕ್ರಮ ಇತರ ಪದವಿ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿದ್ದು ಮೂಲ ವಿಜ್ಞಾನ, ಸಾಮಾಜಿಕ ವಿಜ್ಞಾನವನ್ನು ಒಳಗೊಂಡಂತೆ ಬೆಳೆಶಾಸ್ತ್ರ, ಬೆಳೆ ಅಭಿವೃದ್ಧಿ, ಸಸ್ಯ ಸಂರಕ್ಷಣೆ ಮುಂತಾದ ವಿಷಯ ಬೋಧಿಸಲಾಗುತ್ತದೆ. ವಿಶೇಷವೆಂದರೆ ಕೊನೆಯ ಒಂದು ವರ್ಷದಲ್ಲಿ 3 ತಿಂಗಳು ವಿದ್ಯಾರ್ಥಿಗಳು ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡಿ ಕೃಷಿಕರ ಒಡನಾಡಿಗಳಾಗಿ ಪ್ರಾಯೋಗಿಕ ಕಲಿಕೆಯಲ್ಲಿ ತೊಡಗಿಸಿ ಕೊಳ್ಳಲಿದ್ದು, ಆಯ್ದ ವಿಷಯಗಳಲ್ಲಿ ಅನುಭವಾತ್ಮಕ ಕಲಿಕೆಯಲ್ಲಿ ಭಾಗಿಗಳಾಗುತ್ತಾರೆ.
ಯಾವ್ಯಾವ ಕೋರ್ಸ್ ಲಭ್ಯ?: ಸಹಜವಾಗಿಯೇ ಈ ಪದವಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಕೃಷಿಕರಲ್ಲಿ, ಸಾರ್ವಜನಿಕರಿಗೆ ಹಲವು ಕುತೂಹಲಗಳು, ಪ್ರಶ್ನೆಗಳು ಮೂಡುವುದು ಸಹಜ. ಪ್ರಸ್ತುತ ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಬಿಎಸ್ಸಿ (ಹಾನರ್ಸ್) ಕೃಷಿ, ಬಿಎಸ್ಸಿ (ಹಾನರ್ಸ್) ರೇಷ್ಮೆ ಕೃಷಿ, ಬಿಎಸ್ಸಿ (ಹಾನರ್ಸ್) ತೋಟಗಾರಿಕೆ, ಬಿಎಸ್ಸಿ (ಹಾನರ್ಸ್) ಅರಣ್ಯ, ಬಿಎಸ್ಸಿ (ಹಾನರ್ಸ್) ಸಮುದಾಯ ವಿಜ್ಞಾನ, ಬಿಎಸ್ಸಿ (ಹಾನರ್ಸ್) ಕೃಷಿ ವ್ಯವಹಾರ ನಿರ್ವಹಣೆ, ಬಿ.ಟೆಕ್. (ಆಹಾರ ತಾಂತ್ರಿಕತೆ), ಬಿ.ಟೆಕ್. (ಜೈವಿಕ ತಾಂತ್ರಿಕತೆ), ಬಿ.ಟೆಕ್. (ಕೃಷಿ ಇಂಜಿನಿಯರಿಂಗ್), ಬಿ.ಟೆಕ್. (ಹೈನು ತಾಂತ್ರಿಕತೆ), ಬಿಎಫ್ಎಸ್ಸಿ (ಹಾನರ್ಸ್) ಮೀನು ಗಾರಿಕೆ, ಬಿವಿಎಸ್ಸಿ ಮತ್ತು ಎಎಚ್ ಸ್ನಾತಕ ಪದವಿಗಳನ್ನು ಈ ವಿವಿಗಳ 34 ಕೃಷಿ ಸಂಬಂಧಿತ ಕಾಲೇಜುಗಳಲ್ಲಿ ಬೋಧನೆ ಮಾಡಲಾಗುತ್ತಿದೆ.
ಕೃಷಿ ವಿಶ್ವವಿದ್ಯಾನಿಲಯಗಳ ಈ ಎಲ್ಲ ಫಾಮ್ರ್ ಸೈನ್ಸ್ ಕೋರ್ಸ್ಗಳಿಗೆ ಆರ್ಹರಾಗಲು ಕೆಲವು ಮಾನದಂಡಗಳಿದ್ದು, ಸ್ನಾತಕ ಪದವಿಗಳಿಗೆ ದಾಖಲಾತಿ ಪಡೆಯಲು ಸಾಮಾನ್ಯ ವರ್ಗದಡಿ ದ್ವಿತೀಯ ಪಿಯುಸಿ (ಪಿಸಿಎಂಬಿ)ಯಲ್ಲಿ ಪಡೆದ ಶೇ.50 ಅಂಕಗಳು ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಪಡೆದ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ. ಕೃಷಿ ಕೋಟಾದಡಿ ದಾಖಲಾತಿ ಪಡೆಯಲು ದ್ವಿತೀಯ ಪಿಯುಸಿ (ಪಿಸಿಎಂಬಿ)ಯಲ್ಲಿ ಪಡೆದ ಶೇ.25 ಅಂಕಗಳು ಹಾಗೂ ಸಿಇಟಿಯಲ್ಲಿ ಪಡೆದ ಶೇ.25 ಅಂಕಗಳನ್ನು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಶೇ.50 ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಿವಿಎಸ್ಸಿ ಮತ್ತು ಎಎಚ್ ಕೋರ್ಸ್ಗೆ ಸಾಮನ್ಯವರ್ಗದಡಿ ದಾಖಲಾತಿ ಪಡೆಯಲು ಸಿಇಟಿ (ಪಿಸಿಬಿ)ಯಲ್ಲಿ ಪಡೆದ ಶೇ.100 ಅಂಕಗಳನ್ನು, ಕೃಷಿ ಕೋಟಾದಡಿ ದಾಖಲಾತಿ ಪಡೆಯಲು ಸಿಇಟಿ (ಪಿಸಿಬಿ)ಯಲ್ಲಿ ಪಡೆದ ಶೇ.50 ಅಂಕಗಳನ್ನು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಶೇ.50 ಅಂಕಗಳನ್ನು ಪರಿಗಣಿಸಲಾಗುವುದು.
ಪ್ರತ್ಯೇಕ ಪ್ರಕ್ರಿಯೆ: ರೈತರ ಕೋಟಾದಲ್ಲಿ ದಾಖಲಾತಿ ಪಡೆಯಲು ಪ್ರತ್ಯೇಕ ಪ್ರಕ್ರಿಯೆ ರೂಪಿಸಲಾಗಿದೆ. ಇದರನ್ವಯ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲಾತಿ ಪರೀಶೀಲನೆ ಮಾಡಿಸಿಕೊಳ್ಳದೆ ಇದ್ದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾಗಿರುವುದಿಲ್ಲ. ಪ್ರಾಯೋಗಿಕ ಪರೀಕ್ಷೆಗೆ ಅಭ್ಯರ್ಥಿಗಳು ತಮಗೆ ಉಲ್ಲೇಖಿಸಲಾದ ಸ್ಥಳೀಯ ಜಿಲ್ಲೆಗಳ ಕೇಂದ್ರಗಳಲ್ಲಿ ಅಥವಾ ಕೆಇಎನ ಪ್ರವೇಶಪತ್ರದಲ್ಲಿ ತಿಳಿಸಿರುವ ಕೇಂದ್ರಗಳಲ್ಲಿ ಅಥವಾ ದಾಖಲಾತಿಗಳನ್ನು ಪರಿಶೀಲಿಸಿದ ಕೇಂದ್ರದಲ್ಲಿಯೇ ಹಾಜರಾಗಬೇಕು.
ವಿಫುಲ ಅವಕಾಶ: ಕೃಷಿ ಪದವೀಧರರಿಗೆ ವಿಫುಲ ಉದ್ಯೋಗಾವಕಾಶಗಳಿದ್ದು, ಪ್ರಗತಿಪರ ಕೃಷಿಕರಾಗಿ, ಕೃಷಿ ಉದ್ದಿಮೆದಾರರಾಗಿ, ಕೃಷಿ ವಿಜ್ಞಾನಿಗಳಾಗಿ, ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಾಗಿ, ನಾಗರಿಕ ಸೇವೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ, ಹಣಕಾಸು ಸಂಸ್ಥೆ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.
ಆನ್ಲೈನ್ ಮೂಲಕ ದಿನಾಂಕ: 01.07.2022 ರಿಂದ 06.07.2022 ರವರೆಗೆ ದಾಖಲಾತಿಗಳನ್ನು ಸಲ್ಲಿಸಬೇಕು. ಅರ್ಜಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳು 12.07.2022 ರ ಬೆಳಗ್ಗೆ 9.00 ಗಂಟೆಯಿಂದ ರಾಜ್ಯದ ಎಲ್ಲ್ಲ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 16 ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವುದು.
ಮಾಹಿತಿಗಾಗಿ ಸಂಪರ್ಕಿಸಿ: www.uasbangalore.edu.in, www.uasd.edu.in, www.uhsbagalkot.edu.in, www.uahs.in, www.uasraichur.edu.in, www.kvafsu.edu.in, http//kea.kar.nic.in ಜಾಲತಾಣಗಳಿಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆಯಬಹುದು.
(ಲೇಖಕರು: ಶಿಕ್ಷಣ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು)